ಲೈಫ್ ಆಫ್ ಪೈಲಟ್
Team Udayavani, Mar 12, 2019, 12:30 AM IST
ವೀರಯೋಧ ಅಭಿನಂದನ್‌ರ ಪರಾಕ್ರಮವನ್ನು ನೆನೆಯುವುದೇ ಈ ದಿನಗಳ ಪುಳಕ. ಇನ್ನೂ ಮೂಡದ ಮೀಸೆಯನ್ನು ಪೊದೆಯಂತೆ ಕಲ್ಪಿಸಿ, ತಿರುವುವ ಹುಮ್ಮಸ್ಸಿನ ದೇಶಭಕ್ತಿಯೊಂದು ಯುವಕರನ್ನು ಹೊಕ್ಕಿಬಿಟ್ಟಿದೆ. ಇಷ್ಟು ದಿನ ವಿಮಾನ ಏರುವ ಕನಸನ್ನೇ ಜೀವಿತದ ಗುರಿ ಎಂದುಕೊಂಡಿದ್ದ ಅನೇಕರಿಗೆ, ಯುದ್ಧವಿಮಾನ, ಸೇನೆಯ ಹೆಲಿಕಾಪ್ಟರ್ ಏರುವ ವೀರೋಚಿತ ಕನಸು ಹುಟ್ಟಿದಂತಿದೆ. ಅಲ್ಲೆಲ್ಲೋ ಹಾರುತ್ತಿರುವ ಹೆಲಿಕಾಪ್ಟರ್‌ನ ಕಾಕ್‌ಪಿಟ್ “ಬಾ’ ಎಂದು ಕರೆಯುತಿದೆ… ಅಷ್ಟಕ್ಕೂ ಪೈಲಟ್ ಜೀವನ ಹೇಗಿರುತ್ತೆ? ಅದಕ್ಕೆ ಬೇಕಾದ ತಯಾರಿ ಏನು?- ಏರ್‌ಫೋರ್ಸ್‌ನಲ್ಲಿ ವಿಂಗ್ ಕಮಾಂಡರ್ ಆಗಿದ್ದ ಲೇಖಕರು, ತಮ್ಮ ರೋಚಕ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ…
ನಾನು ಹುಟ್ಟಿ ಬೆಳೆದದ್ದು ಗಂಗೂರು ಎನ್ನುವ ಪುಟ್ಟ ಹಳ್ಳಿಯಲ್ಲಿ. ಅದು ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಬಳಿ ಇದೆ. ಶಿಕ್ಷಕರಾಗಿದ್ದ ನಮ್ಮ ತಂದೆ, ತಮ್ಮ ಸೇವಾವಧಿಯ ಬಹುಕಾಲವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದಿದ್ದರಿಂದ ನಾವೂ ಅವರೊಟ್ಟಿಗೆ ಕೊಪ್ಪ, ಮೂಡಿಗೆರೆ, ಚಿಕ್ಕಮಗಳೂರು, ಬುಕ್ಕಾಂಬುಧಿ ಹೀಗೆ ಹಲವೆಡೆ ಸುತ್ತಬೇಕಾಯ್ತು. ಅದರಿಂದಾಗಿ ವಿವಿಧ ಶಾಲೆಗಳಲ್ಲಿ ನನ್ನ ವಿದ್ಯಾಭ್ಯಾಸ ನಡೆಯಿತು. ನಮ್ಮದು ಪುಸ್ತಕ ಪ್ರೇಮಿಗಳ ಮನೆತನ. ಅಯ್ಯರ್, ಅನಕೃ, ತರಾಸು, ಭೈರಪ್ಪ ಮುಂತಾದವರ ಸಾಹಿತ್ಯ ಕೃತಿಗಳ ಮಧ್ಯವೇ ಬೆಳೆದೆ. ದೇಶ ಸುತ್ತುವ, ಕೋಶ ಓದುವ ಹವ್ಯಾಸ ಬೆಳಸಿಕೊಂಡವನಿಗೆ ವಾಯುಸೇನೆ ಹೇಳಿಮಾಡಿಸಿದ ಕರ್ಮಭೂಮಿ.
