ಹ್ಯಾರಿ ಎಂಬ ಪ್ಯಾರಿ ಹುಡುಗ : ಹ್ಯಾರಿ ಪಾಟರ್‌ಗೆ 20 ವರುಷ
Team Udayavani, Jul 11, 2017, 3:50 AM IST
ಆ ಸೊಗಸುಗಾರ ಕಲಿಸುವ 11 ಪಾಠಗಳು
ಹ್ಯಾರಿಪಾಟರ್ ಪಾತ್ರ ಲೋಕಕ್ಕೆ ಪರಿಚಿತಗೊಂಡು ಇದೀಗ 20 ವರುಷ. ನಮ್ಮದೇ ನೆಲದ ಅತಿಮಾನುಷ ಸೆಳೆತಗಳಾದ ಡಿಂಗ, ಲಂಬೋದರ, ಕಿರೋನಿಯೋಗಿಂತಲೂ ಒಂದು ಹೆಜ್ಜೆ ಮುಂದಿರುವಂತೆ ಕಾಣುವ ಹ್ಯಾರಿ, ಯುವ ಮನಸ್ಸುಗಳನ್ನು ಯಾವ ಪರಿ ಆವರಿಸಿದ್ದಾನೆ? ಸರಣಿ ರೂಪದಲ್ಲಿ ಮತ್ತೆ ಮತ್ತೆ ಜಿಗಿಯುತ್ತಲೇ ಇರುವ ಈ ಮನುಷ್ಯ, ನಮ್ಮ ಬದುಕಿಗೆ ಏನೇನು ಪಾಠಗಳನ್ನು ಹೊತ್ತು ತರುತ್ತಾನೆ? ಅಂಥ 11 ಪಾಠಗಳ ಒಂದು ತಾಜಾ ನೋಟ ಇಲ್ಲಿದೆ…
‘ಬಾಲಮಂಗಳ’ದ ಡಿಂಗ, ಲಂಬೋದರ, ಫಕ್ರು, ‘ತುಂತುರು’ವಿನ ಕಿರೋನಿಯೋ, ಮಂಡೂರಾಯ, ಸೀರಿಯಲ್ಲಿನ ಶಕ್ತಿಮಾನ್, ಟಿಂಬರ್ ಹೂಜನ ಭರಾಟೆ ಜೋರಿದ್ದ ಕಾಲ. ಹಾಸ್ಟೆಲ್‌ನಲ್ಲಿ ನಾವೆಲ್ಲ ಈ ನಮ್ಮ ಹೀರೋಗಳ ಸಾಹಸಗಳನ್ನು ಕಣ್ತುಂಬಿಕೊಳ್ಳಲು ಕಿತ್ತಾಡುತ್ತಿದ್ದೆವು. ಯಾರೋ ಒಬ್ಬ ಕೊಂಡು ತಂದ ಛೋಟೂಗಳ ಮ್ಯಾಗಜಿನ್, ನೆಕ್ಸ್ಟುನೆಕ್ಸ್ಟುಗಳಾಗಿ ನಮ್ಮ ಕೈಗೆ ಬರುವಾಗ ಹರಿದು ಚಿತ್ರಾನ್ನವಾಗಿದ್ದರೂ ಬಿಡದೇ ಮುಗಿಬಿದ್ದು ಓದುತ್ತಿದ್ದೆವು. ಸೀರಿಯಲ್ ಟೈಮಲ್ಲಿ ಓಡಿಬಂದು ಕೂತು, ಸ್ನೇಹಿತನಿಗೂ ಜಾಗ ರಿಸರ್ವ್ ಮಾಡುತ್ತಿದ್ದೆವು. ನನ್ನ ಜಾಗದಲ್ಲಿ ಕುಂತುಬಿಟ್ಟ ಅಂತ ಒಮ್ಮೊಮ್ಮೆ ಒಬ್ಬರ ಮೇಲೊಬ್ಬರು ಹಾರಿ, ರಸ್ಲಿಂಗೂ ಮಾಡುತ್ತಿದ್ದೆವು. ನಮ್ಮ ಹೀರೋಗಳನ್ನು ನಾವು ಅಷ್ಟರಮಟ್ಟಿಗೆ ಆರಾಧಿಸುತ್ತಿದ್ದ ಕಾಲವದು. ಡಿಂಗ, ಲಂಬೋದರ, ಶಕ್ತಿಮಾನ್‌ರ ಗುಂಗಿನಲ್ಲಿ ನಾವಿದ್ದಾಗಲೇ ‘ಹ್ಯಾರಿಪಾಟರ್’ ಎಲ್ಲಿಂದಲೋ ಹಾರಿಬಂದು ನಮ್ಮೆದುರು ಪ್ರತ್ಯಕ್ಷವಾಗಿಬಿಟ್ಟಿದ್ದ!
