ಏರ್ಡಿಶ್ ಇಂಗ್ಲೀಷ್
ಬಾರೋ ಸಾಧಕರ ಕೇರಿಗೆ
Team Udayavani, Aug 20, 2019, 5:00 AM IST
ಗಣಿತಜ್ಞ ಪಾಲ್ ಏರ್ಡಿಶ್ ಹಂಗೆರಿಯಲ್ಲಿ ಹುಟ್ಟಿದವರು. ಹುಟ್ಟಿದ್ದೊಂದು ಪುಟ್ಟ ದೇಶದಲ್ಲಾದರೂ ಆತ ಜಗತ್ತಿನಲ್ಲಿ ನೋಡದ ದೇಶವೇ ಇಲ್ಲ ಎನ್ನಬಹುದೇನೋ. ತನ್ನ ಜೀವಮಾನವಿಡೀ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಿದರವರು. ಹೋದಲ್ಲಿ ಬಂದಲ್ಲಿ ಗಣಿತ ಸಂಶೋಧನೆ ಮಾಡಿದರು. ಒಂದೂವರೆ ಸಾವಿರದಷ್ಟು ಗಣಿತ ಸಂಶೋಧನಾ ಲೇಖನಗಳನ್ನು ಬರೆದರು. ಯಾವ ದಿನ ತಾನು ಯಾವ ಜಾಗದಲ್ಲಿರುತ್ತೇನೆ ಎಂಬುದು ಸ್ವತಃ ಅವರಿಗೇ ಗೊತ್ತಿರುತ್ತಿರಲಿಲ್ಲ. ಒಂದು ಕಡೆಗೆ ಹೋಗಬೇಕು ಎಂಬ ಯೋಚನೆ ಬಂದರೆ ಸಾಕು, ತನ್ನ ಎರಡು ಸಣ್ಣ ಬ್ಯಾಗುಗಳನ್ನು ಎತ್ತಿಕೊಂಡು ಹೊರಟುಬಿಡುತ್ತಿದ್ದರು. ನಿಮಗೆ ಏರ್ಡಿಶ್ ಅವರನ್ನು ಭೇಟಿಯಾಗಬೇಕೆ? ಹಾಗಾದರೆ ನೀವೆಲ್ಲಿದ್ದೀರೋ ಅಲ್ಲೇ ಇರಿ. ಏರ್ಡಿಶ್ ನಿಮ್ಮ ಊರನ್ನು ಹಾದುಹೋಗುವ ಸಂಭವ ಹೆಚ್ಚು ಎಂಬ ಜೋಕ್ ಕೂಡ ಪ್ರಚಲಿತದಲ್ಲಿತ್ತು.
ಹಂಗೆರಿಯಿಂದ ಹೊರಗಿನ ದೇಶಗಳಿಗೆ ಹೋಗಬೇಕಾದಾಗ ಅವರು ಅನಿವಾರ್ಯವಾಗಿ ಇಂಗ್ಲೀಷ್ ಕಲಿಯಬೇಕಾಯಿತು. ಆಗ ಇಂಟರ್ನೆಟ್ ಇರಲಿಲ್ಲ. ಇಂಗ್ಲೀಷ್ ಅನ್ನು ಸಮರ್ಪಕವಾಗಿ ಕಲಿಯಬೇಕಾದರೆ ಕಲಿಕೆಯ ಕೋರ್ಸ್‌ಗಳನ್ನು ನಡೆಸುವ ಸಂಸ್ಥೆಗಳಿಗೇ ಹೋಗಬೇಕಾಗಿತ್ತು. ಅವರಿಗೆ ಹಾಗೆಲ್ಲ ಕೋರ್ಸ್ ಸೇರಿ ಕಲಿಯುವಷ್ಟು ಪುರುಸೊತ್ತು ಇರಲಿಲ್ಲ. ಆದ್ದರಿಂದ ಭಾಷೆ ಕಲಿಸುವ ಒಂದು ಪುಸ್ತಕ ಕೊಂಡು ತಂದರು. ಆ ಪುಸ್ತಕದಲ್ಲಿ ಇಂಗ್ಲೀಷ್ ಭಾಷೆಯ ಯಾವ ಅಕ್ಷರವನ್ನು ಹೇಗೆ ಉಚ್ಚರಿಸಬೇಕೆಂಬ ಮಾಹಿತಿಯೇನೂ ಇರಲಿಲ್ಲ. ಇಂಗ್ಲೀಷ್ ಭಾಷೆಯ ಅಕ್ಷರಗಳ ಪರಿಚಯ ಎಲ್ಲರಿಗೂ ಇರುತ್ತದೆ ಎಂಬ ಸಾಮಾನ್ಯ ಗ್ರಹಿಕೆಯಿಂದ ಆ ಪುಸ್ತಕ ಬರೆಯಲಾಗಿತ್ತು.
