ಎನ್ನ ಮಾತೇ ಶಾಸನ
Team Udayavani, Nov 20, 2018, 6:15 AM IST
ನಾನೇ ಪರ್ಫೆಕ್ಟು , “ಎಲ್ಲವೂ ನನಗೆ ತಿಳಿದಿದೆ’, “ನನಗೇ ಸಾಕಷ್ಟು ಅನುಭವ ಇದೆ’ ಎಂದು ದೃಢವಾಗಿ ನಂಬಿದ ಅಂಥ ವ್ಯಕ್ತಿತ್ವಗಳು ಎಲ್ಲೆಡೆ ಸಾಮಾನ್ಯವಾಗಿ ಇರುತ್ತಾರೆ. ಅವರು ಬುದ್ಧಿವಂತರೇ ಇರಬಹುದು, ಆದರೆ ಅನೇಕ ವಿಚಾರದಲ್ಲಿ ಅವರ ಬುದ್ಧಿ, ಸುತ್ತ ಇದ್ದವರಿಗೆ ಕಸಿವಿಸಿ ತರುತ್ತಿರುತ್ತದೆ…
ಆಗ ನಾನು ಮೊದಲನೇ ಪಿಯುಸಿ ಓದುತ್ತಿದ್ದೆ. ನಮ್ಮ ಕ್ಲಾಸಿನಲ್ಲಿ ಒಬ್ಬಳು ಹುಡುಗಿ ಇದ್ದಳು. ಓದಿನಲ್ಲಿ ಬಲುಜಾಣೆ. ಆದರೆ, ಆ ವಿಷಯಕ್ಕಿಂತ ಎಲ್ಲರಿಗೂ ಅವಳ ಬಗ್ಗೆ ನೆನಪಿರುವುದೆಂದರೆ, ಅವಳ ಸ್ವಭಾವದ ಬಗ್ಗೆ. ಕ್ಲಾಸಿನಲ್ಲಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ, ಅವಳದೇ ಮೊದಲ ಉತ್ತರ. ಬೇರೆಯವರಿಗೆ ಪ್ರಶ್ನೆ ಕೇಳಿದರೂ, ಅವಳೇ ಎದ್ದು ನಿಂತು ಉತ್ತರಿಸುವಷ್ಟು ಆತುರ ಮತ್ತು ಚತುರತೆ. ಸ್ನೇಹಿತೆಯರೆಲ್ಲರೂ ಒಟ್ಟಾಗಿ ಹರಟೆಗೆ ಕುಳಿತಾಗಲೂ ಅವಳದ್ದೇ ದರ್ಬಾರು. ವಾದ ಮಾಡಿ ಅವಳನ್ನು ಸೋಲಿಸಲು ಯಾರಿಂದಲೂ ಸಾಧ್ಯವೇ ಇರುತ್ತಿರಲಿಲ್ಲ. ಅವಳ ಮಾತಿನ ಅಬ್ಬರದ ನಡುವೆ ನಾವೆಲ್ಲ ಮಂಕಾಗುತ್ತಿದ್ದೆವು. ತಾನು ಹೇಳಿದ್ದೇ ವೇದವಾಕ್ಯ ಎನ್ನುವ ಪುಟ್ಟ ಅಹಂ ಆಕೆಗಿತ್ತು.
ಈಕೆ ಒಬ್ಬಳೇ ಅಲ್ಲ. ನಾನೇ ಪರ್ಫೆಕ್ಟು , “ಎಲ್ಲವೂ ನನಗೆ ತಿಳಿದಿದೆ’, “ನನಗೇ ಸಾಕಷ್ಟು ಅನುಭವ ಇದೆ’ ಎಂದು ದೃಢವಾಗಿ ನಂಬಿದ ಅಂಥ ವ್ಯಕ್ತಿತ್ವಗಳು ಎಲ್ಲೆಡೆ ಸಾಮಾನ್ಯವಾಗಿ ಇರುತ್ತಾರೆ. ಅವರು ಬುದ್ಧಿವಂತರೇ ಇರಬಹುದು, ಆದರೆ ಅನೇಕ ವಿಚಾರದಲ್ಲಿ ಅವರ ಬುದ್ಧಿ, ಸುತ್ತ ಇದ್ದವರಿಗೆ ಕಸಿವಿಸಿ ತರುತ್ತಿರುತ್ತದೆ. ಇಂಥವರು ವಿನಾಕಾರಣ ಗೆಳೆಯರ ವಿರೋಧ ಕಟ್ಟಿಕೊಳ್ಳುತ್ತಾರೆ. ಗುಂಪಿಗೆ ಹೊಂದದ ಪದದಂತೆ, ಪ್ರತ್ಯೇಕ ವ್ಯಕ್ತಿತ್ವಗಳೇ ಆಗಿಬಿಡುತ್ತಾರೆ. ಯಾಕೆ ಹೀಗೆ?
