ಡಿಫರೆಂಟಾಗೊಂದು ಕ್ಯಾಂಪಸ್ ಕತೆ ಮನ ಮೆಚ್ಚಿದ ಬಾಟಲ್
Team Udayavani, Jan 17, 2017, 3:45 AM IST
ಅದು ನಮ್ಮ ಕಾಲೇಜ್ ಕ್ಯಾಂಪಸ್. ಒಳ ಹೊಕ್ಕರೆ ಸುತ್ತಮುತ್ತ ಕಟ್ಟಡಗಳದ್ದೇ ಸಾಮ್ರಾಜ್ಯ. ಒಂದಕ್ಕಿಂತ ಒಂದು ಭಿನ್ನ ಹಾಗೂ ಎತ್ತರ. ಯಾವ ಕಟ್ಟಡ ಯಾವ ಕೋರ್ಸಿಗೆ ಸೇರಿದ್ದು ಎಂದು ಗೊತ್ತಾಗಲು ಸ್ವಲ್ಪ ಸಮಯವೇ ಹಿಡಿಯುತ್ತೆ ಬಿಡಿ. ಆದರೂ ಕೂಡ ಅವುಗಳು ಸುಂದರ. ಅದರಲ್ಲೂ ಸ್ನಾತಕೋತ್ತರದ ಕಟ್ಟಡ ಬಲು ಅದ್ಭುತ. ಅದು ನೋಡಲು ಚೌಕ ಕಟ್ಟಡ. ಈಗಷ್ಟೇ ಬೆಳೆದು ನಿಂತಿರುವ ಅದು ನಾಲ್ಕರಿಂದ ಐದು ಮಹಡಿ ಇದೆ. ನನ್ನ ಕ್ಲಾಸ್ ಇರೋದು ಎರಡನೇ ಮಹಡಿ.
ನಾನು ಮೊದಲಿನಿಂದಲೂ ಶಿಸ್ತಿನ ಹುಡುಗಿ. ಅಮ್ಮನ ಅದ್ಭುತ ಕೈರುಚಿ ಇರುವ, ಮನೆಯಲ್ಲೇ ಮಾಡಿದ ಆಹಾರವನ್ನೇ ತೆಗೆದುಕೊಂಡು ಹೋಗುತ್ತಿದ್ದೆ. ಜೊತೆಗೆ ಒಂದು ದೊಡ್ಡ ಬಾಟಲಿಯಲ್ಲಿ ನೀರು. ಅದೇನು ಸಂಬಂಧವೋ ಏನೋ ನನಗೆ ಪರಿಚಯವಾದ ಗೆಳತಿಯರು ಕೂಡ ಅದೇ ಸ್ವಭಾವದವರಾಗಿದ್ದರು. ನಮ್ಮ ಕ್ಲಾಸ್‌ನವರೆಲ್ಲಾ ಮನೆಯಿಂದ ನೀರು ತರಲು ಸೋಂಬೇರಿತನ. ಎಲ್ಲರೂ ನಮ್ಮ ಬಾಟಲಿಯಿಂದಲೇ ನೀರು ಕುಡಿಯುತ್ತಿದ್ದರು.
ಇಡೀ ಒಂದು ದಿನದಲ್ಲಿ ಮೂರು ಬಾಟಲಿ ನೀರು ಹೇಗೋ ಕುಡಿಯುತ್ತಿದ್ದೆವು. ಆದರೆ ಅದೊಂದು ದಿನ ನಮ್ಮ ಮೂರು ಜನರ ಬಾಟಲಿ ನೀರು ಖಾಲಿಯಾಗಿತ್ತು. ಇನ್ನೇನು ಮಾಡೋದು ಕಾಲೇಜು ನೀರೇ ನಮಗೆ ಗತಿ. ನಮಗೆ ನೀರು ಬೇಕಾದರೆ ಗ್ರೌಂಡ್ ಫ್ಲೋರ್‌ಗೆ ಹೋಗಬೇಕು. ಅದು ಕೂಡ ನಮ್ಮ ಕಟ್ಟಡದ ಒಂದು ಮೂಲೆಯಲ್ಲಿತ್ತು. ಅದು ಶುದ್ಧ ಕುಡಿಯುವ ನೀರಾಗಿದ್ದರೂ ಕೂಡ ಅಲ್ಲಿಯವರೆಗೆ ಯಾರು ಹೋಗಿ ಬರುವುದೆಂದು ಚಿಂತೆಯಾಯಿತು.