ದಾವಣಗೆರೆಯ ಡಿಆರ್‌ಎಂ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ಸ್ನೇಹಿತನ ಅಣ್ಣನ ಪರಿಚಯವಾಯ್ತು. ಅವರು ಏರ್‌ಫೋರ್ಸ್‌ನಲ್ಲಿ ಮೆಕ್ಯಾನಿಕ್ ಆಗಿದ್ದರು. ಪಿಯುಸಿ ನಂತರ ಏರ್‌ಫೋರ್ಸ್‌ಗೆ ಸೇರುವ ಅವಕಾಶವಿದೆ ಎನ್ನುವ ವಿಷಯ ಅವರಿಂದ ತಿಳಿಯುತು. ಆನಂತರ ನನ್ನ ಸಂಪೂರ್ಣ ಗಮನ ಮತ್ತು ಸಿದ್ಧತೆಗಳು ವಾಯುಸೇನೆ ಸೇರುವುದರ ಕಡೆಗೆ ಕೇಂದ್ರೀಕೃತವಾಯ್ತು. ಪಿಯುಸಿಯ ಫಲಿತಾಂಶ ಬಂದಕೂಡಲೇ ಮಾಡಿದ ಮೊಟ್ಟಮೊದಲ ಕೆಲಸವೆಂದರೆ, ಏರ್‌ಫೋರ್ಸ್ ಸೇರಲು ಅರ್ಜಿ ಹಾಕಿದ್ದು. ಕೂಡಲೇ ಅವರಿಂದ ಪ್ರವೇಶ ಪರೀಕ್ಷೆಗೆ ಬರಬೇಕೆಂಬ ಆದೇಶವೂ ಬಂತು. ಬೆಂಗಳೂರನ್ನು ಮೊಟ್ಟಮೊದಲ ಬಾರಿಗೆ ನೋಡಿದ್ದೇ ಆಗ. ನಿರಂತರವಾಗಿ ನಡೆದ ಹಲವಾರು ಪರೀಕ್ಷೆಗಳು, ಇಂಟರ್‌ವ್ಯೂ ಮತ್ತು ವೈದ್ಯಕೀಯ ತಪಾಸಣೆ ಮುಗಿಯಲು ಬರೋಬ್ಬರಿ ನಾಲ್ಕು ದಿನಗಳಾದವು. ಈ ಎಲ್ಲ ಅಗ್ನಿಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ, ಅಲ್ಲಿನ ಅಧಿಕಾರಿಯೊಬ್ಬರು, “ಅಭಿನಂದನೆಗಳು… ನೀವು ಏರ್‌ಫೋರ್ಸ್‌ಗೆ ಆಯ್ಕೆಯಾಗಿದ್ದೀರಿ!’ ಎಂದಾಗ ಆದ ಆನಂದ ಹೇಳತೀರದು. ಅವತ್ತು ನನ್ನ ಹದಿನೇಳನೇ ಹುಟ್ಟುಹಬ್ಬ!
ಜಾಲಹಳ್ಳಿಯಿಂದ ಪಂಜಾಬಿಗೆ
ಏರ್‌ಫೋರ್ಸ್‌ನಲ್ಲಿ ವೈದ್ಯಕೀಯ ಸಹಾಯಕನಾಗಿ ನನ್ನ ವೃತ್ತಿಪರ್ವ ಪ್ರಾರಂಭವಾಯಿತು. ಬೆಂಗಳೂರಿನ ಜಾಲಹಳ್ಳಿಯಲ್ಲಿ ಮೆಡಿಕಲ್ ಟ್ರೈನಿಂಗ್ ಸೆಂಟರ್‌ನಲ್ಲಿ ಒಂದು ವರ್ಷದ ತರಬೇತಿಯ ನಂತರ, ನನ್ನ ಮೊದಲ ಪೋಸ್ಟಿಂಗ್ ಪಂಜಾಬ್‌ನ ಹಲ್ವಾರಾ ವಾಯುನೆಲೆಗೆ ಆಯ್ತು. ಅಲ್ಲಿನ ಮೂರು ವರ್ಷಗಳ ಸೇವಾವಧಿಯಲ್ಲಿ ಜೀವನದ ಗತಿ ಮತ್ತು ಗುರಿಯಲ್ಲಿ ಕೆಲವು ಮಹತ್ತರ ಮಾರ್ಪಾಡುಗಳಾದವು. ವೈದ್ಯಕೀಯ ಸಹಾಯಕನಾಗಿ ಕೆಲಸ ಮಾಡುತ್ತಲೇ ಪಂಜಾಬಿನ ಮುಕ್ತ ವಿಶ್ವವಿದ್ಯಾಲಯದ ಮೂಲಕ ವಿದ್ಯಾಭ್ಯಾಸವನ್ನು ಮುಂದುವರಿಸಿದೆ. ವಾಯುಸೇನೆಯ ಹಲವಾರು ಪೈಲಟ್‌ಗಳ ಪರಿಚಯವಾಯಿತು. ನಾನೂ ಸಹಾ ಪೈಲಟ್ ಆಗಬಹುದು. ಅದಕ್ಕೆ ಬೇಕಾದ ಎಲ್ಲ ಅರ್ಹತೆ ನನಗಿದೆ ಎನ್ನುವ ವಿಷಯ ತಿಳಿಯುತ್ತಲೇ, ಎಲ್ಲಾ ಶಕ್ತಿ, ಸಾಮರ್ಥ್ಯಗಳನ್ನು ಅದರಲ್ಲಿ ವಿನಿಯೋಗಿಸಿದೆ. ಮೊದಲ ಪ್ರಯತ್ನ ವಿಫಲವಾಯಿತು. ಪೈಲಟ್ ಆಗಿಯೇ ತೀರಬೇಕೆಂಬ ಛಲ ಇನ್ನೂ ಉತ್ಕಟವಾಯಿತು. ಎರಡನೇ ಪ್ರಯತ್ನದಲ್ಲಿ ಯಶಸ್ಸು ಲಭಿಸಿತು. ಆದಾದ ಕೆಲವೇ ತಿಂಗಳುಗಳಲ್ಲಿ ವಾಯುಸೇನೆಯ ಪೈಲಟ್ ಆಗುವ ತರಬೇತಿ ಪ್ರಾರಂಭವಾಯಿತು. ಇದು ನನ್ನ ವಾಯುಸೇನೆಯಲ್ಲಿನ ಪ್ರಾರಂಭಿಕ ಪಯಣ.
ಪ್ರತಿದಿನವೂ ವೈವಿಧ್ಯಮಯ
ವಾಯುಸೇನೆಯ ಪೈಲಟ್‌ಗಳ ಜೀವನದ ವಿಶೇಷತೆ ಏನೆಂದರೆ, ಅಲ್ಲಿ ಪ್ರತಿದಿನವೂ ವಿಭಿನ್ನ ಅನುಭವ, ಹೊಸ ಹೊಸ ಕಲಿಕೆಯ ನಿರಂತರ ಸಾಧ್ಯತೆಗಳು ಎದುರಾಗುತ್ತವೆ. ನಾನು ಇಲ್ಲಿಯವರೆಗೂ ಸಮಾರು 14 ವಿವಿಧ ರೀತಿಯ ವಿಮಾನಗಳನ್ನು ಹಾರಿಸಿದ್ದೇನೆ. ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಗಂಟೆಗಳನ್ನು ಆಕಾಶದಲ್ಲಿ ಕಳೆದಿದ್ದೇನೆ. ಅವುಗಳಲ್ಲಿ ಎಂಜಿನ್ ಇಲ್ಲದ ಗ್ಲೆ„ಡರ್ ವಿಮಾನ, ಪುಟ್ಟ ಮೈಕ್ರೋಲೈಟ್, ಫೈಟರ್ ಜೆಟ್, ಟಬೋì ಪ್ರೊಪೆಲ್ಲರ್, ಬೃಹದಾಕಾರದ ಜೆಟ್ ಸೇರಿವೆಯಾದರೂ, ಪ್ರಯಾಣಿಕರ, ಸರಕು ಸಾಮಗ್ರಿಗಳನ್ನು ಸಾಗಿಸುವ ಶ್ರೇಣಿಯ ವಿಮಾನಗಳಲ್ಲೇ ನಾನು ಹೆಚ್ಚಿನ ಸೇವೆ ಸಲ್ಲಿಸಿರುವುದು.
