ಆಪರೇಷನ್ “ಅಂಕ’
Team Udayavani, Feb 19, 2019, 12:30 AM IST
ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಹತ್ತಿರದಲ್ಲೇ ಇವೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು, ಕೊನೆಯ 24 ಗಂಟೆಗಳು ಅತಿಮುಖ್ಯ. ಅದು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸವಲ್ಲ; ಶಸ್ತ್ರಾಸ್ತ್ರಗಳನ್ನು ಹೊಂದಿಸಿಕೊಳ್ಳುವ ಸಮಯ. ಮೊಂಡಾಗಿದ್ದರೆ ಉಜ್ಜಿ ಚೂಪುಗೊಳಿಸಿಕೊಳ್ಳುವುದು. ಯಾವುದಕ್ಕೆ ಯಾವ ಬಾಣ ಎಂಬುದನ್ನು ನೋಡಿಕೊಳ್ಳುವುದು. ಯಾರು ಕೊನೆಯ ಇಪ್ಪತ್ತಾಲ್ಕು ಗಂಟೆಗಳನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಾರೋ, ಅವರ ಗೆಲವು ಕೂಡ ಅಷ್ಟೇ ಅದ್ಭುತವಾಗಿರುತ್ತದೆ…
ಗೆಲುವೊಂದು ಕೈ ಹಿಡಿಯುವುದಕ್ಕೆ ಅಥವಾ ಕೈ ಬಿಡುವುದಕ್ಕೆ ಕೊನೆಯ ಹಂತದಲ್ಲಿ ನಡೆದು ಹೋದ ಚಿಕ್ಕ ಘಟನೆಗಳೇ ಕಾರಣವಾಗಿ ಬಿಡುತ್ತವೆ. ಎಲ್ಲಾ ರೀತಿಯಲ್ಲೂ ಫಿಟ್ ಆಗಿದ್ದ ವ್ಯಕ್ತಿಯೊಬ್ಬ ಇಂಟರ್ ವ್ಯೂನಲ್ಲಿ ಪೆದ್ದು ಪೆದ್ದಾಗಿ ನಡೆದುಕೊಂಡರೆ ಹೇಗೆ? ಅವನಿಗದು ಗೋಲ್ಡನ್ ಟೈಮ್. ಹತ್ತಾರು ವರ್ಷಗಳ ಕಾಲ ಎಷ್ಟೆಲ್ಲಾ ಓದಿದ್ದೆ, ಕೆಲಸಕ್ಕಾಗಿ ಏನೆಲ್ಲಾ ಸರ್ಕಸ್ ಮಾಡಿದ್ದೆ ಅನ್ನುವುದು ಎಷ್ಟು ಮುಖ್ಯವೋ; ಕೆಲಸ ಕೊಡುವವರ ಎದುರಿಗೆ ನಿಂತು ನೀನೇನು ಅಂತ ತೋರಿಸುವುದೂ ಅಷ್ಟೇ ಮುಖ್ಯ! ಅದನ್ನು ನೀನು ಹೇಗೆ ಬಳಸಿಕೊಳ್ಳುತ್ತೀ ಅನ್ನುವುದರ ಮೇಲೆ ನಿನ್ನ ಗೆಲುವು ನಿಲ್ಲುತ್ತದೆ. ನಿನ್ನ ಗೆಲುವಿಗೆ ಕಾದಿದ್ದ ಅದ್ಭುತ ಗಳಿಗೆ ಅದು. ತೀರಾ ಪ್ರಾಕೀrಸ್, ಕಾನ್ಫಿಡೆನ್ಸ್ ಇಲ್ಲದೇ ಮ್ಯಾಚಿಗಿಳಿದರೆ ಗೆಲ್ಲಲಾಗುತ್ತಾ? ಹೋದಂತೆಯೇ ಬಗಲಿಗೆ ಬ್ಯಾಟ್ ಇಟ್ಟುಕೊಂಡು ಪೆವಿಲಿಯನ್‌ಗೆ ಮರಳಬೇಕಾಗುತ್ತದೆ.
