ನೈಟು ಇಷ್ಟೇನೆ !
ರಾತ್ರಿ ಪಾಳಿಯ ಬಾಳು
Team Udayavani, Sep 10, 2019, 5:45 AM IST
ಕತ್ತಲಿನೊಂದಿಗೆ ಸೆಣಸುವ ಬೆಳಕಿನ ರಾತ್ರಿಗಳಲ್ಲಿ ಮುಗಿಲೆತ್ತರದ ಕಟ್ಟಡಗಳ ಒಂದೊಂದು ಕಚೇರಿಗಳಲ್ಲೂ ಕೀಬೋರ್ಡ್ ಧ್ವನಿಗಳು ರಾತ್ರಿಯ ಮೌನವನ್ನು ಸೀಳುತ್ತಿರುತ್ತವೆ. ಅದೇ ರಾತ್ರಿಯ ಜನವಸತಿ ಪ್ರದೇಶಗಳ ಮನೆಗಳ ಬೀದಿಗಳಲ್ಲಿ ಕೇಳಿಬರುವ, ಆಗಷ್ಟೇ ಹಗಲಿನ ಕೆಲಸದಿಂದ ಸುಸ್ತಾಗಿ ಉಸ್ಸಪ್ಪಾ ಎಂದು ಹಾಸಿಗೆಗೆ ಬಿದ್ದವರ ಗೊರಕೆಯೊಂದಿಗೆ ಈ ಕೀಬೋರ್ಡ್ ಧ್ವನಿಗಳು ಹೋರಾಡುತ್ತಿರುತ್ತವೆ. ಹೀಗೆ, ಸತತವಾಗಿ ನೈಟ್ ಶಿಫ್ಟ್ ಮಾಡುವ ಯುವಕರ ದಿನಚರಿಯೇ ವಿಚಿತ್ರ. ಜಗತ್ತಿನ ದಿನಚರಿಗೆ ಉಲ್ಟಾ ಬದುಕುವ ಇವರಿಗೆ – ಪಾಪ, ನೈಟ್ ಶಿಫ್ಟ್ ಮಾಡ್ತಾರಂತೆ ಅನ್ನೋ ಅನುಕಂಪದ ಮೀಸಲಾತಿ ಉಂಟು.
ರಾತ್ರಿ ಕೇವಲ ಕತ್ತಲಲ್ಲ. ಬೆಳಕಿಗೆ ತಯಾರಿ. ಕತ್ತಲಲ್ಲಿ ಕೂತವನು ಬೆಳಕಿಗಾಗಿ ಕಾಯುತ್ತಾನೆ. ಬೆಳಕಾದ ಮೇಲೆ ಮಾಡಬೇಕಾದ್ದಕ್ಕೆ ತಯಾರಿ ಮಾಡುತ್ತಾನೆ. ರಾತ್ರಿಯಲ್ಲೂ ಹಗಲಿನ ಭ್ರಮೆ ಮೂಡಿಸುವ ಕರೆಂಟಿನ ತಂತಿಗಳು ರಾತ್ರಿ-ಹಗಲಿನ ವ್ಯತ್ಯಾಸವನ್ನು ತೆಳುವಾಗಿಸಿವೆ. ಆದರೆ ರಾತ್ರಿಯ ಭಾವವನ್ನು ಮೊನ್ನೆ ಬಂದ ಎಲ್‌ಇಡಿ ಬಲ್ಬ್ ಕೂಡ ಹೋಗಲಾಡಿಸದು.
ಆದರೆ, ಈ ಎಲ್‌ಇಡಿ ಅಥವಾ ಸಿಎಫ್ಎಲ್ ಬಲ್ಬ್ನ ಬೆಳಕಿನಲ್ಲೊಂದು ಅಗಾಧ ಜಗತ್ತಿದೆ. ಇದಕ್ಕೆ, ಕತ್ತಲಲ್ಲಿ ಮಲಗಿ ನಾವು ಕಾಣುವ ಕನಸಿನ ಚಮತ್ಕಾರವೂ ಇದೆ. ವಾಸ್ತವದ ಹೊಳಪಿನಲ್ಲಿ ಮಿಂದ ಮನಸೂ ಇದೆ. ಕತ್ತಲಿನೊಂದಿಗೆ ಸೆಣಸುವ ಬೆಳಕಿನಲ್ಲಿ ಬೆಂಗಳೂರಿನ ರಾತ್ರಿಗಳಲ್ಲಿ ಮುಗಿಲೆತ್ತರದ ಕಟ್ಟಡಗಳಲ್ಲಿ ಅಲ್ಲಲ್ಲಿ ಒಂದೊಂದು ಕಚೇರಿಗಳಲ್ಲಿ ಕೀಬೋರ್ಡ್ ಧ್ವನಿಗಳು ರಾತ್ರಿಯ ಮೌನವನ್ನು ಸೀಳುತ್ತಿರುತ್ತವೆ. ಅದೇ ರಾತ್ರಿಯ ಜನವಸತಿ ಪ್ರದೇಶಗಳ ಮನೆಗಳ ಬೀದಿಗಳಲ್ಲಿ ಕೇಳಿಬರುವ, ಆಗಷ್ಟೇ ಹಗಲಿನ ಕೆಲಸದಿಂದ ಉಸ್ಸಪ್ಪಾ ಎಂದು ಹಾಸಿಗೆಗೆ ಬಿದ್ದವರ ಗೊರಕೆಯೊಂದಿಗೆ ಈ ಕೀಬೋರ್ಡ್ ಧ್ವನಿಗಳು ಹೋರಾಡುತ್ತಿರುತ್ತವೆ.
