ನಿಲ್ದಾಣದಲ್ಲೇ ಉಳಿಯಿತು ಪ್ರೇಮದ ಬಲೂನು
Team Udayavani, Feb 13, 2018, 2:20 PM IST
ಅವಳು ತನ್ನ ಬಯೋಡಾಟಾವನ್ನೇ ನನ್ನಲ್ಲಿ ಹೇಳಿಕೊಂಡಳು. ಬೆಂಗಳೂರಿನಲ್ಲಿ ಸೆಕೆಂಡ್ ಪಿ.ಯು.ಸಿ. ಓದುತ್ತಿದ್ದೇನೆಂದಳು. ಯಶವಂತಪುರದ ಅಂಕಲ… ಮನೆಯಲ್ಲಿದ್ದೀನಿ ಅಂತಲೂ ಹೇಳಿದಳು. ಅಷ್ಟರಲ್ಲಿ ಟ್ರೇನ್ ಬಂತು…
5ನೇ ಸೆಮಿಸ್ಟರ್ ಸ್ಟಡಿ ಹಾಲಿಡೇಸ್ ಮುಗಿಸಿ ಎಕ್ಸಾಮ… ಅಟೆಂಡ್ ಮಾಡೋಕೆ ಅಂತ ಹಾಸನಕ್ಕೆ ಹೊರಟು ನಿಂತಿದ್ದೆ. “ಪ್ರಯಾಣಿಕರ ಗಮನಕ್ಕೆ… ಟ್ರೇನ್ ನಂಬರ್ 12726, ಧಾರವಾಡದಿಂದ ಬೆಂಗಳೂರಿಗೆ ಹೊರಡಲಿರುವ ಸಿದ್ದಗಂಗಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಕೆಲವೇ ನಿಮಿಷದಲ್ಲಿ…’ ಎಂಬ ಅಶರೀರವಾಣಿ ಕೇಳುತ್ತಲೇ ಒಂದು ಕ್ಷಣ ಚಕಿತನಾಗಿ ಅವಸರದಲ್ಲಿಯೇ ಟಿಕೆಟ… ಕೌಂಟರ್‌ನತ್ತ ಧಾವಿಸಿದೆ. ಕ್ಯೂ ತುಂಬಾ ಉದ್ದ ಇತ್ತು. ಟಿಕೆಟ್ ಸಿಗೋದು ಅನುಮಾನ ಅಂತ ತೋರಿತು. ಆದರೂ ಹೇಗೋ ಮಾಡಿ ಕ್ಯೂ ಮಧ್ಯೆ ತುರುಕಿಕೊಳ್ಳುವುದರಲ್ಲಿ ಸಫಲನಾದೆ.
ಐದು ನಿಮಿಷ ಕಳೆದುಹೋಗಿದ್ದು ಗೊತ್ತಾಗಲೇ ಇಲ್ಲ. ಕ್ಯೂ ತುಂಬಾ ನಿಧಾನವಾಗಿ ಕರಗುತ್ತಿತ್ತು. ಇನ್ನೂ ಆರೇಳು ಜನ ನನ್ನ ಮುಂದೆ ಇದ್ದರು. ಅದೇ ಕ್ಷಣಕ್ಕೆ ಒಬ್ಬಳು ಹುಡುಗಿ ನನ್ನ ಬಳಿಗೆ ಓಡೋಡಿ ಬಂದಳು. ಬಂದವಳನ್ನು ನಾನು ಪೂರ್ತಿ ನೋಡಿಯೂ ಇಲ್ಲ, ಅಷ್ಟರಲ್ಲಿ ಅವಳೇ ತನ್ನನ್ನು ಪರಿಚಯಿಸಿಕೊಂಡಳು. ಅವಳೂ ಬೆಂಗಳೂರಿಗೆ ಹೊರಟು ನಿಂತಿದ್ದಳು. ಅದೆಲ್ಲಾ ಸರಿ, ಅವಳೇಕೆ ನನ್ನ ಬಳಿಗೆ ಬಂದಿದ್ದು ಎಂದುಕೊಳ್ಳುವಷ್ಟರಲ್ಲಿ ಆಕೆಯೇ- “ನನಗೆ ಮತ್ತು ನನ್ನ ತಮ್ಮನಿಗೆ ಎರಡು ಟಿಕೆಟ್ ತೆಗೆದುಕೊಡುವಿರಾ?’ ಎಂದು ಪಿಸುಗುಟ್ಟಿದಳು. ಅವಳ ಪುಣ್ಯಕ್ಕೆ ಕ್ಯೂನಲ್ಲಿ ನನ್ನ ಹಿಂದೆ ನಿಂತಿದ್ದವರಿಗೆ ಅವಳ ಮಾತುಗಳು ಕೇಳಲಿಲ್ಲ. ಕೇಳಿದ್ದಿದ್ದರೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಲ್ಲದೆ ನಾನೇನಾದರೂ ಆಗೋದಿಲ್ಲವೆಂದು ಹೇಳಿದ್ದಿದ್ದರೆ ಪ್ರಾಯಶಃ ಅವಳ ಪರಿಚಯವೂ ಆಗುತ್ತಿರಲಿಲ್ಲ.
