ಇಂ”ಡಿಪೆಂಡೆನ್ಸಿ’: ನಿಮ್ಮ ಮಕ್ಕಳ ಲೇಸ್ ನೀವೇ ಕಟ್ತೀರಾ?
Team Udayavani, Nov 19, 2019, 6:00 AM IST
ಮಕ್ಕಳು ಪಿಯುಸಿ ದಾಟಿದ ನಂತರವೂ, ಅವರನ್ನು ಸಣ್ಣವರೆಂದೇ ಭಾವಿಸಿ ಅವರ ಎಲ್ಲ ಕೆಲಸವನ್ನೂ ತಾವೇ ಮಾಡಲು ಕೆಲವು ಪೋಷಕರು ಮುಂದಾಗುತ್ತಾರೆ. ಇದರಿಂದ ಮಕ್ಕಳು ಇನ್ನೊಬ್ಬರ ಮೇಲೆಯೇ ಡಿಪೆಂಡ್ ಆಗತೊಡಗಿದ್ದಾರೆ. ಈ ಡಿಪೆಂಡೆನ್ಸಿ ಎಂಬುದು ಭವಿಷ್ಯದಲ್ಲಿ ಎಂತೆಂಥ ಅನಾಹುತಗಳಿಗೆ ಕಾರಣವಾಗುತ್ತದೆ ಗೊತ್ತಾ?
“ನಮ್ಮ ಮಗನ ಇಂಜಿನಿಯರಿಂಗ್ ಮುಗಿದು ಒಳ್ಳೆಯ ಕೆಲಸ ಸಿಕ್ಕಿದೆ. ಆದರೆ, ಇಲ್ಲಲ್ಲ, ಮುಂಬೈನಲ್ಲಿ. ನಮಗೆ ಅದೇ ಯೋಚನೆ! ಇಲ್ಲಿದ್ದಾಗ ಕಾಲೇಜಿಗೆ ಡ್ರಾಪ್ ಮಾಡೋದು, ಊಟ-ತಿಂಡಿ, ಬಟ್ಟೆ-ಬರೆ ಎಲ್ಲಾ ಎ ಟು ಜಡ್ ನಾವೇ ಮಾಡ್ತಾ ಇದ್ವಿ. ಬಾಯಿ ತೆರೆದ್ರೆ ಅಮ್ಮ-ಅಪ್ಪಾ ಅನ್ನೋನು! ಈಗ ಏನು ಮಾಡ್ತಾನೋ ಗೊತ್ತಿಲ್ಲ.’ ಅಮ್ಮನ ಆತಂಕ.
ಆದರೆ, ಡಿಗ್ರಿ ಓದುವ ಮಗಳ ಈ ಹೆಮ್ಮೆಯ ಮಾತನ್ನು ಸ್ವಲ್ಪ ಕೇಳಿ.
“ನಾನು ಒಬ್ಬಳೇ ಮಗಳು. ನಮ್ಮನೇಲಿ ರಾಣಿ ಅಂತಾನೇ ಕರೆಯೋದು. ನಾನಾಯ್ತು, ನನ್ನ ಓದಾಯ್ತು ಅಷ್ಟೇ. ಉಳಿದಿದ್ದು ಫುಲ್ ಪಪ್ಪ ಮಮ್ಮಿಗೆ ಬಿಟ್ಟಿದ್ದು. ಊಟ ಮಾಡುವಾಗ ಮಮ್ಮಿ ಅನ್ನ ಕಲೆಸಿ ಕೊಟ್ಟರೆ, ಸ್ನಾನಕ್ಕೆ ಹೊರಟರೆ ಟವೆಲ್- ಬಟ್ಟೆ ರೆಡಿ ಇಡೋರು ಪಪ್ಪ. ನಂಗೆ ಅದೆಲ್ಲಾ ರೆಸ್ಪಾನ್ಸಿಬಿಲಿಟಿ ತಗೊಳ್ಳೋಕೆ ಇಷ್ಟ ಇಲ್ಲ’.
