ನಾಲ್ಕು ಬಿಂದಿಗಳ ನೆವದಲ್ಲಿ…
Team Udayavani, Aug 7, 2018, 6:00 AM IST
ಎದೆಯೊಳಗೇ ಉಳಿದ ನೆನಪೆ,
ಬಹುಶಃ, ಮರೆತಂತೆ ಮುಚ್ಚಿಹೋಗಿದ್ದ ಭಾವವೊಂದು ನಿನ್ನೆ ತಾನೇ ಗೇಟ್ ಮುರಿದು ಹರಿದಾಡಿತು. ಹೌದು. ನಾನು ಹೇಳ್ತಿರೋದು ನನ್ನ ಬಾಳಿನ ಕಥೆಯನ್ನ. ನೀನು, ಒಂದಿಷ್ಟು ಪ್ರಾಮಾಣಿಕವಾಗಿ ನಿನ್ನ ಹಾದಿಯ ಕಡೆ ಹೊರಳಿ ನೋಡು. ಎಂದಿಗೂ ಮಾಸದ ನನ್ನ ಹೆಜ್ಜೆ ಗುರುತುಗಳಿವೆ ಅಲ್ಲಿ. ದೂರವಾಗುವಾಗಲೂ ಮುತ್ತಿಟ್ಟು, ಹೆಜ್ಜೆ ಹಿಂದೆ ಸರಿಸಿದವನನ್ನು ನೀನಾದರೂ ಹೇಗೆ ಮರೆಯಲು ಸಾಧ್ಯ?
ಮೈಮೇಲೆ ಸಂಜೆಯ ಸುಕ್ಕುಗಳಿವೆ. ಸುಕ್ಕಿನ ಗುಳಿಗಳಲ್ಲಿ ಭರ್ತಿ ನೆನಪುಗಳಿವೆ. ನೋಡು, ನಿನಗೆ ಕೊಟ್ಟ ಮಾತಿನಂತೆಯೇ ನಾನು ಬದುಕಿ ಬಿಟ್ಟೆ! ಈಗ, ನನ್ನ ಪಾಲಿಗೆ ಕಾಲವೂ ಮಾಗಿದೆ. ಆದರೆ ನನ್ನ ಪ್ರೀತಿಯಲ್ಲ; ಅದ್ಯಾವಾಗಲೂ ಹದಿನೆಂಟರ ಬಿಸುಪಿನದು. ಬಹುಶಃ ಈ ಬದುಕಿನಲ್ಲಿ ಇದೇ ಕೊನೆಯ ಪತ್ರವಾಗಬಹುದು! ಅನಾಮತ್ತು ನಲವತ್ತು ವರ್ಷ ನಿನ್ನ ಮರೆಯದೆ, ಮರೆತಂತೆ ಬದುಕಿದೆ. ಸಾಲುಗಳನ್ನು ಎಗರಿಸದೇ ಓದ್ತಾ ಇದೀಯ ತಾನೆ?
ನಿನ್ನೆ ಮನೆ ಬದಲಿಸಬೇಕಾಗಿ ಬಂತು. ಆಗ ನನ್ನ ಹಳೆಯ ಟ್ರಂಕ್ ಅನ್ನು ತಡಕಾಡುತ್ತಿದ್ದಾಗ ಅಲ್ಲಿ ಸಿಕ್ಕಿದ್ದು, ಕಾಗದದ ಮಡಿಕೆಗಳಲ್ಲಿ ಇನ್ನೂ ಉಳಿದು ಹೋಗಿರುವ ಪ್ರೀತಿ ಮತ್ತು ನಾಲ್ಕು ಬಿಂದಿಗಳು. ನಂಗೊತ್ತು, ನನ್ನೆಡೆಗೆ ನಿನಗೂ ಪ್ರೀತಿಯಿದೆ. ಅದು ಹೇಗಿದೆ ಗೊತ್ತಾ? ಈ ಹಾಳೆಯ ಮಡಿಕೆಗಳಲ್ಲಿ ಬಚ್ಚಿಟ್ಟುಕೊಂಡ ಅಕ್ಷರಗಳಂತೆ!
