ಹಲೋ ಡಾಕ್ಟರ್!
ವೈದ್ಯೋ ನಾರಾಯಣೋ ಹರಿಃ
Team Udayavani, Oct 29, 2019, 5:47 AM IST
ದ್ವಿತೀಯ ಪಿ.ಯು.ಸಿ. ಓದುತ್ತಿರುವ ಅನೇಕ ವಿದ್ಯಾರ್ಥಿಗಳ ಕನಸು ತಾನೊಬ್ಬ ‘ಡಾಕ್ಟರ್’ ಆಗಬೇಕು ಎಂದು. ಹಾಗಾದರೆ ಈ ವೈದ್ಯಕೀಯ ಪದವಿ ಎಂದರೇನು? ಈ ವೃತ್ತಿಯಲ್ಲಿ ಮುಂದುವರೆಯುವುದು ಹೇಗೆ? ವೈದ್ಯಕೀಯ ವೃತ್ತಿಯ ಮುಂದಿನ ಭವಿಷ್ಯವೇನು? ಬನ್ನಿ ನೋಡೋಣ.
ಎಂ.ಬಿ.ಬಿ.ಎಸ್
ಬ್ಯಾಚಲರ್ ಆಫ್ ಮೆಡಿಸಿನ್ ಅಂಡ್ ಬ್ಯಾಚ್ಯುಲರ್ ಆಫ್ ಸರ್ಜರಿ ಎಂಬುದೇ ಎಂ.ಬಿ.ಬಿ.ಎಸ್‌ನ ವಿಸ್ತೃತ ಅರ್ಥ. ಇದು ‘ಡಾಕ್ಟರ್’ ಎನಿಸಿಕೊಳ್ಳಲು ಗಳಿಸಬೇಕಾದ ಪದವಿ. ಈ ಕೋರ್ಸ್‌ನಲ್ಲಿ, ವೈದ್ಯಕೀಯ ಸೇವೆಗೆ ಅಗತ್ಯವಾದ ಜ್ಞಾನ ಮತ್ತು ಸೇವಾದೀಕ್ಷೆ ನೀಡಲಾಗುವುದು. ರೋಗಲಕ್ಷಣಗಳನ್ನು ಅರಿತು ಔಷಧಿಗಳನ್ನು ಸೂಚಿಸುವ ಹಕ್ಕು ಮತ್ತು ಜವಾಬ್ದಾರಿಯನ್ನು ಈ ಪದವಿ ನೀಡುತ್ತದೆ. ಪದವಿ ಪಡೆದ ಬಳಿಕ ಹೆಸರಿನ ಹಿಂದೆ ‘ಡಾ’ ವನ್ನು ತಗುಲಿಸಿ ಕೊಂಡು ಡಾಕ್ಟರ್ ಆಗಬಹುದು. ಆದರೆ ಈ ಪದವಿಗೆ ಸೇರುವುದೇ ಕಠಿಣ ಸವಾಲು. ದೃಢ ಸಂಕಲ್ಪ ಮತ್ತು ಶಿಸ್ತುಬದ್ಧ ತಯಾರಿಯಿಂದ ಮಾತ್ರ ಈ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯ.
ಅತಿ ಹೆಚ್ಚಿನ ಮಟ್ಟದ ವೃತ್ತಿಪರತೆ ಹೊಂದಿರುವುದು ಮತ್ತು ಸಹ ಮಾನವರ ಜೀವ ಉಳಿಸುವ ಪಣ ತೊಡುವುದು ಇಲ್ಲಿ ಅನಿವಾರ್ಯ. ಇದು ಐದು ವರ್ಷಗಳ ಪದವಿ ಕೋರ್ಸ್. ವೈದ್ಯಕೀಯ ಅಧ್ಯಯನದಲ್ಲಿ ಮನುಷ್ಯದೇಹದ ಅಂಗಾಂಗಗಳ ಅಧ್ಯಯನ, ದೇಹಕ್ಕೆ ಸಂಬಂಧಿಸಿದ ರಾಸಾಯನಿಕ ವಿಚಾರ ಮತ್ತು ಅದರ ಗುಣಾಂಶಗಳು, ಸ್ನಾಯು-ಮೂಳೆಗಳ ಅಧ್ಯಯನ, ರೇಡಿಯೊ ಥೆರಪಿ, ಕಣ್ಣು, ಕಿವಿ, ಮೂಗು-ಗಂಟಲುಗಳ ಅಧ್ಯಯನ, ಅರಿವಳಿಕೆ ಶಾಸ್ತ್ರ ಇತ್ಯಾದಿ ವಿಷಯಗಳನ್ನು ಕುರಿತು ಇಲ್ಲಿ ಸಮಗ್ರವಾಗಿ ಕಲಿಸಲಾಗುವುದು.
