ಪಾಠ ಕೇಳ್ಳೋದು ಕಷ್ಟವೇ?
Team Udayavani, Nov 13, 2018, 6:00 AM IST
“ನನ್ನ ಮಗನಿಗೆ ಕಾಲೇಜಿಗೆ ಹೋಗುವ ವಯಸ್ಸು. ಆದರೆ, ನಾನೇ ಕಾಲೇಜಿಗೆ ಹೋಗಿ ಪಾಠ ಕೇಳಬೇಕಾಗಿ ಬಂತು…’- ಈ ಲೆಕ್ಚರರ್ ಕತೆ ಹೀಗೆ ತೆರೆದುಕೊಳ್ಳುತ್ತೆ. ಈಗ ಇವರಿಗೆ ಕಾಲೇಜು ಬಿಡಲು ಮನಸ್ಸಾಗ್ತಿಲ್ವಂತೆ…
ಒಂದು ಬ್ರೇಕ್ ತಗೊಳ್ಳೋದು ಅಂತಾರೆ ನೋಡಿ, ಹಾಗೇ ಆಗೋಯ್ತು ನನ್ನ ಕತೆ. ಬಿ.ಕಾಂ. ಪದವಿ ಮುಗಿದ ಕೆಲ ತಿಂಗಳಲ್ಲೇ ನಂಗೆ ಮದುವೆ. ವಿದ್ಯಾಭ್ಯಾಸ ಅರ್ಧಕ್ಕೇ ಮೊಟಕಾಯಿತು. ಎಂ.ಕಾಂ. ಮಾಡುವ ಕನಸೂ ಕಮರಿತು ಅಂತಂದುಕೊಂಡಿದ್ದೆ. ಆದರೆ, ಸದ್ಯ ಹಾಗಾಗಲಿಲ್ಲ. ಕೆಲ ವರ್ಷಗಳ ನಂತರ ದೂರ ಶಿಕ್ಷಣದ ಮೂಲಕ ಎಂ.ಕಾಂ. ಆಸೆ ಹೇಗೋ ಈಡೇರಿತು. ಎರಡು ವರ್ಷಗಳ ಬಳಿಕ ಮಾಸ್ಟರ್ ಡಿಗ್ರಿ ಸರ್ಟಿಫಿಕೇಟ್ ಕೈ ತಲುಪಿ ಆಗಿತ್ತು. ಆಗ ನನ್ನ ಸಂತೋಷ ಕೇಳಬೇಕೇ?
ತಕ್ಷಣ ಲೆಕ್ಚರರ್ ಆದೆ. ಆದರೆ, ಕೆಲವು ಸಲ ನಾವು ಆಸೆಪಟ್ಟ ವೃತ್ತಿಗಳೂ, ನಮ್ಮಿಂದ ಏನಾದರೂ ಕೆಲಸ ಮಾಡಿಸಿಕೊಳ್ಳುತ್ತವೆ. ಅದರಂತೆ ನಾನು ಅನಿವಾರ್ಯವಾಗಿ ಬಿ.ಎಡ್. ಮಾಡಬೇಕಾಗಿ ಬಂತು. ಪುನಃ ಕಾಲೇಜು ಮೆಟ್ಟಿಲು ಹತ್ತುವ ಸಂದರ್ಭ ಒದಗಿಬಂತು. ಸಂತೋಷದ ವಿಷಯವೆಂದರೆ, ನನ್ನಂತೆಯೇ ಉಪನ್ಯಾಸಕ ವೃತ್ತಿಯಲ್ಲಿರುವ ಇನ್ನೂ ಮೂರು ಜನ ಆ ಕಾಲೇಜು ಸೇರಿದ್ದರು!
ಹಲವು ವರ್ಷಗಳ ಬಳಿಕ ಮತ್ತೆ ಕಾಲೇಜು ವಿದ್ಯಾರ್ಥಿನಿ ಆಗೋದೂ ಒಂದು ಖುಷಿ. ಅದು ಬೇರೆ, ಅತೀ ಶಿಸ್ತಿನ ಕಾಲೇಜು. ಪಿಯುಸಿ ಕಲಿಯಲು ಕಾಲೇಜಿಗೆ ಸೇರುವಾಗ ಇರದ ಭಯ, ಮೊದಲ ದಿನ ನನ್ನಲ್ಲಿ ಮನೆ ಮಾಡಿತ್ತು. ಇದ್ದಿದ್ದು ಒಂದೇ ಚಿಂತೆ; ಹೇಗೆ ಒಂಬತ್ತು ಗಂಟೆಯಿಂದ ನಾಲ್ಕು ಗಂಟೆಯವರೆಗೆ ತರಗತಿಯಲ್ಲಿ ಪಾಠ ಕೇಳಲಿ? ಎಂಬುದು. ಗಂಟೆಗಟ್ಟಲೆ ಪಾಠ ಮಾಡಿ ಅನುಭವವಿತ್ತೇ ವಿನಾ ಪಾಠ ಕೇಳುತ್ತಾ ಕುಳಿತಿದ್ದ ದಿನಗಳು ಮರೆತೇ ಹೋಗಿದ್ದವು! ಈಗ ಆ ದಿನಗಳು ಒಂದೊಂದಾಗಿ ಕಣ್ಮುಂದೆ ಬಂದವು. ಮೊದಲ ದಿನವೇ ಪ್ರಾಂಶುಪಾಲರ ನೇರ-ಬಿರುಸಾದ ಮಾತು- You are a student here, not a lecturer. You have come here to learn. You should be a learner; a continuous learner. Even I am learner…ಹೀಗೆ ಪಾಂಶುಪಾಲರು ಉತ್ತಮವಾದ ಸ್ವಾಗತವನ್ನು ನಮಗೆ ನೀಡಿದರು!
