ಬೀಗ ಹಾಕುವಿರೆಲ್ಲಿ?: ನನ್ನ ಶಾಲೆಗೆ ಗೋಡೆ, ಬಾಗಿಲೇ ಇಲ್ಲ!
Team Udayavani, Jul 17, 2018, 6:00 AM IST
ಸಚಿವರೇ, ನನ್ನ ಪಕ್ಕ ಕುಂತು 1 ತಾಸು ಪಾಠ ಕೇಳ್ತೀರಾ?
ಸರ್ಕಾರಿ ಶಾಲೆ ಹೇಗಿದ್ದರೂ ಸೈ, ಅದರ ಮೇಲೆ ನಮಗೆ ಅಪಾರ ಪ್ರೀತಿಯಿದೆ ಎನ್ನುವ ಮಕ್ಕಳ ಧ್ವನಿಯಿದು. ಹರಪನಹಳ್ಳಿ ತಾಲೂಕಿನ ಚಿಗಟೇರಿ ಶಾಲೆಯ ಈ ವಿದ್ಯಾರ್ಥಿನಿಯ ಬಹುದೊಡ್ಡ ನೋವಿನ ಹಿಂದೆಯೂ ಅಂಥದ್ದೇ ಪ್ರೀತಿಯಿದೆ. ಕಾನ್ವೆಂಟ್ ತೊರೆದು ತಾನೇಕೆ ಗೋಡೆ, ಬಾಗಿಲೇ ಇಲ್ಲದ ಈ ಸರ್ಕಾರಿ ಶಾಲೆಗೆ ಬಂದೆ? ಇಲ್ಲೇಕೆ ಮಳೆ, ಬಿಸಿಲಲ್ಲಿ ಮಿಂದು ಪಾಠ ಕೇಳುವೆ? ನನ್ನ ಶಾಲೆ, ನನಗೇಕೆ ಹೆಮ್ಮೆ? ಎನ್ನುವ ಆಕೆಯ ಧ್ವನಿಗೆ ಇಲ್ಲಿ ಅಕ್ಷರರೂಪ ನೀಡಲಾಗಿದೆ…
ನನ್ನ ಹೆಸರು ವೀಣಾ ಅಂತ. ನಿಮಗ್ಯಾರಿಗೂ ನನ್ನ ಪರಿಚಯ ಇದ್ದಂತಿಲ್ಲ. ಹರಪನಹಳ್ಳಿ ತಾಲೂಕಿನ ಚಿಗಟೇರಿ ಕಿರಿಯ ಪ್ರಾಥಮಿಕ ಶಾಲೆಗೆ ಬಂದರೆ, ಅಲ್ಲಿ ನಾನು ನಾಲ್ಕನೇ ತರಗತಿಯಲ್ಲಿ ಮೋಟುದ್ದ ಜಡೆ ಬಿಟ್ಕೊಂಡು, ಹುಡುಗರ ಥರ ನಡುವೆ ಕ್ರಾಪು ತೆಗೆದು, ಪಾಠ ಕೇಳುತ್ತಾ ಕೂತಿರುತ್ತೇನೆ. ಚಿಗಟೇರಿ ಅಂದಾಕ್ಷಣ, ನಾರದಮುನಿ ನಿಮ್ಮ ಕಣ್ಣೆದುರು ನಿಲ್ಲುತ್ತಾರೆಂದು ನಂಗೆ ಗೊತ್ತು. ನಾಡಿನ ಏಕೈಕ ನಾರದ ಮುನಿಯ ದೇವಸ್ಥಾನದ ಎದುರೇ ನನ್ನ ಶಾಲೆ ಇರೋದು. 5ನೇ ತರಗತಿವರೆಗಿನ ಈ ಶಾಲೆಯಲ್ಲಿ ನನ್ನೊಂದಿಗೆ 273 ಮಕ್ಕಳು ಇದ್ದಾರೆ.
