ಮಾನವೀಯ ಪರಿಮಳ: ಫೇಸ್‌ಬುಕ್ ಪರಮಾತ್ಮನ ಆಶೀರ್ವಾದ !
Team Udayavani, Aug 22, 2017, 12:18 PM IST
ಲೈಕು, ಕಾಮೆಂಟುಗಳನ್ನೇ ಉಸಿರಾಟ ಮಾಡಿಕೊಂಡ ಫೇಸ್‌ಬುಕ್‌ಗೆ ಒಂದು ಹೃದಯವಿದೆ. ಆ ಹೃದಯ ಈ ಜಗತ್ತಿನಷ್ಟೇ ವಿಶಾಲ. ಅಲ್ಲಿನ ಮಾನವೀಯ ಬಡಿತಗಳಿಗೆ ಕಿವಿಗೊಟ್ಟಾಗ ಕೆಲವು ದೃಶ್ಯಗಳು ಕಾಣಿಸಿಕೊಂಡವು. ಮೆಹಕ್‌ಳ ಬ್ಲಿಡ್ ಕ್ಯಾನ್ಸರ್‌ನ ಚಿಕಿತ್ಸೆಗೆ ನೆರವಾದ ಜಗತ್ತು, ಅಂಧ ವೀರೇಶನ ವ್ಯಾಸಂಗಕ್ಕೆ ಹೆಗಲಾದ ಭುಜಗಳು, ಸರ್ಕಾರಿ ಶಾಲೆಯ ಉದ್ಧಾರಕ್ಕೆ ಸಹಾಯ ಹಸ್ತ ಚಾಚಿದವರು, ಗುಡಿಸಲ್ಲಿದ್ದ ವೆಳ್ಳಿಯಮ್ಮನಿಗೆ ಬೆಳ್ಳಿಕಿರಣಗಳಾದ ಮುಖಗಳು… ಇವೆಲ್ಲವೂ ಅಲ್ಲಿದ್ದವು. ಆಗಲೇ ಗೊತ್ತಾಗಿದ್ದು, ಫೇಸ್‌ಬುಕ್ ಎಂಬುದೊಂದು ಮಾನವೀಯ ಗೋಡೆ ಅಂತ!
ಘಟನೆ 1
ಪುಟಾಣಿ ಮೆಹಕ್‌ಗೆ ಬ್ಲಿಡ್ ಕ್ಯಾನ್ಸರ್!
ಮಾರ್ಚ್ 3ನೇ ತಾರೀಖೀನ “ಉದಯವಾಣಿ’ ತೆರೆದಿದ್ದ ನನಗೆ, ಒಂದು ಆಘಾತಕಾರಿ ಸುದ್ದಿ ನನ್ನ ಹೃದಯವನ್ನು ಕಣ್ಣೀರಾಗುವಂತೆ ಮಾಡಿತ್ತು. ತನ್ನ ಹನ್ನೊಂದು ವರ್ಷದ ಮಗಳು “ಮೆಹೆಕ್’ಳ ಜೀವ ಉಳಿಸಲು ಉಡುಪಿಯ ಜನತೆಯ ಮುಂದೆ ಸೆರಗೊಡ್ಡಿ ಬೇಡುತ್ತಿದ್ದ ತಾಯಿ ಶಾಹೀನಾರ ಬಗ್ಗೆ ಓದಿ ನಾನು ಮರುಕಗೊಂಡಿದ್ದೆ. ಪುಟಾಣಿ ಮೆಹಕ್‌ಗೆ ನೆರವಾಗುವಷ್ಟು ಸದೃಢ ಆರ್ಥಿಕ ಹಿನ್ನಲೆ ನನ್ನದಲ್ಲ. ಹಾಗಾಗಿ, ಮೆಹೆಕ್‌ಳನ್ನು ಒತ್ತಾಯಪೂರ್ವಕವಾಗಿ ಮನಸ್ಸಿನಿಂದಾಚೆ ನಿಲ್ಲಿಸಿದ್ದೆ. ಆಕೆಯ ತಾಯಿ ಮಾತ್ರ ಬೇಡುತ್ತಲೇ ಇದ್ದರು.
ತಿಂಗಳೆರಡು ಕಳೆದ ಮೇಲೆ ಮತ್ತೂಮ್ಮೆ ಮೆಹೆಕ್ ಬಗ್ಗೆ ಮತ್ತೂಂದು ಸುದ್ದಿ ಬಂತು. ಉಡುಪಿಯ ಬಿಜೆಪಿ ಯುವಮೋರ್ಚಾ ಆಯೋಜಿಸಿದ್ದ ಕಬಡ್ಡಿ ಕ್ರೀಡಾಕೂಟದಲ್ಲಿ ರಾತ್ರಿ 11ರ ಹೊತ್ತಿಗೆ ಈ ತಾಯಿ ತನ್ನ ಚಿಕ್ಕ ಮಗನನ್ನು ಜೊತೆಮಾಡಿಕೊಂಡು ಅಲ್ಲಿ ಬಂದವರ ಬಳಿ ಸಹಾಯ ಕೇಳುತ್ತಿದ್ದರಂತೆ. ಯುವಮೋರ್ಚಾ ಸದಸ್ಯರು ಆಕೆಗಾಗಿ ಸ್ಥಳದಲ್ಲೇ 17 ಸಾವಿರ ರೂ. ಒಟ್ಟು ಮಾಡಿ ಕೊಟ್ಟಿದ್ದರು. ಸೈದ್ಧಾಂತಿಕ ಭಿನ್ನತೆಗಳನ್ನು ಮೀರಿ ನಿಂತ ಅವರ ಮಾನವೀಯತೆಗೆ ತಲೆಬಾಗಿದ್ದೆ.