ಅಂತೂ ಇಂತೂ ಟಿಕೆಟ… ತೆಗೆದುಕೊಂಡಿದ್ದಾಯಿತು. ಆಮೇಲೆ ಪರಸ್ಪರ ಮಾತು ಶುರುವಾಯಿತು. ಅವಳ ತನ್ನ ಬಯೋಡಾಟಾ ಎಲ್ಲಾ ಹೇಳಿಕೊಂಡಳು. ಬೆಂಗಳೂರಿನಲ್ಲಿ ಸೆಕೆಂಡ್ ಪಿ.ಯು.ಸಿ. ಓದುತ್ತಿದ್ದಳು ಅವಳು. ಯಶವಂತಪುರದ ಅಂಕಲ… ಮನೆಯಲ್ಲಿದ್ದೀನಿ ಅಂತಲೂ ಹೇಳಿದಳು. ಅಷ್ಟರಲ್ಲಿ ನನ್ನ ಟ್ರೇನು ಬಂದಿತು. ಗೆಳೆಯರು ನನಗಾಗಿ ಮುಂದೆ ಕಾಯುತ್ತಿದ್ದರು. ಹೀಗಾಗಿ ಒಲ್ಲದ ಮನಸ್ಸಿಂದಾದರೂ ಅವಳನ್ನು ಬೀಳ್ಕೊಟ್ಟು ನಾನು ಗೆಳೆಯರನ್ನು ಸೇರಿಕೊಂಡೆ.ರೈಲು ಬುಗುಬುಗು ಹೊಗೆ ಉಗುಳುತ್ತಾ ಹೊರಟಿತು.
ಹರಿಹರದಲ್ಲಿ ರೈಲು ನಿಂತಾಗ ನಾವಿದ್ದ ಹಿಂದಿನ ಬೋಗಿಯಲ್ಲೇ ಅವಳಿರುವುದು ಎಂದು ಗೊತ್ತಾಯಿತು. ಅವಳಂತೂ ತುಂಬಾ ಖುಷಿಪಟ್ಟಳು. ಮತ್ತೆ ಬಂದು ಮಾತಾಡಿಸಿದಳು. ನನಗೇಕೋ ಪದೇ ಪದೇ ಅವಳು ಸಿಗುತ್ತಿದ್ದುದು ಆಶ್ಚರ್ಯ ತಂದಿತ್ತು. ಅವಳು ಸೆಕೆಂಡ್ ಪಿಯುಸಿಯ ಪಠ್ಯ, ಮೆಡಿಕಲ… ಓದಬೇಕೆಂಬ ಆಸೆ ಎಲ್ಲವನ್ನೂ ಅವಳು ನನ್ನೊಡನೆ ಹಂಚಿಕೊಂಡಳು. ಕಡೆಯಲ್ಲಿ ಬ್ರೇಕ್‌ಪಾಸ್ಟ್ ಮಾಡೋಣವೆಂದು ಆಹ್ವಾನವಿತ್ತಾಗ ಯಾಕೋ ನಾನು ಮನಸ್ಸು ಮಾಡಲಿಲ್ಲ. ಸ್ನೇಹಿತರ ಕಾರಣವೊಡ್ಡಿ ಅವಳ ಆಹ್ವಾನವನ್ನು ತಿರಸ್ಕರಿಸಿದೆ. ಅದರ ಬಗ್ಗೆ ಈ ತನಕವೂ ನನಗೆ ಬೇಸರವಿದೆ.
