ಒಂದ್ ಕೆಲ್ಸ ಮಾಡಿ!
Team Udayavani, Nov 13, 2018, 6:00 AM IST
ಕಷ್ಟಪಟ್ಟು ಓದಿ, ಒಳ್ಳೆಯ ಅಂಕಗಳನ್ನು ಗಳಿಸಿ, ಒಂದೊಳ್ಳೆಯ ಕೆಲಸವನ್ನೇನೋ ಸಂಪಾದಿಸಿಬಿಡುತ್ತೀರಿ. ಅಷ್ಟಕ್ಕೇ ಎಲ್ಲವೂ ಮುಗಿದುಹೋಯ್ತು ಎನ್ನುವಂತಿಲ್ಲ. ವೃತ್ತಿ ನಿರ್ವಹಣೆ ಜೀವನದ ಅತಿ ಮುಖ್ಯವಾದ ಭಾಗ. ದಿನದ ಹೆಚ್ಚಿನ ಸಮಯವನ್ನು ಕಚೇರಿಯಲ್ಲೇ ಕಳೆಯುವುದರಿಂದ ಒಂದಿಷ್ಟು ಸೂತ್ರಗಳನ್ನು ಅಳವಡಿಸಿಕೊಂಡರೆ ಜೀವನ ಸುಗಮ…
ಸ್ಮಾರ್ಟ್ ಕೆಲಸಗಾರರಾಗಿ
ಸ್ಮಾರ್ಟ್ ಎಂದರೆ ಚೆನ್ನಾಗಿ ತಲೆ ಬಾಚಿಕೊಂಡು, ನೀಟಾಗಿ ಇಸ್ತ್ರಿ ಹಾಕಿದ ದಿರಿಸುಟ್ಟುಕೊಂಡು ಸಿಂಗರಿಸಿಕೊಳ್ಳುವುದಷ್ಟೇ ಅಲ್ಲ. ಚೆನ್ನಾಗಿ ಕಾಣುವುದು ಕೂಡಾ ಇರಬೇಕು . ಆದರೆ, ಅದಕ್ಕಿಂತ ಹೆಚ್ಚಾಗಿ ಬುದ್ಧಿವಂತಿಕೆಯಿಂದ ಕೆಲಸಗಳನ್ನು ನಿರ್ವಹಿಸಲು ಕಲಿಯಬೇಕು. ಟೈಮ್ ಮ್ಯಾನೇಜ್‌ಮೆಂಟ್ ಕುರಿತು ಬಹುತೇಕರಿಗೆ ಗೊತ್ತೇ ಇರುತ್ತದೆ. ಅದರ ಪ್ರಕಾರ, ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಸಮಯ ಕೊಟ್ಟುಕೊಂಡರೆ ಆವತ್ತಿನ ಕೆಲಸ ಆವತ್ತೇ ಮುಗಿದುಹೋಗುತ್ತದೆ. ಇದರಿಂದ ಕಡತಗಳು ಉಳಿದುಹೋಗಿ ಅವೇ ಆಕಾಶದೆತ್ತರಕ್ಕೆ ಬೆಳೆದು ಪೆಡಂಭೂತವಾಗಿ ಕಾಡುವುದಿಲ್ಲ. ಅಲ್ಲದೆ, ಸ್ಮಾರ್ಟ್ ಕೆಲಸಗಾರನಾದವನು, ಯಾವುದು ಅತಿ ಮುಖ್ಯವಾದ ಕೆಲಸ, ಯಾವುದಕ್ಕೆ ಎಷ್ಟು ಆದ್ಯತೆ ಕೊಡಬೇಕು ಎಂಬುದನ್ನು ಚೆನ್ನಾಗಿ ಅರಿತಿರುತ್ತಾನೆ. ಉದ್ಯೋಗ ಕ್ಷೇತ್ರ ಬಯಸುವುದು ಅಂಥವರನ್ನೇ!