ಶಾಹೀನಾ ಶಿವಮೊಗ್ಗದವರು. ಆಕೆಯ ಜೀವನ ಪ್ರತಿ ಮಹಿಳೆಗೂ ಮಾದರಿ. ಕೈಹಿಡಿದ ಪತಿ ರಫೀಕ್ ಹೃದಯಾಘಾತದಿಂದ ತೀರಿಕೊಂಡಾಗ ಮೂವರು ಮಕ್ಕಳೂ ಚಿಕ್ಕವರು. ಗಂಡ ತೀರಿಕೊಂಡ ಮೂರನೇ ದಿನಕ್ಕೆ ಈ ಸ್ವಾಭಿಮಾನಿ ತಾಯಿ ತನ್ನ ಗಂಡ ನಡೆಸುತ್ತಿದ್ದ “ಮೊಟ್ಟೆ ಲೈನ್ ಸೇಲ್’ಗೆ ಇಳಿದಿದ್ದರು. ಮೂವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಯಾರ ಮುಂದೆಯೂ ಕೈಚಾಚದೇ, ಒಂದು ದಿನವೂ ರಜೆ ಹಾಕದೇ ನಿತ್ಯ ಶಿವಮೊಗ್ಗವಿಡೀ ಸುತ್ತಿ, 6000 ಮೊಟ್ಟೆ ಲೈನ್ ಸೇಲ್ ಮಾಡುತ್ತಿದ್ದರು. ಬಾಡಿಗೆ ಮನೆಯಿತ್ತು. ಬಡತನವಿತ್ತು. ಆದರೂ ನೆಮ್ಮದಿಯಿತ್ತು.
ಆದರೆ, ಅದೊಂದು ದಿನ ಪುಟಾಣಿ ಮೆಹೆಕ್‌ಗೆ ಜ್ವರ ಕಾಣಿಸಿಕೊಂಡಿತು. ಕಾಲೆಲ್ಲಾ ಊದಿಕೊಂಡಿತು. ಭಯಗೊಂಡ ತಾಯಿ ಮಣಿಪಾಲಕ್ಕೆ ಬಂದಾಗ ಟೆಸ್ಟುಗಳೆಲ್ಲಾ ಮುಗಿದು ಹನ್ನೊಂದು ವರ್ಷದ ಮಗುವಿಗೆ ರಕ್ತದ ಕ್ಯಾನ್ಸರ್ ಎಂದು ಗೊತ್ತಾಯಿತು. ಆದರೆ, ಡಾಕ್ಟರ್ ಒಂದು ಭರವಸೆ ನೀಡಿದ್ದರು; “ಕ್ಯಾನ್ಸರ್ ಇನ್ನೂ ಫಸ್ಟ್ ಸ್ಟೇಜ್‌ನಲ್ಲಿರೋದರಿಂದ ಸೂಕ್ತ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಸುಮಾರು 10 ಲಕ್ಷ ರೂ.ಗಳ ಅಗತ್ಯವಿದೆ’ ಎಂದರು. ತಾಯಿ ಅದನ್ನು ಕೇಳಿ ತಾಯಿ ಅಧೀರಳಾಗಿದ್ದರು.
ಮಗುವಿಗೆ ಚಿಕಿತ್ಸೆ ಆರಂಭವಾಗಿತ್ತು. ತನ್ನ ಕರುಳ ಕುಡಿಯನ್ನುಳಿಸಲು ತಾಯಿ ಬೀದಿಗಿಳಿದಳು. ಸಿಕ್ಕಲೆಲ್ಲಾ ಬೇಡಿದಳು. ಶಕ್ತಿಮೀರಿ ಪ್ರಯತ್ನಿಸಿದಳು. ಆಕೆಯ ನೋವಿಗೆ ಹಲವರು ಸ್ಪಂದಿಸಿದರು. ಸುಮಾರು ಅರ್ಧದಷ್ಟು ದುಡ್ಡನ್ನು ಈಗ ಆಕೆ ಒಟ್ಟುಗೂಡಿಸಿದ್ದಾರೆ ಹಾಗೂ ಆಸ್ಪತ್ರೆಗೆ ಬಿಲ್ ಕಟ್ಟಿದ್ದಾರೆ. ಆದರೆ, ಇನ್ನೂ ಕಟ್ಟಬೇಕಾದದ್ದು ಅರ್ಧದಷ್ಟಿದೆ ಎಂದು ತಿಳಿದುಬಂತು.
