ಎಂದೂ ಬರಿದಾಗದ ಅಕ್ಷಯ ಪ್ರೀತಿ
Team Udayavani, Sep 24, 2019, 4:55 AM IST
ಸೀತೆಗೆ ರಾಮನ ಮೇಲೆ ಪ್ರೀತಿಗಿಂತ ಜಾಸ್ತಿ ಭಕ್ತಿ, ಅದಕ್ಕಿಂತ ಹೆಚ್ಚು ಶ್ರದ್ಧೆಯಿತ್ತು. ರಾವಣ ಆಕೆಯನ್ನು ಅಪಹರಿಸಿದಾಗ ಸದಾ ರಾಮನನ್ನೇ ನೆನಪು ಮಾಡಿಕೊಳ್ಳುತ್ತ, ತನ್ನ ದೇಹದ ಪರಿವೆಯನ್ನೇ ಮರೆತುಬಿಟ್ಟಿದ್ದಳು. ಉಪವಾಸದಿಂದ ಕೃಶಳಾಗಿದ್ದಳು, ಆದರೆ ಆಕೆಯ ಮುಖದಲ್ಲೊಂದು ಕಾಂತಿಯಿತ್ತು.
ರಾಮಾಯಣದಲ್ಲಿ ಕೆಲವು ಘಟನೆಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅವುಗಳ ತೀವ್ರತೆ, ಅವುಗಳಲ್ಲಿರುವ ರೂಪಕ ಶಕ್ತಿ, ಅವು ಹೊಮ್ಮಿಸುವ ಅರ್ಥವಂತಿಕೆ ಇವುಗಳನ್ನು ನೋಡಿದಾಗ ಈ ಘಟನೆಗಳನ್ನು ಕವಿ ವಾಲ್ಮೀಕಿ ಸಾಂಕೇತಿಕವಾಗಿ ರೂಪಿಸಿದ್ದಾರೆಯೇ ಅನ್ನಿಸುತ್ತದೆ. ಈ ಕಾಲಘಟ್ಟದಲ್ಲಿ ಕುಳಿತು ನೀವು ಅದನ್ನೆಲ್ಲ ಓದುವಾಗ, ಇವೆಲ್ಲ ಅತಿರಂಜಿತವೋ, ಅತಿಮಾನುಷವೋ, ಅತೀಂದ್ರಯವೋ…ಈ ಯಾವುದೋ ಪಟ್ಟಿಯಲ್ಲಿ ಸೇರುತ್ತವೆ. ಅವನ್ನು ನೀವು ಪ್ರೀತಿಸಬಹುದು, ನಂಬಲಾರಿರಿ. ಆದರೆ, ಅವನ್ನು ವಾಲ್ಮೀಕಿ ಬರೆದಿದ್ದಾರೂ ಯಾಕೆ, ತಮ್ಮ ಕಾವ್ಯಕ್ಕೆ ಇಂತಹದ್ದೊಂದು ರೂಪವನ್ನಾದರೂ ನೀಡಿದ್ದೇಕೆ? ಇರಲಿ ಇವೆಲ್ಲ ಸದ್ಯದ ವಿಷಯಗಳಲ್ಲ, ಆದರೆ ಈ ಪ್ರಶ್ನೆಗಳನ್ನಿಟ್ಟುಕೊಂಡು ರಾಮಾಯಣವನ್ನು ಓದಲಿಕ್ಕೆ ಸಮಸ್ಯೆಯೇನಿಲ್ಲ.
ರಾಮಾಯಣದಲ್ಲಿನ ರಾಕ್ಷಸರಿಗೆ ಮಾಯಾಶಕ್ತಿಯಿತ್ತು. ಅವು ಎಂತಹ ರೋಚಕಶಕ್ತಿಯೆಂದರೆ, ಎಲ್ಲೋ ಇರುವ ವ್ಯಕ್ತಿಯ ಮಾಯಾರೂಪವನ್ನು ನಿರ್ಮಿಸಿ, ಅವು ಜೀವಂತವಾಗಿ ಕಾಣುವಂತೆ ಮಾಡಲಾಗುತ್ತಿತ್ತು. ಮಾರೀಚ ಮತ್ತು ವಿದ್ಯುಜಿಹ್ವ ಇದರಲ್ಲಿ ದೊಡ್ಡ ಹೆಸರು. ಮಾರೀಚನ ನೆರವಿನಿಂದ ರಾವಣ ಸೀತೆಯನ್ನು ಅಪಹರಿಸಿದರೆ, ಆ ಸೀತೆ ಮತ್ತು ರಾಮನನ್ನು ಹೆದರಿಸಲು ವಿದ್ಯುಜಿಹ್ವನನ್ನು ಬಳಸಿಕೊಳ್ಳಲಾಯಿತು.