ಮೇಲ್ನೋಟಕ್ಕೆ ತಂದೆ-ತಾಯಿ, ಮಕ್ಕಳ ಬಾಂಧವ್ಯವನ್ನು ತೋರುವ ಪ್ರೀತಿಪೂರ್ವಕ ಅಭಿಮಾನದ ಮಾತುಗಳಿವು ಎನಿಸುತ್ತದೆ ನಿಜ. ಆದರೆ, ಸ್ವತಂತ್ರವಾಗಿ ಬದುಕುವುದನ್ನು ಕಲಿಸದ ಇಂಥ ಪ್ರೀತಿ, ನಿಜಕ್ಕೂ ಮಕ್ಕಳು-ಯುವಜನರಿಗೆ ಬೇಕೆ? ಯೋಚಿಸಬೇಕಾದ ವಿಷಯ.
ತುಂಬು ಕುಟುಂಬದ ದೊಡ್ಡ ಮನೆಯಲ್ಲಿ ಏಳೆಂಟು ಮಕ್ಕಳು-ಮರಿ ಕೂಡಿ ಬೆಳೆಯುತ್ತಿದ್ದ ಕಾಲ, ಕತೆಗಳಲ್ಲಿ ಮಾತ್ರ ಕಾಣಸಿಗುತ್ತದೆ. ಈಗ ಏನಿದ್ದರೂ ಗಂಡ-ಹೆಂಡತಿ, ಮನೆಗೊಂದು ಮಗು (ಅಬ್ಬಬ್ಟಾ ಎಂದರೆ ಎರಡು)ಅಷ್ಟೇ! ಆ ಕಾಲಕ್ಕೆ ಹೇಗೋ ಎರಡು ಹೊತ್ತಿನ ಊಟ-ವರ್ಷಕ್ಕೆರಡು ಬಟ್ಟೆ, ಮನೆಯವರಿಗೆಲ್ಲಾ ಸಿಕ್ಕರೆ ದೊಡ್ಡ ಭಾಗ್ಯ. ಮಕ್ಕಳ ಲಾಲನೆ-ಪಾಲನೆ,ಶಾಲೆ-ಕಾಲೇಜಿನ ಕಡೆ ಪುರುಸೊತ್ತಾದಾಗ ಚೂರು ಪಾರು ಗಮನ. ಎಷ್ಟೋ ಬಾರಿ ಮಕ್ಕಳು ಯಾವ ಕ್ಲಾಸಿನಲ್ಲಿ ಇದ್ದಾರೆಂಬುದೂ ಕೆಲವು ಪೋಷಕರಿಗೆ ಮರೆತು ಹೋಗಿರುತ್ತಿತ್ತು. ಇಷ್ಟಾದರೂ, ಹೇಗೋ ತಮ್ಮ ಪಾಡಿಗೆ ಮಕ್ಕಳು ಓದುತ್ತಿದ್ದರು, ಸಿಕ್ಕ ಕೆಲಸ ಮಾಡುತ್ತಿದ್ದರು. ಸೀಮಿತ ಬೇಕುಗಳ ಬದುಕು ಸರಳವಾಗಿತ್ತು. ಕೂಡು ಕುಟುಂಬದಲ್ಲಿದ್ದರೂ, ನಿಧಾನವಾಗಿ ತನ್ನಿಂತಾನೇ ಜವಾಬ್ದಾರಿ ಹೆಗಲೇರುತ್ತಿತ್ತು. ಅದಿಲ್ಲದಿದ್ದರೆ, ತಮ್ಮ ಆಸಕ್ತಿಗೆ ಅನುಗುಣವಾಗಿ ಕಷ್ಟಪಟ್ಟು ಓದಿ ಕೆಲಸ ಮಾಡುವ ಅನಿವಾರ್ಯತೆ ಇತ್ತು.