ಕಳೆದ ಬಾರಿಯಷ್ಟೇ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ ಹುಡುಗಿಯೊಬ್ಬಳು ಪರೀಕ್ಷೆ ಹಾಲ್‌ನಲ್ಲಿ ದಡಾರನೆ ಬಿದ್ದುಬಿಟ್ಟಳು. ನೀರು ಕುಡಿಸಿ, ಎಬ್ಬಿಸಿ ಕೂರಿಸಿದ ಮೇಲೆ “ಕಣ್ಣು ಮಂಜು ಮಂಜು, ಬರೆಯೋಕೇ ಆಗ್ತಿಲ್ಲ’ ಅಂತ ಗೊಳ್ಳೋ ಅಂದಳು. ಪರೀಕ್ಷೆ ಭಯದಲ್ಲಿ ನಿನ್ನೆಯಿಂದ ಊಟ ಮಾಡದೇ ಇದ್ದು ಬಿಟ್ಟಿದ್ದಳು. ಪರೀಕ್ಷೆ ಎಂದರೆ ಬರೀ ಓದುವುದಷ್ಟೇ ಮುಖ್ಯ ಅಂತ ಅದ್ಯಾರು ಅವಳಿಗೆ ಹೇಳಿದ್ದರೋ? ಓದಿಲ್ಲದೇ ಪರೀಕ್ಷೆ ಇಲ್ಲ ನಿಜ; ಆದರೆ, ಅದನ್ನು ಬರೆಯಲು ನೀವು ಕೂಡ ನಿಮ್ಮ ಓದಿನಷೇr ದೃಢವಾಗಿರಬೇಕಲ್ವಾ?
ನೀವು ವರ್ಷಪೂರ್ತಿ ಎಷ್ಟೇr ತಯಾರಿ ನಡೆಸಿ, ಆದರೆ ಪರೀಕ್ಷೆಗೂ ಮೊದಲಿನ ಆ ಇಪ್ಪತಾಲ್ಕು ಗಂಟೆಗಳಿವೆಯಲ್ಲಾ ಅವುಗಳನ್ನು ದುಡಿಸಿಕೊಳ್ಳದಿದ್ದರೆ ನಿಮ್ಮ ಓದಿನ ಗೆಲುವಿಗೆ ಗ್ಯಾರೆಂಟಿ ಕೊಡಲಾಗುವುದಿಲ್ಲ. ವರ್ಷದ ನಿಮ್ಮ ಅಷ್ಟೂ ಶ್ರಮವನ್ನು ಒಂದೆಡೆ ಹಾಕಿಕೊಂಡು ನೋಡಿ, “ಯೆಸ್, ನಾನು ಮಾಡಬಲ್ಲೆ! ಇದೆಲ್ಲವೂ ನನಗೂ ಗೊತ್ತು. ಇಷ್ಟನ್ನು ನಾನು ಬರೆಯಬೇಕು’ ಅನ್ನುವ ಒಂದು ಕಾನ್ಫಿಡೆನ್ಸ್ ಕಟ್ಟಿಕೊಂಡು ಹೊರಡುವುದಿದೆಯಲ್ಲ; ಅದು ಒಂದು ವರ್ಷದ ಶ್ರಮಕ್ಕೆ ಬೆಲೆ ಬರಿಸುತ್ತದೆ. ಪರೀಕ್ಷೆ ಎಂಬ ಭೂತ ನಿಮ್ಮನ್ನು ಸದಾ ಹಣಿದು ಹಾಕಬೇಕು ಅಂತ ಕಾಯುತ್ತಿರುತ್ತದೆ. ಆದರೆ, ಆ ಕೊನೆಯ ಇಪ್ಪತಾಲ್ಕು ಗಂಟೆಗಳಲ್ಲಿ ನೀವು ಅದನ್ನು ಪಳಗಿಸಿ ಕೊಳ್ಳಬೇಕಾಗುತ್ತದೆ. ಭಯ, ಒತ್ತಡ, ಕಿರಿಕಿರಿ, ಖನ್ನತೆ- ಇವೆಲ್ಲವೂ ಈ ಹೊತ್ತಿನಲೇ ಆಕ್ರಮಿಸಿಕೊಳ್ಳುವುದು ಜಾಸ್ತಿ. ಅವುಗಳನ್ನು ಹದ ಹಾಕುವುದು ಗೊತ್ತಿರಬೇಕು. ಇಲ್ಲದಿದ್ದರೆ ನೀವು ಸೋತು; ಅವೇ ಗೆದ್ದು ಬೀಗುತ್ತವೆ.