ಈ ಬಿಂದಿಗಳು ಯಾವುವು? ನೆನಪಿದೆಯಾ? ಪರಸ್ಪರರನ್ನು ನೋಡಲು ಕೂಡ ನೂರು ಕಷ್ಟಪಡಬೇಕಾಗಿದ್ದ ಕಾಲದಲ್ಲಿ ಅವತ್ತು ನೀನು ಜಾತ್ರೆಯಲ್ಲಿ ಸಿಕ್ಕಿದ್ದೆ. ನನ್ನನ್ನು ಕಾಣುವ ಅವಸರದಲ್ಲಿ ಹಣೆಗೊಂದು ಚುಕ್ಕಿಯನ್ನು ಇಟ್ಟುಕೊಳ್ಳಲು ಕೂಡ ಮರೆತು ಬಂದಿ¨ªೆ. ಬೋಳುಹಣೆ ನಿನಗೆ ಶೋಭಿಸುವುದಿಲ್ಲ ಅನ್ನುತ್ತಲೇ, ಅಂಗಡಿಯಲ್ಲಿ ಕೊಂಡ ಕೆಂಪು ಬಿಂದಿಗಳನ್ನು ನಿನ್ನ ಮುಂದೆ ಹಿಡಿದಾಗ ಒಂದನ್ನೆತ್ತಿಕೊಂಡು ಹಣೆಗಿಟ್ಟು ಉಳಿದವನ್ನು ನನ್ನ ಜೇಬಿನಲ್ಲಿಟ್ಟೆ. ಅವು ನನ್ನ ಬಳಿಯೇ ಉಳಿದು ಹೋದವು: ನಿನ್ನ ನೆನಪಿನಂತೆ!
ಈಗ ನಿನ್ನ ಹಣೆಯ ಮೇಲೊಂದು ನಾಲ್ಕಾಣೆ ಗಾತ್ರದ ಕುಂಕುಮ ಇರಬಹುದು. ಪ್ರತಿದಿನ ನೀನು ಅದನ್ನು ಇಟ್ಟುಕೊಳ್ಳುವಾಗ ನನ್ನ ನೆನಪು ಇಣುಕುತ್ತಾ? ಉಳಿದು ಹೋದ ಬಿಂದಿಗಳ ನೆನಪು ಕಾಡುತ್ತಾ? ಬದುಕಿನ ಜಾತ್ರೆಯನ್ನೇ ಬಹುಪಾಲು ಮುಗಿಸಿದವಳಿಗೆ ಹಳೆಯ ಜಾತ್ರೆಯ ಉಳಿದ ಬಿಂದಿಯೇಕೆ ಎಂಬ ಪ್ರಶ್ನೆಯಾ? ಅವುಗಳಿಗೆ ನೀನೇ ಉತ್ತರಿಸಬೇಕು.
ಈ ಪತ್ರವನ್ನು ನಿನಗೆ ಕಳುಹಿಸಬೇಕು ಎಂಬುದು ನನ್ನಾಸೆ. ಆದರೆ, ವಿಳಾಸವಾದರೂ ಎಲ್ಲಿದೆ? ನೀನು ಇರುವುದಾದರೂ ಎಲ್ಲಿ? ಅದೆಲ್ಲಿ ನೆಲೆ ನಿಂತಿದ್ದೀಯ? ಉಹುಂ, ಈ ಯಾವ ಪ್ರಶ್ನೆಗೂ ಉತ್ತರ ಗೊತ್ತಿಲ್ಲ. ಆದರೂ, ತೀರಾ ಆಕಸ್ಮಿಕವಾಗಿ ಈ ಪತ್ರ ನಿನ್ನ ಕೈ ಸೇರಿಬಿಟ್ಟರೆ ಎದೆಯೊಳಗೆ ಮಲಗಿರುವ ನಿನ್ನ ನೆನಪುಗಳನ್ನು ಕೆದಕಿಕೊ! ಈ ಬದುಕಿಗೆ ಅದೊಂದು ಪ್ರಯತ್ನವನ್ನಾದರೂ ಮಾಡು. ಇದನ್ನಲ್ಲದೆ ನಿನ್ನ ಬಳಿ ಹೇಳಿಕೊಳ್ಳುವಂಥ ಮಾತು ಯಾವುದೂ ಇಲ್ಲ…
ದೇಹದಿಂದ ಉಸಿರು ಕಳಚಿ ಹಾರುವಾಗ ಕೇಳಿಸಬಹುದಾದ ಕೊನೆಯ ಮಾತು- ಅದು ನಿನ್ನ ಹೆಸರು! ಸಾಕು ಕಣೇ, ಈ ಜನ್ಮಕ್ಕಿಷ್ಟು. ಥ್ಯಾಂಕ್ಸ್
ಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.