ಕಾಲ್ ಚಕ್ರ : ಕಾಳಿಂಗ ಕಾಲಿಂಗ್
Team Udayavani, Feb 6, 2017, 4:54 PM IST
ಕಾಳಿಂಗ ಬಂದ ದಿನ ನನ್ನ ಬದುಕಿನ ಟರ್ನಿಂಗ್ ಪಾಯಿಂಟು. ಬುಲೆಟ್ಟು ಸಾಗಿದ ದಾರಿಯನ್ನೇನಾದರೂ ಕಾಣಿಸುವ ಕನ್ನಡಿಯಿದ್ದಿದ್ದರೆ ಅದೊಂದು ಮಹಾ ಕಾದಂಬರಿಯಾಗುತ್ತೇನೋ.
ವಿಶೇಷ ಎನ್ನುವ ಸ್ಥಳ ಎಲ್ಲೇ ಇದ್ರೂ ಸರಿ, ಮಂಜುನಾಥ ಕಾಮತರ “ಕಾಳಿಂಗ’ ಅಲ್ಲಿ ಪ್ರತ್ಯಕ್ಷ! ಇದು ಇವರ ಪ್ರೀತಿಯ ರಾಯಲ್ ಎನ್‌ಫೀಲ್ಡ್ ಬೈಕಿನ ಹೆಸರು. ದಕ್ಷಿಣ ಭಾರತದ ಅಪರೂಪದ ಸ್ಥಳಗಳಿಗೆ ಬೈಕ್‌ನಲ್ಲಿಯೇ ಸಾಗಿ, ಅಲ್ಲಿನ ಜನಜೀವನ- ವಿಶೇಷತೆಗಳ ಮೇಲೆ ಡಾಕ್ಯುಮೆಂಟರಿ ತಯಾರಿಸುವ ಕ್ರೇಜ್ ಇವರದ್ದು. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿರುವ ಇವರಿಗೆ ನಿಜವಾದ ಮೇಷ್ಟ್ರು ಇದೇ “ಕಾಳಿಂಗ’. ಪ್ರತಿ ವಾರ “ಜೋಶ್’ನಲ್ಲಿ ಅವರು ನೋಡಿದ ಅಚ್ಚರಿ ಪ್ರಪಂಚದ ನೋಟಗಳು ಬಿಚ್ಚಿಕೊಳ್ಳಲಿವೆ.
ಕಾಳಿಂಗ. ನನ್ನ ರಾಯಲ್ ಎನ್‌ಫೀಲ್ಡ್ ಬುಲೆಟ್ಟು. ತಗೊಂಡು ಈಗ ಒಂದೂವರೆ ವರುಷವಾಯಿತು. ಇಷ್ಟು ಕಡಿಮೆ ಅವಧಿಯಲ್ಲೇ ಅದೆಷ್ಟು ಸಲ ಬಿದ್ದಿದೆ, ಅದೆಷ್ಟು ಖರ್ಚು ಮಾಡುತ್ತಿದ್ದೇನೆ ಅಂದರೆ ಇನ್ನೆರಡು ವರುಷ ಹೋದರೆ ಹಾರ್ಲೆ ಡೇವಿಡ್ಸನ್ ಬೈಕು ತಗೋಬಹುದು ಎಂದು ಸ್ನೇಹಿತರು ತಮಾಷೆ ಮಾಡುತ್ತಾರೆ. ಅವರದು ತಪ್ಪಲ್ಲ ಬಿಡಿ. ಮುಖ್ಯ ಕೆಲಸಗಳಿರುವಾಗಲೇ ನನಗಿದು ಕೈ ಕೊಟ್ಟಿದೆ. ನಡುದಾರಿಯಲ್ಲೇ ಇದು ಪಂಕ್ಚರ್ರಾಗಿ ಹಲವು ಬಾರಿ ನಿಂತುಬಿಟ್ಟಿದೆ. ಮಾರಿಬಿಡು ಮಾರಾಯ ಎಂದು ಹಲವರು ಅಂದಿದ್ದಾರೆ. ನನಗೂ ಆಲೋಚನೆ ಬಂದಿಲ್ಲವೆಂದಲ್ಲ. ಒಳ್ಳೇ ಬೆಲೆಗೆ ಕೇಳಿದ್ದಾರೆ ಕೂಡಾ. ಆದರೂ ಅರಿವಿಲ್ಲದೇ ಬೆಳೆದ ಪ್ರೀತಿಯೊಂದು ಕಾಳಿಂಗನನ್ನು ನನ್ನ ಬಳಿಯೇ ಉಳಿಸಿದೆ.