ಎಲ್ಲದಕ್ಕೂ ಮೊದಲು ನಾನು ಅಪ್ಪನಿಗೊಂದು ಥ್ಯಾಂಕ್ಸ್ ಹೇಳ್ಬೇಕು. ನಾನು ಕಾನ್ವೆಂಟಿನಲ್ಲಿ ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಪೂರೈಸಿದವಳು. ಅಲ್ಲಿ ಸರಿಯಾಗಿ ಪಾಠ ಮಾಡೋಲ್ಲವೆಂದು ಅಪ್ಪ ನನ್ನನ್ನು ಈ ಸರ್ಕಾರಿ ಶಾಲೆಗೆ ಸೇರಿಸಿದರು. ನಿತ್ಯವೂ ಈ ಶಾಲೆಗೆ ಬರೋದಂದ್ರೆ ನಂಗೇನೋ ಖುಷಿ. ಮೊನ್ನೆ ಯಾರೋ ನನ್ನ ಕಿವಿಗೆ ಗಾಳಿಸುದ್ದಿ ಹಾಕಿದ್ರು: “ಮಕ್ಕಳು ಕಮ್ಮಿ ಇರೋ ಸರ್ಕಾರಿ ಶಾಲೆಗೆ ಬೀಗ ಹಾಕ್ತಾರಂತೆ’ ಅಂತ. ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ನಕ್ಕಿದ್ದೆ. ನಮ್ಮ ಹೆಡ್ಮ್ಷ್ಟ್ರು ಮಂಜುನಾಥ ಪೂಜಾರ ಸರ್ ಬಳಿ ಹೋಗಿ ಕೇಳಿದ್ದೆ: “ನಮ್ ಕ್ಲಾಸಿಗೆ ಬೀಗ ಹಾಕಕ್ಕಾಗೋಲ್ಲ, ಅಲ್ವಾ ಸ್ಸಾ…?’ ಅಂದಿದ್ದೆ. ಪಾಪ, ಅವರ ಮುಖ ಬಾಡ್ಹೊಯ್ತು. ಯಾಕೆ ಗೊತ್ತಾ? ಬೀಗ ಹಾಕಲು ನನ್ನ ತರಗತಿಗೆ ಬಾಗಿಲುಗಳೇ ಇಲ್ಲ! ಬಾಗಿಲು ಜೋಡಿಸಲು ಕನಿಷ್ಠ ಗೋಡೆಗಳಾದರೂ ಬೇಕಲ್ಲ, ಆ ನಾಲ್ಕು ಗೋಡೆಗಳೂ ನಮ್ಮ ಸುತ್ತಮುತ್ತ ಇಲ್ಲ. ನಾವು ಮೇಲಕ್ಕೆ ನೋಡಿದರೆ, ಹೆಂಚುಗಳು ಕಾಣೊÕàದಿಲ್ಲ; ಮೋಡ ಕಪ್ಪಿಟ್ಟ ಆಕಾಶ ಕಾಣುÕತ್ತೆ. ನಾವು ಕೂರುವುದು ಟೈಲ್ಸ್, ಸಿಮೆಂಟಿನ ನೆಲದಲ್ಲಲ್ಲ; ಕೊಚ್ಚೆ ಅಂಗಳದಲ್ಲಿ. ಈ ಮಳೆಗಾಲದ ಎಲ್ಲೋ ಅಪರೂಪದ ದಿನಗಳಲ್ಲಿ ಸೂರ್ಯನೂ ಇಣುಕುತ್ತಾ, ನಮ್ಮೊಂದಿಗೆ ನಮ್ಮ ಮೇಷ್ಟ್ರ ಪಾಠ ಕೇಳ್ತಿರ್ತಾನೆ.