ಪ್ರವೇಶ ಪಡೆಯುವುದು ಹೇಗೆ?
ನೀವು ಡಾಕ್ಟರ್ ಆಗಬೇಕು ಅನ್ನೋ ಕನಸು ಕಾಣುವುದು ಸುಲಭ. ಆದರೆ, ಅದಕ್ಕೆ ಬೇಕಾದ ತಯಾರಿಯನ್ನು ಹತ್ತನೇ ತರಗತಿಯಿಂದಲೇ ಮಾಡಬೇಕಾಗುತ್ತದೆ. ಪಿಯುಸಿ, ಡಾಕ್ಟರ್ ವೃತ್ತಿಗೆ ಪಾಯ ಇದ್ದಂತೆ.
ದ್ವಿತೀಯ ಪಿ.ಯು.ಸಿ. (10+2) ಅಧ್ಯಯನದಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯಗಳನ್ನು ಓದಿರಬೇಕು. ಅದರಲ್ಲಿ ಉತ್ತಮ ಅಂಕಗಳಿಸಬೇಕು. ಉತ್ತಮ ಅಂಕ ಗಳಿಸಬೇಕು ಅಂದರೆ ಏನು? ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮೊದಲೇ ಮಾಡಿಕೊಳ್ಳಬೇಕಾಗುತ್ತದೆ. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೇಲೆ ಡಾಕ್ಟರ್ ಆಗುವುದೋ, ಎಂಜಿನಿಯರಿಂಗ್‌ಗೆ ಹೋಗುವುದೋ ಎಂದು ತೀರ್ಮಾನ ಮಾಡುವವರು ನಮ್ಮಲ್ಲಿ ಹೆಚ್ಚು. ಆದರೆ, ನಿಜಕ್ಕೂ ವೈದ್ಯವೃತ್ತಿಗೆ, ಮೊದಲ ಪಿಯುಸಿಯಿಂದಲೇ ಅಂಕಗಳನ್ನು ತೆಗೆಯಬೇಕಾಗುತ್ತದೆ.
ಆಯಾ ರಾಜ್ಯ ಅಥವಾ ಕೇಂದ್ರ ನಡೆಸುವ ಪ್ರವೇಶ ಪರೀಕ್ಷೆಯಲ್ಲಿಯೂ ( ಎನ್‌ಇಇಟಿ) ಉತ್ತಮ ಅಂಕಗಳನ್ನು ಗಳಿಸಬೇಕು. ಪಡೆದ ಅಂಕಗಳು ಮತ್ತು ಲಭ್ಯವಿರುವ ಸೀಟುಗಳ ಆಧಾರದ ಮೇಲೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ದೊರೆಯುತ್ತದೆ.
ಅಲ್ಲಿಯ ಅಧ್ಯಯನದ ವಿಷಯಗಳನ್ನು ಅರ್ಥಮಾಡಿಕೊಂಡು ಪರೀಕ್ಷೆಗಳಲ್ಲಿ ಪಾಸಾಗಿ ಇಂಟರ್ನ್ಷಿಪ್ ಮುಗಿಸಿದ ಬಳಿಕ ಪದವಿ ಪ್ರದಾನ ಮಾಡಲಾಗುವುದು. ವೈದ್ಯರಾಗಲು ಬೇಕಾಗಿರುವುದು ಹೆಚ್ಚಿನ Mಕಿ, ಇಕಿ ಜೊತೆಗೆ ತಾಳ್ಮೆ. ಪದವಿ ಪಡೆಯುವಾಗಲೇ ಪ್ರಾಕ್ಟಿಕಲ್‌ನಲ್ಲಿ ದೇಹದ ನಾನಾ ಭಾಗಗಳನ್ನು ಕೊಯ್ಯುವ ಮನೋಸಿದ್ಧತೆ ಇರಬೇಕಾಗುತ್ತದೆ. ಇದು ವೈದ್ಯರಾಗುವವರಿಗೆ ಇರಬೇಕಾದ ಬೇಸಿಕ್ ಅರ್ಹತೆ. ಇದರ ಜೊತೆಗೆ, ರೋಗಿಗಳನ್ನು ಸಂಭಾಳಿಸುವ ಸಮಾಧಾನ ಚಿತ್ತ ಇರುವವರು ಮಾತ್ರ ವೈದ್ಯರಾಗಬಲ್ಲರು.