ಕಾಲ ಬದಲಾಯಿತು ನೋಡಿ, ವಿದ್ಯಾಭ್ಯಾಸದ ಮಟ್ಟ ಹೆಚ್ಚಿತು, ಆರ್ಥಿಕ ಪರಿಸ್ಥಿತಿ ಸುಧಾರಿಸಿತು, ಮಕ್ಕಳ ಸಂಖ್ಯೆ ಕಡಿಮೆಯಾಯಿತು. ಜನರಲ್ಲಿ, ಮಕ್ಕಳು ಹೇಗೋ ಬೆಳೆಯುತ್ತಾರೆ ಎಂಬ ಧೋರಣೆಗೆ ಬದಲಾಗಿ, ಅದು ಮಹತ್ವದ ಜವಾಬ್ದಾರಿ ಎಂಬ ಅರಿವು ಮೂಡಿತು.ಮಕ್ಕಳ ಕಡೆ ಗಮನ ಕೊಡಬೇಕು, ಬೆಳೆಯುವ ಮಕ್ಕಳಿಗೆ ಪ್ರೀತಿ ಅಮೃತದಂತೆ ಅನ್ನೋದೇನೋ ಸರಿ. ಆದರೆ, ಅತಿಯಾದರೆ ಅಮೃತವೂ ವಿಷವೇ! ಮಕ್ಕಳು ಸುಖವಾಗಿರಲಿ ಎಂಬ ಆಸೆಯಿಂದ ಓದಿಗೆ ಅಂದರೆ ಅಂಕ ಗಳಿಕೆಗೆ ಎಲ್ಲಿಲ್ಲದ ಒತ್ತಡ ಹೇರಿದರೂ ಜೀವನ ನಡೆಸಲು ಬೇಕಾಗುವ ಕೌಶಲಗಳ ಕಡೆಗಣನೆ. ಪರಿಣಾಮ, ಪುಸ್ತಕ ಓದಿ ನೂರಕ್ಕೆ ನೂರು ಗಳಿಸಿದರೂ ಹೊರಗಿನ ಜ್ಞಾನ ಶೂನ್ಯ.
“ಮುಂದೆ ಮಾಡುವುದಂತೂ ಇದ್ದದ್ದೇ ! ಪಾಪ, ಈಗಲಾದರೂ ಸುಖವಾಗಿರಲಿ’ ಎನ್ನುವ ಪೋಷಕರ ಧೋರಣೆಯ ನಡುವೆಯೇ ಕಾಲ ಓಡಿ ಮಕ್ಕಳು ಪ್ರಾಯಪ್ರಬುದ್ಧರಾದರೂ ಪರಾವಲಂಬಿಗಳೇ! ಎಲ್ಲಿಯವರೆಗೆಂದರೆ ಬಟ್ಟೆ-ಬರೆ, ಊಟ-ತಿಂಡಿ, ಓದಬೇಕಾದ ಕೋರ್ಸ್, ತಗಲುವ ವೆಚ್ಚ, ಸೇರಬೇಕಾದ ಕಂಪನಿ, ಮದುವೆಯಾಗಬೇಕಾದ ಹುಡುಗ/ಹುಡುಗಿ ಹೀಗೆ ಯಾವುದರಲ್ಲಿಯೂ ಯುವಜನತೆಗೆ ತಮ್ಮದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ! ತಮ್ಮ ಬದುಕನ್ನೇ ಸ್ವತಂತ್ರವಾಗಿ ನಡೆಸಲಾರದ ಯುವಜನತೆಯೇ,ದೇಶದ ಭವಿಷ್ಯದ ಪ್ರಜೆಗಳು ಎನ್ನುವುದು ಆತಂಕ ಮೂಡಿಸುತ್ತದೆ.