ಮೆಹೆಕ್‌ಗಾಗಿ ಆಕೆಯ ಅಕ್ಕ ಸೆಹೆರ್ 9ನೇ ತರಗತಿಯಲ್ಲೇ ಶಾಲೆಗೆ ತಾತ್ಕಾಲಿಕ ಬ್ರೇಕ್ ಹಾಕಿ ಮಣಿಪಾಲಕ್ಕೆ ಬರಬೇಕಾಯಿತು. ಇತ್ತೀಚೆಗಷ್ಟೇ ಅನುಮತಿ ಪಡೆದು, 9ನೇ ತರಗತಿಯ ಪರೀಕ್ಷೆ ಬರೆದಿದ್ದಾಳೆ. ಶೇ.93 ಅಂಕ ಗಳಿಸುವ ಪ್ರತಿಭಾನ್ವಿತೆ ಆಕೆ. ಮೆಹೆಕ್‌ಳ ತಮ್ಮ ಸಲ್ಮಾನ್ ಕೂಡಾ ಶಾಲೆಗೆ ಹೋಗುತ್ತಿಲ್ಲ. ಕಳೆದ ಡಿಸೆಂಬರ್ 6ನೇ ತಾರೀಖೀನಿಂದ ಈ ಕುಟುಂಬ ಮಣಿಪಾಲದ ಆಸ್ಪತ್ರೆಯಲ್ಲಿ ಮೆಹೆಕ್‌ಳ ಬೆಡ್ ಪಕ್ಕದಲ್ಲೇ ವಾಸಮಾಡುತ್ತಿತ್ತು. ಈಗ ರೇಡಿಯೇಶನ್ ಚಿಕಿತ್ಸೆ ಪ್ರಾರಂಭವಾಗಿರುವುದರಿಂದ ಅಗತ್ಯವಾಗಿ ಒಂದು ತಿಂಗಳು ಉಳಿಯುವುದಕ್ಕಾಗಿ ಉಡುಪಿ- ಮಣಿಪಾಲದಲ್ಲಿ ಅವರಿಗೆ ಮನೆ ಹುಡುಕಬೇಕಾಗಿ ಬಂತು.
ದಿನಕಳೆದಂತೆ ಮೆಹೆಕ್ ಮಗಳ ಬಗ್ಗೆ ನನ್ನ ಮನದಲ್ಲಿ ಭಾರ ಹೆಚ್ಚಾಗಿ ನಾನೊಂದು ದಿನ ಆಸ್ಪತ್ರೆಯಲ್ಲಿ ಇವರನ್ನು ಭೇಟಿಯಾದೆ. ಅವರ ಸಂಕಷ್ಟ ನೋಡಿ, ಇನ್ನು ಸುಮ್ಮನಿರುವುದರಲ್ಲಿ ಅರ್ಥವಿಲ್ಲವೆಂದೆನಿಸಿ, ಸಮಾನ ಮನಸ್ಕ ಗೆಳೆಯರು, ವಿದ್ಯಾರ್ಥಿಗಳೊಂದಿಗೆ ಈ ಬಗ್ಗೆ ಚರ್ಚಿಸಿದೆ. ಇದಕ್ಕೊಂದು ಪರಿಹಾರ ಅಗತ್ಯವಾಗಿ ಬೇಕು ಎಂಬುದನ್ನು ಅವರೂ ಮನಗಂಡರು. ನಮ್ಮ ಈ ಯೋಜನೆ ನಾವಿಟ್ಟ ಹೆಸರು “ಮಾನವೀಯತೆಯ ಪರಿಮಳ’ (Fragrance of Humanity)! ಮೆಹೆಕ್ ಎಂದರೆ ಪರಿಮಳ ಎಂದರ್ಥ! ಮಾನವೀಯತೆಯ ಪರಿಮಳ ಎಲ್ಲೆಡೆ ಹರಡಲಿ ಎಂಬುದು ನಮ್ಮ ಸದಾಶಯವಾಗಿತ್ತು.
ಮೊದಲ ಹಂತವಾಗಿ ಇವರೆಲ್ಲರ ಸಹಕಾರದಿಂದ ನಾವು ಮೆಹೆಕ್‌ಳ ಕುಟುಂಬಕ್ಕೆ ಮನೆ ಹುಡುಕಿದೆವು. ಉಡುಪಿಯಲ್ಲಿ ಸೇವೆಯಲ್ಲೇ ತನ್ನನ್ನು ಗುರುತಿಸಿಕೊಂಡ ವಿದ್ಯಾಸಂಸ್ಥೆಯೊಂದು ತನ್ನ ಅತಿಥಿಗೃಹದಲ್ಲಿ ಈ ಕುಟುಂಬಕ್ಕೆ ಕಡಿಮೆ ದರದಲ್ಲಿ ಉಳಿಸಿಕೊಳ್ಳಲು ಒಪ್ಪಿಗೆ ನೀಡಿತು.
ಹೀಗೆಲ್ಲ ಹೃದಯಕ್ಕೆ ಹತ್ತಿರವಾದ ಮೆಹಕ್ ಬಗ್ಗೆ ನಾನೊಂದು ಫೇಸ್‌ಬುಕ್ ಪೋಸ್ಟ್ ಮಾಡಿದೆ. ರಾತ್ರಿ ಪೋಸ್ಟ್ ಮಾಡಿ ಮಲಗಿದವನಿಗೆ, ಬೆಳಗೆದ್ದು ನೆಟ್ ಆನ್ ಮಾಡುವಾಗ ಅಚ್ಚರಿ ಕಾದಿತ್ತು. ಮೊಬೈಲ್ ತುಂಬಾ ಪ್ರತಿಕ್ರಿಯೆಗಳು, ಮೆಸೇಜುಗಳು! ಪೋಸ್ಟ್ ಕರ್ನಾಟಕದಾದ್ಯಂತ ಶೇರ್ ಆಗಿತ್ತು. ಯಕಶ್ಚಿತ್ ಒಂದು ಫೇಸ್‌ಬುಕ್‌ನ ಮನವಿಗೆ ಜನಸ್ಪಂದನೆ ಕಂಡು ಮೂಕನಾಗಿದ್ದೆ.
