“ರಾಜ ರಾಣಿಯಂತೆ ನಾನು ನೀನು…’
Team Udayavani, Jan 23, 2018, 2:50 PM IST
ಉತ್ಸವದಲ್ಲಿ ವಿಸ್ತಾರವಾಗಿ ಹಾಕಿದ ಪೆಂಡಾಲಿನಲ್ಲಿ ಭರ್ತಿಯಾಗಿ ಉಳಿದ ಜನ ಕಿಕ್ಕಿರಿದು ರಸ್ತೆಯುದ್ದಕ್ಕೂ ತುಂಬಿದ್ದರು. ರೇಷ್ಮೆ ಜರಿಯ ಲಂಗ, ಅದಕ್ಕೊಪ್ಪುವ ಪುಗ್ಗಾ ರವಿಕೆ ತೊಟ್ಟು ಜಡೆ ಹೆಣೆದು ಅದಕ್ಕೆ ಘಮಘಮಿಸುವ ಮಲ್ಲಿಗೆ ಮಾಲೆ ಇಳಿಬಿಟ್ಟು ಅದರ ಮೇಲೊಂದು ಕೆಂಗುಲಾಬಿ ಮುಡಿದು ನಿಂತ ನಿನ್ನ ನೋಡಿದ ಕಣ್ಣ ರೆಪ್ಪೆಗಳು ಮುಚ್ಚಲೇ ಇಲ್ಲ. ಮನಸ್ಸು ನಿನ್ನ ಬಳಿ ಬರಲು ಹಟ ಹಿಡಿಯಿತು.
ದುಂಡನೆಯ ಮಲ್ಲಿಗೆಯ ಮುಖ, ಗುಂಗುರಾದ ಕಪ್ಪು ಕೂದಲು ಸುರುಳಿ ಸುರುಳಿಯಾಗಿ ತಂಗಾಳಿಗೆ ಆ ಕಡೆ ಈ ಕಡೆಯೊಮ್ಮೆ ವಾಲುತ್ತಿತ್ತು. ಕೆಂದುಟಿಯ ಕಿರುನಗೆಗೆ ಯುವ ಹೃದಯಗಳೆಲ್ಲ ನಿನ್ನ ಬೆನ್ನು ಹತ್ತುವಂತಿತ್ತು. ನಿಂಬೆ ಹಣ್ಣಿನ ಮೈ ಬಣ್ಣ, ನಿನ್ನ ಕಾಂತಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ದೇವರು ಅದೆಷ್ಟು ಪುರುಸೊತ್ತು ಮಾಡಿಕೊಂಡು ನಿನ್ನನ್ನು ಸೃಷ್ಟಿಸಿದನೋ ಎನ್ನುವಷ್ಟು ಚೆಲುವಿನ ರಾಶಿ ನಿನ್ನಲ್ಲಿ ಮೈ ತಳೆದಂತಿದೆ. ಕಮಲದ ದಳಗಳಂತಿದ್ದ ಕಂಗಳನ್ನು ಅರಳಿಸಿ ಭಾವಪೂರ್ಣವಾದ ಸುಮಧುರ ಕಂಠದಲ್ಲಿ ತಲೆದೂಗುತ್ತ ಹಾಡಿದ- “ರಾಜ ರಾಣಿಯಂತೆ ನಾನು ನೀನು’ ಎಂಬ ಹಾಡು ನನಗಾಗಿಯೇ ಹಾಡಿದಂತಿತ್ತು. ನಿನ್ನ ಕಂಠ ಸಿರಿಯಲ್ಲಿ ಆ ಹಾಡು ಕೇಳುತ್ತ ಪ್ರೀತಿಯ ಗುಂಗಿನಲ್ಲಿ ಮುಳುಗಿದ್ದ ನಾನು ಕಿವಿಗಡಚಿಕ್ಕುವ ಕರತಾಡನಗಳಿಂದ ಭೂಮಿ ಮೇಲೆ ಬಂದೆ.
