ಅಪ್ಪ ಹೇಳಿದ ಸರಳ ಪಾಠ: ಮಗಳೇ, ಝೂ ಎಲಿಫೆಂಟ್ ಆಗ್ಬೇಡ!
Team Udayavani, Apr 11, 2017, 3:50 AM IST
ನೀನು ಎಂಜಿನಿಯರೇ ಆಗು ಎಂದು ಅಪ್ಪ ನನಗೆ ಬಲವಂತ ಮಾಡಲಿಲ್ಲ. ಈಗ ಸೈನ್ಸ್ ತೆಗೆದುಕೊಂಡು, ಪ್ರಯಾಸಪಡದೆ ನನ್ನ ವ್ಯಾಸಂಗ ಸಾಗಿದೆ. ತೀರಾ ಕಷ್ಟ ಅಂತ ಅನ್ನಿಸಿದಾಗ, ಅಪ್ಪನ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನು ನೆನೆಸಿಕೊಳ್ಳುತ್ತೇನೆ…
ಹತ್ತನೇ ತರಗತಿಯ ಫಲಿತಾಂಶದ ಹತ್ತಿರದಲ್ಲಿದ್ದೆ. ಅದು ನನಗೆ ಬದುಕಿನ ಟರ್ನಿಂಗ್ ಪಾಯಿಂಟ್ ಅಂತ ಎಲ್ಲರೂ ಹೇಳುತ್ತಿದ್ದರು. ರಿಸಲ್ಟ್ ನೋಡಿದರೆ, ಹೇಳಿಕೊಳ್ಳುವಂಥ ಅಂಕ ಬಾರದೆ, ಮೊದಲನೇ ದರ್ಜೆಯಲ್ಲಿ ಪಾಸಾಗಿದ್ದೆ. ನನ್ನ ನಿಧಾನ ನಡಿಗೆಯ ಬುದ್ಧಿಶಕ್ತಿಯ ಮೇಲೆ ಅಪಾರ ನಂಬುಗೆ ಇದ್ದ ನಾನು ಕಲಾ ವಿಭಾಗಕ್ಕೆ ಸೇರೋಣವೆಂದು ನಿರ್ಧರಿಸಿದ್ದರೆ ಅಪ್ಪನಿಗೆ ಸೈನ್ಸ್ ಓದಿ ಮುಂದೆ ಎಂಜಿನಿಯರ್ ಮಾಡಿಸಬೇಕೆಂಬ ಮಹತ್ತರದ ಕನಸು.
ಕಷ್ಟದ ವಿಷಯವನ್ನು ಕಷ್ಟಪಟ್ಟು ಓದುವ ಬದಲು, ಸುಲಭದ ವಿಷಯ ಆರಿಸಿ ಸುಲಭವಾಗಿ ಯಾಕೆ ಓದಬಾರದೆಂಬ ಬಯಕೆ ನನ್ನದು. ಅಲ್ಲದೆ, ಇದುವರೆಗೂ ನಮ್ಮ ಸಂಬಂಧಿಕರಲ್ಲಿ ಯಾರೂ ಸೈನ್ಸ್ ತೆಗೆದುಕೊಂಡಿರಲಿಲ್ಲ ಮತ್ತು ತುಂಬಾ ಕಷ್ಟ ಎಂದು ಫೇಲಾಗಿರುವವರ ಉದಾಹರಣೆ ನೀಡಿ ಇನ್ನಷ್ಟು ಅಧೈರ್ಯ ತುಂಬಿ ತೃಪ್ತಿ ಪಟ್ಟುಕೊಳ್ಳುತ್ತಿದ್ದರು. ಇದೆಲ್ಲವನ್ನೂ ಯೋಚಿಸಿ ನನಗೆ ಸೈನ್ಸ್ ಬೇಡವೇ ಬೇಡೆಂದು ಪಟ್ಟು ಹಿಡಿದು ಮೇಲಿನ ನನ್ನ ಮನದಲ್ಲಿದ್ದ ಆಂದೋಲನವನ್ನು ಅಪ್ಪನೆದುರು ತೆರೆದಿಟ್ಟೆ. ಧೀರ ಸೈನಿಕರ ಜೊತೆ ಸಿಆರ್‌ಪಿಎಫ್ನಲ್ಲಿದ್ದ ಅಪ್ಪನಿಗೆ ನನ್ನ ಬಗ್ಗೆ ಕನಿಕರ ಮೂಡಿತ್ತಾ ಅಥವಾ ಹೇಡಿ ಎಂದುಕೊಂಡರಾ ಈಗಲೂ ತಿಳಿದಿಲ್ಲ. ಆದರೆ ಅಂದು ಅವರು ತಾಳಿದ ಸೌಮ್ಯದ ನಿರ್ಧಾರ ಇವತ್ತಿಗೂ ನನ್ನ ಪಾಲಿಗೆ ಅಪ್ಪನನ್ನೇ ಹೀರೋವನ್ನಾಗಿಸಿದೆ.