ಮತ್ತೇನು ಮಾಡೋದು ನಮಗಿರುವುದು ಒಂದೇ ದಾರಿ. ಮೂರು ಜನ ಗೆಳತಿಯರು ಖಾಲಿ ಬಾಟಲಿ ಹಿಡಿದುಕೊಂಡು ಗ್ರೌಂಡ್ ಫ್ಲೋರ್‌ಗೆ ಹೋದೆವು. ಅದು ಊಟದ ವಿರಾಮದ ಅವಧಿ ಎಲ್ಲರೂ ಕ್ಯಾಂಟೀನ್, ಹೋಟೆಲ್‌ಗೆ ಹೋಗಿ ವಾಪಸಾಗುತ್ತಿದ್ದರು.
ನಾವು ಹೋಗಿ ನೀರು ತುಂಬಿಸ ತೊಡಗಿದೆವು. ಆಗ ಅಲ್ಲಿಗೆ ನಾಲ್ಕೈದು ಹುಡುಗರ ಗುಂಪೊಂದು ಬಂತು. ಅವರು ಬಂದಿದ್ದು ನೀರು ಕುಡಿಯಲು. ಆದರೆ ಅಲ್ಲಿ ನೀರು ಕುಡಿಯುಲು ಇಟ್ಟಂತಹ ಲೋಟ ಅವತ್ತು ಇರಲಿಲ್ಲ. ಆ ಹುಡುಗರ ಪರಿಚಯವೂ ನಮಗೆ ಇರಲಿಲ್ಲ. ನಮ್ಮ ಪರಿಚಯವೂ ಅವರಿಗೆ ಇರಲಿಲ್ಲ. ಆ ಗುಂಪಿಗೆ ಲೀಡರ್ ಕೂಡ ಇದ್ದ. ಆತ ನೋಡಲು ಸ್ಮಾರ್ಟ್ ಆಗಿದ್ದ. ಅಲ್ಲದೇ ತುಂಬಾನೇ ಆ್ಯಟಿಟ್ಯೂಡ್ ಇರೋ ಹುಡುಗ. ಆದರೆ ಅಂದು ಆತನಿಗೆ ನನ್ನ ಬಾಟಲಿ ನೀರು ಅಗತ್ಯ ಇತ್ತು. ಪರಿಚಯ ಇಲ್ಲದಿದ್ದರೂ ನೀರು ಕೇಳಿದ. ನಾನು ತ್ಯಾಗಮಯಿಯಂತೆ ನೀರು ಕೊಟ್ಟಿದ್ದೆ. ಆದರೆ ಆತ ಥ್ಯಾಂಕ್ಸ್ ಕೂಡ ಹೇಳದೆ ಹೊರಟ. ಸ್ವಲ್ಪ ಕೋಪನೂ ಬಂತು. ಆದರೂ ಸುಮ್ಮನಾಗಿ ಕ್ಲಾಸಿಗೆ ಹೋದೆವು.