ಆಲಿಸುವುದು ಮುಖ್ಯ
ನಮಗೆ ಆಲಿಸುವುದು ಸುಲಭವಾಗಲೆಂದು, ಮಾತಾಡುವುದು ಆದಷ್ಟು ಕಡಿಮೆ ಮಾಡಬೇಕೆಂದು, ಬಹುಶಃ ಆ ಸೃಷ್ಟಿಕರ್ತ ನಮಗೆ ಒಂದೇ ಬಾಯಿ ಮತ್ತು ಎರಡು ಕಿವಿಗಳನ್ನು ಕೊಟ್ಟಿದ್ದಾನೆಯೋ ಏನೋ! ನಾವೇ ಸರಿಯಿರಬಹುದು. ಆದರೆ, ಇನ್ನೊಬ್ಬರ ಮಾತುಗಳನ್ನು ಆಲಿಸುವುದರಿಂದ ನಷ್ಟವೇನೂ ಇಲ್ಲವಲ್ಲಾ? ಇನ್ನೂ ಲಾಭವೇ ಇದೆ ಎನ್ನಬಹುದು. ಆಗ ನಮ್ಮ ಎದುರಿನವರಿಗೆ ಪ್ರಾಮುಖ್ಯತೆ ಕೊಟ್ಟಂತಾಗುತ್ತದೆ. ಅವರ ಯೋಚನಾ ಲಹರಿ ನಮಗೆ ತಿಳಿಯುತ್ತದೆ. ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸಲೂ ಆಗ ಸಾಧ್ಯವಾಗುತ್ತದೆ.
ಆತ್ಮವಿಶ್ವಾಸ ಮಿತಿ ಮೀರದಿರಲಿ…
ನಾವು ನಮ್ಮ ಕೆಲಸದಲ್ಲಿ ಅತ್ಯಂತ ಪರಿಣತರಿರಬಹುದು. ಹಾಗೆಂದ ಮಾತ್ರಕ್ಕೆ ನಮಗೆ ಮಾತ್ರ ಗೊತ್ತು, ಇದುವೇ ಸರಿಯಾದದ್ದು ಎಂದು ನಂಬಿದೆವೋ, ಆಗ ನಾವೇ ಸ್ವತಃ ನಮ್ಮ ಯಶಸ್ಸಿಗೆ ಕಡಿವಾಣ ಹಾಕಿದಂತಾಗುತ್ತದೆ. ಆತ್ಮವಿಶ್ವಾಸ ಇರಲಿ, ಆದರೆ ಅದು ಮಿತಿಮೀರದಿರಲಿ.
ವಿಭಿನ್ನ ದೃಷ್ಟಿಕೋನ ಮುಖ್ಯ
ಒಮ್ಮೊಮ್ಮೆ ಅನ್ನಿಸುತ್ತದೆ. ನಾನು ಮನೋವೈದ್ಯೆಯಾಗಿ ಇತರರಿಗೆ ಸಲಹೆ, ನೀಡಿದ್ದಕ್ಕಿಂತ ಇತರರಿಂದ ಜೀವನದ ಬಗ್ಗೆ ಕಲಿತದ್ದು ಹೆಚ್ಚು. ಪ್ರತಿ ಘಟನೆಗೂ ವಿವಿಧ ದೃಷ್ಟಿಕೋನಗಳಿರುತ್ತವೆ. ಒಂದು ನಾಣ್ಯಕ್ಕೆ ಎರಡು ಮುಖಗಳಿದ್ದಂತೆ. ಇನ್ನೊಬ್ಬರ ದೃಷ್ಟಿಕೋನ ನಮಗೆ ಹೊಸತನ್ನು ತೆರೆದಿಡುತ್ತದೆ. ಇನ್ನೊಬ್ಬರ ವಿಚಾರಗಳನ್ನು ಪೂರ್ವಾಗ್ರಹಪೀಡಿತರಾಗಿ ನೋಡದೇ ಇದ್ದರೆ ನಮಗೇ ಲಾಭವಾಗುತ್ತದೆ.
