ನಿನಗೆ ಸ್ವಲ್ಪಾನೂ ಗೊತ್ತಾಗಲ್ಲ ಬಿಡಲೇ…
Team Udayavani, Apr 7, 2020, 5:29 PM IST
ನಾವು ಶಿಕ್ಷಕರಾಗಿ ನೇಮಕವಾದಾಗ, ತರಬೇತಿ ಆಯೋಜನೆ ಮಾಡಲಾಗಿತ್ತು. ಪ್ರತಿದಿನ ಮೊದಲೇ ನಿಗದಿ ಪಡಿಸಿದ ತಂಡದವರು ವರದಿ ವಾಚನ ಮಾಡುತ್ತಿದ್ದರು. ಬೆಳಗ್ಗೆಯಿಂದ ಸಂಜೆಯವರೆಗಿನ ತರಬೇತಿಯ ಅಂಶಗಳನ್ನು ಬರೆದು ಬೇರೆ ಬೇರೆ ತಂಡದವರು ಓದುತ್ತಿದ್ದಾಗ್ಯೂ “ಅದೇ ರಾಗ ಅದೇ ಹಾಡು’ ಎಂಬಂತೆ ಭಾಸವಾಗುತ್ತಿತ್ತು. ಒಂಥರಾ ಏಕತಾನತೆ. ಇದನ್ನು ಗಮನಿಸಿದ ಆಯೋಜಕರು- “ನಿಮ್ಮ ಸರದಿ ಬಂದಾಗ ವಿಶಿಷ್ಟ ರೀತಿಯಲ್ಲಿ ತರಬೇತಿಯ ವರದಿ ಮಂಡಿಸಬೇಕು’ ಎಂದರು.
ಮರುದಿನವೇ, ನಮ್ಮ ತಂಡದ ಸರದಿ ಬಂತು. ವಿಶೇಷವಾಗಿ ಹೇಗೆ ವರದಿವಾಚನ ಮಾಡಬೇಕೆಂದು ಯೋಚಿಸಿದೆ. ಆಗ ಹೊಳೆದದ್ದೇ “ಕವಿರತ್ನ ಕಾಳಿದಾಸ’ ಚಲನಚಿತ್ರದ “ಕಮಲೇ ಕಮಲೋತ್ಪತ್ತಿಃ’ಯ ಪ್ರಸಂಗ! ಆ ಸಿನಿಮಾದಲ್ಲಿ, ಅನ್ಯ ದೇಶದ ಡಿಂಡಿಮನೆಂಬ ಪಂಡಿತ ಭೋಜರಾಜನ ಆಸ್ಥಾನಕ್ಕೆ ಬಂದು, “ಕಮಲೇ ಕಮಲೋತ್ಪತ್ತಿಃ’ ಎಂಬ ಸವಾಲಿನ ಪ್ರಶ್ನೆಯನ್ನು ಬಿಡಿಸಲು ಹೇಳುತ್ತಾನೆ. ರಾಜನ ಆಸ್ಥಾನದಲ್ಲಿದ್ದ ಪಂಡಿತರೆಲ್ಲಾ ಉತ್ತರ ಹೊಳೆಯದೇ ಸುಮ್ಮನಿದ್ದಾಗ, ಕಾಳಿದಾಸ ಅವನ ಪ್ರಶ್ನೆಗೆ ಉತ್ತರ ಕೊಟ್ಟು ಅವನ ಸೊಕ್ಕು ಅಡಗಿಸುತ್ತಾನೆ! ಈ ಪ್ರಸಂಗವನ್ನು, ನಾನು ವರದಿ ಓದಲು ಅಪ್ಲೈ ಮಾಡಿದೆ.
ತಂಡದ ಸದಸ್ಯರಿಗೆಲ್ಲಾ ಒಂದೊಂದು ಪಾತ್ರ ಕೊಟ್ಟು. ಏನೇನು ಹೇಗೇಗೆ ಹೇಳಬೇಕು ಅಂತ ಮೊದಲೇ ಸೂಚಿಸಿದ್ದೆ. ನಾನು ರಾಜನ ಪಾತ್ರದಲ್ಲಿದ್ದೆ. ನಾಟಕ ರೂಪದ ವರದಿವಾಚನ ಪ್ರಸಂಗವನ್ನು ವಿಶಿಷ್ಟವಾಗಿ ನಿರೂಪಿಸಲು ಚೆನ್ನಾಗಿಯೇ ತಯಾರಿ ಮಾಡಿಕೊಂಡಿದ್ದೆವು. ತಂಡದ ವರದಿ ಕಾರ್ಯಕ್ರಮ ಶುರುವಾಗುವ ಮುನ್ನ, ಯಶಸ್ವೀ ಪುರುಷರು ವಿಶೇಷ ಕೆಲಸವನ್ನು ಮಾಡುವುದಿಲ್ಲ, ಮಾಡುವ ಕೆಲಸವನ್ನೇ ವಿಶೇಷವಾಗಿ ಮಾಡುತ್ತಾರೆ ಅನ್ನೋ ರೀತಿ, ನಮ್ಮ ತಂಡದಿಂದ ವಿಶೇಷವಾಗಿ ವರದಿ ವಾಚನವನ್ನು ಮಾಡುತ್ತೇವೆ ಎಂದು ಹೇಳಿ, ಎಲ್ಲರಿಗೂ ಕುತೂಹಲ ಉಂಟುಮಾಡಿದೆ.
ನಾಟಕ ಶುರುವಾಯ್ತು. ನಾನು ರಾಜಸಭೆಯಲ್ಲಿ ಮಂತ್ರಿಗಳಿಗೆ ಪ್ರಶ್ನೆ ಕೇಳುವ ಪ್ರಕ್ರಿಯೆ ಇನ್ನೂ ಪ್ರಾರಂಭವೇ ಆಗಿರಲಿಲ್ಲ. ಅಷ್ಟರೊಳಗೆ, ಅನ್ಯ ದೇಶದಿಂದ ಪಂಡಿತ ಬಂದಿರುವ ಸುದ್ದಿಯನ್ನು ತಿಳಿಸಲು ಸೇವಕನ ಪಾತ್ರವಹಿಸಿದ್ದ ಸಹೋದ್ಯೋಗಿ, ದಯಾನಂದ- “ಮಹಾಪ್ರಭುಗಳೇ…’ ಎಂದು ಕೂಗುತ್ತಾ ಬಂದ. ತಕ್ಷಣಕ್ಕೆ ನಾನು ರಾಜನ ಪಾತ್ರದಲ್ಲಿ ಇರವುದನ್ನು ಮರೆತು, ವೇದಿಕೆಯ ಮೇಲಿನಿಂದಲೇ “ದಯಾ, ನಿನಗೆ ಏನೂ ಗೊತ್ತಾಗಲ್ಲ ಬಿಡಲೇ. ನಿಂಗೆ ನಾನು ಬರೋಕೆ ಹೇಳಿದ್ದು ಯಾವಾಗ? ಸ್ವಲ್ಪಾನೂ ಗೊತ್ತಾಗಲ್ಲಾ ಬಿಡಲೇ’ ಎಂದು ಸಿಟ್ಟು ಮಾಡಿಕೊಂಡು ಜೋರಾಗಿ ಕೂಗಿದೆ! ತರಬೇತಿಯಲ್ಲಿದ್ದವರು ಇದನ್ನು ನೋಡಿ ಬಿದ್ದು ಬಿದ್ದು ನಕ್ಕರು.
ದಯಾನಂದನಿಗೆ ಎಲ್ಲರ ಎದುರಿಗೆ ಮರ್ಯಾದೆ ಹೋದಂತಾಗಿ ಅವನು ಹೊರಹೋಗಿಬಿಟ್ಟ. ನಾನು ನನ್ನ ರಾಜ್ಯದ ಪ್ರಜೆಗಳು ಚೆನ್ನಾಗಿದ್ದಾರ? ಅವರು ಸೌಖ್ಯವೇ?ಇವರು ಸೌಖ್ಯವಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಹೋದೆ. ಆದರೆ, ಎಷ್ಟು ಹೊತ್ತಾದರೂ ನಮ್ಮ ಸೇವಕ, ಪಂಡಿತ ಬಂದ ಸುದ್ದಿಯನ್ನು ಹೊತ್ತು ಒಳಗೆ ಬರಲೇ ಇಲ್ಲ! ಅವನು ಬಂದರೆ ಮಾತ್ರ ನಮ್ಮ ನಾಟಕ ಮುಂದುವರಿಯುವಂತಿತ್ತು. ನನಗೆ ಹೇಳಲು ಉತ್ತರಗಳು, ಕೇಳಲು ಪ್ರಶ್ನೆಗಳು ಇಲ್ಲದಂತಾಗಿ ದಯಾನಂದನನ್ನು ಕರೀರೋ ಬೇಗ ಅಂತಾ ಅಲ್ಲಿಂದಲೇ ಮತ್ತೂಮ್ಮೆ ಕೂಗಿದೆ.
ಶಿಬಿರಾರ್ಥಿಗಳು ಮತ್ತೂಮ್ಮೆಗೊಳ್ಳೆಂದು ನಕ್ಕರು. ನಮ್ಮ ಒಬ್ಬ ಮಂತ್ರಿ ಪಾತ್ರದಾರಿ, ಹೊರಗೆ ಹೋದ ದಯಾ ಏನ್ಮಾಡ್ತಾ ಇದಾನೆ? ಅಂತಾ ಬಗ್ಗಿ ನೋಡಿ, ರಾಜರೇ, ನಮ್ಮ ಸೇವಕ ಮೊಬೈಲಲ್ಲಿ ಮಾತಾಡ್ತಾ ಇದ್ದಾನೆ ಅಂದ. ನಾನು ನಾಟಕ ಎಂಬುದನ್ನು ಮರೆತು, ಅವನ ಹೆಸರಿಡಿದು ಬಯ್ದಿದ್ದಕ್ಕೆ ಅವನಿಗೆ ಬೇಜಾರು ಆಗಿದ್ದರಿಂದ, ಅವನು ಮತ್ತೆ ನಾಟಕಕ್ಕೆ ಸೇರಲು ಒಪ್ಪಲಿಲ್ಲ. ಕೊನೆಗೆ ಕಾಡಿ, ಬೀಡಿದ್ದಕ್ಕೆ ದಯಾ ಒಪ್ಪಿಕೊಂಡ. ಹಾಗೂ, ಹೀಗೂ ಮಾಡಿ ನಾಟಕ ರೂಪದ ವರದಿಯನ್ನು ಯಶಸ್ವಿಯಾಗಿ ಮುಗಿಸಿದೆವು. ಆಗಿದ್ದ ಎಡವಟ್ಟೂ ತರಬೇತಿಯಲ್ಲಿದ್ದವರಿಗೆ ನಗೆಯ ವಸ್ತುವಾಗಿ ತುಂಬಾ ಎಂಜಾಯ್ ಮಾಡಿದರು.
ಇಂದಿಗೂ ವರದಿ ಅಂದರೆ ಸಾಕು, ಹಳೆಯದೆಲ್ಲಾ ನೆನಪಿಗೆ ಬಂದು, ಮನಕ್ಕೆಮುದ ನೀಡುತ್ತದೆ.
– ಬಸವನಗೌಡ ಹೆಬ್ಬಳಗೆರೆ. ಚನ್ನಗಿರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.