ಮರು ಚುನಾವಣೆಯಲ್ಲೂ ನಾನೇ ಗೆದ್ದಿದ್ದೆ!
Team Udayavani, Apr 11, 2017, 3:50 AM IST
ಇವತ್ತು ನಾನು ಮುದ್ರಣದಂಥ ಅಪರಿಚಿತ ಜಗತ್ತಿನಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದೇನೆ. ಹೀಗೆ ಹತ್ತಾರು ಜನ ಮೆಚ್ಚುವಂತೆ ಕೆಲಸ ಮಾಡುವುದಕ್ಕೆ ಸಹ್ಯಾದ್ರಿ ಕಾಲೇಜಿನ ಒಂದು ಘಟನೆ ನನಗೆ ಪ್ರೇರಣೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ 1992-1993ರಲ್ಲಿ ಪಿಯುಸಿ ಓದುವಾಗ ನಡೆದ ಘಟನೆ. ಆಗ ಕಾಲೇಜಿನ ಹಾಸ್ಟೆಲ್‌ನಲ್ಲಿ ನನ್ನ ವಾಸ್ತವ್ಯ. ಪ್ರಿನ್ಸಿಪಾಲ್ ಆಗಿದ್ದ ಪ್ರೊ. ಎ.ಎಸ್. ಚಂದ್ರಶೇಖರ್ ಹಾಸ್ಟೆಲ್ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಹಾಸ್ಟೆಲ್‌ನಲ್ಲಿ ಮೆಸ್ ಬಿಲ್ ಡಿವೈಡಿಂಗ್ ಸಿಸ್ಟಮ್ ಇತ್ತು. ಹಾಸ್ಟೆಲ್‌ನ ಎಲ್ಲಾ ಹುಡುಗರು ಸೇರಿ ಚುನಾವಣೆಯಲ್ಲಿ ಒಬ್ಬನನ್ನು ಪ್ರಿಫೆಕ್ಟರ್ ಆಗಿ ಆರಿಸಬೇಕಿತ್ತು. ಅವನು ಒಂದು ತಿಂಗಳ ಕಾಲ ಅಡುಗೆಗೆ ಬೇಕಾದ ಅಕ್ಕಿ, ಬೇಳೆ, ಸಕ್ಕರೆ, ತರಕಾರಿ, ಕಟ್ಟಿಗೆ ಇತರೆ ಕಿರಾಣಿ ಸಾಮಾನುಗಳನ್ನು ಖರೀದಿಸಿ- ಊಟ ತಿಂಡಿಯ ವ್ಯವಸ್ಥೆ ನೋಡಿಕೊಳ್ಳಬೇಕು. ತಿಂಗಳ ಕೊನೆಗೆ ಅವನು ಒಟ್ಟು ಖರ್ಚು ಮಾಡಿದ ಹಣವನ್ನು ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿಭಾಗಿಸಿ ಬಂದ ಹಣವನ್ನು ವಿದ್ಯಾರ್ಥಿಗಳು ಆ ತಿಂಗಳ ಮೆಸ್ ಬಿಲ್ ಆಗಿ ಕಟ್ಟಬೇಕು. ಇದು, ಆವತ್ತಿನ ಸಂದರ್ಭದಲ್ಲಿ ಹಾಸ್ಟೆಲ್‌ನಲ್ಲಿ ಜಾರಿಯಲ್ಲಿದ್ದ ನಿಯಮ. ಲಕ್ಷಾಂತರ ರೂ.ಗಳ ವಹಿವಾಟು ಆಗಿದ್ದರಿಂದ ಸಾಮಾನ್ಯವಾಗಿ ಹಿರಿಯ ವಿದ್ಯಾರ್ಥಿಗಳೇ (ಎಂ.ಎ., ಎಂ.ಎಸ್ಸಿ, ಅಂತಿಮ ಬಿ.ಎ., ಬಿ.ಎಸ್ಸಿ) ಪ್ರಿಫೆಕ್ಟರ್ ಆಗುತ್ತಿದ್ದರು.
