ಮಹಾಪ್ರೇಮಿ ರಾಮನೂ ಸೀತೆಯ ಮೇಲೆ ಕಟುವಾಗುವ ಗಳಿಗೆಗಳು!
Team Udayavani, Sep 17, 2019, 5:05 AM IST
ಶ್ರೀರಾಮನಲ್ಲಿ ಹಲವು ವಿರೋಧಾಭಾಸಗಳು ಕಾಣಿಸುತ್ತವೆ. ಆದ್ದರಿಂದಲೇ ಈಗಲೂ ಆತನ ಕೆಲವು ನಿರ್ಧಾರಗಳ ಬಗ್ಗೆ ಗೊಂದಲವಿದೆ. ಕೆಲವರಂತೂ ಉಗ್ರವಾಗಿ ಶ್ರೀರಾಮನನ್ನು ವಿರೋಧ ಮಾಡುತ್ತಾರೆ. ಸ್ವಾಮಿ ವಿವೇಕಾನಂದರು ಬಾಲ್ಯದಲ್ಲಿ ತಮ್ಮ ಮನೆಯಲ್ಲಿದ್ದ ಶ್ರೀರಾಮನ ವಿಗ್ರಹವನ್ನು ಮನೆಯಿಂದಾಚೆಗೆ ಎಸೆದಿದ್ದರಂತೆ (ಶ್ರೀರಾಮಕೃಷ್ಣಾಶ್ರಮದಿಂದ ಪ್ರಕಟವಾಗಿರುವ ವೀರಸನ್ಯಾಸಿ ಪುಸ್ತಕ ಓದಿ). ಶ್ರೀರಾಮನ ಕುರಿತ ಘಟನೆಯೊಂದು ಅವರಿಗೆ ಇಷ್ಟವಾಗಿಲ್ಲದಿರುವುದು ಇದಕ್ಕೆ ಕಾರಣ. ಸ್ವತಃ ಭಗವಂತನೆಂದು ಕರೆಸಿಕೊಂಡಿದ್ದರೂ ಆತ ಮರೆಯಲ್ಲಿ ನಿಂತು ಸುಗ್ರೀವನ ಅಣ್ಣ ವಾಲಿಯನ್ನು ಕೊಲ್ಲುತ್ತಾನೆ. ನೀನು ನನ್ನನ್ನು ಮರೆಯಲ್ಲಿ ನಿಂತು ಕೊಲ್ಲುವ ಅಗತ್ಯವೇನಿತ್ತು ಎಂದು ವಾಲಿ ಪ್ರಶ್ನಿಸಿದಾಗ, ಶ್ರೀರಾಮ ಕೊಡುವ ಉತ್ತರವನ್ನು ಒಪ್ಪಲು ಸಾಧ್ಯವೇ ಇಲ್ಲ. ನೀನೊಂದು ಮೃಗ, ಇದೆಲ್ಲ ನನ್ನ ರಾಜ್ಯ. ಇಲ್ಲಿರುವ ಪ್ರಾಣಿಗಳನ್ನು ಕೊಲ್ಲುವುದು ನನ್ನ ಅಧಿಕಾರ ಎನ್ನುವ ಅವನ ಉತ್ತರ ಸೂಕ್ತವಲ್ಲ ಎನಿಸುತ್ತದೆ. ವಾಲ್ಮೀಕಿ ರಾಮಾಯಣದಲ್ಲಿರುವ ಈ ಘಟನೆಯನ್ನು ಕುವೆಂಪು ಅವರು ತಮ್ಮ ಶ್ರೀರಾಮಾಯಣ ದರ್ಶನಂನಲ್ಲಿ ಬದಲಿಸಿದ್ದಾರೆ. ಮರೆಯಲ್ಲಿ ನಿಂತು ಕೊಂದಿದ್ದಕ್ಕೆ ಶ್ರೀರಾಮ ಇಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿ, ತಾನು ಹಾಗೆ ಮಾಡಬಾರದಿತ್ತು ಎನ್ನುತ್ತಾನೆ.
ವಾಲ್ಮೀಕಿ ವಿರಚಿತ ಕೃತಿಯಲ್ಲಿ ಚಿತ್ರಣಗೊಂಡಿರುವ ಶ್ರೀರಾಮನಲ್ಲಿರುವ ಹಲವು ವಿರೋಧಾಭಾಸಗಳನ್ನು ಚರ್ಚಿಸುತ್ತ ಹೋದರೆ, ಅದು ದೀರ್ಘವಾಗಿ ಬೆಳೆಯುತ್ತದೆ. ಆದ್ದರಿಂದ ಅದನ್ನು ಇಲ್ಲಿಗೆ ನಿಲ್ಲಿಸೋಣ. ಇಲ್ಲಿ ನಮಗೆ ಮುಖ್ಯವಾಗಿರುವುದು ಸೀತೆಯ ಕುರಿತ ಶ್ರೀರಾಮನ ವರ್ತನೆಗಳು (ಅಥವಾ ಕವಿ ವಾಲ್ಮೀಕಿಯ ನಿಲುವುಗಳು) ಇಂದಿಗೂ ನಮಗೆ ಅರ್ಥವಾಗದೇ ಉಳಿಯುವ ಬಗೆ. ಆತ ಏಕಪತ್ನಿ ವ್ರತಸ್ಥ. ಎಂಥ ಸಂದರ್ಭದಲ್ಲೂ ಅವಳನ್ನು ಹೊರತುಪಡಿಸಿ, ಇನ್ನೊಬ್ಬಳತ್ತ ಕಣ್ಣೆತ್ತಿಯೂ ನೋಡಲಿಲ್ಲ. ಶ್ರೀರಾಮನಂತಹ ರಾಜರಿಗೆ ನೂರಾರು ರಾಣಿಯರನ್ನು ಹೊಂದುವುದು ಕಷ್ಟವಾಗಿಲ್ಲದ ಕಾಲವದು. ಅಂತಹ ಹೊತ್ತಿನಲ್ಲೂ ಆತ ಅವಳನ್ನು ಬಿಟ್ಟು ಮತ್ತೂಬ್ಬಳನ್ನು ಪರಿಗಣಿಸಲಾರೆ ಎಂದು ಬದುಕಿದರೆ ಅದನ್ನು ದೈವೀಕ ಪ್ರೀತಿ ಎನ್ನಲೇಬೇಕಾಗುತ್ತದೆ. ಒಂದು ಕಾಗೆ ಸೀತೆಯನ್ನು ಕುಟುಕಿತು ಎಂಬ ಕಾರಣಕ್ಕೆ ಅದರ ಮೇಲೆ ಬ್ರಹ್ಮಾಸ್ತ್ರವನ್ನೇ ಪ್ರಯೋಗ ಮಾಡುತ್ತಾನೆ. ಪುರಾಣಗಳಲ್ಲಿ ಬ್ರಹ್ಮಾಸ್ತ್ರ ವಿಶ್ವವಿನಾಶಕವೆಂದು ಪರಿಗಣಿಸಲ್ಪಟ್ಟಿದೆ. ರಾಮಾಯಣದಲ್ಲಿ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ ಉದಾಹರಣೆಗಳು ಬಹಳ ಕಂಡುಬರುವುದಿಲ್ಲ. ಲಂಕೆಗೆ ತೆರಳುವ ಹಾದಿಯಲ್ಲಿ ಸಮುದ್ರ ಅಡ್ಡ ಬರುತ್ತದೆ, ಸಮುದ್ರರಾಜ ದಾರಿ ಬಿಟ್ಟುಕೊಡುವ ಲಕ್ಷಣವೇ ಕಂಡುಬರುವುದಿಲ್ಲ. ಆಗ ರೊಚ್ಚಿಗೆದ್ದ ಶ್ರೀರಾಮ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಸಮುದ್ರವನ್ನೇ ಒಣಗಿಸುತ್ತೇನೆಂದು ಹೇಳುತ್ತಾನೆ, ಆದರೆ ಹಾಗೆ ಮಾಡುವುದಿಲ್ಲ! ರಾಮಾಯಣದಲ್ಲಿ ಇನ್ನೊಮ್ಮೆ ಬ್ರಹ್ಮಾಸ್ತ್ರದ ಉದಾಹರಣೆ ಕಂಡುಬರುವುದು, ಸುಂದರಕಾಂಡದಲ್ಲಿ. ಇಂದ್ರಜಿತ್, ಹನುಮಂತನನ್ನು ಕಟ್ಟಿಹಾಕಲು ಬ್ರಹ್ಮಾಸ್ತ್ರ ಪ್ರಯೋಗ ಮಾಡಬೇಕಾಗಿ ಬರುತ್ತದೆ. ಸೀತೆಗೆ ಕಿರುಕುಳ ನೀಡುವ ಒಂದು ಕಾಗೆಯನ್ನು (ಕಾಕುಸ್ಥ್ಯ) ಕೊಲ್ಲಲು, ಇಂತಹ ಭೀಕರ ಅಸ್ತ್ರ ಪ್ರಯೋಗ ಮಾಡುವ ಶ್ರೀರಾಮ ಸೀತೆಯನ್ನು ಅದೆಷ್ಟು ಪ್ರೀತಿಸುತ್ತಿರಬೇಕು? ಆದರೆ ನಿಮಗೆ ಪ್ರಶ್ನೆ ಉದ್ಭವಿಸುವುದು, ಶಾಶ್ವತವಾಗಿ ಕಾಡುವುದು ಸೀತೆ ರಾವಣನ ಹಿಡಿತದಿಂದ ಹಿಂತಿರುಗಿ ಬಂದ ನಂತರ.
ಸತತ 1 ವರ್ಷದಿಂದ ರಾಮನನ್ನು ಕಾಣದೇ, ಆತ ಬದುಕಿದ್ದಾನೊ ಇಲ್ಲವೋ ತಿಳಿಯದೇ, ತನ್ನನ್ನು ಕಾಪಾಡಲು ಬರುತ್ತಾನೋ ಇಲ್ಲವೋ ಎಂದು ಗೊತ್ತಾಗದೇ, ಬಂದರೂ ಆತನಿಗೆ ತನ್ನನ್ನು ಉಳಿಸಿಕೊಳ್ಳುವ ಶಕ್ತಿಯಿದೆಯೋ ಇಲ್ಲವೋ ಎಂಬ ಯಥಾರ್ಥ ಜ್ಞಾನವಿಲ್ಲದೇ ಸೀತೆ ಅಶೋಕವನದಲ್ಲಿ ದಿನದೂಡುತ್ತಿರುತ್ತಾಳೆ. ಆಗಿನ ಆಕೆಯ ಪರಿಸ್ಥಿತಿಯಲ್ಲಿ ಸರಿಯಾಗಿ ಊಟ ಮಾಡಿರುವುದೂ ಕಷ್ಟ. ಅದೆಷ್ಟು ದಿನಗಳನ್ನು ಆಕೆ ಉಪವಾಸದಿಂದ ದೂಡಿರುತ್ತಾಳ್ಳೋ? ಅಂತಹ ಸೀತೆ ಯುದ್ಧ ಮುಗಿದ ನಂತರ ಮರಳಿ ರಾಮನ ಬಳಿ ಬಂದಾಗ ಆತ ಹೇಳಿದ್ದೇನು ಗೊತ್ತಾ? ನಿನ್ನನ್ನು ಆತನ ಹಿಡಿತದಿಂದ ಬಿಡಿಸಿರುವುದು ನನ್ನ ಪ್ರತಿಷ್ಠೆಗಾಗಿ, ಇಷ್ವಾಕು ವಂಶದ ಮರ್ಯಾದೆಗಾಗಿ, ನಿನಗಾಗಿ ಅಲ್ಲ. ನೀನು ಯಾರ ಬಳಿಯಾದರೂ ಆಶ್ರಯ ಪಡೆಯಬಹುದು ಎಂದು ಕಟುವಾಗಿ ಹೇಳುತ್ತಾನೆ. ಈಗ ಎರಡೂ ಘಟನೆಗಳನ್ನು ನೀವೇ ತುಲನೆ ಮಾಡಿ, ನಿರ್ಧರಿಸಿ.
ನಿರೂಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.