ಹ್ಯಾರಿಪಾಟರ್‌ನ ಮಂತ್ರದ ಕಡ್ಡಿ, ಅಂವ ಮಾಡುತ್ತಿದ್ದ ಮ್ಯಾಜಿಕ್ಕು, ಕತೆಯಲ್ಲಿನ ಭೂತ, ವಿಚಿತ್ರಗಳು, ಅವುಗಳ ಬೆರಗು ನಮಗೆ ಇಷ್ಟವಾಗಿಬಿಟ್ಟವು. ನಮ್ಮ ಜನರೇಶನ್ನಿಗೆ ಹ್ಯಾರಿಪಾಟರ್ ದೇವರೇ ಆಗಿಬಿಟ್ಟ. ಇಂಗ್ಲಿಷು ಬಾರದ ಆ ಕಾಲದಲ್ಲಿ ಇಂಗ್ಲಿಷನ್ನು ಕಲಿಸಿದ. ನಾನಂತೂ ಹ್ಯಾರಿ ಪಾಟರ್ ಸೀಡಿಗಳನ್ನು ಹಚ್ಚಿ ಕೂತುಬಿಟ್ಟೆ. ಅವನ ಕುರಿತ ಪುಸ್ತಕದ ಮುಂದೆ ಧ್ಯಾನಸ್ಥನಾದೆ. ಇಂಗ್ಲೆಂಡಿನಲ್ಲಿ ಹುಟ್ಟಿದ ಹ್ಯಾರಿ ಪಾಟರ್, ಇಂಡಿಯಾಕ್ಕೆ ಲಗ್ಗೆಯಿಟ್ಟಿದ್ದಷ್ಟೇ ಅಲ್ಲ… ತರುಣ ಮನಸುಗಳಿಗೆ ಗುಂಗು ಹತ್ತಿಸಿಬಿಟ್ಟ. ಹ್ಯಾರಿ ಪಾಟರ್‌ನ ಮಾಯಾಲೋಕದ ಅಚ್ಚರಿಯೊಳಗೆ ನಾನೂ ಬೆಳೆದುಬಿಟ್ಟೆ.
ಈಗ ಕಾಲೇಜು ವಯಸ್ಸಿನ ಪೀಳಿಗೆಗೆ ಸಮಕಾಲೀನ ನಾಗಿರುವ ಹ್ಯಾರಿ, ಜಗತ್ತಿಗೆ ಪರಿಚಿತನಾಗಿ 20 ವರುಷಗಳೇ ಆದವು. ಎಳವೆಯಿಂದಲೇ ನಮ್ಮೊಟ್ಟಿಗೆ ನಡೆದುಬಂದ ಹ್ಯಾರಿಪಾಟರ್, ನೇರವಾಗಿ ನಮ್ಮ ಬದುಕಿನಲ್ಲೇ ಬೆರೆತಿದ್ದಾನೆ. ಆ ಪಾತ್ರದ, ಅದರ ಸುತ್ತಮುತ್ತಲಿನ ವಿಚಾರಗಳು ಬದುಕಿನ ಕೆಲ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿವೆ ಅನ್ನಿಸುತ್ತಿದೆ.