ಅದೇನಾಯಿತೋ ಏನೋ. ಮರುದಿನ ಕಾಲೇಜು ಬರುವ ದಾರಿಯಲ್ಲಿ ನನಗೆ ಅವನು ಸಿಕ್ಕಿದ. ನಾನು ನೋಡಿದರೂ ನೋಡದಂತೆ ಹೋಗುತ್ತಿದ್ದೆ. ಹಿಂದಿನಿಂದ ಬಂದ ಆತ ತುಂಬಾನೇ ಥ್ಯಾಂಕ್ಸ್, ನಿನ್ನೆ ಹೇಳಲು ಮರೆತಿದ್ದೆ ಎಂದ. ಆತನ ಮಾತು ಕೇಳಿ ಅದೇನೋ ಖುಷಿ. ಮಧ್ಯಾಹ್ನದವರೆಗೆ ಯಾವ ಕ್ಲಾಸ್ ಕೂಡ ನನ್ನ ತಲೆಗೆ ಹೋಗಲಿಲ್ಲ. ಕಾರಣ ನನ್ನ ತಲೆಯಲ್ಲಿ ಆತನ ಥ್ಯಾಂಕ್ಸೇ ಇತ್ತು.
ಮರುದಿನ ನನ್ನ ಬಾಟಲಿಯಲ್ಲಿ ನೀರಿದ್ದರೂ ಅದನ್ನು ಕುಡಿದು ಖಾಲಿ ಮಾಡಿದೆ. ನನ್ನ ಅವತ್ತಿನ ವಿಚಿತ್ರ ವರ್ತನೆಯಿಂದ ಗೆಳತಿಯರಲ್ಲಿ ನೀರು ತರೋಣ ಎಂದು ಹೇಳಿದರೂ, ನನ್ನ ಮುಖವನ್ನು ನೋಡಿದ ಗೆಳತಿ ಅವಳ ಕೈಯಲ್ಲಿದ್ದ ಪಿಂಕ್ ಕಲರ್ ಬಾಟಲಿ ಇಟ್ಟು ನೀರು ಕುಡಿ ಎಂದು ಸನ್ನೆ ಮಾಡಿದಳು. ಮನಸ್ಸಿನಲ್ಲೇ ನಾನು ನನ್ನ ಉದ್ದೇಶವನ್ನು ಹೇಳಲಾಗದೆ ಚಡಪಡಿಸುತ್ತಿರುವಾಗ ಒಬ್ಬಳು ಗೆಳತಿ ನನ್ನ ಕೋಪದ ಮುಖ ಗುರುತಿಸಿ, ಅವಳ ಕೆಲಸ ಅರ್ಧದಲ್ಲಿ ಬಿಟ್ಟು ನನ್ನ ಕೈಯಲ್ಲಿದ್ದ ಬಾಟಲಿ ಹಿಡಿದು ಹೊರ ನಡೆದಳು.
ನಾನು ಅವಳನ್ನು ಂಬಲಿಸಿದೆ. ನನ್ನ ಕಣ್ಣುಗಳು ಅವನನ್ನೇ ಹುಡುಕುತ್ತಿತ್ತು. ತಕ್ಷಣ ಅವನು ನನ್ನೆದುರು ಪ್ರತ್ಯಕ್ಷ. ನನ್ನ ಗೆಳತಿ ಅದೆಷ್ಟೂ ಕೂಗಿದರು ಕೇಳಿಸಲೇ ಇಲ್ಲ. ಹುಡುಗರ ಗುಂಪಿನ ಮಧ್ಯ ಇದ್ದ ಅವನು ಕಿರುನಗೆ ಬೀರುತ್ತ ನನ್ನ ಹತ್ತಿರಾನೇ ಬಂದ. ನನ್ನ ಚಡಪಡಿಕೆ ನೋಡಿ ಆತನೇ ಕೈಯಲ್ಲಿದ್ದ ನನ್ನ ನೀರಿನ ಬಾಟಲಿ ತೆಗೆದುಕೊಂಡು ಗಟಗಟನೆ ಕುಡಿದು ಥ್ಯಾಂಕ್ಸ್ ಹೇಳಿ ಬಾಟಲಿ ನನ್ನ ಕೈಯಲ್ಲಿ ಇಟ್ಟ. ಅಷ್ಟರಲ್ಲಿ ಕ್ಲಾಸ್ ಬೆಲ್ ಕೇಳಿಸಿತು. ಅವಸರದಲ್ಲಿ ಹಿಂತಿರುಗಿ ಕಣ್ಣ ಸನ್ನೆ ಮಾಡಿ ಬಾಯ್ ಹೇಳಿದ.