ಶಿವಮೊಗ್ಗದ ಮಗುವಿಗೆ ನೆರವಾಗಲು ನಾವು ಕೇಳಿದ್ದು ಉಡುಪಿಯ ಜನರ ಹತ್ತಿರ. ಆದರೆ, ಮೆಹೆಕ್‌ಗೆ ಸಹಾಯ ಈಗ ಎಲ್ಲೆಡೆ ಬರುತ್ತಿದೆ. ಉಡುಪಿಯ ಬೀದಿಗೆ ನಾವು ಹೋದಾಗ ಭಾಷೆ ಬಾರದ ಉತ್ತರ ಭಾರತದ ಭಯ್ನಾಗಳೂ ಕಾಸು ಕೊಟ್ಟರು. ಕ್ಯಾನ್ಸರ್‌ನಿಂದ ಇತ್ತೀಚೆಗಷ್ಟೇ ಪತ್ನಿಯನ್ನು ಕಳಕೊಂಡ ಎಸ್‌ಟಿಡಿ ಬೂತ್‌ನ ಅಜ್ಜನೂ ಹನಿಗಣ್ಣಾಗಿ ಕೈಜೋಡಿಸಿದ. ದುಡ್ಡುಕೊಡದೇ ಹಂಗಿಸಿದ ಮಾಲೀಕನ ಮುಖಕ್ಕೆ ಎದುರಲ್ಲೇ ಹೊಡೆದಂತೆ ಅವರೆದುರಿನಲ್ಲೇ ಅಂಗಡಿ ಕೆಲಸದ ಹುಡುಗ ಪರ್ಸ್‌ನಿಂದ ದುಡ್ಡೆಣಿಸಿಕೊಟ್ಟ!
ರûಾಬಂಧನದ ದಿನ ಅಣ್ಣಂದಿರಿಗೆ ರಾಖೀ ಕಟ್ಟಿ ಬಂದ ದುಡ್ಡನೆಲ್ಲಾ ನನ್ನ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿಯೊಬ್ಬಳು ಮಗುವಿಗಾಗಿ ಕೊಟ್ಟಳು. ನಾನು ಬರೆದ ಫೇಸ್‌ಬುಕ್ ಪೋಸ್ಟ್ ಅನ್ನು ಝೆರಾಕ್ಸ್ ಮಾಡಿ, ಮುಂಬೈನ ತನ್ನ ಕಚೇರಿಯಲ್ಲಿ ಹಂಚಿ, ಕುಂದಾಪುರ ಮೂಲದ ರಾಘವೇಂದ್ರ ಗಾಣಿಗರು ಅÇÉೊಂದಷ್ಟು ದುಡ್ಡು ಸಂಗ್ರಹಿಸಿದರು. ದಾವಣಗೆರೆಯ ಕಾಲೇಜು ವಿದ್ಯಾರ್ಥಿನಿ ಮನಿಯಾರ್ಡರ್ ಮೂಲಕ ಹಣ ಕಳುಹಿಸುತ್ತೇನೆಂದಳು. ಉಡುಪಿಯ ಲಾ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಎಂಜಿಎಂ ಕಾಲೇಜು ವಿದ್ಯಾರ್ಥಿಗಳು ಸುಮಾರು 1.5 ಲಕ್ಷ ರೂ.ನಷ್ಟು ಹಣ ಸಂಗ್ರಹಿಸಿದರು. ಅಕೌಂಟಿಗೊಂದಿಷ್ಟು ದುಡ್ಡು ಹಾಕಿ, ನಮ್ಮ ಹೆಸರೆಲ್ಲಾ ಹೇಳ್ಬೇಡಿ ಅಂತ ನಮ್ಮ ದೂರದೂರಿನ ಆಪ್ತರು ಜೊತೆ ನಿಂತರು. ನನ್ನ ವಿದ್ಯಾರ್ಥಿಗಳು ಕಿವಿಯೋಲೆ, ಪೆನ್ಸಿಲ್ ಸ್ಕೆಚ್ ಪೇಂಟಿಂಗ್ ಮಾಡಿ, ಅದನ್ನು ಮಾರಿ, ಮಗುವಿಗಾಗಿ ಶ್ರಮಪಟ್ಟರು. ಮೈಸೂರಿನಿಂದ ಒಬ್ಟಾಕೆ ರಜೆ ಹಾಕಿ ನಮ್ಮ ಜೊತೆ ಉಡುಪಿಯ ಬೀದಿ ಬೀದಿಗೆ ಬಂದು, ನೆರವು ಯಾಚಿಸುವ ಭರವಸೆಯಿತ್ತರು. ಹಾಸನದಿಂದ ಹಿಡಿದು ನೈಜೀರಿಯಾದ ದೇಶದ ಮೂಲೆಯಿಂದ ಫೋನುಗಳು ಬರಲಾರಂಭಿಸಿದವು.