ಈಗಿನ ಯುವಜನರು ಸರಿಯಿಲ್ಲ ಎಂದು ಎಲ್ಲದಕ್ಕೂ ಅವರನ್ನು ಹೊಣೆಯಾಗಿಸುವ ಮುನ್ನ ಬಾಲ್ಯದಲ್ಲಿ ಅವರನ್ನು ಬೆಳೆಸಿದ ಕ್ರಮವನ್ನೂ ನೆನಪಿಸಿಕೊಳ್ಳಬೇಕು. ಏಕೆಂದರೆ, ಮೊದಲಿನಿಂದಲೂ ಸ್ವಾವಲಂಬನೆ ಅಭ್ಯಾಸವಾಗದಿದ್ದರೆ ನಂತರ ಅದು ಇದ್ದಕ್ಕಿದ್ದಂತೆ ಹೊರೆ ಎನಿಸುತ್ತದೆ. ದೇಹ-ಮನಸ್ಸು ಎರಡೂ ವಿರೋಧಿಸುತ್ತದೆ. ಜೀವನ ಕೌಶಲಗಳನ್ನು ಚಿಕ್ಕಂದಿನಿಂದ ಕಲಿಯದ ಯುವಜನರಿಗೆ ಏಕಾಏಕಿ ಹೊರಗಿನ ವಾತಾವರಣ-ಒತ್ತಡವನ್ನು ಎದುರಿಸುವುದು ಕಠಿಣವೆನಿಸುತ್ತದೆ. ಸದಾ ತನ್ನ ತಾಳಕ್ಕೆ ಕುಣಿವ ತಂದೆ ತಾಯಿಯರನ್ನು ನೋಡುತ್ತಾ, ಅವರ ಮೇಲೆ ಅಧಿಕಾರ ಚಲಾಯಿಸುತ್ತಾ ಬೆಳೆದವರಿಗೆ ಸಹಬಾಳ್ವೆ-ಹೊಂದಾಣಿಕೆ ಅಪರಿಚಿತ, ಅಸಹನೀಯ ಶಬ್ದಗಳಾಗುತ್ತವೆ. ಇದರ ಪರಿಣಾಮ ವೃತ್ತಿ ಮತ್ತು ಸಾಂಸಾರಿಕ ಬದುಕಿನಲ್ಲಿಯೂ ಕಾಣಲಾರಂಭಿಸುತ್ತದೆ. ವಿವಾಹ ವಿಚ್ಛೇದನ, ಆತ್ಮಹತ್ಯೆಯ ಪ್ರಯತ್ನ, ಆರ್ಥಿಕ ಮುಗ್ಗಟ್ಟು, ದುಶ್ಚಟ, ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿರುವುದಕ್ಕೆ ಇದೂ ಕಾರಣ!
ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ದಿನೇ ದಿನೇ ಬದಲಾಗುವ ಆರ್ಥಿಕ ಸ್ಥಿತಿ. ಉದ್ಯೋಗಾವಕಾಶ, ಜಾಗತೀಕರಣದ ಸವಾಲುಗಳು ಪೋಷಕರಿಗೆ ಆತಂಕ ಹುಟ್ಟಿಸುತ್ತವೆ. ಇಂಥ ಸಂಕೀರ್ಣ ಸಮಯದಲ್ಲಿ ತಮ್ಮ ಮಕ್ಕಳು ನಿರಾಶೆ -ನೋವಿಗೆ ಒಳಗಾದರೆ ಎಂಬ ಆತಂಕವೂ ಕಾಡುತ್ತದೆ.ಅದರಿಂದ ಮಕ್ಕಳನ್ನು ಕಾಪಾಡುವ ಮಾರ್ಗವಿದು.
ನಮ್ಮ ಕೌಟುಂಬಿಕ ವ್ಯವಸ್ಥೆ¿ಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವವಿದೆ. ಇದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕ. ಆದರೆ ಸಂಬಂಧ, ಬಿಗಿವ ಬಂಧವಾಗಬಾರದು. ಮಕ್ಕಳಿಗೆ ಶಾಲೆಗೆ ಹೋಗಿ ಓದಿ-ಬರೆಯುವ ಶಿಕ್ಷಣದ ಜತೆ ಜೀವನ ನಡೆಸುವ ಶಿಕ್ಷಣವೂ ಸಿಗಬೇಕು. ಶಿಶುವಾಗಿದ್ದಾಗ ಅವಲಂಬನೆ ಸರಿ, ಆದರೆ ವಯಸ್ಸಿಗೆ ತಕ್ಕಂತೆ ತಂತಮ್ಮ ಕೆಲಸ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸಬೇಕು. ಹದಿಹರೆಯದಲ್ಲಿ ಸ್ವೇಚ್ಛೆಗೆ ಎಡೆ ಮಾಡಿಕೊಡದಂತೆ ಮೇಲ್ವಿಚಾರಣೆ ನಡೆಸುವುದು ಪೋಷಕರ ಕರ್ತವ್ಯ. ಅದೇ ಸಮಯಕ್ಕೆ, ಸ್ವಾತಂತ್ರ್ಯದ ಸರಿಯಾದ ಬಳಕೆ, ಜವಾಬ್ದಾರಿ ನಿರ್ವಹಣೆಯನ್ನು ಕಲಿಸುವುದೂ ಅವಶ್ಯಕ.
