ಮೂರ್ಸಲ ನಿನ್ನ ಬೈದು ನೂರ್ಸಲ ಅತ್ತಿದೀನಿ…
Team Udayavani, Jan 30, 2018, 2:57 PM IST
ಗಡಿಯಾರದಲ್ಲಿ ಇರೋದ್ ಹನ್ನೆರಡೇ ಗಂಟೆ ನಿಜ. ತಿರುಗಿ ತಿರುಗಿ ಅಲ್ಲಿಗೇ ಬರುತ್ತೆ ಅನ್ನೋದೂ ನಿಜ. ಆದ್ರೆ ಕಾಲದೊಟ್ಟಿಗೆ ಕಳೆದು ಹೋದೋರು ಮತ್ತೆ ಬರಲ್ಲ. ಈ ಪತ್ರಾನಾ ಯಾವ್ ಅಡ್ರೆಸ್ಸಿಗ್ ಪೋಸ್ಟ್ ಮಾಡ್ಲಿ ಅಂತಾನೂ ಗೊತ್ತಾಗ್ತಿಲ್ಲ! ಸುಮ್ನೆ ಬರ್ದು ಮನ್ಸು ಹಗುರ ಮಾಡ್ಕೊಂಡು, ಮಡಚಿ ಇಡ್ತಾ ಇದ್ದೀನಿ…
ಬೆಳಗ್ಗೆ ಎದ್ದಾಗಿಂದ ಮನಸ್ಯಾಕೋ ನಿನ್ ಸುತ್ತಾನೇ ಸುತ್ತುತ್ತಿದೆ. ಈಗ ಬೆಳ್ಗಿನ್ ಜಾವದ್ ಕನ್ಸಲ್ಲಿ ನೀನ್ ಬಂದ್ರೆ ಖುಷಿಪಡ್ಬೇಕೋ ಅಥವಾ, ನೀನ್ ಬರೀ ಕನ್ಸಿಗ್ ಮಾತ್ರ ಮೀಸಲಾಗಿಟ್ಯಲ್ಲ ಅಂತ ದುಃಖ ಪಡ್ಬೇಕೋ ಗೊತ್ತಾಗ್ತಿಲ್ಲ ಕಣೋ. ಮೊದ್ಲೆಲ್ಲ ಕನ್ಸಲ್ ನೀನ್ ಬಂದು ಎಚ್ಚರ ಆಗ್ತಿದ್ ತಕ್ಷಣ ನಿಂಗೆ ಮೆಸೇಜ್ ಮಾಡಿ, “ಲೇ ಡುಮ್ಮ. ಯಾವಳ್ನ ಕೇಳಿ ನೀನ್ ನನ್ ಕನ್ಸಲ್ ಬಂದೆ?’ ಅಂತ ಬೈತಿದ್ದೆ, ಕಾಲೆಳಿತಿದ್ದೆ. ಆದ್ರೆ ಈಗ? ಬೆಳ್ ಬೆಳ್ಗೆನೆ ಅಪ್ಸೆಟ್ ಆಗಿ, ಹಲ್ಲೂ ಉಜ್ಜದೇ ಹಾಗೇ ಹಾಸ್ಗೆ ಮೇಲ್ ಕೂತು ಯೋಚಿಸ್ತೀನಿ. ತಲೆ ತುಂಬ ಒಂದೇ ಪ್ರಶ್ನೆ; ಮತ್ತೆ ಬರುತಾವ ಕಾಲ? ಊಹುಂ, ನಿನ್ ಕೋಪದ್ ಬಗ್ಗೆ ಗೊತ್ತಿರೋ ನನ್ಗೆ ಆ ನಂಬಿಕೆ ಇಲ್ಲ!