ಎಲ್ಲಾ ಅಧ್ಯಯನಗಳೂ ಇದನ್ನು ಹೇಳುತ್ತವೆ… ಪರೀಕ್ಷೆಗಳ ಮುನ್ನಾ ದಿನದಲ್ಲಿ ಪರೀûಾರ್ಥಿ ಹೇಗಿದ್ದ? ಅವನ ಮನಸ್ಸು ಹೇಗಿತ್ತು? ಅವನ ತಯಾರಿಗಳು ಹೇಗಿದ್ದವು? ಅವೆಲ್ಲವೂ ಅವನ ಫಲಿತಾಂಶಗಳನ್ನು ನಿರ್ಧರಿಸುತ್ತವೆ ಅನ್ನುತ್ತವೆ. ಆದ್ದರಿಂದ, ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಹೇಗಿರಬೇಕು? ಆ ಇಪ್ಪತ್ತಾಲ್ಕು ಗಂಟೆಗಳಲ್ಲಿ ಏನೇನು ಮಾಡಬೇಕು? ಎಂಬುದರ ಬಗ್ಗೆ ಮಾಹಿತಿ ಒದಗಿಸುವ ಅಗತ್ಯತೆಯನ್ನು ಒತ್ತಿ ಹೇಳುತ್ತವೆ. ಇದು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸವಲ್ಲ. ಇದು ಶಸ್ತ್ರಾಸ್ತ್ರಗಳನ್ನು ಹೊಂದಿಸಿಕೊಳ್ಳುವ ಕ್ರಮ. ಮೊಂಡಾಗಿದ್ದರೆ ಉಜ್ಜಿ ಚೂಪುಗೊಳಿಸಿಕೊಳ್ಳುವುದು. ಯಾವುದಕ್ಕೆ ಯಾವ ಬಾಣ ಎಂಬುದನ್ನು ನೋಡಿಕೊಳ್ಳುವುದು. ಯಾರು ಕೊನೆಯ ಇಪ್ಪತ್ತಾಲ್ಕು ಗಂಟೆಗಳನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಾರೋ ಅವರ ಗೆಲುವು ಕೂಡ ಅಷ್ಟೇ ಅದ್ಭುತವಾಗಿರುತ್ತದೆ.
ಕೊನೆ ಕ್ಷಣದ ಮಿಂಚಿನ ತಯಾರಿ
ಹಾಗಾದರೆ, ಪರೀಕ್ಷೆಯ ಹಿಂದಿನ ದಿನ ಪಟ್ಟಾಗಿ ಓದಲು ಕೂರಬೇಕಾ? ರಾತ್ರಿಯೆಲ್ಲಾ ನಿದ್ರೆಯನ್ನು ಅಡವಿಟ್ಟು ಪುಸ್ತಕ ಹಿಡಿಯಬೇಕಾ? ಊಟ ತಿಂಡಿಗೆ ಅವಕಾಶ ನೀಡದೇ ಅಕ್ಷರಗಳನ್ನೇ ಮುಕ್ಕಬೇಕಾ? ಅಂತ ಕೇಳಬೇಡಿ. ಹಾಗೇನಾದರೂ ಮಾಡಿದರೆ, ಮರುದಿನದ ಪರೀಕ್ಷೆಯ ಮೂರು ಗಂಟೆ ನಿಮ್ಮ ಪಾಲಿಗೆ ನರಕಯಾತನೆ! ಕೊನೆಯ ಇಪ್ಪತಾಲ್ಕು ಗಂಟೆಗಳು ನಿಮ್ಮ ಪರೀಕ್ಷೆಗೆ ಬಲ ನೀಡುವಂತಾಗಬೇಕು.