ಸಮಸ್ಯೆ ಕಾಳಿಂಗನದಲ್ಲ. ಒಂದಷ್ಟು ಕಾಲೇಜು ಹುಡುಗಿಯರು ಬಸ್ಸಿಗಾಗಿ ಕಾಯುತ್ತಿದ್ದರು. ಅವರ ಮುಂದೆಯೇ ನಾಯಿಯೊಂದು ಅಡ್ಡ ಬಂದು ಸ್ಕಿಡ್ಡಾಗಿ ಬಿದ್ದುದಕ್ಕೆ ಬುಲೆಟ್ಟನ್ನು ದೂರುವುದು ಸರಿಯೇ? ಬೆಂಗಳೂರಿನಿಂದ ಮರಳುವಾಗ ನೇರ ದಾರಿಯಲ್ಲೇ ಬರಬೇಕಿತ್ತು. ಬದಲಿಗೆ ಕಳಸ ಮರಸಣಿಗೆಯ ಚಹಾ ತೋಟದೊಳಗೆ ನುಗ್ಗಿ ಚೋಮನ ದುಡಿಯ ಸದ್ದು ಕೇಳಲು ಹೊರಟಿದ್ದು ಕಾಳಿಂಗನಲ್ಲ. ಮಣ್ಣ ರಸ್ತೆಯಲ್ಲಿ ಬಿದ್ದಿದ್ದ ಬೇಲಿಯ ಮುಳ್ಳು ಚುಚ್ಚಿದ್ದರ ಹೊಣೆ ಅವನ ಮೇಲೆ ಹೊರಿಸುವುದು ಎಳ್ಳಷ್ಟೂ ಸರಿಯಲ್ಲ.
ಕಾಳಿಂಗ ಬಂದ ದಿನ ನನ್ನ ಬದುಕಿನ ಟರ್ನಿಂಗ್ ಪಾಯಿಂಟು. ಬುಲೆಟ್ಟು ಸಾಗಿದ ದಾರಿಯನ್ನೇನಾದರೂ ಕಾಣಿಸುವ ಕನ್ನಡಿಯಿದ್ದಿದ್ದರೆ ಅದೊಂದು ಮಹಾ ಕಾದಂಬರಿಯಾಗುತ್ತೇನೋ. ಒಂದೂವರೆ ವರುಷದಲ್ಲಿ ನಾನು ಪಯಣಿಸಿದ ದೂರ 40 ಸಾವಿರ ಕಿ.ಮೀಗಳು. ಅಂತರ್‌ರಾಜ್ಯ ಪ್ರವಾಸ ನನ್ನದಲ್ಲ. ಹೆಚ್ಚೆಂದರೆ ಕನ್ನಡ ಕರಾವಳಿಯೊಳಗಿನ ಓಡಾಟ. ಒಂಚೂರು ಹೊರಗೆ ಹೋಗಿದ್ದೆನಷ್ಟೆ. ಆದರೆ ಅದೆಲ್ಲವೂ ಅನಿರೀಕ್ಷಿತ ಅಲೆಮಾರಿತನ. ಹೆಚ್ಚಿನವು ಒಂಟಿ ಪಯಣ. ಕಥೆಗಳು ನನ್ನೊಳಗೆ ಹುಟ್ಟುವ ಸಮಯ.
