ಕಳ್ಳ ಜ್ವರದ ಕಹಾನಿ
Team Udayavani, Apr 24, 2018, 2:32 PM IST
ಮೇಷ್ಟ್ರ ಕೆಂಗಣ್ಣಿನಿಂದ ಪಾರಾದರೆ ಸಾಕೆಂದು ಆ ಕ್ಷಣಕ್ಕೆ ಹೊಳೆದ ಸುಳ್ಳು ಹೇಳಿ ತಪ್ಪಿಸಿಕೊಂಡೆ. ಮರುದಿನ ಅವರು ನನ್ನನ್ನು ನೋಡಿ ಮಾತಿಗೆ ಶುರುವಿಟ್ಟ ತಕ್ಷಣ ಕಾಲುಗಳಲ್ಲಿ ನಡುಕ ಶುರುವಾಯಿತು…
1964ನೇ ಇಸವಿ. ಆಗ ನಾನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಬೆಂಗಳೂರಿನ ಚಾಮರಾಜಪೇಟೆಯ ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ನಮಗೆ ಗಣಿತ ಪಾಠ ಮಾಡುತ್ತಿದ್ದ ಉಪಾಧ್ಯಾಯರು ಕೆ. ದೊರೆಸ್ವಾಮಿ! ನಾನು ಬೇರೆ ಎಲ್ಲಾ ವಿಷಯಗಳಲ್ಲೂ ಹೆಚ್ಚಿನ ಅಂಕಗಳನ್ನು ಗಳಿಸುತ್ತಿದ್ದರೂ ಲೆಕ್ಕದಲ್ಲಿ ಮಾತ್ರ 40ಕ್ಕಿಂತ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳಲಾಗುತ್ತಿರಲಿಲ್ಲ.
ನನಗೋ ಲೆಕ್ಕವೆಂದರೆ ಕಬ್ಬಿಣದ ಕಡಲೆ. ಹಾಗೆ ನೋಡಿದರೆ, ದೊರೆಸ್ವಾಮಿಯವರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆಳವಾಗಿ ನಾಟುವಂತೆ ಲೆಕ್ಕ ಹೇಳಿಕೊಡುತ್ತಿದ್ದರು. ಅವರ ತರಗತಿಯೆಂದರೆ ಯಾವ ವಿದ್ಯಾರ್ಥಿಯೇ ಆಗಲಿ ಗೈರಾಗುತ್ತಿರಲಿಲ್ಲ. ಜೊತೆಗೆ ಅವರು ಪಾಠ ಮಾಡುತ್ತಿದ್ದ ಸಮಯದಲ್ಲಿ ತರಗತಿ ಪಿನ್‌ಡ್ರಾಪ್ ಸೈಲೆನ್ಸ್‌ನಿಂದ ಕೂಡಿರುತ್ತಿತ್ತು.
ಒಂದು ದಿನ, ಶಾಲೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೊರಟ ನಾನು ಶಾಲೆಗೆ ಹೋಗದೆ ಸಿನಿಮಾ ನೋಡಿಕೊಂಡು ಸಂಜೆ ಮನೆಗೆ ಹಿಂತಿರುಗುತ್ತಿದ್ದೆ. ಮಾರನೇ ದಿನ ಬೆಳಗ್ಗೆ ಶಾಲೆಗೆ ಹೋದಾಗ ಎದುರಿಗೆ ಸಿಕ್ಕ ದೊರೆಸ್ವಾಮಿಗಳು- “ನಿನ್ನೆ ಯಾಕೆ ಬರಲಿಲ್ಲ ಶಾಲೆಗೆ?’ ಎಂದು ಕೇಳಿದರು.
