ಕಾಯುತ್ತಲೇ ಇದ್ದೇನೆ, ಆಸೆಯಿಂದ…ನಿರಾಸೆಯಿಂದ..!
Team Udayavani, May 1, 2018, 7:55 PM IST
ಅದ್ಯಾವ ಮಾಯೆಯಲ್ಲಿ ವಿಧಿ ನನ್ನಿಂದ ನಿನ್ನನ್ನು ಬೇರೆ ಮಾಡಿತೋ ನಾನರಿಯೆ. ಸೂತ್ರ ಕಿತ್ತ ಗಾಳಿಪಟದಂತೆ, ನೀರಿನಿಂದ ಹೊರತೆಗೆದ ಮೀನಿನಂತೆ, ಗೊತ್ತು ಗುರಿ ಇಲ್ಲದ ಪಥಿಕನಂತೆ ನಿನ್ನಿಂದ ನಾನು ದೂರವಾಗಿಬಿಟ್ಟೆ.
ನನ್ನ ಬಾಳ ಸೊಗಸೇ,
ನಿನ್ನ ನೆನಪಿನ ಆಸರೆಯಲ್ಲಿ ಅನುಗಾಲ ತನು-ಮನ ಮಿಂದರೂ ನಾನರಿಯದ ಒಬ್ಬಂಟಿತನ, ಏಕಾಂಗಿಭಾವ ನನ್ನ ಹೃದಯವನ್ನು ತೊರೆಯುವುದೇ ಇಲ್ಲ. ಕಾರಣ ಹೇಳಲೆ? ನೀನಿಲ್ಲ ನೋಡು, ನೀನಿನ್ನು ಬರುವುದೇ ಇಲ್ಲ ಎಂಬ ಯಾತನೆ ಹಗಲಿರುಳು ಮೈಮನಸ್ಸನ್ನು ಮುತ್ತಿ, ಸೊಗಸೆಂಬುದು ಮರೀಚಿಕೆಯಾಗಿದೆ. ಅದೇಕೆ ಹೀಗೆ ಹೇಳದೆ, ಕೇಳದೆ ಮಾಯವಾದೆ? ಕಾರಣ ಹೇಳದೆ!
ದಿನ ಹೀಗೇ ಜಾರಿ ಹೋಗಿದೆ
ನೀನೀಗ ಬಾರದೆ…
ಜೊತೆಯಿರದ ಬಾಳ ಜಾತ್ರೆಯಲಿ
ಸೊಗಸೇನಿದೆ….?
ಹೌದು. ನೀನಿರದ, ನಿನ್ನ ಸಾಮೀಪ್ಯವಿರದ ಬದುಕ ಜಾತ್ರೆಯಲ್ಲಿ ಸೊಗಸು, ಸಂಭ್ರಮ ಎಲ್ಲಿಂದ ಬಂದೀತು? ನನ್ನ ಪಾಡಿಗೆ ನಾನಿದ್ದೆ. ಅದೆಲ್ಲಿಂದಲೋ ಬಂದು, ಮನದ ತಿಳಿಗೊಳದಲ್ಲಿ ಬಿರುಗಾಳಿ ಎಬ್ಬಿಸಿ, ಪ್ರೀತಿಯ ಮಳೆ ಹನಿಗಳ ಸುರಿಸಿ, ನಿನ್ನ ಪ್ರೇಮಪಾಶದಲ್ಲಿ ಬಂಧಿಸಿಬಿಟ್ಟೆಯಲ್ಲ; ಅದನ್ನು ನೆನಪಿಸಿಕೊಂಡರೆ ಸಾಕು; ನನಗೆ ವಿಸ್ಮಯವೆನಿಸುತ್ತದೆ. ನನ್ನಂಥ ಕಠೊರ ಹೃದಯಿ, ನಿಷ್ಠುರವಾದಿ, ಗಾಢ ಮೌನಿ, ಏಕಾಂತ ಪ್ರಿಯನನ್ನು ನೀನದೆಷ್ಟು ಸುಲಭವಾಗಿ ಬದಲಾಯಿಸಿಬಿಟ್ಟೆ? ಕಠೊರ ಹೃದಯ ಬೆಣ್ಣೆಗಿಂತ ಮೃದುವಾಯಿತು. ನಿಷ್ಟುರ ನಿಲುವು ಸಡಿಲಾಯಿತು. ಗಾಢ ಮೌನಿ ವಾಚಾಳಿಯಾದ. ಏಕಾಂತ ಇಷ್ಟಪಡುತ್ತಿದ್ದವ ಸಂಗಾತಿಗಾಗಿ ಹಂಬಲಿಸತೊಡಗಿದ. ಇಷ್ಟೆಲ್ಲ ಆಗಲು ವರ್ಷಗಳೇ ಉರುಳಬೇಕಾಗಿರಲಿಲ್ಲ, ಆದರೆ ಕೆಲವೇ ಕೆಲವು ದಿನಗಳು, ಕ್ಷಣಗಳು ಸಾಕಾದವು. ನಿನ್ನ ಪ್ರೀತಿಯಲ್ಲಿ, ಕಣ್ಣುಗಳಲ್ಲಿ ಹೊಳೆಯುತ್ತಿದ್ದ ಬೆಳಕ ಪ್ರಭೆಯಲ್ಲಿ, ತುಟಿಯಂಚಿನ ಜೇನ ಸುಧೆಯಲ್ಲಿ ಇಷ್ಟೊಂದು ತಾಕತ್ತಿದೆಯೆಂದು ನನಗೆ ಗೊತ್ತಿರಲಿಲ್ಲ. ಕೆಲವೇ ದಿನಗಳಲ್ಲಿ ನಿನ್ನ ದಾಸಾನುದಾಸನಾಗಿಬಿಟ್ಟೆ.