ನಾನು ಪಾಠ ಕೇಳುವಾಗಿನ ಪರಿಪಾಟಲನ್ನು ಹೇಳುತ್ತೇನೆ ಕೇಳಿ. ಮೇಷ್ಟ್ರು ಶ್ರದ್ಧೆಯಿಂದ ಪಾಠ ಶುರುಮಾಡಿದಾಗ, ಹೊರಗಡೆ ಜನ ಲೋಕಾಭಿರಾಮವಾಗಿ ಮಾತಾಡ್ತಾ ಓಡಾಡ್ತಿರ್ತಾರೆ. ಮೇಷ್ಟ್ರ ಪಾಠಕ್ಕಿಂತ ನಮಗೆ ಕೇಳ್ಸೋದು, ಅವರ ಜೋರು ಮಾತುಗಳೇ. ಯಾರೋ ದನ ಹೊಡ್ಕೊಂಡು ಹೋಗ್ತಿರ್ತಾರೆ. ಅವರ ಕೂಗು ಆಕಾಶ ಮುಟಿ¤ರುತ್ತೆ. ಅಕ್ಕಪಕ್ಕದ ಕೆಲವು ಮನೆಗಳಲ್ಲಿ ಆಗಾಗ್ಗೆ ಜೋರು ಜಗಳವಾಗುತ್ತೆ. ಆಗ ನಮ್ಮ ಮನಸ್ಸಿಗೆ ಪಿಚ್ಚೆನಿಸುತ್ತೆ. ಕೆಟ್ಟದ್ದನ್ನ ಕೇಳಬೇಡವೆಂದು ಬಾಪೂಜಿ ಹೇಳಿದ್ದು ನೆನಪಾಗಿ, ಅವರಾಡುವ ಅಶ್ಲೀಲ ಮಾತುಗಳು ಕೇಳದಿರಲಿಯೆಂದು, ಕಿವಿ ಮುಚ್ಚಿಕೊಳ್ತೀನಿ. ಬ್ಯಾ ಬ್ಯಾ ಎನ್ನುತ್ತಾ ಕುರಿಗಳು ಬಂದಾಗ, ಮೇಷ್ಟ್ರು ಹತ್ತು ನಿಮಿಷ ಪಾಠ ನಿಲ್ಲಿಸಿ ಮೌನಿ ಆಗ್ತಾರೆ. ನಮ್ಮನ್ನು ಕಂಡರೆ ಬೀದಿನಾಯಿಗಳಿಗೆ ಅದೇನು ಮುಧ್ದೋ, ಸಿಟ್ಟೋ ಗೊತ್ತಿಲ್ಲ… ಪಾಠ ಮಾಡೋವಾಗ, ಅವು ಜೋರಾಗಿ ಕಚ್ಚಾಡ್ತಾ, ನಮ್ಮ ನಡುವೆಯೇ ಉರುಳಾಡಿಕೊಂಡು, ಗಾಬರಿ ಹುಟ್ಟಿಸುತ್ತವೆ.
ನೆಲದ ಮೇಲೆ ಕುಳಿತಾಗ ಆ ಥಂಡಿಗೆ ಜ್ವರ ಬರೋದು, ಶೀತವಾಗೋದು, ಅಲರ್ಜಿ ಆಗೋದೆಲ್ಲ ನಮ್ಗೆ ಮಾಮೂಲಿ. ಈಗಂತೂ ಜೋರು ಮಳೆ ಹೊಯ್ಯುತ್ತಿದೆ. ಮಳೆ ಬಂದಾಗ ಪುಸ್ತಕ, ಬ್ಯಾಗು ಹಿಡಿದು ಓಡಿಬಂದು, ಕಾರಿಡಾರಿನಲ್ಲಿ ನಿಲ್ಲೋದು; ಮಳೆ ಬಿಟ್ಟಾಗ, ಮತ್ತೆ ಹೋಗಿ ಆ ಕೆಸರಿನಲ್ಲಿ ಕೂರೋದೂ ರೂಢಿಯಾಗಿದೆ. ಕೆಲವರು ಈ ಕೊಳಕು ಮಣ್ಣಿನಲ್ಲಿ ಕೂರಲಾಗದೇ, ಮನೆಯಿಂದಲೇ ಚಾಪೆ ತರ್ತಾರೆ. ಬಹುತೇಕರಿಗೆ ಚಾಪೆ ತರಲಾಗದಷ್ಟೂ ಬಡತನ. ಮನೆಗೆ ಮರಳುವಾಗ, ನಮ್ಮ ಬಟ್ಟೆಗೆಲ್ಲ ಕೊಳಕು ಮೆತ್ಕೊಂಡು, ಯೂನಿಫಾರಂನ ಬಣ್ಣವೇ ಬದಲಾಗಿರುತ್ತೆ. ಎಲ್ಲ ಋತುಗಳ ಬಗ್ಗೆಯೂ ನನಗೆ ಕಡುಕೋಪವಿದೆ. ಬೇಸಿಗೆಯಲ್ಲಿ ಘೋರ ಬಿಸಿಲು ನಮ್ಮನ್ನು ನುಂಗಿಯೇ ಬಿಡುತ್ತೆ. ಬಿಸಿಗಾಳಿಗೆ ಮೈಯ್ಯೊಡ್ಡಿ ಹೈರಾಣಾಗಿರ್ತಿವಿ. ಚಳಿಯಲ್ಲಿ ಕುಳಿರ್ಗಾಳಿಗೆ ಚರ್ಮ ಬಿರುಕುಬಿಟ್ಟು, ರಕ್ತ ಬರುತ್ತೆ. ನಮ್ಮ ಈ ಅವಸ್ಥೆ ನೋಡಿ, ಮೇಷ್ಟ್ರಿಗೆ ಸಾಕ್‌ಸಾಕಾಗಿ ಹೋಗಿದೆ.
ಮೊನ್ನೆ ಒಂದು ಕತೆಯಾಯ್ತು. ಪಾಠ ಕೇಳ್ತಾ ಕೂತಿದ್ವಾ… ಅಲ್ಲೇ ಕಲ್ಲುಚಪ್ಪಡಿಯ ಅಡಿಯಿದ್ದ ಒಂದು ಹಾವು ನಮ್ಮ ಮಧ್ಯೆ ಬಂದಿದ್ದೇ ಗೊತ್ತಾಗ್ಲಿಲ್ಲ. ಮೇಷ್ಟ್ರು ಗಣಿತ ಲೆಕ್ಕ ಹೇಳಿಕೊಡೋದ್ರಲ್ಲಿ ಮುಳುಗಿದ್ರು. ನಮ್ಮೆಲ್ಲರ ಚಿತ್ತ ಬೋರ್ಡಿನ ಮೇಲಿತ್ತು. ನನ್ನ ಗೆಳತಿಯ ಬ್ಯಾಗ್‌ನೊಳಗೆ ಆ ಹಾವು ನುಸುಳಿದ್ದೇ ಗೊತ್ತಾಗ್ಲಿಲ್ಲ. ಅದು ಅಲ್ಲಿಂದ ಹೊರಬಂದ ಮೇಲೆ ಎಲ್ಲರೂ ಜೋರಾಗಿ ಕೂಗುತ್ತಾ ಹೊರಗೋಡಿ ಬಂದೆವು. ಮೇಷ್ಟ್ರು ಆ ದಿನ ದಿಕ್ಕೆಟ್ಟು ಕುಳಿತಿದ್ದರು. ಇಂಥ ಪ್ರಸಂಗಗಳಿಗೆ ಲೆಕ್ಕವೇ ಇಲ್ಲ, ಬಿಡಿ. ಹೀಗಾದಾಗಲೆಲ್ಲ ಮರುದಿನ ಪೋಷಕರು ಬಂದು, ತರಗತಿಯ ಮಧ್ಯೆಯೇ ಮೇಷ್ಟ್ರೊಂದಿಗೆ ಜಗಳವಾಡಿ, ಪಾಠ ಕೇಳ್ತಾ ಕೂತಿದ್ದ ನನ್ನ ಸಹಪಾಠಿಗಳನ್ನು ಮನೆಗೆ ಕರೆದೊಯ್ಯುತ್ತಾರೆ. ಆಗ ನನಗೆ ದುಃಖವಾಗುತ್ತೆ. ಕನಿಷ್ಠ ನಮ್ಮನೆಗಳಲ್ಲಿ ಕುರಿ, ಹಸುಗಳಿಗೂ ಸುತ್ತ ಗೋಡೆ ಅನ್ನೋದು ಇರುತ್ತೆ. ಹರುಕೋ, ಮುರುಕೋ ಬಾಗಿಲಾದರೂ ಕಟ್ಟಿರ್ತಾರೆ. ಆದರೆ, ಅಂಥ ಬೆಚ್ಚಗಿನ ಸೂರು ನಮಗೇಕಿಲ್ಲ? ಅದು ನಂಗೆ ಗೊತ್ತಿಲ್ಲ.