ಕಾರ್ಯಕ್ಷಮತೆ ಉಳಿಸಿಕೊಳ್ಳಿ…
ಹೊಸತಾಗಿ ಕೊಂಡುಕೊಂಡ ಕಾರು ಕೆಲವು ವರ್ಷಗಳ ತನಕ ತೊಂದರೆ ಕೊಡದೆ, ಚೆನ್ನಾಗಿಯೇ ಓಡುತ್ತದೆ. ಆದರೆ, ನಿಧಾನವಾಗಿ ಕಾರಿನ ಒಂದೊಂದೇ ಬಿಡಿಭಾಗ ಕೈಕೊಡಲು ಶುರುಮಾಡುತ್ತದೆ. ಇದು ಕಾರು ಚಲಾಯಿಸುವವನನ್ನು ಅವಲಂಬಿಸಿರುತ್ತದೆ. ಆತ ಎಷ್ಟು ಮುತುವರ್ಜಿಯಿಂದ ಚಲಾಯಿಸುತ್ತಾನೋ ಅಷ್ಟು ದೀರ್ಘ ಆಯುಸ್ಸನ್ನು ಕಾರು ಪಡೆದುಕೊಳ್ಳುತ್ತದೆ. ರಫ್ ಆಗಿ ಕಾರು ಚಲಾಯಿಸಿದರೆ ಅಷ್ಟೇ ಬೇಗ ಕಾರು ತನ್ನ ಆಯುಸ್ಸು ಕಳೆದುಕೊಳ್ಳುತ್ತದೆ. ಇದು ಉದ್ಯೋಗಿಗಳಿಗೂ ಅನ್ವಯ. ಕೆಲಸ ಮಾಡುವ ಸಂದರ್ಭದಲ್ಲಿ ಮುತುವರ್ಜಿ, ಜಾಣತನವನ್ನು ಉಪಯೋಗಿಸಿದಷ್ಟೂ ಆತನ ಕಾರ್ಯಕ್ಷಮತೆ ಹೆಚ್ಚುತ್ತಾ ಹೋಗುತ್ತದೆ. ದಿನಗಳೆದಂತೆ ಅವನು ಮಂಕಾಗುವುದಿಲ್ಲ, ಆತನ ಕಾರ್ಯಕ್ಷಮತೆ ಕುಗ್ಗುವುದಿಲ್ಲ. ಕೆಲಸಗಾರನ ಕಾರ್ಯಕ್ಷಮತೆ, ಉತ್ಸಾಹವನ್ನು ಉಳಿಸುವುದರಲ್ಲಿ ಉದ್ಯೋಗದಾತರ ಕಾಳಜಿಯೂ ಮುಖ್ಯವಾಗುತ್ತದೆ.
ಗ್ರೇಟ್ ಃ ವರ್ಕ್
ಹಿಂದೆಲ್ಲಾ ಆಫೀಸಿನಿಂದ ಮನೆಗೆ ಹಿಂದಿರುಗುವವರು ಅಪ್ಪನೋ, ಅಮ್ಮನೋ, ಪತಿಯೋ, ಪತ್ನಿಯೋ ಆಗಿಯೇ ಮನೆಯೊಳಕ್ಕೆ ಕಾಲಿಡುತ್ತಿದ್ದರು. ಆದರೆ, ಆ ಪರಿಸ್ಥಿತಿ ಬದಲಾಗಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಮನೆ, ಕಚೇರಿಯ ಭಾಗವಾಗಿ ಮಾರ್ಪಾಡಾಗಿದೆ. ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಮ್ಯಾನೇಜ್‌ಮೆಂಟ್ ಪ್ರೊಫೆಸರ್ ಮಾರ್ಟಿನ್ ಹ್ಯಾನ್ಸನ್, ಈ ವಿಷಯದ ಕುರಿತು ತಮ್ಮ ಪುಸ್ತಕ “ಗ್ರೇಟ್ ಬೈ ಚಾಯ್ಸ’ನಲ್ಲಿ ವಿಸ್ತಾರವಾಗಿ ಚರ್ಚಿಸಿ¨ªಾರೆ. 5 ವರ್ಷಗಳ ಕಾಲ, 5000ಕ್ಕೂ ಹೆಚ್ಚು ಮ್ಯಾನೇಜರ್‌ಗಳ, ಉದ್ಯೋಗಿಗಳ ಹಾಗೂ ಅಧಿಕಾರಿಗಳ ಸಂದರ್ಶನ ನಡೆಸಿ, ಆಳವಾಗಿ ಅಧ್ಯಯನ ಮಾಡಿದ ಹ್ಯಾನ್ಸನ್, ಕೆಲವೊಂದು ಪರಿಹಾರಗಳನ್ನು ದಾಖಲಿಸಿದ್ದಾರೆ.