ಹ್ಯಾರಿಪಾಟರ್‌ನ ಕತೆಗೂ ನಮ್ಮ ಬದುಕಿನ ಸಂಗತಿಗಳಿಗೂ ಹೆಚ್ಚೇನೂ ಅಂತರ ಕಾಣದು. ಹಾಗÌರ್ಟ್ಸ್ನ ಮಾಟಮಂತ್ರಗಳನ್ನು ಕಲಿಯುವ ಬೋರ್ಡಿಂಗ್ ಶಾಲೆಗೆ ಸೇರಿಕೊಳ್ಳುವ ಕಥಾ ತಿರುಳಿನ ಹ್ಯಾರಿ ಪಾಟರನ್ನು ಬರೀ ಸಿನಿಮಾವಾಗಿ ನೋಡೋದಕ್ಕಿಂತ ಅದು ಬದುಕಿನ ಬಗೆಗೇನೋ ಪಿಸುಗುಟ್ಟುತ್ತಿದೆ ಅಂತನ್ನಿಸುತ್ತಿದೆ. ಹ್ಯಾರಿಯಿಂದ ನಾವು ಕಲಿಯುವ ಪಾಠಗಳನ್ನು ಇಣುಕಿ ನೋಡುವ ಹೊತ್ತಿದು…
ಭೂತ ನಮ್ಮ ಕೈಯಲ್ಲಿಲ್ಲ, ಆದರೆ, ಭವಿಷ್ಯ ಬದಲಿಸಬಹುದಲ್ಲ!
ಕಳೆದುಹೋಗಿದ್ದು ಯಾವತ್ತಿಗೂ ನಮ್ಮ ಕೈ ಮೀರಿದ್ದೇ. ಆದರೆ, ಮುಂದೆ ನಡೆಯಬಹುದಾದ್ದನ್ನು ಬದಲಿಸಹುದು. ಹ್ಯಾರಿ ತನ್ನ ತಂದೆ- ತಾಯಿಯನ್ನು ಕಳೆದುಕೊಂಡು ಅನಾಥನಾದರೂ ಸಂಬಂಧಿಕರ ಸಹಾಯದಿಂದ ಬೆಳೆಯುತ್ತಾನೆ. ಶಾಲೆಗೆ ಸೇರುತ್ತಾನೆ. ಹಾಗÌರ್ಟ್ಸ್ನ ಬೋರ್ಡಿಂಗ್ ಶಾಲೆಗೆ ಸೇರಿದ ಮೇಲೆ ಆತನ ಬದುಕು ಬದಲಾಗುತ್ತೆ.
ಗೆಲುವಿಗೂ ಮುನ್ನ ಆಗುತ್ತೆ, ಸಣ್ಣ ಭಯ
ಹ್ಯಾರಿಯ ನಾಲ್ಕನೇ ವರ್ಷದ ಶಾಲಾ ಜೀವನ ಕುರಿತು ‘ಹ್ಯಾರಿಪಾಟರ್ ಆ್ಯಂಡ್ ದಿ ಗೋಬ್ಲೆಟ್ ಆಫ್ ಫೈರ್’ ಬೆಳಕು ಚೆಲ್ಲುತ್ತೆ. ಇದರಲ್ಲಿ ಹ್ಯಾರಿ, ಟ್ರೈ ವಿಜಾರ್ಡ್ ಪಂದ್ಯಾಟದಲ್ಲಿ ಪಾಲ್ಗೊಂಡು ಗೆಲ್ಲುತ್ತಾನೆ. ಇದು ಯುವ ವಿದೇಶಿ ಸಂದರ್ಶಿತ ಶಾಲೆಗಳ ಮಾಟಗಾರ್ತಿ ಮತ್ತು ಮಾಂತ್ರಿಕರಿಂದ ಕೂಡಿದ ಒಂದು ಅಪಾಯಕಾರಿ ಸ್ಪರ್ಧೆ. ಹ್ಯಾರಿಗೆ ಈ ವೇಳೆ ಕೊಂಚ ಭಯ ಆಗುತ್ತೆ. ಬದುಕಿನ ಎಲ್ಲ ಗೆಲುವುಗಳ ಮುನ್ನ ಇಂಥದ್ದೊಂದು ಭಯ ಎಲ್ಲರಿಗೂ ಆವರಿಸುತ್ತೆ.