ವಾರಗಟ್ಟಲೆ ಥ್ಯಾಂಕ್ಸ್, ಬಾಯ್‌ಯಲ್ಲೇ ಮಾತುಕಥೆ ನಡೆಯುತ್ತಿತ್ತು. ದಿನಾ ವಟವಟ ಮಾತಾನಾಡುತ್ತಿದ್ದ ನಾನು ಒಂದು ದಿನ ಕ್ಲಾಸಿನ ಹೊರಗೆ ಮೌನವಾಗಿ ನಿಂತಿದ್ದೆ. ನನ್ನ ಮೌನಕ್ಕೆ ಕಾರಣವಾಗಿದ್ದ ಅವನು ತಕ್ಷಣ ಬಂದು “ಏನು ಬಾಟಲ್ ಸುಮ್ಮನೇ ನಿಂತದ್ದು’ ಎಂದು ಚುಡಾಯಿಸಿದ. ವಟವಟ ಶುರುವಾದ ನನ್ನ ಮಾತುಗಳಿಗೆ ಕೊನೆಯೇ ಇರಲಿಲ್ಲ. ಅವನು ಮೂಕನಂತೆ ನಿಂತಿದ್ದ.
ಹೀಗೆ ದಿನನಿತ್ಯ ನಡೆಯುತ್ತಿದ್ದ ನಮ್ಮ ಮಾತು, ಚುಡಾಯಿಸುವಿಕೆ, ತಮಾಷೆ ಪ್ರೀತಿಗೆ ಮುನ್ಸೂಚನೆ ನೀಡುತ್ತಿತ್ತು. ಇಬ್ಬರ ಮನಸ್ಸಿನಲ್ಲೂ ಒಂದೇ ಭಾವನೆ ಇದ್ದರೂ ಹೇಳಿಕೊಳ್ಳಲಾಗಲಿಲ್ಲ. ಅಂತಿಮ ವರ್ಷದ ಕೊನೆಯ ಬೀಳ್ಕೊಡುವ ಕ್ಷಣದಲ್ಲಿ ಇಬ್ಬರ ಮುಖದಲ್ಲೂ ಭಯ, ನೋವು ಎದ್ದು ಕಾಣುತ್ತಿತ್ತು. ಇನ್ನೇನು ಊರಿಗೆ ಹೊರಡುವಷ್ಟರಲ್ಲಿ ನನ್ನ ಹತ್ತಿರ ಬಂದು ಪರ್ಸನಲ್ ಆಗಿ ಮಾತಾಡಬೇಕು ಎಂದು ಪಕ್ಕಕ್ಕೆ ಕರೆದ.
ಅದಕ್ಕಾಗಿ ಕಾಯುತ್ತಿದ್ದ ನಾನು. ಅವನ ಮಾತು ಮುಗಿಯುವಷ್ಟರಲ್ಲಿ ನಾನಲ್ಲಿದ್ದೆ. ಆತ ಕಾಲನ್ನು ನೆಲಕ್ಕೆ ಊರಿ ಕೈಯಲ್ಲಿ ಗುಲಾಬಿ ಹಿಡಿದು ಐ ಲವ್ ಯೂ ಬಾಟಲ್ ಎಂದು ದುಃಖದ ನಡುವೆ ಚುಡಾಯಿಸಿದ. ಅವನ ಆ ಮಾತಿಗೆ ಸ್ವಲ್ಪನೂ ಯೋಚನೆ ಮಾಡದೆ ಒಪ್ಪಿಕೊಂಡೆ. ಬಾಟಲ್‌ನಲ್ಲಿ ಶುರುವಾದ ನಮ್ಮಿಬ್ಬರ ಪ್ರೀತಿ ಕೊನೆಯಾಗುತ್ತೋ ಎಂಬ ಭಯವನ್ನು ದೂರ ಮಾಡಿದ.
– ಅನ್ವಯ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.