ಪ್ರೀತಿಯ ಹಳ್ಳಕ್ಕೆ ಬಿದ್ದ ಕುರಿಮರಿ ನಾನು
Team Udayavani, Nov 28, 2017, 2:24 PM IST
ನನ್ನ ತೋಳತೆಕ್ಕೆಯಲ್ಲಿ ನಿನಗೊಂದು ಕಾಯಂ ನಿವಾಸ ಮಂಜೂರು ಮಾಡಿರುವೆ. ಬೇಗ ಬಂದುಬಿಡು. ಆರದ ಹಣತೆಯೊಂದನ್ನು ಹಚ್ಚಿಬಿಡು. ನನ್ನ ಬದುಕಿನ ಪರಮಗುರಿ ನಿನ್ನ ಪ್ರೀತಿಯನ್ನು ಗೆಲ್ಲುವುದೊಂದೇ.
ಕಿಲಕಿಲ ನಗುವ ಕಣಿವೆಯ ಕುಸುಮವೇ…
ಎದೆಪೆಟ್ಟಿಗೆಯಲ್ಲಿ ರಹಸ್ಯವಾಗಿ ಬಚ್ಚಿಟ್ಟುಕೊಂಡ ಒಲವಿನ ಗುಟ್ಟುಗಳು ಈಚೀಚೆಗೆ ಸುಮ್ಮನಿರಲಾರದೆ ಸದ್ದು ಮಾಡಲಾರಂಭಿಸಿವೆ. ಆಚೆಗೆ ಬರಲು ಹವಣಿಸುತ್ತಿವೆ. ಈ ಗಲಭೆಯಿಂದ ಪಾರಾಗುವ ಕಾಲುದಾರಿಯೂ ಕಾಣದೆ ತುಂಬಾ ಒದ್ದಾಡಿಬಿಟ್ಟಿದ್ದೇನೆ. ಒಳಗೊಳಗೇ ಚಡಪಡಿಸುತ್ತಿದ್ದೇನೆ. ಈ ವೇದನೆಯಿಂದ ಮುಕ್ತಿ ಪಡೆಯಲು ತಿಣುಕಾಡುತ್ತಿದ್ದಾಗ, ಪ್ರೇಮಚೀಟಿಯ ನೆಪದಲ್ಲಾದರೂ ಭಾವನೆಗಳನ್ನೆಲ್ಲಾ ಹೊರಕ್ಕೆ ದಬ್ಬಿ ಹಗುರಾಗಿ ಬಚಾವಾಗಿಬಿಡುವೆನೆಂಬ ಭ್ರಮೆಯಿಂದ ಈ ಕಾಗದ..
ಪದವಿ ಓದಲು ಕಾಲೇಜಿಗೆ ಬಂದ ಈ ಹದಿಹರೆಯದ ಆಸಾಮಿ, “ಐಚ್ಛಿಕ ಕನ್ನಡ’ದ ಹುಡುಗಿಯ ಹಿಂದೆ ಬೀಳುತ್ತಾನೆಂಬ ಸಣ್ಣ ಸುಳಿವೂ ಇರಲಿಲ್ಲ. ಮೊದಲದಿನವೇ ನಿನ್ನ ಕಣ್ಣ ದಂಗೆಗೆ ಧೂಳಿಪಟವಾಗಿಬಿಟ್ಟಿದ್ದೆ. ಕೆನ್ನೆಮೇಲೆ ಚೇಷ್ಟೆ ಮಾಡುವ ಮುಂಗುರುಳನ್ನು ನೀ ಬೆರಳಿನಿಂದ ಸರಿಸುವ ಪರಿಗೆ ಬೆಪ್ಪನಾಗಿದ್ದೆ. ಲೋಲಕದಂತೆ ಅತ್ತಿಂದಿತ್ತ ಓಲಾಡುವ ಜುಮ್ಕಿ ಹಾಗೂ ಮೂಗುನತ್ತು ಸೀದಾ ಕುತ್ತು ತಂದದ್ದು ಮಾತ್ರ ನನ್ನ ಹೃದಯಕ್ಕೆ. ನಿನ್ನ ಕಾಲ್ಗೆಜ್ಜೆ ಸದ್ದಿಗೆ ಪೆದ್ದನಂತೆ ತಲೆದೂಗಿ ಸಂಪೂರ್ಣ ಶರಣಾಗಿಬಿಟ್ಟೆ!
ನಿಜ ಹೇಳ್ಬೇಕಂದ್ರೆ ಬೆಳದಿಂಗಳನ್ನು ಬಳುವಳಿ ಪಡೆದಂಥ ನಿನ್ನ ಕಣ್ಣುಗಳನ್ನು ನಾನು ಮೋಹಿಸಲಿಲ್ಲ. ಮಂದಹಾಸಭರಿತ ಮೊನಾಲಿಸಾಳಂಥ ಸ್ನಿಗ್ಧ ಸೌಂದರ್ಯಕ್ಕೆ ಮಾರುಹೋಗಲಿಲ್ಲ. ನಿನ್ನ ಕಂಡಾಕ್ಷಣ ಎದೆತೋಟದ ಗೂಡಿನಲ್ಲಿ ಬೆಚ್ಚಗೆ ಮಲಗಿದ್ದ ಪ್ರೇಮಪಕ್ಷಿ ಪಟಪಟನೆ ರೆಕ್ಕೆಬಡಿದು ಮೈಯೆಲ್ಲಾ ಸಂಚರಿಸಿಬಿಟ್ಟಿತ್ತು. ಅಡಗಿಕೂತಿದ್ದ ಪರಿಶುದ್ಧ ಪ್ರೇಮಭಾವನೆಗಳೆಲ್ಲಾ ಒಮ್ಮಿಂದೊಮ್ಮೆಲೆ ಜಾಗೃತವಾಗಿಬಿಟ್ಟವು. ನನಗೂ ಅರಿವಾಗದಂತೆ ಮೊದಲ ಪ್ರೀತಿಯೆಂಬ ಬೀಜ ಎದೆನೆಲದಲ್ಲಿ ಬಿದ್ದು ಮೊಳಕೆಯೊಡೆದಿತ್ತು.