ಮೆಹೆಕ್‌ಗೆ ಇಂದು ನಾಡಿನಾದ್ಯಂತ ಅಣ್ಣಂದಿರು, ಅಕ್ಕಂದಿರಿದ್ದಾರೆ. ವಿಶೇಷವಾಗಿ ಸಾವಿರಾರು ವಿದ್ಯಾರ್ಥಿಗಳು ಆಕೆ ಬೇಗ ಗುಣಮುಖಳಾಗಲೆಂದು ಹಾರೈಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಸದ್ಬಳಕೆ, ಸಕಾರಾತ್ಮಕ ಚಿಂತನೆಗಳು ಹೇಗೆ ಫಲ ಕೊಡುತ್ತವೆ ಎಂಬುದಕ್ಕೆ ಈ ಘಟನೆ ಜೀವಂತ ಉದಾಹರಣೆ. ನಾವು ಸಮಾಜದಿಂದ ಬಹಳಷ್ಟು ಪಡೆಯುತ್ತವೆ. ಆದರೆ, ಒಂದು ಹಂತದಲ್ಲಿ ನಾವು ಈ ಸಮಾಜಕ್ಕೆ ಸ್ವಲ್ಪ ಹಿಂದಿರುಗಿ ಕೊಡುವ ಸಮಯ ಬರುತ್ತದೆ. ನಮ್ಮ ತಂಡದ ಅರಿವಿಗೆ ಅದು ಈಗ ಬಂತು. ಮೆಹೆಕ್ ಗೆದ್ದಿದ್ದಾಳೆ, ನಗುತ್ತಿದ್ದಾಳೆ, ಅದ್ಭುತವಾಗಿ ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಿದ್ದಾಳೆ. ಆ ಮಗುವಿನ ನಗು ಹಾಗೆಯೇ ಉಳಿಯಲಿ. ಅದೊಂದೇ ನಮ್ಮ ಮನದಾಳದ ಹಾರೈಕೆ.
ಸುಚಿತ್ ಕೋಟ್ಯಾನ್ ಕುರ್ಕಾಲು
ಘಟನೆ 2
ಅಂಧ ವೀರೇಶನಿಗೆ ಲ್ಯಾಪ್‌ಟಾಪ್ ಸಿಕ್ಕಿದ್ದು…
“ವೀರೇಶ ಎಂಬ ಹುಡುಗನಿಗೆ ಒಂದು ಲ್ಯಾಪ್‌ಟಾಪ್ ಬೇಕಿದೆ. ಆತನಿಗೆ ದೃಷ್ಟಿದೋಷವಿದೆ. ಸರಕಾರ ಕೊಟ್ಟಿರೋ ಲ್ಯಾಪ್‌ಟಾಪ್ ವರ್ಷದೊಳಗೆ ಹಾಳಾಗಿ ಹೋಗಿದ್ದು, ನಿಮ್ಮಲ್ಲಿ ಯಾರಾದರೂ ತಮ್ಮ ಹಳೇ ಲ್ಯಾಪ್‌ಟಾಪ್ ಕೊಡುವವರಿದ್ದೀರಾ ಅಥವಾ ಸಹಾಯ ಮಾಡುವವರಿದ್ದೀರಾ?’ ಅಂತ ಮಾರ್ಚ್‌ನಲ್ಲಿ ನನ್ನ ಫೇಸ್‌ಬುಕ್ ವಾಲ್‌ನಲ್ಲಿ ಕೇಳಿದ್ದೆ. ಆತ ಕೊಪ್ಪಳದ ಮೂಲದವನು. ಸುಮಾರು ವರ್ಷಗಳಿಂದ ನನಗೆ ಪರಿಚಯ. ಖುಷಿಯ ವಿಚಾರ ಅಂದ್ರೆ ಒಂದೇ ವಾರದಲ್ಲಿ ವೀರೇಶನಿಗೆ ಪದ್ಮಾ ಅನ್ನೋರು ಹೊಸ ಲ್ಯಾಪ್‌ಟಾಪ್ ಕೊಡಿಸಿದರು. ಅವರೊಬ್ಬರೇ ಅಲ್ಲ, ಆ ಪೋಸ್ಟ್ ಓದಿದ ನೂರಾರು ಸ್ನೇಹಿತರು ಕಾಲ್ ಮಾಡಿ, ಮೆಸೇಜ್ ಮಾಡಿ ಸಹಾಯಕ್ಕೆ ಮುಂದಾದರು.
ಇದೊಂದೇ ಘಟನೆ ಅಲ್ಲ. ಸಹಾಯ ಕೇಳಿ ಬಂದವರಿಗೆ ನನ್ನ ಕೈಲಾದ್ರೆ ಸಹಾಯ ಮಾಡ್ತೀನಿ. ಇಲ್ಲಾಂದ್ರೆ ಹೀಗೆ ಸೋಶಿಯಲ್ ಮೀಡಿಯಾಗಳಲ್ಲಿ ನೆರವಿನ ಹಸ್ತ ಚಾಚೋರಿಗೆ ಸುದ್ದಿ ಮುಟ್ಟಿಸ್ತೀನಿ. ನಮ್ಮ “ಛಂದ ಪ್ರಕಾಶನ’ಕ್ಕೆ ಒಂದು ಸಾಫ್ಟ್ವೇರ್ ಬೇಕಿತ್ತು, ಸ್ವಲ್ಪ ದುಬಾರಿಯದ್ದು. ಅದನ್ನು ಅಭಿಮಾನಿಯೊಬ್ಬರು ಕೊಟ್ಟರು. ಹಾಗೇ ನಾವು ಮಾಡುತ್ತಿರೋ ಕನ್ನಡದ ಕೆಲಸಗಳಿಗೆ ಬಹಳಷ್ಟು ಜನ ಸಹಾಯ ಮಾಡ್ತಿದ್ದಾರೆ. ಇವೆಲ್ಲ ಸಾಧ್ಯವಾಗಿದ್ದು ಫೇಸ್‌ಬುಕ್‌ನಿಂದ. ಈಗ ಅದೇ ವೀರೇಶ, ಕೆಎಎಸ್ ಪರೀಕ್ಷೆ ಬರೆಯುತ್ತಿದ್ದಾನೆ. ಅವನಿಗೆ ಮತ್ತೆ ನೆರವಾಗ್ತಿರೋದು ಇದೇ ಫೇಸ್‌ಬುಕ್. ಅವನ ಪರವಾಗಿ ಪರೀಕ್ಷೆ ಬರೆಯೋಕೆ ಸೆð„ಬ್ ಒಬ್ಬರು ಬೇಕಿದ್ದರು. “ಯಾರಾದರೂ ಹೆಲ್ಪ್ ಮಾಡ್ತೀರಾ?’ ಅಂತ ಪೋಸ್ಟ್ ಹಾಕಿದ್ದೆ. ಮೊದಲಿನಂತೆ ತುಂಬಾ ಜನ ಮುಂದೆ ಬಂದ್ರು. ಅವರಲ್ಲೇ ಒಬ್ಬರು ವೀರೇಶನ ಪರವಾಗಿ ಪರೀಕ್ಷೆ ಬರೀತಿದ್ದಾರೆ!