ನಿಜಕ್ಕೂ ಬುಲೆಟ್ಟು ತಗೊಂಡದ್ದು ಯಾವುದೇ ಕ್ರೇಝಿಗಲ್ಲ. ತಗೊಳ್ಳೋ ಮುಂಚೆ ಅದ್ರ ತಲೆ ಬುಡವೂ ಗೊತ್ತಿರಲಿಲ್ಲ. ಹಿಂದಿನ ಎರಡು ಬೈಕುಗಳನ್ನು ಹುಚ್ಚಾಪಟ್ಟೆ ಓಡಿಸಿದ್ದಕ್ಕೆ ಬೆನ್ನುನೋವೊಂದು ಅಂಟಿಬಿಟ್ಟಿತ್ತು. ಅದ್ರ ನಿವಾರಣೆಗೆ ಬುಲೆಟ್ಟೊಂದೇ ಪರಿಹಾರವೆಂದು ನಂಬಿ, ಮನೆಯವ್ರನ್ನೂ ನಂಬಿಸಿ ಕೆಂಪು ಹೆಂಡ್ತಿಯನ್ನು ವರಿಸಿಬಿಟ್ಟೆ. ಕಾಳಿಂಗನ ಒರಿಜಿನಲ… ಬಣ್ಣ ಕೆಂಪು. ಆಗ ಅದಕ್ಕಿಟ್ಟಿದ್ದ ಹೆಸರು ರೆಡ್ಡೀ.
ಉಡುಪಿಯಿಂದ ಕುಂದಾಪುರಕ್ಕೆ ಪ್ರಿಯಾಂಕ ಮೇಡಂ ಮದುವೆಗೆಂದು ಹೋಗುತ್ತಿದ್ದಾಗ ಕಲ್ಯಾಣಪುರ ಸೇತುವೆ ದಾಟಿದ್ದಷ್ಟೇ. ಎದುರಿಗೆ ವೇಗವಾಗಿ ಬಂದ ವಾಹನದಿಂದ ತಪ್ಪಿಸಿಕೊಳ್ಳಲು ಬ್ರೇಕ್ ಹಾಕಿದ್ದು. ಬುಲೆಟ್ಟು ಉರುಳಿತು. ಡಿವೈಡರಿಗೆ ಬಡಿಯಿತು. ಟ್ಯಾಂಕು ನಜ್ಜುಗುಜ್ಜು. ಅದರ ಫಲವಾಗಿ ನವೀಕರಣ ಕಾರ್ಯ. ಹೊಸ ಟ್ಯಾಂಕನ್ನು ಕೂರಿಸುವಾಗ ಕೆಂಪಿನ ಬದಲು ಕಪ್ಪು ಮಾಡಿಸಿದೆ. ರೆಡ್ಡೀಗೆ ಕಾಳಿಂಗನೆಂದು ಮರುನಾಮಕರಣ. ಅವಳು ಹೋಗಿ ಅವನಾಗಿಬಿಟ್ಟ.
ನಾನು ಬಿದ್ದಿದ್ದಕ್ಕೆ ಲೆಕ್ಕವುಂಟಾ? ಹಾಗಂತ ನನ್ನ ರೈಡಿಂಗ್ ಮೇಲೆ ಸಂಶಯ ಬೇಡ. ಹೆಚ್ಚಿನ ಸಂದರ್ಭದಲ್ಲಿ ಬೇರೆಯವರ ತಪ್ಪಿನಿಂದಲೇ ಎಡವಟ್ಟುಗಳಾದದ್ದು. ಅದರಲ್ಲಿ ನನಗೆ ವಿಚಿತ್ರವಾಗಿ ಕಂಡದ್ದು ಒಂದೇ ಜಾಗದಲ್ಲಿ ಎರಡು ಸಲ ಬಿದ್ದಾಗ. ಮೊದಲ ಬಾರಿಯದ್ದಂತೂ ನನ್ನ ತಪ್ಪಲ್ಲವೇ ಅಲ್ಲ. ರಾಂಗ್ ಸೈಡಿನಿಂದ ನನ್ನೆದುರಿಗೇ ಬಂದವನಿಗೆ ಹೊಡೆಯೋದನ್ನು ತಪ್ಪಿಸಲು ಗಾಡೀನ ಎಡಕ್ಕೆ ತಗೊಂಡಿದ್ದೆ. ರಸ್ತೆಯ ಅಂಚಿಗಿದ್ದ ಮಣ್ಣ ಮೇಲೆ ಹೋಗಿ ಜಾರಿ ಎದುರಿಗಿದ್ದ ಮರಕ್ಕೆ ಗುದ್ದಿದ್ದೆ. ಇನ್ನೊಂದು ಸಲದ್ದು ಮಾತ್ರ ನನ್ನ ತಪ್ಪು. ಆ ದಿನ ಬಿಳಿ ಪ್ಯಾಂಟು ಧರಿಸಿದ್ದೆ. ಉಟ್ಟಾಗ ನೋಡಿರಲಿಲ್ಲ. ಬೈಕಲ್ಲಿ ಕೂತು ಹೊರಟಾಗ ಪ್ಯಾಂಟಿನ ಎಡಕಾಲಿನ ಮೇಲೆ ಕಪ್ಪು ಕಲೆ.