ಆಮೇಲೆ ಏನಾಯ್ತು ಗೊತ್ತಲ್ಲ; ಅದುವರೆಗೂ ಶಿಸ್ತೇ ಇಲ್ಲದವನ ಬದುಕಲ್ಲಿ ಶಿಸ್ತು ನಳನಳಿಸತೊಡಗಿತು. ಓದೆಂದರೆ ಮಾರುದ್ದ ಹಾರುತ್ತಿದ್ದ ನಾನು, ಸಾಹಿತ್ಯ ಪುಸ್ತಕಗಳ ಧೂಳು ಕೊಡವಿ, ಪದ್ಮಾಸನ ಹಾಕಿ ಓದಲು ಕುಳಿತೆ. ನಸುಕಿನ ಸಕ್ಕರೆ ನಿದ್ದೆಯನ್ನು ಲಕ್ಷ ಕೊಟ್ಟರೂ ಕಳೆದುಕೊಳ್ಳಲಿಚ್ಛಿಸದ ನಾನು, ಕೇವಲ ನಿನಗೋಸ್ಕರ ಕೋಳಿ ಕೂಗುವ ಮುನ್ನ ಎದ್ದು ಸಕಲ ಸಾಹಸ ಕಾರ್ಯಗಳಿಗೆ ಸಿದ್ಧನಾಗುತ್ತಿದ್ದೆ. ತುಂಬಾ ಮಂಕುದಿನ್ನೆಯಾಗಿದ್ದ ನಾನು ನಿನ್ನ ಗೆಳೆತನದ ಕಾರಣದಿಂದಲೇ ಬಲುಬೇಗ ಪರಿವರ್ತನೆ ಹೊಂದಿದ್ದನ್ನು ಕಂಡು ಆಶ್ಚರ್ಯಗೊಂಡಿರಬೇಕು ನೀನು.
ಆದರೆ, ಆ ಖುಷಿ ಬಹುಕಾಲ ಬಾಳಲಿಲ್ಲ. ಬಯಲಲ್ಲಿಟ್ಟ ಹಣತೆ ಬೀಸಿದ ಭೀಕರ ಬಿರುಗಾಳಿಗೆ ನಂದಿ ಹೋಯಿತು. ನನ್ನ ಜೀವನದ ಸತ್ವವೆಲ್ಲ ಬಸಿದು ಹೋಯಿತು. ಅದ್ಯಾವ ಮಾಯೆಯಲ್ಲಿ ವಿಧಿ ನನ್ನಿಂದ ನಿನ್ನನ್ನು ಬೇರೆ ಮಾಡಿತೋ ನಾನರಿಯೆ. ಸೂತ್ರ ಕಿತ್ತ ಗಾಳಿಪಟದಂತೆ, ನೀರಿನಿಂದ ಹೊರತೆಗೆದ ಮೀನಿನಂತೆ, ಗೊತ್ತು ಗುರಿ ಇಲ್ಲದ ಪಥಿಕನಂತೆ ನಿನ್ನಿಂದ ನಾನು ದೂರವಾಗಿಬಿಟ್ಟೆ. ಆಮೇಲಿನದು ಬರೀ ನಿರೀಕ್ಷೆ. ನೀ ಬರುವ ಹಾದಿಗೆ ಕಂಗಳ ಹರವಿ ಕಾದದ್ದೇ ಬಂತು. ಫಲ ಮಾತ್ರ ಶೂನ್ಯ. ಇಷ್ಟಾದರೂ ಕಾಯುವಿಕೆ ನಿಂತಿಲ್ಲ. ನಿತ್ಯ ನಿರಂತರ ಕಾತರದ ಕಾಯುವಿಕೆ ಜಾರಿಯಲ್ಲಿದೆ. ಬಂದೇ ಬರುತ್ತೀಯೆಂಬ ತುಂಬು ಹಂಬಲದಿಂದ…..
-ನಿನ್ನವನು
ನಾಗೇಶ್ ಜೆ. ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.