ಅವರ ಏಕ್‌ದಂ ಪ್ರಶ್ನೆಯಿಂದ ತಡಬಡಿಸಿದ ನಾನು “ಏನಿಲ್ಲ ಸಾರ್! ವಿಪರೀತ ಜ್ವರ ಬಂದಿತ್ತು. ಅದಕ್ಕೆ ಬರಲಿಲ್ಲ’ ಎಂದುಬಿಟ್ಟೆ. ಅವರಿಂದ ತಪ್ಪಿಸಿಕೊಂಡರೆ ಸಾಕು ಎಂಬ ಅವಸರದಲ್ಲಿ ಸುಳ್ಳು ಹೇಳಿಬಿಟ್ಟಿದ್ದೆ. ಅವರು “ಓ… ಹೌದಾ!? ಸರಿ ಒಳಗೆ ಹೋಗು’ ಎಂದು ಸುಮ್ಮನಾಗಿಬಿಟ್ಟರು.
ಮಾರನೇ ದಿನ ಅವರು ನನ್ನನ್ನು ನೋಡಿದೊಡನೆಯೇ ಹತ್ತಿರ ಕರೆದು “ನಿನ್ನೆ ರಾತ್ರಿ ನಿಮ್ಮ ತಂದೆ ಸಿಕ್ಕಿದ್ದರಪ್ಪಾ… ನಾನು, ಈಗ ನಿಮ್ಮ ಮಗ ಹುಷಾರಾಗಿದ್ದಾನೆ ತಾನೇ?’ ಅಂತ ಕೇಳಿದೆ. ಅದಕ್ಕೆ ಅವರು ಅಚ್ಚರಿಪಡುತ್ತಾ, “ನಮ್ಮ ಮಗನಿಗೆ ಜ್ವರ ಬಂದೇ ಇಲ್ವಲ್ಲ ಅಂದರಲ್ಲಪ್ಪಾ’ ಅಂದರು.
ಉಪಾಧ್ಯಾಯರ ಈ ಮಾತು ಕೇಳಿ ನನ್ನ ಕಾಲುಗಳು ಕಂಪಿಸಿದವು. ನಿಜಕ್ಕೂ ಜ್ವರ ಬಂದಹಾಗೆ ಅನ್ನಿಸತೊಡಗಿತು. ನನ್ನ ತಂದೆಗೆ ಉಪಾಧ್ಯಾಯರ ಪರಿಚಯ ಚೆನ್ನಾಗಿಯೇ ಇತ್ತು. ಸುಳ್ಳು ಹೇಳುವಾಗ ನನಗೆ ಆ ಸಂಗತಿ ನೆನಪಾಗಲೇ ಇಲ್ಲ. ನನ್ನ ತಂದೆ ಮಹಾ ಕೋಪಿಷ್ಟರು ಬೇರೆ. ಸುಳ್ಳು ಕಪಟ ಮೋಸ ಎಂದರೆ ಅವರು ಸಹಿಸುತ್ತಿರಲಿಲ್ಲ.
ತಪ್ಪು ಮಾಡಿ ಸಿಕ್ಕಿಬಿದ್ದಿದ್ದಾಗಿದೆ. ಮನೆಯಲ್ಲಿ ಬೈಗುಳ ಮತ್ತು ಏಟು ಎರಡೂ ಸಿಗಬಹುದು ಅಂದುಕೊಂಡೇ ಹೋದೆ. ನನ್ನ ಪುಣ್ಯಕ್ಕೆ ಅಂದು ಮನೆಗೆ ಹೋದಾಗ ನಮ್ಮ ತಂದೆಯವರು ಶಾಂತಚಿತ್ತರಾಗಿದ್ದರು. ಅವತ್ತು, ನನ್ನ ಮೇಲೆ ಸಿಡುಕಲಿಲ್ಲ. ಸಮಾಧಾನದಿಂದಲೇ, “ಇನ್ನು ಮುಂದೆ ಹೀಗೆಲ್ಲಾ ಸುಳ್ಳು ಹೇಳಿ ಶಾಲೆ ತಪ್ಪಿಸಬೇಡ’ ಎಂದು ಬುದ್ಧಿಮಾತು ಹೇಳಿದರು. ಈ ಘಟನೆ ನಡೆದು 54 ವರ್ಷಗಳೇ ಆಗಿವೆ. ಆದರೂ ನನ್ನ ಮನದಲ್ಲಿ ಹಚ್ಚಹಸುರಾಗಿದೆ.
* ಎಂ.ಕೆ. ಮಂಜುನಾಥ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.