ಛೆ.. ಇದು ಹೇಸಿಗೆ ಆಯ್ತಲ್ಲಾ ಮಾರ್ರೆ.. ಮನೆಗೆ ಹಿಂದಿರುಗಿದರೆ ಕಾಲೇಜಿಗೆ ಲೇಟಾಗುತ್ತೆ. ಕಲೆಯ ಬಟ್ಟೆಯನ್ನೇ ಧರಿಸಿದ್ದರೆ ದಿನಪೂರ್ತಿ ಮನಸ್ಸು ಹಾಳು. ಬೆರಳಿನಿಂದ ಉಜ್ಜಿದರೇನಾದರೂ ಹೋದೀತಾ ಅಂತ ಎಡ ಕೈಯಿಂದ ಒರೆಸಿದೆ. ಕೈ ಬಲ ಸಾಲಲಿಲ್ಲ. ಬೈಕು ಚಲಿಸುತ್ತಿರುವಂತೆಯೇ ಎಡಕಾಲಿನ ಕಲೆಯನ್ನು ಬಲಗೈಯಲ್ಲಿ ಉಜ್ಜಿದೆ. ತಿಕ್ಕಿದೆ. ಕಲೆಯೇ ಕಣ್ಣು ಕಟ್ಟಿತ್ತಾದ್ದರಿಂದ ಆ ಮರದ ಬುಡದಲ್ಲಿ ಮತ್ತೂಮ್ಮೆ ಬಿದ್ದು ಬಿಟ್ಟೆ. ಮೊದಲ ಸಲ ಬಿದ್ದಾಗ ಸ್ವಲ್ಪ ಜಾಸ್ತೀನೇ ತಾಗಿತ್ತು. ಮನೆಯೋರು ಹೆದರುತ್ತಾರೇಂತ ಹಿಂದೆ ಹೋಗಲಿಲ್ಲ. ರಕ್ತ ಸುರಿಸಿಕೊಂಡು, ಉರಿವ ಗಾಯದೊಂದಿಗೇ ಉಡುಪಿಗೆ ಹೋಗಿದ್ದೆ. ಆ ದಿನ ಸ್ವಲ್ಪಬೇಗನೇ ಹೊರಟಿದ್ದವನು ನಾನು.ನೆಚ್ಚಿನ ವಿದ್ಯಾರ್ಥಿನಿ ಅನುಷಾ ಹುಷಾರಿಲ್ಲದೆ ಹಿಂದಿನ ರಾತ್ರಿ ಆಸ್ಪತ್ರೆ ಸೇರಿದ್ದಳು. ಅವಳನ್ನು ಕಂಡು ಹೋಗೋಣ ವೆಂದುಕೊಂಡು ಬೇಗ ಹೊರಟಿದ್ದೆ. ಆದ್ರೆ ಆ ದಿನ ಅದೇ ಆಸ್ಪತ್ರೆಗೆ ನಾನು ಪೇಶೆಂಟ್ ಆಗಿಯೇ ದಾಖಲಾಗುವ ಹಾಗಾಯ್ತು!
(ಮುಂದುವರಿಯುವುದು)
– ಮಂಜುನಾಥ್ ಕಾಮತ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.