ನಿಮ್ಮೊಳಗಿದೆ ಅಪರೂಪದ ಟ್ಯಾಲೆಂಟ್
‘ಹ್ಯಾರಿಪಾಟರ್ ಆ್ಯಂಡ್ ದಿ ಚೇಂಬರ್ ಆಫ್ ಸೀಕ್ರೆಟ್ಸ್’ ನಲ್ಲಿ, ಹ್ಯಾರಿ ತಾನು ಹಾವಿನ ಭಾಷೆಯನ್ನೂ ಮಾತಾಡಬಲ್ಲೆನೆಂದು ಚಕಿತಗೊಂಡು, ಖುಷಿಯಾಗುತ್ತಾನೆ. ಹಾವಿನ ಭಾಷೆಯನ್ನು ‘ಪಾರ್ಸೆಲ್‌ಟಂಗ್’ ಅಂತಾರೆ. ಇದೊಂದು ಅಪರೂಪದ ಸಾಮರ್ಥ್ಯ. ನಮಗೆ ಗೊತ್ತಿಲ್ಲದಂತೆ, ಯಾವುದೋ ಒಂದು ವಿಶೇಷ ಟ್ಯಾಲೆಂಟ್ ನಮ್ಮೊಳಗಿರುತ್ತೆ.
ಜೊತೆಗಿರಲಿ, ಒಳ್ಳೆಯ ಕುಚಿಕ್ಕು
ಏನೇ ಕೆಲಸ ಮಾಡುವಾಗಲೂ ನಮಗೆ ಕುಚಿಕ್ಕುಗಳ ಕೈಬಲ ಬೇಕು. ಅದಕ್ಕೇ ಒಳ್ಳೆಯ ಗೆಳೆಯರನ್ನು ನಾವು ಸದಾ ಜೊತೆಗಿಟ್ಟುಕೊಂಡಿರಬೇಕು. ಕಥೆಯಲ್ಲಿ ಹ್ಯಾರಿಯ ಸ್ನೇಹಿತರಾದ ರಾನ್ ವೆಸ್ಲೆ ಮತ್ತು ಹರ್ಮಿಯೋನೆ ಗ್ರೇಂಜರ್ ಜೊತೆಗಿನ ಸಂದರ್ಭಗಳು ಈ ಗುಟ್ಟನ್ನು ಹೇಳುತ್ತವೆ. ಹ್ಯಾರಿ ಮತ್ತವನ ಸ್ನೇಹಿತರು, ಶಾಲೆಯಲ್ಲಿ ನಡೆಯುವ ಮೌಡ್ಯಕ್ಕೆ ಸಂಬಂಧಿಸಿದ 50 ವರ್ಷಗಳ ಹಳೆಯ ರಹಸ್ಯವೊಂದನ್ನು ತನಿಖೆಮಾಡಿ ಬೇಧಿಸೋದು ಕೂಡ ಹೀಗೆಯೇ!
ಒನ್ ಮ್ಯಾನ್ ಆರ್ಮಿ ಆಗೋಕ್ಕೂ ಸಿದ್ಧವಿರಿ…
ಕಥೆಯ ಉದ್ದಕ್ಕೂ ಲಾರ್ಡ್ ವೊಲೆxಮೊರ್ಟ್ ಎಂಬ ದುಷ್ಟ ಮಾಂತ್ರಿಕ ಹ್ಯಾರಿಯನ್ನು ಕೊಲ್ಲಲು ಮತ್ತೆ ಮತ್ತೆ ಯತ್ನಿಸುತ್ತಾನೆ. ಆಪತ್ಕಾಲದಲ್ಲಿ ಸ್ನೇಹಿತರು ನಮ್ಮ ನೆರವಿಗಿರುತ್ತಾರಾದರೂ ಕೆಲವೊಂದು ಸಲ ಸಂದರ್ಭಗಳು ನಮ್ಮನ್ನು ಒಂಟಿ ಮಾಡುತ್ತವೆ. ಆಪತ್ತು, ಸವಾಲು ಹೆಗಲೇರುತ್ತೆ. ಆಗ ಒಂಟಿಯಾಗಿಯೇ ಹೋರಾಡ್ಬೇಕು.