ಶಾಂತಿಪಡೆಯಲ್ಲಿ ಕಾರ್ಯ
1987ರಿಂದ 1989ರವರೆಗೆ ಭಾರತೀಯ ಸೇನಾಪಡೆಗಳು ಶ್ರೀಲಂಕಾದಲ್ಲಿ ಭಾರತೀಯ ಶಾಂತಿಪಡೆಯ ಅಂಗವಾಗಿ ಸಕ್ರಿಯವಾಗಿ ಪಾಲ್ಗೊಂಡಿದ್ದವು. ನಾನೂ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೆ. ಪೈಲಟ್‌ಗಳ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಿದ ಸಮಯವದು. ಅಪರಿಚಿತ ವಾಯುನೆಲೆಯಲ್ಲಿ ವಿಮಾನವನ್ನು ಇಳಿಸುವುದೇ ದೊಡ್ಡ ಸವಾಲಾಗಿರುತ್ತಿತ್ತು. ಈ ದಿನದ ಮಿತ್ರರು ಮರುದಿನ ಶತ್ರುಗಳಾಗಿ ಪರಿವರ್ತನೆಯಾಗುವಂಥ ಚಂಚಲ ರಾಜಕೀಯ ಪರಿಸ್ಥಿತಿ ಅಲ್ಲಿತ್ತು. ಶ್ರೀಲಂಕಾದ ಸೌಂದರ್ಯವನ್ನು ಆಸ್ವಾದಿಸುತ್ತಲೇ ಅಲ್ಲಿಯ ಆತಂಕಮಯ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆವು. ನಮ್ಮ ಸೈನಿಕರ ಮೃತದೇಹಗಳನ್ನು ಭಾರತಕ್ಕೆ ತರಬೇಕಾದ ಸ್ಥಿತಿ ಎದುರಾದಾಗ ಮನಸ್ಸಿಗೆ ತುಂಬಾ ವ್ಯಥೆಯಾಗುತ್ತಿತ್ತು. ಈ ಯುದ್ಧ ಯಾಕೆ ಬೇಕು ಅನ್ನಿಸುತ್ತಿತ್ತು. ಮಾಲ್ಡೀವ್ ಸರ್ಕಾರ ತನಗೆ ಎದುರಾದ ರಾಜಕೀಯ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಯ ಸಹಾಯ ಕೋರಿತ್ತು. ಆ ಕಾರ್ಯಾಚರಣೆಯಲ್ಲಿ ನನಗೂ ಭಾಗವಹಿಸುವ ಅವಕಾಶ ದೊರಕಿತು. ಹೀಗೆ, ವಾಯುಸೇನೆಯ ಪ್ರತಿಯೊಂದು ಅನುಭವವೂ ಅದರದ್ದೇ ಆದ ವೈಶಿಷ್ಟé, ಪ್ರತಿ ವಿಮಾನಯಾನದ ಅನುಭವವೂ ವೈವಿಧ್ಯಮಯವಾಗಿತ್ತು.
ಹವಾಮಾನವೇ ಸವಾಲು…
ಪೈಲಟ್‌ಗಳು ಎದುರಿಸಬೇಕಾದ ಸವಾಲುಗಳಲ್ಲಿ ಪ್ರಮುಖವಾದುದು ಹವಾಮಾನ ವೈಪರೀತ್ಯ. ತರಬೇತಿ ಸಮಯದಲ್ಲಿ ಕಲಿತು ನಂತರ ಮರೆತು ಬಿಡುವಂಥ ವಿದ್ಯೆಯಲ್ಲ ಇದು. ಇಲ್ಲಿ ಅನುಭವ, ಕಲಿಕೆ ನಿರಂತರ. ಆಯಾ ಪ್ರದೇಶಕ್ಕೆ, ಆಯಾ ಋತುಮಾನಕ್ಕೆ ಬದಲಾಗುವ ಹವಾಮಾನದ ವೈಪರೀತ್ಯವನ್ನು ಬಹಳ ಆಳವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ.
ಇತ್ತೀಚಿನ ದಿನಗಳಲ್ಲಿ ಪೈಲಟ್‌ಗಳಿಗೆ ಹವಾಮಾನದ ಮನ್ಸೂಚನೆ ಒದಗಿಸುವುದರಲ್ಲಿ ತುಂಬಾ ನಿಖರತೆ ಇರುತ್ತದೆ. ಆದರೂ ಕೆಲವೊಮ್ಮೆ ಇದರಲ್ಲಿ ಏರುಪೇರು ಆಗುತ್ತದೆ. ಈಗ ಉತ್ತಮ ರಡಾರ್‌ಗಳಿವೆ. ಅವುಗಳ ಸಹಾಯದಿಂದ ವಿಮಾನವನ್ನು ಸುರಕ್ಷಿತವಾದ ದಿಕ್ಕಿನಲ್ಲಿ ತಿರುಗಿಸಬಹುದು. ಮಂಜು ಕವಿದ ವಾತಾವರಣದಲ್ಲಿ ವಿಮಾನದ ಟೇಕಾಫ್ ಮತ್ತು ಲ್ಯಾಂಡಿಂಗ್ ಸಹ ಅತಿ ದೊಡ್ಡ ಸವಾಲು. ನಿರಂತರ ತರಬೇತಿಯೇ ಇದಕ್ಕೆ ಮಂತ್ರ.
