ಅನುದಿನದ ಸಂಜೆಯಲಿ ನಿನದೇ ಧ್ಯಾನ
Team Udayavani, Dec 12, 2017, 12:17 PM IST
ಡಿಯರ್ ಗೀತಾ,
ಅದಾಗಲೇ ಶುರುವಾಗಿದೆ ಕಣೇ, ಎದೆಯಲ್ಲೊಂದು ಎಂದಿಗೂ ಮುಗಿಯದ ಯುಗಳಗೀತೆ. ಸಂಜೆಯ ಶ್ಯಾಮಲೆಯ ಮುಡಿಯಲ್ಲಿ ನಿನ್ನ ನೆನಪ ಸುಮಗಳ ಘಮ ಘಮ. ಮೆಲ್ಲನೆ ತೀಡುವ ತಣ್ಣನೆಯ ಗಾಳಿಯಲಿ ನೀನಾಡಿದ ಪಿಸು ಮಾತುಗಳಿವೆ ಜೊತೆಯಲಿ. ಅನುದಿನದ ಸಂಜೆಯಲಿ ನಿನ್ನ ಧ್ಯಾನದಿಂದ ಹೊರಬರುವುದು ತುಸು ಕಷ್ಟವೇ ಗೆಳತಿ. ಮತ್ತೆ ಮತ್ತೆ ಭೇಟಿ ಮಾಡುವ ಪ್ರತೀ ಮಧುರ ಕ್ಷಣಗಳಲ್ಲಿ ನಿನ್ನನ್ನು ಇದಿರುಗೊಳ್ಳುವ ನನ್ನ ಕಣ್ಣಂಚಿನ ಕನಸಿನ ಕುಣಿತವ ಅವಲೋಕಿಸುವ ಸೂಕ್ಷ್ಮ ಸಂವೇದನೆ ಹುಡುಗಿ ನೀನಲ್ಲವೇ. ಮತ್ತೇಕೆ ತಡ ಹುಡುಗಿ? ಸಮ್ಮತಿಸು. ನಮ್ಮಿರ್ವರ ದಾಂಪತ್ಯದ ಹೊತ್ತಿಗೆಗೆ ಮುನ್ನುಡಿ ಬರೆಯಲು ಉತ್ಸುಕನಾಗಿರುವೆ.
ಬದುಕಿದರೆ ನಿನ್ನೊಂದಿಗೆ ಎನ್ನುವ ಸಿದ್ದಾಂತ ನನ್ನಲ್ಲಿ ಈಚೀಚಿಗೆ ಬಲವಾಗಿ ಬೇರೂರಿದೆ. ಇಲ್ಲ ಎನ್ನದಿರು ಚಿನ್ನ. ಅಷ್ಟೂ ಬದುಕನ್ನು ನಿನಗಾಗಿ ಮೀಸಲಿಡುವೆ. ಒಂದಿಷ್ಟು ಒಲವನು ನನಗೂ ಹಂಚಲಾರೆಯಾ? ನನ್ನೆದೆಯ ಗೂಡಲ್ಲಿ ಸದಾಶಯಗಳ ಬೆಚ್ಚನೆಯ ಹೊದಿಕೆಯಲಿ ನಿನ್ನನ್ನು ಕಾಪಿಡುವೆ. ಉದ್ಯೋಗಕ್ಕೆ ಅರ್ಜಿ ಹಾಕಿ ಹಾಕಿ ಬೇಸತ್ತ ನಿರುದ್ಯೋಗಿಯ ಪಾಡನ್ನು ನನಗೆ ನೀಡದಿರು. ಇದೊಂದೇ ಅರ್ಜಿಯನ್ನು ನಾನು ಹಾಕುತ್ತಿರುವುದು. ಪರಿಶೀಲಿಸಿ ನೇಮಕಾತಿಯ ಆದೇಶ ನೀಡಿದರೆ, ಕೊನೆಯವರೆಗೂ ನಿಷ್ಠಾವಂತ ಪ್ರೇಮೋದ್ಯೋಗಿಯಾಗಿ ನಿನಗಾಗಿ ದುಡಿದು ಬಿಡುವೆ. ಆದರೆ ನೆನಪಿರಲಿ, ಅರ್ಜಿ ವಜಾ ಮಾಡಿದರೆ ನಾನು ಜೀವನ ಪೂರ್ತಿ ದುಃಖ ವಿಹ್ವಲ!
ಸದಾ ನೋಡಬೇಕೆನ್ನಿಸುವ ಆ ಮುಖಕಮಲ, ಸದಾ ಕೇಳುತಿರಬೇಕೆನ್ನಿಸುವ ಸಕ್ಕರೆ ಸವಿಯ ಮೆಲು ಮಾತು, ಸೋತ ಬದುಕ ಸಾಂತ್ವನಿಸುತ್ತಾ “ಬಿ ಪಾಸಿಟಿವ್ ಕಣೋ’ ಎನ್ನುವ ಭರವಸೆಯ ಅಪ್ಪುಗೆ, ಆ ಮುಂಗುರುಳು… ಈ ಸದರಿ ಸಂಪತ್ತುಗಳ ಒಡೆಯ ನಾನಾಗಬೇಕೆಂದು ಮನಸ್ಸು ಮಗುವಿನಂತೆ ಹಠ ಹಿಡಿದಿದೆ. ನಿರಾಸೆಗೊಳಿಸದಿರು ಗೆಳತಿ. ನನ್ನನ್ನು ನಿಶ್ಶಕ್ತನನ್ನಾಗಿ ಮಾಡದಿರು.
ನಿನ್ನ ಕೈ ಹಿಡಿದು ಸಪ್ತಪದಿ ತುಳಿದು, ಸಪ್ತ ಸ್ವರಗಳೂ ಹೊಮ್ಮಿ ಬರುವ ಹೃದಯ ಗೀತೆಯನ್ನು ನಿನ್ನ ಸಾಂಗತ್ಯದಲಿ ಕೊನೆಯವರೆಗೂ ಹಾಡಬೇಕಿದೆ. ಭಾವಗಳ ಸ್ವರ ಸಂಯೋಜಿಸುವ ನನ್ನ ಬದುಕಿನ ಗೀತೆ ನೀನಾಗಬೇಕಷ್ಟೆ.ಆಗ ಈ ಬಾಳಿಗೊಂದು ಸಾರ್ಥಕ್ಯದ ಸಮಾಧಾನ! ಎದೆಯಲ್ಲಿ ಹುದುಗಿ ಏಕಾಂತದಲ್ಲಿ ಹೃದಯವನ್ನು ಕೊರೆಯುತ್ತಿದ್ದ ತಳಮಳದ ಸವಿಸ್ತಾರವನ್ನು ನಿನ್ನ ಮುಂದೆ ಅರುಹಿರುವೆ.
ಅಂತಿಮ ನಿರ್ಧಾರ ನಿನ್ನ ಕೈಯಲ್ಲಿದೆ.
ಜೀವಗಳ ಕೂಡಿಸು ಹುಡುಗಿ, ನಿನಗೆ ಪುಣ್ಯ ಬಂದೀತು!
ಫಲಿತಾಂಶದ ನಿರೀಕ್ಷೆಯಲ್ಲಿರುವ ನಿನ್ನೊಲುಮೆಯ ಅರ್ಜಿದಾರ
ನಾಗರಾಜ ಮಗ್ಗದ
ಕೊಟ್ಟೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.