ಎದೆಯಲ್ಲಿರಲಿ, ಧೈರ್ಯದ ಗೂಡು
‘ಹ್ಯಾರಿಪಾಟರ್ ಆ್ಯಂಡ್ ದಿ ಹಾಫ್- ಬ್ಲಿಡ್ ಪ್ರಿನ್ಸ್’ನಲ್ಲಿ ಹ್ಯಾರಿ, ಮಾಂತ್ರಿಕ ವೊಲೆxಮೋರ್ಟ್ ಜೊತೆ ಕ್ರೂರ ಯುದ್ಧದಲ್ಲಿ ಸೆಣಸುತ್ತಾನೆ. ಹ್ಯಾರಿ ಇಲ್ಲಿ ಬಚಾವ್ ಆಗುತ್ತಾನಾದರೂ ಸಾಕಷ್ಟು ಹೊಯ್ದಾಡುತ್ತಾನೆ. ಹಾಗಾಗಿ, ಬದುಕಿನ ಸವಾಲುಗಳನ್ನು ಎದುರು ಹಾಕಿಕೊಳ್ಳುವಾಗ ಎಷ್ಟು ಧೈರ್ಯವಿದ್ದರೂ ಸಾಲದು.
ಆಪ್ತರನ್ನು ಯಾವತ್ತೂ ಬಿಟ್ಕೊಡ್ಬೇಡಿ…
ಎಂಥಾ ಕ್ಷಣಗಳೇ ಎದುರಾದರೂ ನಮ್ಮ ಆಪ್ತರನ್ನು ನಾವು ಬಿಟ್ಟುಕೊಡಬಾರದು. ನಮ್ಮ ಹೆಗಲಾಗಿದ್ದವರಿಗೆ ಅನಿವಾರ್ಯ ಸಂದರ್ಭದಲ್ಲಿ ನಾವೂ ಹೆಗಲು ಕೊಡೋಕೆ ಹಿಂಜರಿಯಬಾರದು. ಕಥೆಯಲ್ಲಿ ಹ್ಯಾರಿ ತನಗೆ ಆಶ್ರಯ ನೀಡಿದ, ರಕ್ಷಣೆಯಲ್ಲಿ ಬೆಳೆದ ಮಾಂತ್ರಿಕರಲ್ಲದ ‘ಮಗ್ಗಲ್’ ಜನರಿಗೆ ನೆರವಾಗುತ್ತಿರುತ್ತಾನೆ.
ಸಡನ್ ಆಗಿ ಯಾರನ್ನೂ ನಂಬಬೇಡಿ
ಹಾರ್‌ಕ್ರುಕ್ಸ್ ಅಂದರೆ, ಬೇರೆ ಬೇರೆ ಜಾಗದಲ್ಲಿ ಬಚ್ಚಿಟ್ಟ ಮಾಟ ಮಾಡಿದ ಕೆಟ್ಟ ವಸ್ತುಗಳು. ‘ಹ್ಯಾರಿಪಾಟರ್ ಆ್ಯಂಡ್ ದಿ ಡೆತ್ಲಿ ಹ್ಯಾಲೋಸ್’ನಲ್ಲಿ ಹ್ಯಾರಿಗೆ ಸ್ನಾಪೆ ಎನ್ನುವ ಮಾಟಗಾತಿ ಪರಿಚಯವಾಗಿರುತ್ತಾಳೆ. ಮಾಂತ್ರಿಕ ವೊಲೆxಮೋರ್ಟ್‌ನ ಹಾರ್‌ಕ್ರುಕ್ಸ್‌ಗಳನ್ನು ನಾಶ ಮಾಡಲು ಹ್ಯಾರಿ ಮತ್ತವನ ಸ್ನೇಹಿತರು ಹೊರಟಾಗ ದುಷ್ಟೆ ಸ್ನಾಪೆಯ ನಿಜ ಬಣ್ಣ ಬಯಲಾಗುತ್ತೆ. ಹಾಗಾಗಿ, ಯಾರನ್ನೂ ಒಮ್ಮೆಲೆ ನಂಬಲು ಹೋಗ್ಬೇಡಿ.