ಸ್ವಾಭಿಮಾನಿ, ಸುಶಿಕ್ಷಿತ, ಸ್ವತಂತ್ರ ವ್ಯಕ್ತಿತ್ವದ ಯುವಜನರು ನಮ್ಮ ಸಮಾಜದ ಆಸ್ತಿ ಮತ್ತು ಭವಿಷ್ಯ. ಹಾಗಾಗುವಂತೆ ಮಾಡಲು ಎಲ್ಲರ ಪ್ರಯತ್ನ ಅಗತ್ಯ!
ಪರಿಣಾಮ ಏನು?
1) ಜೀವನ ಕೌಶಲಗಳ ಕೊರತೆ: ಕಾಲೇಜಿಗೆ ಬಂದರೂ ಕೈ ಹಿಡಿದು ರಸ್ತೆ ದಾಟಿಸುವುದು, ಬ್ಯಾಂಕಿಗೆ ಹೋಗುವುದು, ಟಿಕೆಟ್ ಬುಕ್ ಮಾಡುವುದು ಇಂಥ ದಿನನಿತ್ಯದ ಎಲ್ಲಾ ಕೆಲಸಗಳನ್ನೂ ತಾವೇ ಮಾಡಿ ಪೋಷಕರು ಮುಗಿಸುವುದರಿಂದ ಮಕ್ಕಳಿಗೆ ಸ್ವಾವಲಂಬನೆಯ ಅರಿವೇ ಇರುವುದಿಲ್ಲ. ಹೊರಗಿನ ಪ್ರಪಂಚದ ಜ್ಞಾನವೂ ಅಷ್ಟಕ್ಕಷ್ಟೇ. ಇವೆಲ್ಲದರ ಪರಿಣಾಮವಾಗಿ, ಜೀವನ ಸ್ವತಂತ್ರರಾಗಿ ಜೀವನ ನಡೆಸುವುದೇ ಕಷ್ಟ.
2) ಅಹಂಕಾರ- ನನಗೇನು, ಕೇಳಿದ್ದೆಲ್ಲವೂ ಸಿಗುತ್ತದೆ.ಬೇಕಾದ್ದನ್ನು ಮಾಡಿಕೊಡುತ್ತಾರೆ ಎನ್ನುವ ಅಹಂಕಾರ ಮೂಡುತ್ತದೆ.ಜತೆಗೇ ತನಗೆ ಬೇಕಾದ್ದನ್ನು ಪಡೆಯುವ ಭರದಲ್ಲಿ ಪೋಷಕರ ಕಷ್ಟ,ತ್ಯಾಗಗಳನ್ನು ಗಮನಿಸದಷ್ಟು ಸ್ವಾರ್ಥಿಗಳಾಗುವ ಸಾಧ್ಯತೆಯೂ ಇದೆ.
3) ಕುಗ್ಗುವ ಆತ್ಮವಿಶ್ವಾಸ- ಯುವಜನರ ಪ್ರತೀ ಕೆಲಸ-ನಿರ್ಧಾರವನ್ನು ಪೋಷಕರೇ ಮಾಡಿದಾಗ ಅವರಲ್ಲಿ ಹೊಸತನ್ನು ತಾವಾಗಿ ಕೈಗೊಳ್ಳುವ ಧೈರ್ಯ, ಪರಿಣಾಮ ಎದುರಿಸುವ ದಿಟ್ಟತನ ಇರುವುದಿಲ್ಲ. ಮನೆಯಲ್ಲೇನೋ ಸರಿ, ಹೊರಗಿನ ಜಗತ್ತಿನಲ್ಲಿ ಇದು ಆತ್ಮವಿಶ್ವಾಸ ಕುಗ್ಗಿಸಿ, ಕೀಳರಿಮೆ ಮೂಡಿಸಬಲ್ಲದು.