ಅಲ್ಲಿಯವರೆಗೂ ಪರಮನಾಸ್ತಿಕನಾಗಿದ್ದ ನಾನು ದಿಢೀರ್ ಅಂತ ನಿನ್ನನ್ನು ಆರಾಧಿಸುವಷ್ಟು ಪರವಶನಾಗಿ¨ªೆ. ತಡಮಾಡದೆ ನೋಟ್ ಬುಕ್ಕಿನ ನೆಪ ಮಾಡಿಕೊಂಡು ನಿನ್ನನ್ನು ಪಟಾಯಿಸುವ ಕಾಯಕಕ್ಕೆ ಕೈ ಹಾಕಿದೆ. ನೀನು ಸಣ್ಣದೊಂದು ಕಿರುನಗೆಯನ್ನು ನನ್ನತ್ತ ಎಸೆದಾಗ ನನ್ನ ಎಳಸು ಹೃದಯದ ಸಡಗರಕ್ಕೆ ಸರಹದ್ದೇ ಇರಲಿಲ್ಲ. ಹೀಗೇ ಆದ ಪರಿಚಯ ಆತ್ಮೀಯತೆಯ ಒಡನಾಟಕ್ಕೆ ತಿರುಗಿ ಪರಸ್ಪರರ ಪೂರಾ ಬಯೋಡೆಟಾಗಳೂ ಅದಲುಬದಲಾಗಿದ್ದವು. ಇಬ್ಬರೂ ಜೊತೆಯಲ್ಲೇ ಮಾತಾಡಿಕೊಂಡು ಅದೆಂಥದೋ ಪುಗಸಟ್ಟೆ ಪುಳಕಗಳಿಗೆ ತಗುಲಿ ಹಾಕಿಕೊಂಡು ಕಳೆದ ಕ್ಷಣಗಳೆಲ್ಲಾ ನೆನಪಿದೆ ತಾನೆ? ಎದೆಮಂದಿರದ ಕನಸುಗಳನ್ನೆಲ್ಲಾ ಎಳೆಎಳೆಯಾಗಿ ಹೇಳಬೇಕೆಂದು ಎಷ್ಟೇ ಬಾರಿ ನಿನ್ನೆದುರು ಬಂದರೂ ಮಾತುಗಳೆಲ್ಲಾ ಗಂಟಲಿನಲ್ಲೇನಿಂತು ಮುಷ್ಕರ ಹೂಡಿಬಿಡುತ್ತಿದ್ದವು. ನನ್ನ ಕಣ್ಣ ಕಾಗುಣಿತಗಳು ನಿನಗೆ ಅರ್ಥವಾಗಲಿಲ್ಲವೇ? ನನ್ನ ಮೌನದ ಏರಿಳಿತದಲ್ಲಿ ಒಲವು ಕಾಣಲಿಲ್ಲವೇ? ಅಥವಾ ಬೇಕಂತಲೇ ಸತಾಯಿಸುತ್ತಿದ್ದೀಯಾ? ಗೊತ್ತಿಲ್ಲ…
ನಿನ್ನನ್ನು ಗಾಢವಾಗಿ ಹಚ್ಚಿಕೊಂಡಂದಿನಿಂದ ನೆನಪಿನ ಜೋಳಿಗೆಯನ್ನೆಲ್ಲಾ ಜಾಲಾಡಿದರೂ ನಿನ್ನ ಹೊರತು ಮತ್ತೇನೂ ಸಿಕ್ಕುವುದಿಲ್ಲ. ಸರಿರಾತ್ರಿಯಲ್ಲಿ ನೀನು ವಿಪರೀತ ನೆನಪಾಗಿ ಕಣ್ಣೀರು ಕೆನ್ನೆಬಯಲಿನಲ್ಲಿ ಅಡ್ಡಾಡಿಬಿಡುತ್ತದೆ. ನೆನಪಿನ ನೋವಿನೆಳೆಗಳನ್ನು ನೇಯುತ್ತಾ ಸಾಕಾಗಿ ಹೋಗಿದೆ. ಮೊದಲಪ್ರೇಮದ ಆಳವರಿಯದೆ ಹಳ್ಳಕ್ಕೆ ಬಿದ್ದ ಕುರಿಮರಿಯಂತೆ ಕಂಗಾಲಾಗಿದ್ದೇನೆ. ಸಂದೇಹವಿಲ್ಲದೆ ಸಮ್ಮತಿಯ ಮುದ್ರೆ ಒತ್ತಿಬಿಡು. ಈಗ ನಾನು ಎದೆನೋವ ಗಾಯಾಳುವಿನಂತಾಗಿರುವೆ. ಈ ಎದೆ ಆಳಲು ಓಡೋಡಿ ಬಂದೇ ಬರುತ್ತೀಯೆಂಬ ಅದಮ್ಯ ನಂಬುಗೆಯಲ್ಲಿರುವ
ವಾಯಿದೆಯಿಲ್ಲದ ಒಲವಿನ ವಾರಸುದಾರ
ಹೃದಯರವಿ
ರವಿಕುಮಾರ್ ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.