– ವಿಷಯಕ್ಕೆ ಸಂಬಂಧಿಸಿದ ಅಷ್ಟೂ ಸಂಪನ್ಮೂಲಗಳನ್ನು ಒಂದೆಡೆ ಜೋಡಿಸಿಕೊಳ್ಳಿ, ಎಲ್ಲವೂ ಕೈಗೆ ಸಿಗುವಂತಿರಲಿ. ಕೊನೆಯ ಕ್ಷಣದಲ್ಲಿ ಅವುಗಳಿಗೆ ಪರದಾಡುವುದು ಬೇಡ.
– ಪರೀಕ್ಷೆಗೂ ಮುನ್ನಾ ದಿನ ಯಾವುದೇ ಹೊಸ ವಿಚಾರವನ್ನು ಓದಬೇಡಿ. ಈ ಹಿಂದೆ ಓದಿದ್ದು ಮಾತ್ರವೇ ಮನನವಾಗಲಿ.
– ಮೊದಲೇ ಕೀ ಪಾಯಿಂಟ್ಸ್ ಮಾಡಿಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಅದು ಪರೀಕ್ಷೆಯ ಮೊದಲ ಇಪ್ಪತ್ತಾಲ್ಕು ಗಂಟೆಗಳಲ್ಲಿ ಶೀಘ್ರ ಪುನರಾವರ್ತನೆಗೆ ಸಹಕಾರಿ.
– ಎಲ್ಲವನ್ನೂ ವಿವರವಾಗಿ ಓದುತ್ತಾ ಕೂರಬೇಡಿ. ನೀಲ ನಕಾಶೆಯನ್ನು ಆಧರಿಸಿ ಪ್ರಮುಖ ವಿಷಯಗಳ ಕಡೆ ಗಮನಹರಿಸಿ.
– ಓದಿದ್ದರಲ್ಲಿ ನಿಮಗೆ ಖುಷಿ ಎನಿಸಿದ್ದನ್ನು ಒಂದೆರಡು ಪುಟಗಳಷ್ಟು ಬರೆಯಿರಿ.
– ಓದದ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಓದಿದ್ದನ್ನು ಚೆನ್ನಾಗಿ ಬರೆಯುವ ವಿಶ್ವಾಸವಿರಲಿ.
ನಿಮ್ಮ ಮನಸ್ಸೇ ಆ ಕ್ಷಣದ ದೇವರು!
ಮನಸ್ಸು ಪ್ರಭಾವಶಾಲಿ. ಅದಕ್ಕೆ ಎಲ್ಲವೂ ಸಾಧ್ಯವಿದೆ. ಗೆಲುವಿಗೂ, ಎಡವಟ್ಟುಗಳಿಗೂ ಅದೇ ಕಾರಣ. ಆದರೆ, ನೀವು ಅದನ್ನು ಹೇಗಿಟ್ಟುಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧರಿತ. ಪರೀಕ್ಷೆ ಬರೆಯಲು ಹೊರಡುವ ಕೊನೆಯ ಕ್ಷಣದಲ್ಲಿ ನಿಮ್ಮ ಮನಸ್ಸು ಹೀಗಿರಲಿ.
– ನಾಳೆಯೇ ಪರೀಕ್ಷೆ ಎಂದು ದಿಗಿಲು ಬೀಳುವುದು ಬೇಡ. ಹಾಗಂತ ಪರೀಕ್ಷೆಯನ್ನು ತುಂಬಾ ಕಾಳಜಿ ಮಾಡಬೇಡಿ ಅಂತಲ್ಲ. ಒಂದು ಆರೋಗ್ಯಯುತ ಭಯವಿರಲಿ.
– ತೀರಾ ತಡರಾತ್ರಿಯವರೆಗೂ ಓದುತ್ತಾ ಕೂರಬೇಡಿ. ಎಲ್ಲವನ್ನೂ ಹರಡಿಕೊಂಡು ಒದ್ದಾಡಬೇಡಿ. ಇದೆಲ್ಲಾ ಒತ್ತಡವನ್ನುಂಟು ಮಾಡುತ್ತದೆ.