ಆದರೆ, ರೋಮನ್ ಲಿಪಿಯನ್ನೇ ಬಳಸುವ ಹಂಗೆರಿಯನ್ ಭಾಷೆಯಲ್ಲಿ ಕೆಲವು ಅಕ್ಷರಗಳ ಉಚ್ಚಾರ ಭಿನ್ನ. ಉದಾಹರಣೆಗೆ ಇಂಗ್ಲೀಷ್‌ನ ಸಿ, ಹಂಗೆರಿಯನ್ ಅಲ್ಲಿ ತ್ಸ್ ಆಗುತ್ತದೆ. ಸ್ ಎಂಬ ಧ್ವನಿಕೊಡುವ ಎಸ್ ಅಕ್ಷರವನ್ನು ಹಂಗೆರಿಯನ್ನರು ಶ್ ಎಂದು ಓದುತ್ತಾರೆ. ಇನ್ನು ಹಂಗೆರಿಯನ್ ಭಾಷೆಯಲ್ಲಿ ಶಬ್ದದ ಕೊನೆಗೆ ಇ ಅಕ್ಷರ ಬಂದರೆ ಅದನ್ನು ಏ ಎಂಬ ಸ್ವರ ಹಿಡಿದು ಹೇಳುತ್ತಾರೆ. ಇಂಗ್ಲೀಷ್‌ನ ಲೇಟ್ ಹಂಗೆರಿಯನ್ ಅಲ್ಲಿ ಲಾಟೆ ಆಗುತ್ತದೆ. ಇಂಗ್ಲೀಷ್‌ನ ಐಸ್ ಕ್ಯೂಬ್ ಎಂಬ ಪದ ಏರ್ಡಿಶರ ಇಂಗ್ಲೀಷಲ್ಲಿ ಇತ್ಸೇ ತ್ಸುಬೆಶ್ ಆಗುತ್ತದೆ. ಅವರು ಎಂಥ ಸುಳಿಯೊಳಗೆ ಕಾಲಿಟ್ಟಿದ್ದರು ಗೊತ್ತಾಯಿತಲ್ಲ! ದಿನ ಕಳೆದಂತೆ ಏರ್ಡಿಶ್ ಅವರಿಗೆ ಇಂಗ್ಲೀಷ್ ವರ್ಣಮಾಲೆಯ ಉಚ್ಚಾರ ತಿಳಿುತು. ನಂತರ ನಿಧಾನವಾಗಿ ಅವರು ಇಂಗ್ಲೀಷ್‌ನಲ್ಲಿ ವಾಕ್ಯರಚನೆ ಮಾಡುವುದನ್ನು ಕಲಿತರು. ಆದರೂ, ತುಂಬ ಸಂಕೀರ್ಣ ವಾಕ್ಯವನ್ನು ಕೇಳಿದರೆ ಅರ್ಥವಾಗಲು ಸಮಯ ಹಿಡಿಯುತ್ತಿತ್ತು. ಏರ್ಡಿಶರ ಇಂಗ್ಲೀಷ್ ಮಾತಿನಲ್ಲಿ ಕ್ಲಿಷ್ಟ ಪದಗಳ ಮೆರವಣಿಗೆ ಇರುತ್ತಿರಲಿಲ್ಲ.
ಏರ್ಡಿಶ್ ಯಾವುದೋ ಊರಿಗೆ ಹೋಗಿ ಅಲ್ಲಿ ಒಬ್ಬ ಹೆಂಗಸಿನ ಮನೆಯಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದರು. ಆ ಸಂಜೆ ಅವರು ರೈಲು ಡಿದು ಬೇರೆ ಊರಿಗೆ ಹೋಗಬೇಕಿತ್ತು. ಆದರೆ ನಿಲ್ದಾಣಕ್ಕೆ ಹೋದಾಗ, ಆ ರೈಲು ರದ್ದಾಗಿದೆಯೆಂದೂ ಮರುದಿನ ಬೆಳಗ್ಗೆ ಬೇರೆ ರೈಲು ಹಿಡಿದು ಹೋಗಬಹುದೆಂದೂ ತಿಳಿಯಿತು. ವಾಪಸಾದ ಏರ್ಡಿಶ್ ಮನೆಮಾಲಕಿಗೆ ಹೇಳಿದರು “Mrs. Green! It turns out that tonight again I will be sleeping with you!”
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.