ಸೋಶಿಯಲ್ ಮೀಡಿಯಾಗಳು ಬೆಂಕಿ ಇದ್ದಂಗೆ. ಬೆಂಕಿಯಿಂದ ನೀವು ಅಡುಗೆ ಮಾಡ್ತೀರೋ, ಕೈ ಸುಟ್ಟುಕೊಳ್ತೀರೋ ನಿಮಗೆ ಬಿಟ್ಟಿದ್ದು. ಸಮಾನ ಮನಸ್ಕ ಸ್ನೇಹಿತರು ಸಿಗುವ ಜಾಗ ಅದು. ಹೇಗೆ ಬಳಸಬೇಕು ಅಂತ ನಮಗೆ ಗೊತ್ತಿರಬೇಕು.
ಕೆಲಸ ಕೊಡಿಸಿದ “ಫೇಸ್‌ಬುಕ್’!
ಗದಗದ ಸಮೀಪದ ಊರಿನ ಹೆಣ್ಣುಮಗಳೊಬ್ಬಳು ಕೆಲಸ ಕೇಳಿಕೊಂಡು ನನ್ನಲ್ಲಿಗೆ ಬಂದಿದ್ದಳು. “ಅಯ್ಯೋ, ದೇವರೇ ಹೇಗಪ್ಪಾ ಇವಳಿಗೆ ಕೆಲಸ ಕೊಡಿಸೋದು?’ ಅಂತ ಚಿಂತೆಯಾಗಿತ್ತು. ಆಗೋದಿಲ್ಲ ಅಂತ ವಾಪಸ್ ಕಳಿಸಲೂ ಮನಸ್ಸಿರಲಿಲ್ಲ. ಆಗ ನೆರವಿಗೆ ಬಂದಿದ್ದು ಇದೇ ಫೇಸ್‌ಬುಕ್. ವಿಷಯ ಹಂಚಿಕೊಂಡೆ. ಸಹೃದಯರು ಸಹಾಯ ಮಾಡಿದರು. ಆಕೆಗೆ ಕೆಲಸ ಸಿಕ್ಕಿತು. ಈಗ ಮದುವೆಯಾಗಿ ಒಳ್ಳೆಯ ಜೀವನ ನಡೆಸುತ್ತಿದ್ದಾಳೆ. ಆಕೆಗೆ ಸಹಾಯ ಮಾಡಿದ್ದು ತುಂಬಾ ಸಮಾಧಾನ, ನೆಮ್ಮದಿ ಕೊಟ್ಟ ವಿಚಾರ.
ವಸುಧೇಂದ್ರ
ಘಟನೆ 3
ಐಗಳಿ ಶಾಲೆಯ ಬದಲಾದ ಚಹರೆ
ಮೂರು ವರ್ಷದ ಕೆಳಗೆ ಅಥಣಿ ತಾಲೂಕಿನ ಪ್ರೈಮರಿ ಶಿಕ್ಷಕರೊಬ್ಬರು ಫೇಸ್‌ಬುಕ್‌ನಲ್ಲಿ ತಮ್ಮ ಸರ್ಕಾರಿ ಶಾಲೆಯ ಬಗ್ಗೆ, ಅಲ್ಲಿನ ಮಕ್ಕಳ ಚಟುವಟಿಕೆಗಳ ಕುರಿತಂತೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದುದನ್ನು ಗಮನಿಸಿದ್ದೆ. ತಮ್ಮ ವಿದ್ಯಾರ್ಥಿಗಳ ಬಗ್ಗೆ ಪ್ರೀತಿಯಿಂದ ಬರೆದುಕೊಳ್ಳುತ್ತಿದ್ದ ಅಲ್ಲಿನ ಶಿಕ್ಷಕ ವಿಶ್ವನಾಥ ಕಂಬಾಗಿಯವರಿಗೆ “ನಿಮ್ಮಲ್ಲಿ ಆಟದ ಸಾಮಗ್ರಿ ಸಾಕಷ್ಟಿವೆಯೇ?’ ಅಂತ ಎಫ್ಬಿ ಮೂಲಕವೇ ಪ್ರಶ್ನಿಸಿದೆ. ಅವರಿಂದ ಬಂದ ಉತ್ತರ ವಿಷಾದ ಮೂಡಿಸಿತ್ತು. ಬೆಂಗಳೂರಿನಲ್ಲಿ ಮುಖ್ಯರಸ್ತೆಯ ಶಾಲೆಗಳಲ್ಲಿ ಆಟಕ್ಕೆ ಮೈದಾನವಿಲ್ಲ. ಆದರೆ, ಈ ಶಾಲೆಯಲ್ಲಿ ವಿಶಾಲ ಮೈದಾನವಿದ್ದರೂ ಆಟದ ಸಾಮಗ್ರಿಗಳೇ ಇರಲಿಲ್ಲ!