ವಿಮಾನಗಳಲ್ಲಿ ತಾಂತ್ರಿಕ ದೋಷಗಳಿಂದ ಉಂಟಾಗುವ ಆಪತ್ಕಾಲೀನ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲೂ ನಿರಂತರ ತರಬೇತಿ ಮತ್ತು ತಾಂತ್ರಿಕ ವಿಷಯಗಳ ಅಧ್ಯಯನ ತುಂಬಾ ಮುಖ್ಯ. ಈ ವೈಪರೀತ್ಯದ ಪರಿಸ್ಥಿತಿಯಲ್ಲಿ ವಿಚಲಿತಗೊಳ್ಳದೇ ಮನೋಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ಅನುಭವದಿಂದ, ಅಧ್ಯಯನದಿಂದ ಬರುವಂಥದ್ದು. ಇದಕ್ಕೆ ಮಾನಸಿಕ ಸಿದ್ಧತೆ ಅತ್ಯವಶ್ಯ.
ಎಲ್ಲಾ ಗೊತ್ತು ಅನ್ನೋರಿಲ್ಲ…
ವೈಮಾನಿಕತೆ ಒಂದು ಕೌಶಲ್ಯಪೂರ್ಣ ಕಲೆ. ಆದರೆ, ಇದು ಕರಗತವಾಗುವುದು ಸತತ ಪರಿಶ್ರಮದಿಂದ ಮಾತ್ರ. “ನನಗೆಲ್ಲಾ ಗೊತ್ತು’ ಎನ್ನುವ ಮನಃಸ್ಥಿತಿ ವೃತ್ತಿ ಜೀವನದ ಕೊನೆಯ ಹಾರಾಟದಲ್ಲೂ ಪೈಲಟ್‌ಗೆ ಬರಬಾರದು. ಆ ಅನಿಸಿಕೆಯೇ ಮಾರಣಾಂತಿಕ. ಪ್ರತಿಯೊಂದು ಫ್ಲೈಟ್‌ನಲ್ಲೂ, ಲ್ಯಾಂಡಿಂಗ್‌ನಲ್ಲೂ ಒಂದು ಕಲಿಕೆಯ ಅಂಶವಿರುತ್ತದೆ. ಇಂಥ ಕ್ಲಿಷ್ಟಕರ ವೃತ್ತಿಯಲ್ಲಿ ತಪ್ಪುಗಳಾಗುವುದು ಸಹಜ. ಆದರೆ, ನೀವು ಮಾಡಿದ ತಪ್ಪಗಳಿಂದಲೇ ಕಲಿಯಬೇಕು ಎನ್ನುವ ನಿಲುವಿಗಿಂತ, ಬೇರೆಯವರು ಮಾಡಿದ ತಪ್ಪಗಳಿಂದ ಕಲಿಯುವುದು ಜಾಣತನ. ಕೆಲವೊಮ್ಮೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲಾರದ ಸಂದರ್ಭವೂ ಬರಬಹುದು!