– ಟಿವಿ, ಮೊಬೈಲ್, ಚಾಟ್‌ಗಳಿಂದ ದೂರವಿರಿ. ಅಮ್ಮ- ಅಪ್ಪನ ಜೊತೆಗೆ ಖುಷಿ ಖುಷಿಯಾಗಿರಿ, ನಕ್ಕು ಹಗುರಾಗಿ. ಹರಟೆ ಮಾತ್ರವೇ ಬೇಡ.
– ಚೆನ್ನಾಗಿ ನಿದ್ದೆ ಮಾಡಿ. ಬೆಳಗ್ಗೆ ಸಮಯದ್ದರೆ, ಒಂದಿಷ್ಟು ಓದಿದ್ದನ್ನು ತಿರುವಿ ಹಾಕಿ. ಇಲ್ಲದಿದ್ದರೆ ಬೇಡವೇ ಬೇಡ. ಪೂಜೆ-ಧ್ಯಾನದ ಅಭ್ಯಾಸವಿದ್ದರೆ ತೊಡಗಿಸಿಕೊಳ್ಳಿ.
– ಪರೀಕ್ಷೆಯ ಮುಂಚಿನ 3-4 ಗಂಟೆಗಳ ಅವಧಿಯಲ್ಲಿ ಏನನ್ನೂ ಓದಬೇಡಿ.
– ಮನೆಯಿಂದ ಹೊರಡುವಾಗ ಖುಲ್ಲಯಿಂದಲೇ ಹೊರಡಿ. ಪೂರ್ವಗ್ರಹವನ್ನು ಮನೆಯಲ್ಲಿಯೇ ಬಿಟ್ಟು ಹೊರಡಿ. ಚೆನ್ನಾಗಿ ಬರೆಯುವೆ ಎಂಬ ಆತ್ಮವಿಶ್ವಾಸವನ್ನು ಧರಿಸಿಕೊಳ್ಳಿ.
– ಪರೀಕ್ಷಾ ಕೇಂದ್ರವನ್ನು ಅರ್ಧಗಂಟೆ ಮುಂಚಿತವಾಗಿ ತಲುಪಿ. ಅಲ್ಲಿ ಮಾತು ಬೇಡ. ಅತೀ ಮಾತು ನೆನಪಿನ ಶಕ್ತಿಯನ್ನು ಕುಂದಿಸುತ್ತದೆ.
ನಿಮ್ಮ ಆರೋಗ್ಯವೇ ಬೋನಸ್ ಮಾರ್ಕ್ಸ್
ಎಲ್ಲವೂ ಸರಿಯಿದ್ದು, ಪರೀಕ್ಷೆ ಬರೆಯುವ ನೀವೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಹೇಗೆ? ಈ ವೇಳೆ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ತುಂಬಾ ಮುಖ್ಯ.
– ಪರೀಕ್ಷೆ ಮುನ್ನಾ ದಿನದ ಆಹಾರಕ್ರಮ ಬಹಳ ಮುಖ್ಯ. ಹಿತಮಿತವಾದ, ಶುಚಿಯಾದ ಸಾತ್ವಿಕ ಆಹಾರ ಸೇವಿಸಿ.
– ಜಾತ್ರೆ, ಸಂತೆ, ಹಬ್ಬಗಳ ತಿನಿಸುಗಳಿಂದ ದೂರವಿರಿ. ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳನ್ನೂ ನಿರ್ಲಕ್ಷಿಸುವುದು ಸಲ್ಲ. ಅಗತ್ಯವಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
– ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಕನಿಷ್ಠ ಆರೇಳು ಗಂಟೆಗಳಷ್ಟು ನಿದ್ದೆಯ ಅವಶ್ಯಕತೆ ಇದೆ.
– ಪರೀಕ್ಷೆಗೆ ಹೊರಡುವಾಗ ತುಂಬಾ ನೀರು ಕುಡಿಯುವುದು ಒಳ್ಳೆಯದಲ್ಲ.