ಒಂದೇ ಒಂದು ಥ್ಯಾಂಕ್ಸ್
ಯಾವಾಗಲಾದರೂ ಒಮ್ಮೆ, ನಮಗೆ ಎದುರಿನವರು ಹೇಳಿದ್ದು ಸರಿ ಅಂತನ್ನಿಸಿ, ಆ ಸಲಹೆ ಯಶಸ್ವಿಯಾದರೆ, ಅವರಿಗೆ ಕೃತಜ್ಞತೆ ತಿಳಿಸುವುದನ್ನು ಮರೆಯಬೇಡಿ. ನಾವು ಥ್ಯಾಂಕ್ಸ್ ತಿಳಿಸಿದಾಗ, ಅವರಿಗೂ ಸಂತಸವಾಗಿ, ನಮಗೆ ಅವರು ಮತ್ತಷ್ಟು ಸಕಾರಾತ್ಮಕ ಸಲಹೆಗಳನ್ನು ಕೊಡಬಹುದು, ವಿಷಯಗಳನ್ನೂ ತಿಳಿಸಬಹುದು.
ಸಹನೆ ಅವಶ್ಯ
ನಮಗೆ ಖಂಡಿತವಾಗಿ ತಿಳಿದಿದೆ, ಎದುರಿನವರು ಹೇಳುವುದು ತಪ್ಪೆಂದು. ಆದರೂ ಸುಮ್ಮನೇ ಕೇಳುವುದು ಕಷ್ಟ. ಆದರೂ ಸಹನೆ ಇಟ್ಟುಕೊಂಡು ಆಲಿಸಬೇಕು. ಅವರು ಹೇಳಿ ಮುಗಿಸಿದ ನಂತರ, ಸರಿಯಾದ ಪುರಾವೆಗಳೊಂದಿಗೆ ನಮಗೆ ಗೊತ್ತಿರುವುದನ್ನು ತಿಳಿಸಬೇಕು. ಆಗ ಮಾತ್ರ ಅವರು ನಮ್ಮ ಮಾತನ್ನು ಹೃದಯಪೂರ್ವಕವಾಗಿ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚು.
ನಾಯಕರಾಗುವ ಗುಟ್ಟು
ಒಂದು ವೇಳೆ ಒಂದು ತಂಡದ ನಾಯಕರಾಗಿದ್ದರಂತೂ, “ನಾನೇ ಸರಿ’ ಎಂಬ ಸ್ವಭಾವ, ಸಮಸ್ಯೆ ಸೃಷ್ಟಿಸಬಹುದು. ತಂಡದ ಸದಸ್ಯರು ನಮ್ಮ ಕೆಳಗೆ ಯಾವುದೇ ಪ್ರಾಜೆಕ್ಟ್ ಮಾಡುತ್ತಿದ್ದರೆ, ಆಗ ನಾವು ಮುಕ್ತ ಮನಸ್ಸಿನಿಂದ, ಅವರ ಸಲಹೆಗಳನ್ನು ಸ್ವೀಕರಿಸಬೇಕು. ಅಕಸ್ಮಾತ್ ಅವರದ್ದೇನಾದರೂ ತಪ್ಪಿದ್ದರೆ, ಸಕಾರಾತ್ಮಕವಾಗಿ ಅದನ್ನು ತಿದ್ದಬೇಕು. ಆಗ ಮಾತ್ರ ನಮ್ಮ ತಂಡ ಯಶಸ್ವಿಯಾಗಲು ಸಾಧ್ಯ; ನಾವು ಯಶಸ್ವಿ ನಾಯಕರಾಗಲು ಸಾಧ್ಯ.
– ಡಾ. ಕೆ.ಎಸ್. ಶುಭ್ರತಾ, ಶಿವಮೊಗ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.