ತಕ್ಷಣವೇ ನಾವು ಅಲ್ಲಿಗೆ ಎರಡೆರಡು ವಾಲಿಬಾಲ್, ಫುಟ್ಬಾಲ್ ಸೇರಿದಂತೆ ಒಂದಿಷ್ಟು ಸಾಮಗ್ರಿಗಳನ್ನು ಕಳಿಸಿದೆವು. ಇದನ್ನೆಲ್ಲ ನೋಡಿ ಅಲ್ಲಿನ ಮಕ್ಕಳ ಉತ್ಸಾಹ ಗರಿಗೆದರಿತ್ತು. ಅದರ ಮುಂದಿನ ವರ್ಷದಿಂದ ಅಲ್ಲಿನ 4-7ನೇ ತರಗತಿಯ ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ಮೊದಲ ಮೂರು ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಬಹುಮಾನ ಕೊಡುತ್ತಾ ಬಂದೆವು. ಶಾಲೆ ಪರಿಸ್ಥಿತಿ ಸರಿಯಿರಲಿಲ್ಲ. ಬಡ ಮಕ್ಕಳಿಗೆ ಸರ್ಕಾರ ಕೊಡುವ ಪಠ್ಯಪುಸ್ತಕ ಬಿಟ್ಟರೆ ಬೇರೇನೂ ಕೊಂಡುಕೊಳ್ಳುವ ಶಕ್ತಿ ಇರಲಿಲ್ಲ. ಒಂದೋ ಎರಡೋ ನೋಟ್‌ಬುಕ್ ಅನ್ನು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ನಲ್ಲಿ ಹಿಡಿದುಕೊಂಡು ಬರುತ್ತಿದ್ದ ಮಕ್ಕಳ ಪರಿಸ್ಥಿತಿಯನ್ನು ಅಲ್ಲಿನ ಶಿಕ್ಷಕ ವಿಶ್ವನಾಥರು ನನ್ನ ಬಳಿ ಮುಜುಗರದಿಂದ ಹಂಚಿಕೊಂಡರು.
ಈ ಸಮಸ್ಯೆಗೆ ನಮ್ಮ ಬಳಿಯೂ ಪರಿಹಾರವಿರಲಿಲ್ಲ. ಆಗ ನನಗೆ ಆಪತಾಧವನಾಗಿ ಗೋಚರಿಸಿದ್ದು ಫೇಸ್‌ಬುಕ್. ತಕ್ಷಣ ಐಗಳಿ ಶಾಲೆಯ ಬಗ್ಗೆ, ಅಲ್ಲಿನ ಮಕ್ಕಳ ಬಗ್ಗೆ, ಅಲ್ಲಿರುವ ಶಿಕ್ಷಕರ ಕಾಳಜಿ ಬಗ್ಗೆ ವಿವರಿಸುವಂಥ ಒಂದು ಪೋಸ್ಟ್ ಹಂಚಿಕೊಂಡೆ. ಪರಿಣಾಮ ಅದ್ಭುತವಾಗಿತ್ತು. ಎಷ್ಟೋ ಜನ ಶಾಲೆಗೆ ಸಹಾಯವಾಗಲೆಂದು ಪ್ರೀತಿಯಿಂದ ಹಣ ಕೊಡಲು ಬಂದರು. ಆದರೆ, ನೆರವಾಗಲು ಬಂದ ಸಹೃದಯರು ಖುದ್ದಾಗಿ ತಮ್ಮ ಹಣ, ಶ್ರಮ ಮತ್ತು ಸಮಯ ವಿನಿಯೋಗಿಸಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ, ನಾವು ಹಣ ಪಡೆಯಲಿಲ್ಲ. ಪರಿಣಾಮವಾಗಿ ಎಷ್ಟೋ ಜನ ತಾವೇ ಖುದ್ದಾಗಿ ಐಗಳಿ ಶಾಲೆಗೆ ನೋಟ್‌ಬುಕ್, ಬ್ಯಾಗ್, ಜಾಮಿಟ್ರಿ ಬಾಕ್ಸ್, ರೇನ್‌ಕೋಟ್, ಪೆನ್, ಪೆನ್ಸಿಲ್‌ನಂಥ ಸಾಮಗ್ರಿಗಳನ್ನು ಕಳಿಸಿಕೊಟ್ಟರು. ಕಂಪ್ಯೂಟರ್ ಮತ್ತು ಯುಪಿಎಸ್ ಕಳಿಸಿದರು. ಅಮೆರಿಕ, ಜರ್ಮನಿಯಲ್ಲಿರುವ ಅನಿವಾಸಿ ಭಾರತೀಯರೂ ಕಂಪ್ಯೂಟರ್ ಟೇಬಲ…, ಕುರ್ಚಿಗೆಂದು ಸಹಾಯ ಮಾಡಿದರು. ಮೊನ್ನೆ ಇನ್ನೊಬ್ಬ ಅನಿವಾಸಿ ಭಾರತೀಯರು ಪ್ರಾಜೆಕ್ಟರ್ ಮತ್ತು ಸ್ಕ್ರೀನ್ ಕಳಿಸಿದ್ದಾರೆ.