ಈ ಬಾರಿ ಚುನಾವಣೆಯಲ್ಲಿ ನಾವೇ ಸ್ಪರ್ಧಿಸಬೇಕೆಂದು ನಿರ್ಧರಿಸಿದೆವು. ಹಿರಿಯ ವಿದ್ಯಾರ್ಥಿಗಳಿಗೆ ಹೆದರಿ ಅಭ್ಯರ್ಥಿಯಾಗಲು ಯಾರೂ ಮುಂದೆ ಬಾರದೆ, ಕೆಲ ಹಿರಿಯ ವಿದ್ಯಾರ್ಥಿಗಳ ಒಡನಾಟದಲ್ಲಿದ್ದ ನನ್ನನ್ನೇ ಅಭ್ಯರ್ಥಿ ಎಂದು ನನ್ನ ಗೆಳೆಯರೆಲ್ಲ ಏಕಾಏಕಿ ಘೋಷಿಸಿದರು. ಎಲ್ಲರ ಒತ್ತಾಯಕ್ಕೆ ಮಣಿದು ಪ್ರಿನ್ಸಿಪಾಲರನ್ನು ಸಂಪರ್ಕಿಸಿ, ನಾನು ಈ ಬಾರಿ ಹಾಸ್ಟೆಲ್ ಪ್ರಿಫೆಕ್ಟರ್ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದೂ ಕೇಳಿದಾಗ, ಅವರು- “ನಿನಗ್ಯಾಕೆ ಈ ಉಸಾಬರಿ? ದ್ವಿತೀಯ ಪಿಯುಸಿ ಬೇರೆ, ನಿನ್ನ ಜೀವನದ ಟರ್ನಿಂಗ್ ಪಾಯಿಂಟ್; ಅದನ್ನೆಲ್ಲ ಬಿಟ್ಟು ಚೆನ್ನಾಗಿ ಓದು’ ಎಂದು ತಿಳಿಹೇಳಿ ಕಳುಹಿಸಿದರು.
ಹಿರಿಯ ವಿದ್ಯಾರ್ಥಿಗಳ ಬೆದರಿಕೆಯ ನಡುವೆಯೂ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಚುನಾವಣೆ ಸಭೆಯು ಹಾಸ್ಟೆಲ್‌ನ ಸಭಾಂಗಣದಲ್ಲಿ ಪ್ರಿನ್ಸಿಪಾಲರ ಅಧ್ಯಕ್ಷತೆಯಲ್ಲಿ ಶುರುವಾಯಿತು. ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ, ಪ್ರಿನ್ಸಿಪಾಲರ ಮುಂದೆ ನಿಂತು ಲಕ್ಷಾಂತರ ರೂ. ವ್ಯವಹಾರವಿರುವುದರಿಂದ ಈ ಮೀಸೆ ಇಲ್ಲದ ಎಳಸು ಹುಡುಗನನ್ನು ಸ್ಪರ್ಧಿಸಲು ಅವಕಾಶ ಮಾಡಿಕೊಡಬಾರದೆಂದು ಮನವಿ ಸಲ್ಲಿಸಿದರು. ಆದರೆ, ಪ್ರಿನ್ಸಿಪಾಲರು “ನಿಯಮದ ಪ್ರಕಾರ ಹಾಗೆ ಮಾಡಲು ಬರುವುದಿಲ್ಲ, ಹಾಸ್ಟೆಲ್‌ನಲ್ಲಿನ ಯಾವನೇ ವಿದ್ಯಾರ್ಥಿಯಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು’ ಎಂದರು.