ವೈದ್ಯ ವೃತ್ತಿಯಲ್ಲಿ ಹೆಚ್ಚು ಕಮ್ಮಿ 65 ಬಗೆ ಇದೆ. ಉದಾಹರಣೆಗೆ- ಹಾರ್ಟ್, ಲಂಗ್ಸ್, ಮೆದುಳು ಹೀಗೆ… ಇದರಲ್ಲಿ ನಿಮ್ಮ ಆಸಕ್ತಿಗೆ ತಕ್ಕಂತೆ ವೃತ್ತಿಯನ್ನು ಆಯ್ದು ಕೊಳ್ಳಬಹುದು. ಕೆಲವೊಬ್ಬರು, ಆದಾಯದ ಮೇಲೆ ವೃತ್ತಿಯನ್ನು ಆಯ್ದು ಕೊಳ್ಳುವುದೂ ಉಂಟಂತೆ. ನೀವು ಯಾವ ಬಗೆಯ ವೃತ್ತಿ ಮುಂದುವರಿಸುತ್ತೀರಿ ಅನ್ನೋದರ ಮೇಲೆ ಸ್ಪೆಷಲೈಸೇಷನ್ ತೀರ್ಮಾನ ಮಾಡಬೇಕಾಗುತ್ತದೆ. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.
ಎಂ.ಡಿ. ಪರೀಕ್ಷೆ
ವೈದ್ಯಕೀಯ ವೃತ್ತಿಜೀವನದಲ್ಲಿ ಕೇವಲ ಪದವಿ ಮುಗಿಸಿದರೆ ಸಾಲದು. ಆನಂತರದ ಹಂತವನ್ನೂ ಪೂರೈಸಬೇಕಾಗುತ್ತದೆ. ವೈದ್ಯಕೀಯಕ್ಕೆ ಸಂಬಂಧಿಸಿದ ಯಾವುದಾದರೊಂದು ವಿಷಯದಲ್ಲಿ ‘ಡಾಕ್ಟರ್ ಆಫ್ ಮೆಡಿಸಿನ್’ (ಎಂ.ಡಿ.) ಪರೀಕ್ಷೆಯನ್ನು ಕೂಡ ಪಾಸು ಮಾಡಬೇಕಾಗುತ್ತದೆ. ಇದು ವೈದ್ಯಕೀಯದಲ್ಲಿ ಇರುವ ಮಾಸ್ಟರ್ ಪದವಿ. ಸಾಮಾನ್ಯವಾಗಿ, ವಿದ್ಯಾರ್ಥಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಇದು 3-4 ವರ್ಷಗಳ ಕೋರ್ಸ್ ಆಗಿರುತ್ತದೆ. ಎಂ.ಡಿ. ಕೋರ್ಸ್ ಪಿಹೆಚ್.ಡಿ. ಕೋರ್ಸ್‌ಗೆ ಸಮನಾದದ್ದು.