“ನೀವು ಮೈಸೂರಿಗೆ ಹೋಗಿ ಬೋನಿನಲ್ಲಿದ್ದ ಪ್ರಾಣಿಗಳನ್ನು ನೋಡಿ ಬಂದಿರಲ್ಲವಾ?’ ಎಂದು ಕೇಳಿದರು ಅಪ್ಪ. ನಾನು ಹೂಂ ಗುಟ್ಟಿದೆ. ನನಗೀಗಲೂ ತುಂಬಾ ಅಚ್ಚರಿಯೆಂದರೆ ಅಲ್ಲಿರುವ ಗಜಪಡೆಗಳು! ಅದರ ಕಾಲಿನ ಅರ್ಧದಷ್ಟು ಇರದ ನರಪೇತಲ ಮಾವುತನಿಗೆ ಎಷ್ಟು ಹೆದರುತ್ತವೆ! “ಕಾಡಿನಲ್ಲಿ ತನ್ನ ಮೂರರಷ್ಟಿರುವ ಮುಗಿಲೆತ್ತರದ ವೃಕ್ಷವನ್ನೇ ನಡುಗಿಸಿ ಕೆಳಕ್ಕೆ ಬೀಳಿಸುವ, ಸಿಮೆಂಟ್ ಗೋಡೆಯನ್ನು ನಿಮಿಷಾರ್ಧದಲ್ಲಿ ಉರುಳಿಸುವ ಆನೆಗೆ ತನ್ನ ದೇಹದ ಹತ್ತನೆಯ ಒಂದು ಭಾಗಕ್ಕೆ ಸಮನಾಗದ ಮಾವುತನಿಗೆ, ನೂರನೇ ಒಂದು ಭಾಗದಷ್ಟಿರದ ಆ ಅಂಕುಶಕ್ಕೆ ಹೆದರುತ್ತದೆ. ಅದಕ್ಕಿರುವ ಸಾಮರ್ಥ್ಯಕ್ಕೆ ಯಾವ ಬೇಲಿ, ಕಬ್ಬಿಣದ ಸರಳುಗಳು ಯಾವ ಲೆಕ್ಕ?’ ಎಂದರು. ನಾನು ಕಣ್ಣು ಪಿಳಿ ಪಿಳಿ ಬಿಟ್ಟು ಕೇಳುತ್ತಿದ್ದೆ. ಹೌದಲ್ಲ, ನಮ್ಮೂರಿನ ದೇಗುಲದಲ್ಲಿ ಸಾಕಿರುವ ಆನೆ ಬಳಿ ಆಶೀರ್ವಾದ ಪಡೆದು, ಹಣ್ಣು ಹಂಪಲು ಕೊಟ್ಟಿದ್ದೇವೆ. ಅಪ್ಪನಿಗೆ ಬಂದ ಪ್ರಶ್ನೆ ನನಗ್ಯಾಕೆ ಇದುವರೆವಿಗೂ ಬಂದಿಲ್ಲ. ಎಂಥ ದಡ್ಡಿ ನಾನು ಎಂದೆನಿಸಿತು. “ಹೌದು ಡ್ಯಾಡಿ, ಅದ್ಯಾಕೆ ಅಷ್ಟು ಸೌಮ್ಯದಿಂದ ಇರುತ್ತದೆ? ತಿರುಗಿ ಬೀಳಲ್ಲ. ಅಪ್ಪ- ಅಮ್ಮನನ್ನು ನೋಡ್ಬೇಕೆಂದು ತಪ್ಪಿಸಿಕೊಂಡು ಹೋಗಲ್ಲ’ ಎಂದೆ.