ಈ ವರ್ಷ ಮಾತ್ರವಲ್ಲ, ಕಳೆದ ನಾಲಕ್ಕು ವರ್ಷದಿಂದ ನಮ್ಮ ಬಯಲ ತರಗತಿ, ಘೋರ ಮಳೆಗೆ ನೆನೆದು, ಚಳಿಗೆ ಮುದುಡಿ, ಬಿಸಿಲಿಗೆ ಬೆಚ್ಚಿ ಪಾಠ ಕೇಳಿಸಿಕೊಳ್ಳುತ್ತಲೇ ಇದೆ. ಇರುವಂಥ ನಾಲ್ಕು ಕೊಠಡಿಗಳು ನಮ್ಮ ಕಿರಿಯ ವಿದ್ಯಾರ್ಥಿಗಳಿಗೆ (1, 2, 3ನೇ ಕ್ಲಾಸು) “ನಲಿಕಲಿ’ ಅಭ್ಯಾಸಕ್ಕೆ ಹಂಚಿಹೋಗಿದೆ. ಹಾಗಾಗಿ, ನಾಲ್ಕನೇ ತರಗತಿ ದಾಟಿದವರೆಲ್ಲ ಹೀಗೆ ಬಯಲಲ್ಲೇ ಕುಳಿತು ಪಾಠ ಕೇಳ್ಳೋದು 4 ವರ್ಷದಿಂದ ನಡೆದುಬಂದಿದೆ. ನನ್ನಂತೆ ಹೀಗೆ ಪಾಠ ಕೇಳಿ ನೂರಾರು ವಿದ್ಯಾರ್ಥಿಗಳು ಒಳ್ಳೇ ಅಂಕ ಪಡೆದು, ಮುಂದಿನ ತರಗತಿಗೆ ದಾಟಿದ್ದಾರೆ.
ಇಷ್ಟೆಲ್ಲ ಆದರೂ, ನನಗೆ ನನ್ನ ಶಾಲೆ ಅಂದ್ರೆ ತುಂಬಾ ಇಷ್ಟ. ಚಿತ್ತಾಕರ್ಷಕ ವಾಚಕಗಳು, ಚಿತ್ರಗಳನ್ನು ತೋರಿಸುತ್ತಾ ಇಲ್ಲಿ ಎಷ್ಟು ಚೆನ್ನಾಗಿ “ನಲಿಕಲಿ’ ಪಾಠ ಹೇಳಿಕೊಡ್ತಾರೆ ಗೊತ್ತೇ? ಆ ನಾಯಿಗಳು ನಮ್ಮ ನಡುವೆ ಎಷ್ಟೇ ಕಚ್ಚಾಡಲಿ, ಹೊರಗಿನ ವಾತಾವರಣ ನಮಗೆಷ್ಟೇ ಭಂಗ ಮಾಡಲಿ, ನಮ್ಮ ಏಕಾಗ್ರತೆ ಹಾಳುಗೆಡವಲು ಅವುಗಳಿಂದ ಸಾಧ್ಯವೇ ಇಲ್ಲ. ಏಕೆಂದರೆ, ನಮಗಿರೋದು ಸರ್ಕಾರಿ ಶಾಲೆಯ ಮೇಲಿನ ಪ್ರೀತಿ. ಪ್ರತಿಸಲ “ಎ ಪ್ಲಸ್’ ಅಂಕಗಳು ಬಂದಾಗ, ಪಕ್ಕದ ಮನೆಯ ಕಾನ್ವೆಂಟ್ ಹುಡುಗಿಗೆ ಹೋಗಿ ಹೊಟ್ಟೆ ಉರಿಸುವೆನು. ನಮ್ಮ ಈ ಯಶಸ್ಸಿಗೆಲ್ಲ ಕಾರಣ ನಮ್ಮ ಮೇಷ್ಟ್ರು. ನಾನು ಮೊದಲಿದ್ದ ಆ ಕಾನ್ವೆಂಟ್ ಶಾಲೆಗಿಂತ ಇಲ್ಲಿಯೇ ಪಾಠ ಚೆನ್ನಾಗಿ ಮಾಡ್ತಾರೆ. ಸಿ.