ಸ್ಮಾರ್ಟ್ ವರ್ಕರ್ಸ್ ಹೇಗಿರ್ತಾರೆ?
ಹ್ಯಾನ್ಸನ್ ತಮ್ಮ ಪುಸ್ತಕದಲ್ಲಿ ವಿವರಿಸಿರುವ ಕೆಲವು ವಿಚಾರಗಳು ಹೀಗಿವೆ…
1. ಉದ್ಯೋಗಿಯು ಕಿತ್ತಳೆ ಹಣ್ಣಿದ್ದ ಹಾಗೆ. ಕಿತ್ತಳೆ ರಸ ಪಡೆಯಲು ಅದನ್ನು ಒಂದೆರಡು ಬಾರಿ ಹಿಂಡಿದರೆ ಸಾಕು. ಆದರೆ, ತಿರುಳು ಹೊರಬಂದ ಮೇಲೂ ಹಿಂಡುತ್ತಾ ಹೋದರೆ, ಸಮಯ ಹಾಗೂ ಪರಿಶ್ರಮ ಎರಡೂ ವ್ಯರ್ಥ.
2. “ವರ್ಕ್ ಸ್ಮಾರ್ಟ್, ನಾಟ್ ಹಾರ್ಡ್’ ಎಂಬ ಮಾತನ್ನು ಉದ್ಯೋಗಿಗಳು ಸರಿಯಾಗಿ ಅರಿತುಕೊಳ್ಳಬೇಕಿದೆ.
3. ನೀವು ಮಾಡಬೇಕಾದ ಕೆಲಸಗಳ ಪಟ್ಟಿಯಲ್ಲಿ ಯಾವುದನ್ನು ಮೊದಲು ಮಾಡಬೇಕು, ಯಾವ ಕೆಲಸಕ್ಕೆ ಎಷ್ಟು ಸಮಯ ಮೀಸಲಿಡಬೇಕು ಎಂಬುದರ ಬಗೆಗೆ ಸ್ಪಷ್ಟತೆ ಇರಬೇಕು.
4. ಮೊದಲು ಮಾಡಬೇಕಾದ ಪ್ರಮುಖ ಕೆಲಸಗಳ ಬಗ್ಗೆ ಹೆಚ್ಚಿನ ಗಮನ, ಇಚ್ಛಾಶಕ್ತಿ, ಸಾಮರ್ಥ್ಯ ಹೊಂದಿರಬೇಕಾಗುತ್ತದೆ.
5. ತಾವು ಎಷ್ಟು ಗಂಟೆ ಕೆಲಸ ಮಾಡುತ್ತೇವೆ ಎಂದು ಲೆಕ್ಕವಿಡುವುದಕ್ಕಿಂತ, ಹೇಗೆ ಕೆಲಸ ಮಾಡುತ್ತೇವೆ ಎಂಬುದರತ್ತ ಗಮನ ವಹಿಸಬೇಕು.
6. ಕೆಲಸದ ಮಧ್ಯೆ ಮನಸ್ಸು ಹಗುರಾಗಿಸುವ ಸಂಗತಿಗಳತ್ತ ಕಣ್ಣು ಹಾಯಿಸಿ. ಇದರಿಂದ ಏಕತಾನತೆ ದೂರವಾಗಿ, ಮನಸ್ಸು ಫ್ರೆಶ್ ಆಗುವುದು.
ಪ್ರಶಾಂತ್ ಕೋಲ್ಕುಂಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.