ಪ್ರಧಾನಿ ಮೋದಿ ಹೇಳಿದ ಆ ತಂತ್ರ
ಮಕ್ಕಳೇ, ಪರೀಕ್ಷೆ ಬಗ್ಗೆ ಆತಂಕ ಬೇಡ. ಅದನ್ನು ನೋಡಿ ಹೆದರೋದಿಕ್ಕೆ, ಪರೀಕ್ಷೆಯೇನು ಹುಲಿಯೇ? ಸಿಂಹವೇ? ಬೇತಾಳವೇ? ಪರೀಕ್ಷೆಯನ್ನು ಗೆಲ್ಲುವ ಮಾರ್ಗಗಳು ಎರಡು. ಒಂದು, ನಿಮ್ಮ ಆತ್ಮವಿಶ್ವಾಸ, ತಯಾರಿ ಕಂಡು ಪರೀಕ್ಷೆಯೇ ಹೆದರಬೇಕು. ಮತ್ತೂಂದು, ಪ್ರಧಾನಿ ಮೋದಿ ಅವರು ಹೇಳಿದಂತೆ, ಪರೀಕ್ಷೆಯನ್ನು ಗೆಳೆಯ ಎಂಬುದಾಗಿ ಪರಿಗಣಿಸಬೇಕು. ಯುಗಾದಿ, ದೀಪಾವಳಿ, ಬರ್ತ್‌ಡೇಗೆ ಕಾಯುವಂತೆ, ನೀವು ಪರೀಕ್ಷೆಗೆ ಕಾಯಬೇಕು. ಪರೀಕ್ಷೆಯ ದಿನ ಖುಷಿ ಖುಷಿಯಾಗಿರಬೇಕು.
ಇದು ನಿಮ್ಮದೇ ಸಮಯ
ಹೌದು, ಕೊನೆಯ ಇಪ್ಪತ್ನಾಲ್ಕು ಗಂಟೆಗಳು ಬಿಲ್ಕುಲ್ ನಿಮ್ಮವೇ. ಆ ಎಲ್ಲ ಗಂಟೆಗಳೂ ಅತಿಮುಖ್ಯ, ತುಂಬಾ ವ್ಯವಸ್ಥಿತವಾಗಿ ಅದನ್ನು ಬಳಸಿಕೊಳ್ಳಿ. ಅಲ್ಲಿ ಎಲ್ಲದಕ್ಕೂ ಪಾಲಿರಲಿ; ವ್ಯರ್ಥ ಕೆಲಸಕ್ಕೆ ಬಿಟ್ಟು! ಓದಿದ್ದನ್ನು ಕಣ್ಮುಂದೆ ದೃಶ್ಶಿಕರಿಸಿಕೊಂಡಾಗ, ಅದು ಬೇಗನೆ ತಲೆಗೆ ಹೊಕ್ಕುತ್ತದೆ.
ನಕ್ಕರೆ ಒಳ್ಳೇ “ಅಂಕ’
ನಗು ಎನ್ನುವುದು ಗುಡ್ ಟಾನಿಕ್. ಒತ್ತಡ ಕಡಿಮೆ ಮಾಡುವ ದಿವೌÂಷಧ. ಒತ್ತಡ ಕಡಿಮೆಯಾದರೆ, ನೆನಪುಗಳು ಸಲೀಸು. ಅದಕ್ಕಾಗಿ ನೀವು ಸದಾ ನಗುತ್ತಾ ಇರಬೇಕು. ಮನೆಯವರೊಂದಿಗೆ ಮಾತಾಡುತ್ತಾ, ಖುಷಿ ಖುಷಿಯಿಂದ ಇರಿ. ಬೆಳಗ್ಗೆ ಪರೀಕ್ಷೆಗೂ ನಗುನಗುತ್ತಲೇ ಹೊರಡಿ. ಆಗ ನಿಮಗೆ ಗೊತ್ತಾಗುತ್ತೆ, ಅದರ ಮ್ಯಾಜಿಕ್ ಏನು ಅಂತ!
ಸದಾಶಿವ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.