ಎಂ. ಚೆನ್ನಮ್ಮ ಮಿಸ್ಸು, ಅಂಗಡಿ ಕೊಟ್ರೇಶ್ ಮೇಷ್ಟ್ರ ಪಾಠವನ್ನು ನೀವೂ ಒಮ್ಮೆ ಕೇಳಬೇಕೆಂಬ ಆಸೆ ನನುª. ಈ ಶಾಲೆಗೆ ಬರುವ ವಿದ್ಯಾರ್ಥಿಗಳೆಲ್ಲ ಬಡ ಕುಟುಂಬದವರೇ ಹೆಚ್ಚು. ಮಧ್ಯಾಹ್ನ ಬಿಸಿಯೂಟ ಕೊಟ್ಟಾಗ, ಅವರಿಗಾಗುವ ಆನಂದವನ್ನು ನೀವು ನೋಡಬೇಕು. ಮನೆಯಿಂದ ಅಮ್ಮನೇ ಬಂದು ಅಡುಗೆ ಮಾಡಿದ್ದಾಳ್ಳೋ ಎಂದು ಚಪ್ಪರಿಸ್ಕೊಂಡು ತಿಂತಿರ್ತಾವೆ. ಬಟ್ಟೆಯನ್ನೇ ಕಾಣದಿದ್ದವರಿಗೆ ಇಲ್ಲಿ ಸಮವಸ್ತ್ರ ಸಿಗುತ್ತೆ, ಪುಸ್ತಕ ಕೊಡ್ತಾರೆ, ಅವರು ಕೊಡುವ ಬ್ಯಾಗೂ ಚೆನ್ನಾಗಿರುತ್ತೆ. ಇವೆಲ್ಲಕ್ಕಿಂತ ಮಿಗಿಲಾಗಿ, ನಮ್ಮನ್ನು ಒಳ್ಳೆಯ ವಿದ್ಯಾರ್ಥಿಯಾಗಿ ರೂಪಿಸಲು, ನಮ್ಮೊಂದಿಗೆ ಮೇಷೂó, ಮಳೆಯಲ್ಲಿ ನೆಂದು, ಬಿಸಿಲಲ್ಲಿ ಬೆಂದು, ಚಳಿಯಲ್ಲಿ ಮೀಯುತ್ತಾರೆ ನೋಡಿ, ಆಗ ಅಯ್ಯೋ ಅನ್ಸುತ್ತೆ.
ಇರಲಿ, ನಾವು ಈ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಗಟ್ಟಿ ಆಗಿರೋದಕ್ಕೆ ನಮ್ಮ ಮೇಷ್ಟ್ರೇ ಕಾರಣ. ನಮಗೆ ಈ ಶಾಲೆ ಮೇಲೆ ಮಹಾನ್ ಪ್ರೀತಿ, ಅಪಾರ ಹೆಮ್ಮೆಯಿದೆ. ಅದಕ್ಕೇ ನಾನು ಕಾನ್ವೆಂಟ್ ತೊರೆದು ಇಲ್ಲಿಗೆ ಬಂದೆ.
ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.