ಜನಸಂದಣಿಯಲ್ಲಿ ನುಸುಳಿ ಬಂದು ನಿನ್ನ ಉಸಿರು ನನಗೆ ಬಡಿಯುವಷ್ಟು ಹತ್ತಿರ ನಿಂತಾಗ ಸ್ವರ್ಗಕ್ಕೆ ಮೂರೇ ಗೇಣು ಉಳಿದಿತ್ತು. ನನ್ನಂತೆ ಕುತೂಹಲಿಗಳಾಗಿ ನಿನ್ನ ಅಂದ ಸವಿಯುತ್ತಿದ್ದ ಕೆಲ ಪೋಲಿಗಳು, ನಿನ್ನ ಹಾಡಿಗೆ ಮೆಚ್ಚುಗೆ ಸೂಚಿಸಿ ಅಭಿನಂದನೆ ಹೇಳುವ ನೆಪದಲ್ಲಿ ಕೈ ಕುಲುಕುವ ಆಸೆಯನ್ನು ಹೊತ್ತು ನಿಂತಿದ್ದರು. ಅವರಿಗೆಲ್ಲ ನೀನು ನಮ್ರತೆಯಿಂದ ನಮಸ್ಕರಿಸಿದ ರೀತಿ ನಿನ್ನ ಜಾಣತನಕ್ಕೆ ಕನ್ನಡಿ ಹಿಡಿದಂತಿತ್ತು. ಜನ ಚದುರಿದರೂ ನಾನು ಮಾತ್ರ ನಿನ್ನತ್ತಲೇ ನೋಡುತ್ತ ನಿಂತಿದ್ದೆ. ನನ್ನ ಗೆಳೆಯ ರಟ್ಟೆ ಹಿಡಿದೆಳೆದಾಗ ಎಚ್ಚೆತ್ತು ಅವನೊಡನೆ ಕಾಲೆಳೆಯುತ್ತ ನಡೆಯುತ್ತಿದ್ದಾಗ ನೋಟಕ್ಕೆ ಸಿಕ್ಕ ನೀನು ಮುಗುಳ್ನಗೆ ಬೀರಿದೆ. ನೀನೇ ಮಾತನಾಡಿಸಿ, ಹೆಸರು ಊರು ಕೇಳಿ, ಕೈ ಕುಲುಕಿ ಹೋದಾಗಿನಿಂದ ಪದೇ ಪದೇ ನೆನಪಾದ ನಿನ್ನ ನೆನಪಿನಲ್ಲೇ ದಿನಗಳೆದಿದ್ದೇನೆ.
ನಾನು ನನ್ನಮ್ಮನ ಒಬ್ಬನೇ ಒಬ್ಬ ಮುದ್ದಿನ ಮಗ. ಅವಳಿಗೆ ನೀನೇ ಮುದ್ದಿನ ಸೊಸೆಯಾಗಿ ಬಂದೇ ಬರುತ್ತಿಯಾ ಅಂತ ಒಳ ಮನಸ್ಸು ಹೇಳುತ್ತಿದೆ. ನಿನ್ನ ಕಂಡ ಕಣ್ಣು ಕನಸಿನ ಗೋಪುರವನ್ನೇ ಕಟ್ಟಿದೆ. ಉತ್ಸವವಾಗಿ ವರುಷ ಕಳೆಯಿತು. ನಾಳೆ ಮತ್ತೆ ಉತ್ಸವದ ಗದ್ದಲ ಊರಲ್ಲಿ. ಇಂದು ನೀ ಮುಡಿದ ಮಲ್ಲಿಗೆ ಕಂಪು ಊರೆಲ್ಲ ಹಬ್ಬಿದೆ. ಯಾರ ಕೈಯನ್ನೂ ಕುಲುಕದ ನೀನು ನನ್ನ ಕೈ ಕುಲುಕಿದಾಗಲೇ ನಿನಗೂ ನನ್ನ ಹಾಗೆ ಪ್ರೀತಿ ಶುರುವಾಗಿದೆ ಎಂದೆನಿಸಿತು.
ಉತ್ಸವದ ಗದ್ದಲದಲ್ಲಿ ನೀನೆಲ್ಲಿದ್ದರೂ ಕಣ್ಣುಗಳು ಪತ್ತೆ ಹಚ್ಚುತ್ತವೆ. ಹೋದ ವರ್ಷದಂತೆ ಉಂಡಾಡಿ ಪೋಲಿ ನಾನಲ್ಲ. ನಾನೀಗ ದುಡಿಯುವ ಗಂಡಸು. ನಿನ್ನನ್ನು ಮತ್ತು ವಾತ್ಸಲ್ಯದಿಂದ ಬೆಳೆಸಿದ ಅಮ್ಮನನ್ನು ನೋಡಿಕೊಳ್ಳುವ ಸಾಮರ್ಥಯ ನನಗಿದೆ. ಕಿಕ್ಕಿರಿದ ಜನಸ್ತೋಮದ ನಡುವೆ ನಿನ್ನ ಧ್ಯಾನದಲ್ಲೇ ನಿಂತಿರುವೆ. ಬಂದು ಬಿಡು ಗೆಳತಿ, ಸುಮಧುರ ಯುಗಳ ಗೀತೆಗಳ ಗುನುಗುತ ಬಾಳ್ಳೋಣ- “ರಾಜ ರಾಣಿಯಂತೆ ನಾನು ನೀನು…’
ಜಯ್ ಜೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.