ಹಾಸನಕ್ಕೆ ಹೋಗುವಾಗ ಪ್ರತಿ ಸಲ ಅರಸೀಕೆರೆಯಲ್ಲಿ ರೈಲು ಇಳಿದು ಬಸ್ಸು ಹತ್ತುತ್ತಿದ್ದೆವು. ಅಂದೂ ಅದೇ ಪ್ರಕಾರವಾಗಿ ಲಗೇಜುಗಳೊಂದಿಗೆ ರೈಲಿಂದ ಇಳಿದೆ. ಶೂ ಲೇಸ್ ಬಿಚ್ಚಿಕೊಂಡಿರುವುದನ್ನು ಗಮನಿಸಿ ಕಟ್ಟಿಕೊಳ್ಳಲು ಬಗ್ಗಿದೆ. ಸ್ನೇಹಿತರೆಲ್ಲರೂ ಮುಂದೆ ಹೋದರು. ಅದೇ ಸಮಯಕ್ಕೆ ರೈಲು ಹೊರಟಿತು. ನಾನು ಶೂಲೇಸ್ ಕಟ್ಟಿ ತಲೆ ಎತ್ತುವಷ್ಟರಲ್ಲಿ ಮತ್ತೆ ಆ ಹುಡುಗಿ ಕಂಡಿದ್ದಳು. ಅವಳು ಮತ್ತವಳ ತಮ್ಮ ಇಬ್ಬರೂ ಕಿಟಕಿಯಿಂದ ಥ್ಯಾಂಕ್ಸ್ ಎಂದು ಕೂಗುತ್ತಾ ಟಾಟಾ ಮಾಡುತ್ತಿದ್ದರು. ರೈಲು ಎಷ್ಟೋ ಮುಂದೆ ಹೋದಮೇಲೂ ಪರಿಚಯಸ್ಥಳಂತೆ ಕೈ ಬೀಸುತ್ತಲೇ ಇದ್ದಳು ಹುಡುಗಿ. ಈ ಬಾರಿ ಅದೇಕೋ ಮನಸ್ಸಿಗೆ ಏನೋ ಒಂದು ರೀತಿಯ ದುಃಖವಾಯಿತು.
ಮೊನ್ನೆ ಸರಿಸುಮಾರು ಎರಡು ವರ್ಷಗಳ ತರುವಾಯ ಮತ್ತದೇ ಸಿದ್ದಗಂಗಾ ಇಂಟರ್‌ಸಿಟಿ ರೈಲಿನಲ್ಲಿ ನಾನು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದೆ. ಟಿಕೆಟ… ಕೊಳ್ಳುವ ಭರದಲ್ಲಿ ಓಡೋಡಿ ಬಂದು ಕ್ಯೂನಲ್ಲಿ ನಿಂತಿದ್ದೆ. ಆದರೆ ಅದೇಕೋ ಈ ಸಲ ನೀನು ಟಿಕೆಟ… ತೆಗೆದುಕೋ ಎಂದು ಮೆಲ್ಲನೆ ಬಂದು ಪಿಸುಗುಡಲೇ ಇಲ್ಲ…
ಮತ್ತೇನಿಲ್ಲ, ಅದೆಷ್ಟೇ ನೆನಪಿಸಿಕೊಂಡರೂ ಏಕೋ ಏನೋ ಇಂದು ನಿನ್ನ ಹೆಸರೇ ಜ್ಞಾಪಕಕ್ಕೆ ಬರುತ್ತಿಲ್ಲ!!
– ರಜತ ಸಾಖರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