ಕೆರಿಯರ್
ಸರ್ಕಾರಿ ಮತ್ತು ಖಾಸಗಿ ಎರಡೂ ವಲಯದಲ್ಲಿ ವೈದ್ಯರಿಗೆ ಅವಕಾಶ, ಮನ್ನಣೆ, ಗೌರವ ಉತ್ತಮ ಸಂಬಳ ದೊರೆಯುತ್ತದೆ. ಮುಂದುವರಿಯುತ್ತಿರುವ ರಾಷ್ಟ್ರವಾದ ಭಾರತದಲ್ಲಿ, ಜಾಗತಿಕ ಆರೋಗ್ಯ ರಕ್ಷಣೆಯ ಜವಾಬ್ದಾರಿ ನಿರ್ವಹಿಸುವ ಆವಶ್ಯಕತೆ ಇರುವ ಕಾರಣ ವೈದ್ಯರಿಗೆ ಬಹು ಬೇಡಿಕೆ ಇದೆ. ಆಸ್ಪತ್ರೆಗಳು, ಫಾರ್ಮಾ ಮತ್ತು ಮೆಡಿಕಲ್ ಕಂಪೆನಿಗಳು, ಬೈಯೊಟೆಕ್ನಾಲಜಿ ಕಂಪೆನಿಗಳು, ಇವರನ್ನು ಕೈ ಬೀಸಿ ಕರೆಯುತ್ತವೆ. ಜೊತೆಗೆ ಖಾಸಗಿಯಾಗಿಯೂ ಕ್ಲಿನಿಕ್ ಇಟ್ಟು ಸೇವೆ – ಸಂಪಾದನೆ ಎರಡನ್ನೂ ಮಾಡಬಹುದು. ಜ್ಯೂನಿಯರ್ ಡಾಕ್ಟರ್-ಡಾಕ್ಟರ್-ಫಿಸಿಷಿಯನ್-ಜ್ಯೂನಿಯರ್ ಸರ್ಜನ್-ಮೆಡಿಕಲ್ ಪೊ›ಫೆಸರ್- ಸಂಶೋಧಕ-ವಿಜ್ಞಾನಿ… ಹೀಗೆ, ಹತ್ತು ಹಲವು ಬಗೆಯಾಗಿ ಈ ಕ್ಷೇತ್ರದಲ್ಲಿ ಬೆಳೆಯಬಹುದು. ಆರಂಭಿಕ ಪಗಾರ ವರ್ಷಕ್ಕೆ 4-6 ಲಕ್ಷವಿದ್ದು, ಅನುಭವ, ಹೆಸರು ಗಳಿಸುತ್ತಿದ್ದಂತೆಯೇ ಸಂಪಾದನೆಯೂ ಹೆಚ್ಚುತ್ತದೆ.
ಪದವಿ/ ಎಂ.ಬಿ.ಬಿ.ಎಸ್.
ವೈದ್ಯಕೀಯ ಪದವಿಗೆ ಪ್ರವೇಶ ಪರೀಕ್ಷೆ (UG / MBBS)
AIPMT (ಆಲ್ ಇಂಡಿಯಾ ಪ್ರೀ ಮೆಡಿಕಲ್ ಪ್ರೀಡೆಂಟಲ್ ಟೆಸ್ಟ್)
AIMS (ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂಟ್ರೆನ್ಸ್ ಟೆಸ್ಟ್)
JIPMER (ಜವಾಹರ್‌ಲಾಲ್ ಇನ್ಸ್‌ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್)
ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ಎಂಟ್ರೆನ್ಸ್ ಎಕ್ಸಾಮ್
BHU -PMT (ಬನಾರಸ್ ಹಿಂದೂ ಯೂನಿವರ್ಸಿಟಿ ಪ್ರೀ ಮೆಡಿಕಲ್ ಟೆಸ್ಟ್)
ಮಣಿಪಾಲ್ ಯೂನಿವರ್ಸಿಟಿ ಆಡ್ಮಿಷನ್ಸ್ ಟೆಸ್ಟ್ ಫಾರ್ ಅಂಡರ್ ಗ್ರಾಜುಯೇಟ್ ಸ್ಟಡೀಸ್.
ಸ್ನಾತಕೋತ್ತರ ವೈದ್ಯಕೀಯ ಪದವಿ ಪರೀಕ್ಷೆಗಳು
AIPGEE (ಆಲ್ ಇಂಡಿಯಾ ಪೋಸ್ಟ್ ಗ್ರಾಜುಯೇಟ್ಸ್ ಮೆಡಿಕಲ್ ಎಂಟ್ರೆನ್ಸ್ ಎಕ್ಸಾಮಿನೇಷನ್)
DUPGEMT (ಡೆಲ್ಲಿ ಯೂನಿವರ್ಸಿಟಿ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಂಟ್ರೆನ್ಸ್ ಟೆಸ್ಟ್)
ಡಾಕ್ಟೊರಲ್ ಕೋರ್ಸ್ ಪರೀಕ್ಷೆ
NEET – SS
ರಘು ವಿ. ಪ್ರಾಂಶುಪಾಲರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.