ಅನಾಥರ ಮೇಲೆ ಕಾಳಜಿ ಇರಲಿ…
ಹ್ಯಾರಿ ಅನಾಥನಾದಾಗ ಅವನ ಆಶ್ರಯದಾತ ಅಲ್ಬಸ್ ಡಮ್ºಲೆಡೊರೆ, ಹ್ಯಾರಿಯನ್ನು ಮಗ್ಗಲ್‌ರ ರಕ್ಷಣೆಯಲ್ಲಿ ಬಿಡುತ್ತಾನೆ. ಅಸಲಿಗೆ ಮಗ್ಗಲ್‌ರಿಗೆ ಹ್ಯಾರಿಯ ಜನ್ಮ ರಹಸ್ಯದ ಬಗ್ಗೆಯೇನೂ ಗೊತ್ತಿರೋದಿಲ್ಲ. ಆದರೂ ಅವರು ಹ್ಯಾರಿಯನ್ನು ರಕ್ಷಣೆಯಲ್ಲಿಟ್ಟುತ್ತಾರೆ. ಹಾಗಾಗಿ, ಕಣ್ಣಿಗೆ ಕಂಡಿದ್ದರ ಹಿಂದೆಯೂ ನಮ್ಮರಿವಿಗೆ ಬಾರದ ಸಂಗತಿಗಳಿದ್ದೀತು. ಅಲ್ಲವೇ?
ಸೀನಿಯರ್ ನೆರವನ್ನೂ ಪಡೆಯೋಣ
ಅನುಭವಗಳ ಪಾಠಗಳು ಸಿಕ್ಕಿರೋದ್ರಿಂದ ಹಿರಿಯರು ನಮಗಿಂತಲೂ ಜ್ಞಾನವಂತರಾಗಿರುತ್ತಾರೆ. ಅವರ ನೆರವನ್ನು ಸದಾ ಪಡೆದುಕೊಳ್ಳಿ. ಮಾಂತ್ರಿಕ ವೊಲೆxಮೋರ್ಟ್‌ನನ್ನು ಸೋಲಿಸಲು ಹ್ಯಾರಿ ಕೆಲ ಹಿರಿಯರ ಸಹಾಯವನ್ನೂ ಪಡೆಯುತ್ತಾನೆ. ಅಲ್ಲಿಗೆ ಅವನಿಗೆ ಯಶಸ್ಸೂ ಸಿಗುತ್ತೆ.
ದ್ವೇಷಕ್ಕಿಂತಲೂ ಪ್ರೀತಿ ದೊಡ್ಡದು
ಸಿಟ್ಟು ಕಟ್ಟಿಕೊಂಡು ನಾವು ಗೆಲ್ಲಲಾಗದ್ದನ್ನು ಪ್ರೀತಿಯ ಮೂಲಕ ಗೆಲ್ಲಬಹುದು. ಪ್ರೀತಿಗೆ ಆ ಶಕ್ತಿಯಿದೆ. ದ್ವೇಷ ನಮ್ಮನ್ನು ಇನ್ನಷ್ಟು ಮುದುಡಿಸುತ್ತೆ, ಮುಜುಗರಕ್ಕೆ ತಳ್ಳುತ್ತದೆ. ಆದರೆ, ಪ್ರೀತಿ ನಮ್ಮನ್ನು ರಿಲ್ಯಾಕ್ಸ್‌ಗೆ, ಲೈವ್ಲಿ ಮೋಡ್‌ಗೆ ತರುತ್ತೆ. ಕಥಾ ಸರಣಿಯ ಕೊನೆಯಲ್ಲಿ ಹ್ಯಾರಿ, ಮಾಂತ್ರಿಕ ಲಾರ್ಡ್ ವೊಲೆxಮೊರ್ಟ್‌ಗೆ ತಪ್ಪೊಪ್ಪಿಗೆಗೆ ಅವಕಾಶ ಕೊಡುತ್ತಾನೆ.
– ಸದಾಶಿವ ಸಕಲೇಶಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.