ಮಾತಿಗ್ ಮಾತು, ವಾದಕ್ ವಾದ, ಸವಾಲಿಗ್ ಸವಾಲು! ಸಾದ್ಸಿದ್ ಏನು? ಪ್ರೀತಿಯ ಸಾವು! ಮಾಡ್ರೆನ್ನು ಪ್ರೇಮಕ್ಕೆ ಮೈಲೇಜು ಕಮ್ಮಿ ಅಂತ ದೊಡ್ಡೋರ್ ಹೇಳಿದ್ದು ನಿಜ ಆಯ್ತು ನೋಡು.. ನೀನ್ ಮೆಸೇಜ್ ಮಾಡ್ಲಿ ಅಂತ ನಾನು.. ನಾನ್ ಮೆಸೇಜ್ ಮಾಡ್ಲಿ ಅಂತ ನೀನು.. ಇಬ್ರೂ ಸೈಲೆಂಟ್ ವಾರ್‌ಗೆ ಗೊತ್ತಿಲ್ದೆ ಸಹಿ ಹಾಕ್ಬಿಟ್ವಿ. ಕಡೆಗೂ ರಾಜಿ ಆಗ್ಲೆ ಇಲ್ಲ. ಮೂರೇ ಮೂರ್ ಸಲ ನಿನ್ನ ಬೈದು, ನೂರ್ ಸಲ ಮನ್ಸಾರೆ ಅತ್ತಿದ್ದೀನಿ ಕಣೋ. ಆದ್ರೆ ನಿನ್ ಕೋಪದ್ ಕೋಟೆಯೊಳ್ಗೆ ನನ್ ನಿಟ್ಟುಸಿರಿಗೂ ಪ್ರವೇಶ ಸಿಗ್ಲಿಲ್ಲ!
ಪ್ರೀತಿಯ ಸಮುದ್ರ ತಲುಪೋದಕ್ಕೆ ಸ್ನೇಹವೇ ಸೇತುವೆ.. ಆದ್ರೆ ಈ ಸೇತುವೆ ದಾಟಿ ಸಮುದ್ರಕ್ಕೆ ಹತ್ತಿರ ಆಗ್ತಾ ಇದ್ ಹಾಗೆ ಯಾಕೋ ಉಸಿರು ಕಟ್ಟೋಕ್ ಶುರುವಾಯ್ತು. ದಿನಾ ನಿನ್ನ ನೆನ್ಪಿಸ್ಕೊಳ್ತಿದ್ದೆ. ಬಟ್, ಸೋಲೋಕ್ ಇಷ್ಟ ಇಲ್ದೆ ಬಲ್ವಂತವಾಗಿ ದ್ವೇಷ ಸಾದ್ಸಿ, ನನ್ಗೆ ಗೊತ್ತಿಲ್ ಹಾಗೆ ಪ್ರೀತ್ಸೋಕ್ ಶುರು ಮಾಡ್ಬಿಟ್ಟೆ. ಫೇಸ್ಬುಕ್‌ನಲ್ಲಿ, ವಾಟ್ಸಪ್‌ನಲ್ಲಿ ಬ್ಲಾಕ್ ಮಾಡೋದು ಸುಲಭ ಕಣೋ. ಆದ್ರೆ, ನಿನ್ ಕಡೆ ಹರಿದಾಡ್ತಿರೋ ಮನ್ಸನ್ನೂ, ಮೈಂಡನ್ನೂ, ಆಲೋಚನೆಗಳನ್ನೂ ಬ್ಲಾಕ್ ಮಾಡೋದು ತುಂಬ ಕಷ್ಟ. ಕೋಪದ ಕತ್ತೀನ ಬಳ್ಸಿ ಬಳ್ಸಿ ಅದು ಮೊಂಡ್ ಬಿದ್ ಹೋಗಿದೆ.. ಇದ್ರ ಮೇಲೆ ಹಗೆ ಸಾದ್ಸೋಕೆ ನನ್ ಕೈಲಾಗ್ತಿಲ್ಲ!
ಲೈಫ್ನಲ್ಲಿ ನಿನ್ಗೆ ಕೊಟ್ ಸ್ಥಾನಾನ ಬೇರೆ ಯಾರಿಗೂ ಕೊಡಲ್ಲ ಅಂತ ನೀನ್ ಅವಾಗ್ ಅವಾಗ್ ಹೇಳ್ತಿದ್ದೆ! ಆದ್ರೆ ಅದು ಯಾವ್ ಸ್ಥಾನ ಅಂತ ಕೇಳ್ಬೇಕಿತ್ತು ನಾನು. ನಂಗೆ ತುಂಬ ಕೋಪ, ಯಾರೂ ನನ್ಗೆ ಎದ್ರ್ ಉತ್ರ ಕೊಡಲ್ಲ, ಬಟ್ ನಿನ್ನ ಮಾತ್ರ ಸಹಿಸ್ಕೊಳ್ತೀನಿ ಅಂತ ನೀನ್ ಹೇಳ್ದಾಗ, ಯಾಕೆ ಅಂತ ಕೇಳ್ಬೇಕಿತ್ತು ನಾನು. ಇಷ್ಟು ಗಾಂಭೀರ್ಯದವ್ನು ನೀನು, ಅಮವಾಸ್ಯೆಗೋ ಹುಣ್ಣಿಮೆಗೋ “ಐ ಮಿಸ್ ಯೂ’ ಅಂತ ಯೋಚಿಸಿ ಯೋಚಿಸಿ ಮೆಸೇಜ್ ಕಳಿಸ್ದಾಗ ಯಾಕೆ ಅಂತ ಕೇಳ್ಬೇಕಿತ್ತು ನಾನು. ಪದೇ ಪದೆ ನೀನು, “ನನ್ಗೆ ಭಯ ಆಗ್ತಿದೆ. ನಾನ್ಯಾಕೋ ನಿನ್ನ ತುಂಬ ಹಚ್ಕೋಳ್ತಿದ್ದೀನಿ ಅನ್ನಿಸ್ತಿದೆ’ ಅಂತ ಹೇಳಾªಗ ಭಯ ಯಾಕೆ ಅಂತ ಕೇಳ್ಬೇಕಿತ್ತು ನಾನು.