ನಾನು ನಾಮಪತ್ರ ಸಲ್ಲಿಸಲು ಮುಂದಾದಾಗ, ಹಿರಿಯ ವಿದ್ಯಾರ್ಥಿಯ ಕೆಂಗಣ್ಣುಗಳು “ಆಮೇಲೆ ನಿನ್ನ ನೋಡ್ಕೊತೀವಿ’ ಎನ್ನುವ ರೀತಿಯಲ್ಲಿದ್ದವು. ನನ್ನ ಕೈಕಾಲು ಗಡಗಡ ನಡುಗಿದವು. ಹಣೆಯಲ್ಲಿ ಬೆವರು ಮೂಡಿತು. ನಾಲಿಗೆ ತೊದಲತೊಡಗಿತು. ಅಂಥ ಸ್ಥಿತಿಯಲ್ಲಿ ಹೆದರಿಸಿ ಅಳುವಂತೆ ಮಾಡಿದವರೇ ಹೆಚ್ಚು. ಹೆದರಿಸಿ, ಹಂಗಿಸಿ, ನಗುವವರ ನಡುವೆ ನಾನು ಕೀಳರಿಮೆಯಿಂದ ಕುಗ್ಗಿ ಹೋಗುತ್ತಿದ್ದ ಸಂದರ್ಭದಲ್ಲಿ- ಅಲ್ಲೇ ಇದ್ದ ಪ್ರಿನ್ಸಿಪಾಲರು- “ನಿನಗೆ ಇದು ಬೇಕಾಗಿರಲಿಲ್ಲ. ಆದರೂ ಪರವಾಗಿಲ್ಲ, ನಾವು ನಿನ್ನ ಜೊತೆ ಇರಿವಿ. ಹೆದರಬೇಡ’ ಎಂದು ಆತ್ಮಸ್ಥೈರ್ಯ ತುಂಬಿ, ನಂತರ ಮತದಾನವನ್ನು ಶುರುಮಾಡಿದರು. ಮತದಾನವೆಂದರೆ, ವಾರ್ಡನ್ ಕೊಡುವ ಒಂದು ಸಣ್ಣ ಚೀಟಿಯಲ್ಲಿ ಅಭ್ಯರ್ಥಿಯ ಹೆಸರನ್ನು ಬರೆದು ಚೀಟಿಯನ್ನು ಮಡಚಿ ಮತಪೆಟ್ಟಿಗೆಯಲ್ಲಿ ಹಾಕಬೇಕು. ಮತದಾನ ಮುಗಿದು ಎಣಿಕೆ ಶುರುವಾಯಿತು! ಅಂತಿಮವಾಗಿ ನಾನು 10 ಮತಗಳಿಂದ ಜಯ ಗಳಿಸಿದ್ದೆ! ಇಷ್ಟಕ್ಕೇ ಬಿಡದ ಹಿರಿಯ ವಿದ್ಯಾರ್ಥಿಗಳು ಮತಗಳನ್ನು ಮರು ಎಣಿಕೆ ಮಾಡಬೇಕೆಂದು ತಾಂತ್ರಿಕ ಕಾರಣ ಮುಂದೊಡ್ಡಿ ಕ್ಯಾತೆ ತೆಗೆದರು. ಪ್ರಿನ್ಸಿಪಾಲರು ಮರು ಎಣಿಕೆಗೆ ಕಾರಣವೇನೆಂದು ಮೆಲು ಧ್ವನಿಯಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಕೇಳಿದರು.