ಸೀತೆಗೆ ರಾಮನ ಮೇಲೆ ಪ್ರೀತಿಗಿಂತ ಜಾಸ್ತಿ ಭಕ್ತಿ, ಅದಕ್ಕಿಂತ ಹೆಚ್ಚು ಶ್ರದ್ಧೆಯಿತ್ತು. ರಾವಣ ಆಕೆಯನ್ನು ಅಪಹರಿಸಿದಾಗ ಸದಾ ರಾಮನನ್ನೇ ನೆನಪು ಮಾಡಿಕೊಳ್ಳುತ್ತ, ತನ್ನ ದೇಹದ ಪರಿವೆಯನ್ನೇ ಮರೆತುಬಿಟ್ಟಿದ್ದಳು. ಉಪವಾಸದಿಂದ ಕೃಶಳಾಗಿದ್ದಳು, ಆದರೆ ಆಕೆಯ ಮುಖದಲ್ಲೊಂದು ಕಾಂತಿಯಿತ್ತು. ರಾವಣ ಪ್ರತೀಬಾರಿ ಬಂದು ಅವಳನ್ನು ಅನುನಯಿಸಲು ಯತ್ನಿಸಿದಾಗ, ಸೀತೆ ಒಂದು ಕಡ್ಡಿಯನ್ನು ತನ್ನೆದುರಿಗೆ ಇಟ್ಟುಕೊಂಡು ಅದನ್ನುದ್ದೇಶಿಸಿ ಮಾತನಾಡುತ್ತಿದ್ದಳು. ರಾವಣನ ಮುಖವನ್ನೇ ನೋಡುತ್ತಿರಲಿಲ್ಲ!
ಅಂತಹ ಸೀತೆಯನ್ನು ಒಲಿಸಿಕೊಳ್ಳಲು ಯಾವುದೇ ಮಾರ್ಗ ಕಾಣದಿದ್ದಾಗ, ರಾವಣ ಮಾಯಾಜಾಲ ಒಡ್ಡುತ್ತಾನೆ. ಒಂದುದಿನ ಅಶೋಕವನದಲ್ಲಿ ರಕ್ತ ಸುರಿಯುತ್ತಿರುವ ರಾಮನ ಶಿರವನ್ನು ಹಿಡಿದುಕೊಂಡು ಬರಲಾಗುತ್ತದೆ. ಅದು ಎಷ್ಟು ನೈಜವಾಗಿರುತ್ತದೆ ಎಂದರೆ ಆಕೆ ಪೂರ್ಣ ಅದನ್ನು ನಂಬಿ ಕಂಗಾಲಾಗುತ್ತಾಳೆ. ಆಗ ವಿಭೀಷಣನ ಪತ್ನಿ ಸರಮೆ ಸೀತೆಯ ನೆರವಿಗೆ ಬರುತ್ತಾಳೆ. ಅದು ಮಾಯಾಜಾಲ ನೀನು ಹೆದರಬೇಡ ಎಂದು ಭರವಸೆ ನೀಡುತ್ತಾಳೆ. ಸೀತೆ ಮತ್ತೆ ಜೀವನದಲ್ಲಿನ ಭರವಸೆಯನ್ನು ಉಳಿಸಿಕೊಳ್ಳುತ್ತಾಳೆ. ಇಲ್ಲವಾದರೆ ಆಕೆಗೆ ಉಪವಾಸ ಮಾಡಿ ಸಾಯುವುದೊಂದೇ ದಾರಿಯಾಗಿತ್ತು. ಒಂದು ವರ್ಷದೊಳಗೆ ರಾಮ ಬಂದು ತನ್ನನ್ನು ಕರೆದುಕೊಂಡು ಹೋಗದಿದ್ದರೆ, ತಾನು ಉಪವಾಸ ಮಾಡಿ ಸಾಯುವುದಾಗಿ ಸೀತೆ ಈಗಾಗಲೇ ನಿರ್ಧರಿಸಿದ್ದಳು.