ಫಿಟ್ ಆಗಿದ್ರಷ್ಟೇ ಕಾಕ್‌ಪಿಟ್ ಭಾಗ್ಯ
ಪೈಲಟ್‌ಗಳಿಗೆ ಮನೋಸ್ಥೈರ್ಯದ ಜೊತೆಗೆ ದೈಹಿಕ ಆರೋಗ್ಯವೂ ಬಹಳ ಮುಖ್ಯ. ಪೈಲಟ್‌ಗಳ ದೈಹಿಕ ಪರೀಕ್ಷೆಗೆ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ. ಬೆಂಗಳೂರಿನ Indian Aerospace Medicine (IAM) ವಿಶೇಷವಾಗಿ ವಾಯುಸೇನೆಯ ಮತ್ತು ಇತರೆ ನಾಗರಿಕ ಪೈಲಟ್‌ಗಳ ದೈಹಿಕ ತಪಾಸಣೆಗೆಂದೇ ಮೀಸಲಾದ ಸಂಸ್ಥೆ. ಇಲ್ಲಿ ವೈಮಾನಿಕ ವೈದ್ಯಕೀಯ ಪರಿಣತ ವೈದ್ಯರು ವಿವಿಧ ಪರೀಕ್ಷೆಗಳನ್ನು ನಡೆಸುತ್ತಾರೆ. ಪ್ರಾರಂಭದಲ್ಲೇ ಕೆಲವು ನ್ಯೂನತೆಗಳನ್ನು ಕಂಡುಹಿಡಿದು ಅದನ್ನು ಪರಿಹರಿಸುವ ಸೂಕ್ತ ಸಲಹೆಗಳನ್ನು ಕೊಡುತ್ತಾರೆ. ಇನ್ನು ಕೆಲವು ನ್ಯೂನತೆಗಳಿಂದಾಗಿ ವೈಮಾನಿಕ ವೃತ್ತಿ ಅಸಾಧ್ಯ ಎನ್ನುವ ನಿರ್ಧಾರಕ್ಕೂ ಬರಬೇಕಾದ ಅನಿವಾರ್ಯವೂ ಇರುತ್ತದೆ. ಆಗ ಪರ್ಯಾಯ ವ್ಯವಸ್ಥೆಯ ಆಲೋಚನೆ ಮಾಡಬೇಕಾಗುತ್ತದೆ. ಪೈಲಟ್ ಆಗಲು ಬೇಕಾದ ಪ್ರಮುಖ ಅರ್ಹತೆಗಳೆಂದರೆ, ಅಂಗರಚನಾ ಪ್ರಮಾಣ. ಅಂದರೆ, ಹೈಟ್ 162.5 ಸೆಂ.ಮೀ., ಕುಳಿತಾಗ ಉದ್ದ 81.5 ಸೆಂ.ಮೀ., ಕಾಲಿನ ಉದ್ದ 99-120 ಸೆಂ.ಮೀ., ಹೀಗೆಲ್ಲಾ ಇರುತ್ತದೆ. ಇದರ ಉದ್ದೇಶ ಕಾಕ್‌ಪಿಟ್‌ನಲ್ಲಿ ಕುಳಿತಾಗ ಅನಾಯಾಸವಾಗಿ ಎಲ್ಲಾ ಕಾರ್ಯವನ್ನು ನಿರ್ವಹಿಸುವ ಕ್ಷಮತೆ ಇರಬೇಕು. ಇದಲ್ಲದೆ ಬೆನ್ನುಮೂಳೆಯನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಪ್ರವೇಶದ ಹಂತದಲ್ಲಿ ಕಣ್ಣುಗಳ ಕ್ಷಮತೆ 6/6 ಇರಬೇಕು. ಇತ್ತೀಚೆಗೆ ದೃಷ್ಟಿ ಬಗ್ಗೆ ಕೆಲವು ಸುಧಾರಣೆಗಳು ಬಂದಿವೆ.
ಇಲ್ಲಿದೆ, “ವಾಯು’ ಮಾರ್ಗ…
ಯಾರೆಲ್ಲಾ ಏರ್‌ಫೋರ್ಸ್‌ನ ಪೈಲಟ್ ಆಗಲು ಅರ್ಹರು? ಇದರ ಸಂಪೂರ್ಣ ವಿವರಣೆ, ವಿದ್ಯಾರ್ಹತೆ, ವೈದ್ಯಕೀಯ ಪ್ರಮಾಣಗಳ ವಿವರ, ತರಬೇತಿಯ ಬಗೆಗಿನ ಮಾಹಿತಿ ಇವೆಲ್ಲವೂ ಏರ್‌ಫೋರ್ಸ್‌ನ ಅಂತರ್ಜಾಲ careerair force.nic.in ಲಭ್ಯವಿದೆ.
ನಮ್ಮ ಸೈನಿಕರ ಮೃತದೇಹಗಳನ್ನು ಭಾರತಕ್ಕೆ ತರಬೇಕಾದ ಸ್ಥಿತಿ ಎದುರಾದಾಗ ಮನಸ್ಸಿಗೆ ತುಂಬಾ ವ್ಯಥೆಯಾಗುತ್ತಿತ್ತು. ಈ ಯುದ್ಧ ಯಾಕೆ ಬೇಕು ಅನ್ನಿಸುತ್ತಿತ್ತು…
ವಿಂಗ್ ಕಮಾಂಡರ್ ಸುದರ್ಶನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.