ಇವೆಲ್ಲದರ ಪರಿಣಾಮವಾಗಿ ಶಾಲೆ ಹೊಸ ಚೈತನ್ಯ ಪಡೆದಿದೆ. ಹೀಗೆಲ್ಲ ನಡೆದಾಗ ನಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನಂಬಿಕೆ ಹುಟ್ಟುತ್ತದೆ. ಜೊತೆಗೆ ಸಾಮಾಜಿಕ ಜಾಲತಾಣಗಳ ಬಗ್ಗೆಯೂ…
ರಾಘವೇಂದ್ರ ಜೋಶಿ
ಘಟನೆ 4
ವೆಳ್ಳಿಯಮ್ಮನಿಗೆ ಸೂರಿನ ಬೆಳಕು!
ಹೀಗೆ ಗೆಳೆಯರ ಜೊತೆ ಕುಳಿತು ಅದೂ, ಇದೂ ಮಾತಾಡುತ್ತಿದ್ದಾಗ ವೆಳ್ಳಿಯಮ್ಮನ ವಿಷಯ ಕಿವಿಗೆ ಬಿತ್ತು. ಸರ್ಕಾರದಿಂದ ಬಂದ ಮನೆ ವಾಪಸ್ ಹೋಗುತ್ತೆ ಅಂತ ಗೊತ್ತಾಯ್ತು. ವೆಳ್ಳಿಯಮ್ಮ ನಮ್ಮೂರಿನವಳೇ. ಗಾರೆ ಕೆಲಸ ಮಾಡುತ್ತಿದ್ದ ಗಂಡ ತೀರಿಕೊಂಡು ಹತ್ತು ವರ್ಷಗಳ ಮೇಲಾಗಿದೆ. ಮಗಳೂ ತೀರಿಕೊಂಡಿದ್ದಾಳೆ. ಇಬ್ಬರು ಮೊಮ್ಮಕ್ಕಳನ್ನು ನೋಡಿಕೊಂಡು, ಕೂಲಿ ಮಾಡಿ ಬದುಕುತ್ತಿದ್ದಾಳೆ. 7 ತಿಂಗಳ ಹಿಂದೆಯೇ ಸರ್ಕಾರ ಮನೆಯನ್ನೇನೋ ಮಂಜೂರು ಮಾಡಿದೆ. ಆದರೆ, ಅಡಿಪಾಯ ಹಾಕದೆ ಸರ್ಕಾರ ಕೆಲಸ ಶುರು ಮಾಡುವುದಿಲ್ಲ. ಅಡಿಪಾಯ ಕಟ್ಟಿಸೋಕೂ ಈಕೆಯ ಹತ್ತಿರ ದುಡ್ಡಿಲ್ಲ. ಹಾಗಾಗಿ, ಮನೆ ವಾಪಸ್ ಹೋಗಲಿದೆ ಅಂತ ಪಂಚಾಯ್ತಿಯವರು ಹೇಳಿದ್ದರು.
ವಿಷಯ ಗೊತ್ತಾದಾಗ, ನಂಗೊಂದು ಯೋಚನೆ ಬಂತು. “ವಿಚಾರ ಹೀಗಿದೆ: ವೆಳ್ಳಿಯಮ್ಮನಿಗೆ ಸಹಾಯ ಬೇಕು. 15 ಜನ ಐದೈದು ಸಾವಿರ ಕೊಟ್ಟರೆ ಮನೆಯ ಕೆಲಸ ಪ್ರಾರಂಭಿಸಬಹುದು. 4 ತಿಂಗಳ ನಂತರ ಹಣ ವಾಪಸ್ ಮಾಡುತ್ತೇನೆ’ ಅಂತ ಎಫ್ಬಿಯಲ್ಲಿ ಪೋಸ್ಟ್ ಹಾಕಿದೆ. ಒಂದು ಸೋಶಿಯಲ್ ಎಕ್ಸ್‌ಪಿರಿಮೆಂಟ್ ಮಾಡೋಣ ಅಂದುಕೊಂಡಿದ್ದೆ. ಆದರೆ, 5 ಸಾವಿರ ಕೊಡೋಕೆ 35 ಜನ ಮುಂದೆ ಬಂದರು. ಅಡಿಪಾಯಕ್ಕೆ 75-80 ಸಾವಿರ ರೂ. ಬೇಕು. ಹಾಗಾಗಿ, ಮೊದಲ 16 ಜನರಿಂದ ಮಾತ್ರ ಹಣ ಪಡೆದಿದ್ದೇವೆ. ಅನಾಮಿಕ ವ್ಯಕ್ತಿಯೊಬ್ಬರು 2 ಸಾವಿರ ಕೊಟ್ಟಿದ್ದಾರೆ. ಈಗ 82000 ಸಾವಿರ ರೂ. ಕಲೆಕ್ಟ್ ಆಗಿದೆ. ಖರ್ಚಿನ ಪ್ರತಿ ವಿವರವನ್ನೂ ಎಫ್ಬಿಯಲ್ಲಿ ಹಾಕುತ್ತಿದ್ದೇನೆ. ಮನೆ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಈಗ ಊರಿನವರೂ ಕೈಲಾದ ಸಹಾಯ ಮಾಡ್ತಿದ್ದಾರೆ. ಒಬ್ಬರು ನಾಲ್ಕು ಮೂಟೆ ಸಿಮೆಂಟ್, ಇನ್ನೊಬ್ಬರು ಕಲ್ಲು ಮತ್ತು ಇತರೆ ಸಾಮಗ್ರಿ ನೀಡಿದ್ದಾರೆ. ಇನ್ನೊಂದೆರಡು ತಿಂಗಳಲ್ಲಿ “ವೆಳ್ಳಿಯಮ್ಮನ ಮನೆ’ ಎದ್ದು ನಿಲ್ಲಲಿದೆ.
ಕಿರಣ್ ಗಾಜನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.