ಹೀಗೆ ಹೆದರುವ ಪರಿಸ್ಥಿತಿ ರಾಮನಿಗೂ ಬಂತು. ಯುದ್ಧದಲ್ಲಿ ರಾಮಸೇನೆ ಬಲವಾಗಿ ಕಾದಾಡುತ್ತ, ರಾಕ್ಷಸ ಪಡೆಯನ್ನು ಧ್ವಂಸ ಮಾಡುತ್ತ, ವಿಜಯೋತ್ಸಾಹದಿಂದ ಮುನ್ನುಗ್ಗಿತ್ತು. ರಾವಣ ಪಡೆಯ ಬಳಿ ಭರವಸೆಯಾಗಿ ಗೆಲ್ಲಿಸುವ ಶಕ್ತಿಯಾಗಿ ಕಾಣುತ್ತಿದ್ದವನು ಇಂದ್ರಜಿತ್ ಮಾತ್ರ. ಪದೇ ಪದೇ ಅವನು ಯುದ್ಧರಂಗಕ್ಕೆ ಬಂದಾಗ ರಾಮಪಡೆ ಕುಗ್ಗುತ್ತಿತ್ತು. ಎರಡು ಬಾರಿ, ರಾಮ-ಲಕ್ಷ್ಮಣರನ್ನು ಸೇರಿ ಇಡೀ ಕಪಿಸೇನೆಯೇ ಮೂಛೆì ಹೋಗಿತ್ತು. ಆಗ ಹನುಮಂತನ ಸಂಜೀವಿನಿ ನೆರವಿನಿಂದ ಎಲ್ಲ ಬದುಕಿಕೊಂಡಿರುತ್ತಾರೆ. ಹೀಗೆ ಪ್ರತೀ ಸವಾಲನ್ನು ಗೆಲ್ಲುತ್ತಿದ್ದ ರಾಮಪಡೆಯನ್ನು ಹೆದರಿಸಲು ಇಂದ್ರಜಿತ್ ಒಂದು ಅಡ್ಡದಾರಿಯನ್ನು ಹುಡುಕುತ್ತಾನೆ. ಆಗ ಮತ್ತೆ ವಿದ್ಯುಜಿಹ್ವನ ನೆರವಿನಿಂದ ಸೀತೆಯ ಮಾಯಾಪ್ರತಿಮೆಯನ್ನು ನಿರ್ಮಿಸಿ, ಯುದ್ಧರಂಗಕ್ಕೆ ಕರೆತರಲಾಯಿತು. ರಾಮ ನೋಡುತ್ತಾನೆ, ಸೀತೆ ಸತ್ತಿದ್ದಾಳೆ! ಎಂದೂ ಹೆದರದ ಹನುಮಂತನೂ ಹತಾಶನಾಗುತ್ತಾನೆ. ರಾಮನಂತೂ ಸೀತೆಯಿಲ್ಲದ ಈ ಬದುಕಿಗೆ ಅರ್ಥವಾದರೂ ಏನು ಎಂದು ಎಲ್ಲವನ್ನೂ ತ್ಯಜಿಸಿ ಕೂರುತ್ತಾನೆ. ಆಗ ವಿಭೀಷಣ ಬಳಿಗೆ ಬಂದು ಅದು ರಾಕ್ಷಸರ ಮಾಯಾವಿದ್ಯೆ ಎಂದು ಮನದಟ್ಟು ಮಾಡಿಕೊಡುತ್ತಾನೆ. ಮತ್ತೆ ರಾಮನಿಗೆ ಮತ್ತು ಕಪಿಸೇನೆಗೆ ಜೀವಕಳೆ ಬಂದು ಇನ್ನಿಲ್ಲದ ಉತ್ಸಾಹದಿಂದ ಕಾದುತ್ತವೆ. ಈ ಎರಡೂ ಘಟನೆಗಳಲ್ಲಿ ನಾವು ಗಮನಿಸಬೇಕಾಗಿರುವ ಶಕ್ತಿ ಪರಸ್ಪರರ ಬಗ್ಗೆ ರಾಮ-ಸೀತೆಗಿದ್ದ ಅಕ್ಷಯಪ್ರೀತಿ. ಪರಸ್ಪರರಿಲ್ಲದೇ ತಮ್ಮ ಬದುಕಿಗೆ ಅರ್ಥವೇ ಇಲ್ಲ ಎಂದು ಕಳವಳಿಸುವ ಮಟ್ಟಿಗೆ ಅವರಿಬ್ಬರು ಪ್ರೇಮಿಗಳು. ಹಾಗಿದ್ದರೂ ರಾಮ ಯುದ್ಧ ಮುಗಿದಾಗ ಸೀತೆ ಅಗ್ನಿಪರೀಕ್ಷೆಗೊಳಗಾಗುವಂತೆ ಮಾಡಿದ್ದೇಕೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.