4) ಹೊಂದಾಣಿಕೆ ಸಮಸ್ಯೆ- ಜೀವನ ಎಂದ ಮೇಲೆ ಸೋಲು -ಗೆಲುವು, ಸುಖ-ದುಃಖ ಇದ್ದದ್ದೇ. ಇದ್ಯಾವುದನ್ನೂ ಅರಿಯದೇ ಬೆಳೆದ ಮಕ್ಕಳು ಮುಂದೆ ಜೀವನದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿಗೂ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ. ತಮ್ಮ ಇಷ್ಟಕ್ಕೆ ಅನುಗುಣವಾಗಿ ಸರಿ-ತಪ್ಪು ಲೆಕ್ಕಿಸದೇ ಎಲ್ಲವನ್ನೂ ಪೋಷಕರೇ ಮಾಡುವುದರಿಂದ ಇತರರೂ ಹಾಗೇ ಮಾಡಬೇಕೆಂದು ಬಯಸುತ್ತಾರೆ. ಇಂಥವರೊಂದಿಗೆ ಹೊಂದಾಣಿಕೆ ಕಠಿಣ.
5) ಖನ್ನತೆ- ಅಧ್ಯಯನಗಳ ಪ್ರಕಾರ, ಪರಾವಲಂಬಿಗಳಾಗಿ ಬೆಳೆದವರಲ್ಲಿ ಸದಾ ಏನಾಗುತ್ತೋ-ಹೇಗಾಗುತ್ತೋ ಎಂಬ ಆತಂಕ ಸದಾ ಕಾಡುತ್ತದೆ. ಹಾಗೆಯೇ ತಮ್ಮಿಷ್ಟದಂತೆ ನಡೆಯದಿದ್ದಾಗ ಸಣ್ಣ ವಿಷಯಕ್ಕೂ ಖನ್ನತೆಗೊಳಗಾಗುವ ಸಂಭವವಿದೆ.
ಪೋಷಕರು ಸೇವಕರಲ್ಲ
ಯುವಜನರು ಗಮನಿಸಬೇಕಾದ ಬಹು ಮುಖ್ಯ ಅಂಶವೆಂದರೆ ಸ್ವಾವಲಂಬನೆಯಲ್ಲಿ ಸುಖವಿದೆ. ಏಳುವುದು-ಬೀಳುವುದು ಜೀವನದಲ್ಲಿ ನಿರೀಕ್ಷಿತ. ಎದ್ದಾಗ ಖುಷಿ ಪಟ್ಟು, ಬಿದ್ದಾಗ ಸಂತೈಸಲು ಪೋಷಕರಿರಬೇಕು ಹೊರತು ಸದಾ ಹೊತ್ತುಕೊಂಡು ತಿರುಗುವುದಕ್ಕಲ್ಲ. ಪೋಷಕರೆಂದರೆ ಪಾಲಕರು, ಸೇವಕರಲ್ಲ! ತಮ್ಮ ಶಕ್ತಿ, ಆಸಕ್ತಿ, ದೌರ್ಬಲ್ಯ, ಒತ್ತಡ, ಸ್ನೇಹಿತರು, ಭಾವನೆ ಹೀಗೆ ಎಲ್ಲದರ ಬಗ್ಗೆಯೂ ಮಾಹಿತಿ ಪೋಷಕರಿಗೆ ಇರಲಿ. ಆದರೆ ತಾವಾಗಿ ಸವಾಲು ಎದುರಿಸುವ, ನಿರ್ಣಯ ಕೈಗೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂಬುದನ್ನೂ ಅರಿಯಬೇಕು. ಗೆಲುವುಗಳಿಂದ ಸಂತೋಷ ಸಿಕ್ಕರೆ, ಸೋಲುಗಳಿಂದ ಪಾಠ! ಪೋಷಕರು ತಮ್ಮ ನೆರವಿಗೆ ಇದ್ದಾರೆಂಬ ವಿಶ್ವಾಸ ಇರಲಿ; ಎಲ್ಲವನ್ನೂ ಮಾಡಿಕೊಡುತ್ತಾರೆ ಎಂಬ ಅಹಂಕಾರವಲ್ಲ. ತಾನು ಅದನ್ನೆಲ್ಲಾ ಮಾಡುವುದಿಲ್ಲ ಎಂಬ ನಿರ್ಲಕ್ಷವೂ ಸಲ್ಲ.
ಡಾ.ಕೆ.ಎಸ್.ಚೈತ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.