ಅಷ್ಟೊಂದ್ ಜೋರ್ ಇರೋ ನೀನು ಎದ್ರುಗಡೆ ಸಿಕ್ಕಾಗ ಕಣ್ಣಲ್ಲೆ ಕಣ್ಣಿಟ್ ನೋಡೋಕೂ ಸಂಕೋಚ ಪಟ್ಕೊಳ್ತಿದ್ಯಲ್ಲಾ? ಯಾಕೆ ಅಂತ ಕೇಳ್ಬೇಕಿತ್ತು ನಾನು! ಫೇಸ್ಬುಕ್‌ನಲ್ಲಿ ಯಾರೋ ಕ್ಲೋಸಾಗಿ ಕಮೆಂಟ್ ಮಾಡ್ದಾಗ ನೀನ್ ಉರ್ಕೊಳ್ತಿದ್ಯಲ್ಲ? ಅದಕ್ಕೆ ಕಾರ್ಣ ಕೇಳ್ಬೇಕಿತ್ತು ನಾನು.. ಇದು ಸ್ನೇಹಾನ, ಪ್ರೀತೀನಾ ಅಂತ ಕೇಳ್ಬೇಕಿತ್ತು ನಾನು! ಆದ್ರೆ, ಈ ಯಾವ್ ಪ್ರಶ್ನೆನೂ ನಾನ್ ಕೇಳ್ಳೇ ಇಲ್ಲ. ಇವತ್ತು ಈ ಪ್ರಶ್ನೆಗಳೇ ನನ್ನ ಪ್ರಶ್ನೆ ಮಾಡೋಕ್ ಶುರು ಮಾಡಿವೆ. ಇದು ಸ್ನೇಹ ಅಲ್ಲ, ಪ್ರೀತಿ ಅಂತಾನೂ ಅರ್ಥ ಆಗಿದೆ, ಅವತ್ತು ಬಾಯಿ ಹೇಳೆª ಇದ್ದಿದ್ದನ್ನ ಇವತ್ತು ಮನ್ಸು ಸಾರಿ ಸಾರಿ ಹೇಳ್ತಿದೆ! ಆದ್ರೆ ಕೇಳ್ಬೇಕಾದ್ ನಿನ್ ಕಿವಿ ಪರ್ಮನೆಂಟಾಗ್ ಮುಚ್ಚಿವೆ!
ಗಡಿಯಾರದಲ್ಲಿ ಇರೋದ್ ಹನ್ನೆರಡೇ ಗಂಟೆ ನಿಜ. ತಿರುಗಿ ತಿರುಗಿ ಅಲ್ಲಿಗೇ ಬರುತ್ತೆ ಅನ್ನೋದೂ ನಿಜ. ಆದ್ರೆ ಕಾಲದೊಟ್ಟಿಗೆ ಕಳೆದು ಹೋದೋರು ಮತ್ತೆ ಬರಲ್ಲ. ಈ ಪತ್ರಾನಾ ಯಾವ್ ಅಡ್ರೆಸ್ಸಿಗ್ ಪೋಸ್ಟ್ ಮಾಡ್ಲಿ ಅಂತಾನೂ ಗೊತ್ತಾಗ್ತಿಲ್ಲ! ಸುಮ್ನೆ ಬರ್ದು ಮನ್ಸು ಹಗುರ ಮಾಡ್ಕೊಂಡು, ಮಡಚಿ ಇಡ್ತಾ ಇದ್ದೀನಿ…
ನಂದಿನಿ ನಂಜಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.