“ನಾವೆಲ್ಲರೂ ಸಮಾಜವು ಹಾಕಿರುವ ಸರಪಳಿಯಲ್ಲಿ ಆನೆಯಂತೆ ನಮ್ಮ ಸಾಮರ್ಥ್ಯ ತಿಳಿಯದೇ ಬಂಧಿಯಾಗಿದ್ದೇವೆ. ಆನೆಯನ್ನು ಕಾಡಿನಿಂದ ಬೇರ್ಪಡಿಸಿ ತಂದು ಸಾಕುತ್ತಾರೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಆನೆಯ ಚರ್ಮ, ಮೂಳೆಗಳು ಬಲಿತಿರದೆ ಸರಪಳಿಯಿಂದ ಬಿಡಿಸಿಕೊಳ್ಳಲು ಹೋದಾಗ ನೋವಾಗುತ್ತದೆ. ಮಾವುತ ಆರೈಕೆ ಮಾಡುತ್ತಾನೆ. ಅದಕ್ಕೆ ಊಟ ಹಾಕುತ್ತಾನೆ. ಅಂದಿನಿಂದ ಅದು ಇವನು ನನ್ನ ಸಾಕುವ ಸಲಹುವ ನನ್ನ ಮಾಲೀಕ ಎಂದು ನಂಬುತ್ತದೆ. ಅವನು ಹೇಳಿದ ಹಾಗೆ ಕೇಳುತ್ತದೆ. ನಮ್ಮಲ್ಲಿರುವ ಅಧೈರ್ಯವನ್ನೆಲ್ಲ ಕಿತ್ತೆಸೆದು ಯಾವೊಂದು ವಿಷಯವನ್ನು ಚಿಕ್ಕ ವಯಸ್ಸಿನಿಂದ ನಂಬಿ ಬದುಕುತ್ತೇವೋ, ಅದರ ಕುರಿತು ಯೋಚಿಸುತ್ತೇವೋ ಹಾಗೆ ನಮ್ಮ ವ್ಯಕ್ತಿತ್ವ, ಜೀವನ ರೂಪುಗೊಳ್ಳುತ್ತದೆ. ನಾನು ದಡ್ಡ, ಓದಲಾಗುವುದಿಲ್ಲ, ಬಲಹೀನರು, ಶಕ್ತಿಯಿಲ್ಲ ಎಂದು ನಮಗೆ ನಾವೇ ಸರಪಳಿ ಹಾಕಿಕೊಂಡು ಬದುಕುತ್ತೇವೆ. ಹಾಗಾದರೆ ಸೈನ್ಸ್ ತೆಗೆದುಕೊಂಡವರೆಲ್ಲ ಫೇಲಾಗಿದ್ದಾರಾ? ಯೋಚಿಸಿ ಹೇಳು’ ಎಂದರು.
ಅವರು ಬಲವಂತ ಮಾಡಲಿಲ್ಲ, ಒತ್ತಡ ಹೇರಲಿಲ್ಲ. ಮರುದಿನ ಸೈನ್ಸ್ ವಿಭಾಗಕ್ಕೆ ಸೇರಲು ಅರ್ಜಿ ತುಂಬಲು ಅಪ್ಪ ನಾನು ಇಬ್ಬರೂ ಕೂಡಿ ಸಂತಸದಿಂದ ಹೋಗಿದ್ದೆವು. ಆದರೆ ನಾನೇನು ಎಂಜಿನಿಯರ್ ಆಗಲಿಲ್ಲ, ಬದಲಿಗೆ ಸೈನ್ಸ್ ತೆಗೆದುಕೊಂಡೆ ಎಂದು ಪರಿತಪಿಸಲಿಲ್ಲ. ಏಕೆಂದರೆ ಡಿಸ್ಟಿಂಕ್ಷನ್ ಬಂದಿದ್ದವರೆಲ್ಲ ಪಿಸಿಎಂಬಿ ಓದಲಾಗದೆ ಬೇರೆಡೆ ಸೇರಿದ್ದರು. ಮತ್ತೆ ಕೆಲವರು ಫೇಲ್ ಆಗಿದ್ದರು. ನಮ್ಮ ಸೆಕ್ಷನ್ನಿನ ಹುಡುಗಿಯಲ್ಲಿ ಪಾಸಾಗಿ ಮುಂದೆ ಹೋದ ಮೂವರ ಹುಡುಗಿಯರಲ್ಲಿ ನಾನೂ ಒಬ್ಬಳಾಗಿದ್ದೆ! ಸ್ಕೂಲಿನಲ್ಲಿ ಮಂದವಾಗಿದ್ದ ನನ್ನ ತಿರಸ್ಕಾರದಿಂದ ನೋಡಿದ್ದ ಮಾಸ್ತರುಗಳ ಮುಂದೆ ಅಂಜುಬುರುಕುತನದಿಂದ ಓಡುತ್ತಿದ್ದವಳು ಇದೀಗ ಧೈರ್ಯದಿಂದ ಮಾತನಾಡಬಲ್ಲೆ. ಯಾವುದೇ ಕೆಲಸದಲ್ಲಿ ಸೋತರೂ ಅಂಜುವುದಿಲ್ಲ. ಇಂಥ ಅದಮ್ಯ ಆತ್ಮಸೈರ್ಯವನ್ನು ತುಂಬಿ, ಇಳಿ ವಯಸ್ಸಿನ್ನಲ್ಲೂ ಒಂದು ನಿಮಿಷವೂ ಬಿಡುವಿಲ್ಲದೆ ಟೈಂ ವೇಸ್ಟ್ ಮಾಡಬಾರದೆಂದು, ಏನೊಂದನ್ನೂ ಬೋಧಿಸದೆ, ಕೇವಲ ಸ್ಫೂರ್ತಿ ತುಂಬುತ್ತಾ, ಬದುಕುವ ಕಲೆ ತಿಳಿಸುತ್ತಾ ಹಗಲಿರುಳು ದುಡಿಯುವ ನನ್ನಪ್ಪನನ್ನು ಕಂಡರೆ ಪ್ರೀತಿ ಹೆಮ್ಮೆ ಒಟ್ಟಿಗೇ ಉಕ್ಕುತ್ತದೆ.
ಎಡೆಯೂರು ಪಲ್ಲವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.