ನಾವು ನಾಲ್ಕು ಜನ ತರಗತಿಗೆ ಕಾಲಿಟ್ಟಿದ್ದೇ ತಡ, ಎಲ್ಲರೂ ನಮ್ಮತ್ತ ಎವೆಯಿಕ್ಕದೆ ದೃಷ್ಟಿ ನೆಟ್ಟರು. ಅಲ್ಲಿದ್ದಿದ್ದು ಬಹುತೇಕ, ಆಗತಾನೆ ಪದವಿ ಮುಗಿಸಿ ಬಂದ ಹುಡುಗಿಯರು. ಇಡೀ ದಿನ ಮಾತು, ನಗು, ಗದ್ದಲ. ಹಿತಮಿತವಾಗಿ ಮಾತನಾಡುತ್ತಿದ್ದ ನನಗೆ “ಸಂತೆಯೊಳಗೊಂದು ಮನೆಯ ಮಾಡಿ ಸದ್ದುಗದ್ದಲಕೆ ಅಂಜಿದೊಡೆ ಎಂತಯ್ಯ?’ ಎಂಬ ಗಾದೆಮಾತು ನೆನಪಿಗೆ ಬಂತು.
21- 22 ವಯಸ್ಸಿನ ಯುವತಿಯರೊಂದಿಗೆ ಬೆರೆಯುವುದು ತುಂಬಾ ಕಷ್ಟವೆನಿಸಿದರೂ ಕಾಲಕ್ರಮೇಣ ಎಲ್ಲಾ ಹೊಂದಾಣಿಕೆ ಮಾಡಿಕೊಂಡು ಹೆಜ್ಜೆಗಳನ್ನು ಇರಿಸಲಾರಂಭಿಸಿದೆ. ಬರಬರುತ್ತಾ ನಾನೂ ಅವರ ನಗು, ಮಾತಿನಲ್ಲಿ ಭಾಗಿಯಾದೆ. ಎಷ್ಟೋ ಸಲ ನಾನೊಬ್ಬಳು ಉಪನ್ಯಾಸಕಿ ಎಂಬುದನ್ನು ಮರೆತು ಕಳ್ಳ- ಪೊಲೀಸ್ ಆಟ, ಚೆಸ್ ಆಟ ಆಡಿದ್ದಿದೆ. ಕಾಲೇಜಿಗೆ ಹೋಗುವ ಮಗನಿದ್ದರೂ, ನಾನೂ ಸಣ್ಣ ಮಕ್ಕಳಂತೆ ವರ್ತಿಸತೊಡಗಿದ್ದೆ! ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬಂತೆ ನಾನೂ ತರಗತಿಗೆ ಬಿಡುವಿನ ವೇಳೆಯಲ್ಲಿ ತಿನ್ನಲು ಕುರು ಕುರು ತಿಂಡಿ, ಮಾವಿನಕಾಯಿ ಒಯ್ಯಲಾರಂಭಿಸಿದೆ.
ಇದೀಗ ಅಂತೂ ಇಂತೂ ಮೂರು ಸೆಮಿಸ್ಟರ್ ಮುಗಿದು ಕೊನೆಯ ಸೆಮಿಸ್ಟರ್‌ನಲ್ಲಿದ್ದೇನೆ. ಮೊದಲ ದಿನ ಪ್ರಾಂಶುಪಾಲರ ಮಾತು ಕೇಳಿದಾಗ, 400 ದಿನ ಈ ಕಾಲೇಜಿನಲ್ಲಿ ಹೇಗೆ ಕಳೆಯುವುದೆಂದು ಚಿಂತಿಸಿದ್ದೆ. ಇದೀಗ ಇನ್ನು ಒಂದೇ ಸೆಮಿಸ್ಟರ್ ಬಾಕಿ ಎನ್ನುವಾಗ ಸಂತೋಷದ ಜೊತೆ ಯಾಕೋ ಸ್ವಲ್ಪ ಬೇಸರವೂ ಆಗುತ್ತಿದೆ. ಕಾಲೇಜಿನಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ ಅತ್ಯಂತ ಖುಷಿಯಲ್ಲಿ ತೇಲಿದೆ. ಆರಂಭದಲ್ಲಿ ಕಿರಿಕಿರಿ ಉಂಟುಮಾಡಿದ ತರಗತಿಯ ಗದ್ದಲ ಈಗ ಪ್ರಿಯವಾಗಲಾರಂಭಿಸಿದೆ. ನನಗಿಂತ 16 ವರ್ಷ ಕಿರಿಯವಳಾದ ಬೆಂಚ್‌ಮೇಟ್, ಈಗ ಆತ್ಮೀಯ ಸ್ನೇಹಿತೆಯಾಗಿದ್ದಾಳೆ. ಅವಳಿಂದ Feel young at heart ಅಂದರೆ ಏನೆಂಬುದನ್ನು ಕಲಿತೆ. ಹೌದು, ಈಗ ನಾನು 16ರ ಯುವತಿ!
ರಶ್ಮಿ ಭಟ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.