“ಅವನ ಹೆಸರು ಕೃಷ್ಣಮೂರ್ತಿ. ಆದರೆ ಕೆಲವರು ಕಿಟ್ಟಿ ಎಂದು ಬರೆದಿದ್ದಾರೆ, (ನನಗಿದ್ದ ಅಡ್ಡಹೆಸರು ಅದು) ಅಂಥ ಮತಗಳನ್ನು ಪರಿಗಣಿಸಬಾರದು’ ಎಂದು ಹಟಹಿಡಿದು ಕೂತರು. ಒಲ್ಲದ ಮನಸ್ಸಿನಿಂದ ಪ್ರಿನ್ಸಿಪಾಲರು ಮರು ಎಣಿಕೆಗೆ ಆದೇಶಿಸಿದರು. ಮರು ಎಣಿಕೆಯಲ್ಲೂ ನಾನು 3 ಮತಗಳಿಂದ ಜಯ ಗಳಿಸಿದ್ದೆ! ಸಹ್ಯಾದ್ರಿ ಕಾಲೇಜ್ ಹಾಸ್ಟೆಲ್‌ನ 100 ವರ್ಷಗಳ ಇತಿಹಾಸದಲ್ಲೇ ಪಿ.ಯು.ಸಿ ಹುಡುಗನೊಬ್ಬ ಪ್ರಿಫೆಕ್ಟರ್ ಆಗಿ ಆಯ್ಕೆಯಾದದ್ದು ದಾಖಲೆ. ಮುಂದೆ ನನ್ನ ಕೆಲಸವನ್ನು ಚೆನ್ನಾಗಿ ನಿರ್ವಹಿಸಿ ಊಟ ತಿಂಡಿಗಳಲ್ಲಿ ಬಹಳಷ್ಟು ಬದಲಾವಣೆ ಹಾಗೂ ಸುಧಾರಣೆಗಳನ್ನು ತಂದೆ. ಈ ವಿಷಯದಲ್ಲಿ ನನ್ನ ಗೆಳೆಯರು ಹಲವು ಬಗೆಯಲ್ಲಿ ಸಹಕಾರ ನೀಡಿದ್ದರು. ಅಂತಿಮವಾಗಿ ಮೆಸ್ ಬಿಲ್ ಹಿಂದೆಂದಿಗಿಂತ ಕಡಿಮೆ ಬಂದಿತ್ತು!
ನಾನು ಪ್ರಿಫೆಕ್ಟರ್ ಆದ ನಂತರ ನಡೆದ ಸಭೆಯಲ್ಲಿ ಪ್ರಿನ್ಸಿಪಾಲರು, “ನೋಡ್ರಯ್ಯ, ಮೀಸೆ ಇಲ್ಲದ ಹುಡುಗ, ಮೀಸೆ ಇಲ್ಲದ ಹುಡುಗ, ಎಳಸು ಎಂದೆಲ್ಲ ಗೇಲಿ ಮಾಡುತ್ತಿದ್ದಿರಿ, ಈಗ ಏನು ಹೇಳುತ್ತೀರಿ?’ ಎಂದು ಹಿರಿಯ ವಿದ್ಯಾರ್ಥಿಗಳನ್ನು ತಮಾಷೆ ಮಾಡಿದರು. ಮುಂದೆ ನನ್ನ ಕಾರ್ಯವೈಖರಿಯನ್ನು ಮೆಚ್ಚಿ ಕಾಲೇಜಿನ ಶತಮಾನೋತ್ಸವ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕ್ರೀಡಾಪಟುಗಳಿಗೆ ಊಟತಿಂಡಿಯ ವ್ಯವಸ್ಥೆಯ ಮೇಲುಸ್ತುವಾರಿಯನ್ನು ನನಗೇ ವಹಿಸಿದರು. ಆತಂಕದ ಗಳಿಗೆಯಲ್ಲಿ, ನನ್ನ ನೆರವಿಗೆ ನಿಂತದ್ದು, ಧೈರ್ಯ ತುಂಬಿದ್ದು- ನಮ್ಮ ಪ್ರಿನ್ಸಿಪಾಲ್ ಆಗಿದ್ದ ಚಂದ್ರಶೇಖರ್ ಸರ್. ಈಗ ಮುದ್ರಣದಂಥ ಅಪರಿಚಿತ ಜಗತ್ತಿನಲ್ಲಿ ನಾನು ಕೋಟ್ಯಂತರ ರೂ. ವಹಿವಾಟು ನಡೆಸುತ್ತಾ ಹತ್ತಾರು ಜನ ಮೆಚ್ಚುವಂತೆ ಕೆಲಸ ಮಾಡುವುದಕ್ಕೆ ಈ ಘಟನೆಯೇ ನನಗೆ ಪ್ರೇರಣೆ.
ಸ್ವಾನ್ ಕೃಷ್ಣಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.