ರಾತ್ರಿಗಳ ಕುದುವಿಡುವುದು
ಬೆಂಗಳೂರಿನಂಥ ನಗರದಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಎದ್ದು ಕೂತು ಕೆಲಸಕ್ಕೆ ಸಿದ್ಧವಾಗುವ ಯುವ ಸಮೂಹವೇ ಇದೆ. ಈ ರಾತ್ರಿ ಪಾಳಿ ಎಂಬುದೇ ಒಂದು ನಿಗೂಢ ಜಗತ್ತು. ರಾತ್ರಿ ಗಸ್ತು ತಿರುಗುವ ಪೊಲೀಸರ ಕೆಲಸಕ್ಕೂ, ಖಾಸಗಿ ಕಂಪನಿಗಳಲ್ಲಿ ರಾತ್ರಿ ಪೂರ್ತಿ ಅಥವಾ ಅರೆ ರಾತ್ರಿ ಕೂತು ಮಾಡುವ ಕೆಲಸಕ್ಕೂ ತುಂಬ ವ್ಯತ್ಯಾಸವೇನೂ ಇಲ್ಲ. ಬಿಪಿಒಗಳು ನಗರದಲ್ಲಿ ತಲೆ ಎತ್ತಿದ್ದಾಗ ಈ ರಾತ್ರಿ ಪಾಳಿ ಕೆಲಸಕ್ಕೇ ಒಂದು ವಿಶಿಷ್ಟ ನಿಗೂಢತೆ ಸಿಕ್ಕಿತ್ತು. ಕಾಲಕ್ರಮೇಣ ಅದೊಂದು ಸಾರಾಸಗಟಾದ ಕೆಲಸವಾಗಿದೆ. ಬಿಪಿಒಗಳಲ್ಲಿ ಕೆಲಸಕ್ಕೆ ಸೇರುವಾಗಲೇ ರಾತ್ರಿ ಪಾಳಿ ಫಿಕ್ಸ್ ಆಗಿರುತ್ತಿತ್ತು. ಇನ್ನು ಕೆಲವು ಕಂಪನಿಗಳಲ್ಲಿ ರಾತ್ರಿ ಪಾಳಿ ಅನ್ನೋದು ರೊಟೇಶನ್. ತಿಂಗಳಿಗೊಮ್ಮೆಯೋ ಎರಡು ವಾರಕ್ಕೊಮ್ಮೆಯೋ ಒಂದಷ್ಟು ದಿನ ರಾತ್ರಿ ಪಾಳಿ ಖಾಯಂ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಬಗ್ಗೆ ನಮಗೊಂದು ವಿಚಿತ್ರ ಕುತೂಹಲವಿದೆ. ಅದರಲ್ಲೇ ಮಿಂದೆದ್ದವರು ಕನಸನ್ನು ಬದಿಗಿಟ್ಟು ಹಗಲುಗನಸನ್ನೇ ಮೇಯುತ್ತಿರುತ್ತಾರೆ. ಕೆಲಸಕ್ಕೆ ಸೇರಿದ ಆರಂಭದ ರಾತ್ರಿಗಳಲ್ಲಿ ಅವರದ್ದು ಎರಡು ಹೋರಾಟ. ಕಣ್ಣಿನ ಅಂಚಿಗೂ ನಿದ್ದೆ ಸುಳಿಯದಂತೆ ಕಾಯುವುದು ಒಂದು ಕೆಲಸ. ಆ ಕೆಲಸದಲ್ಲೇ ಗಮನ ಪೂರ್ತಿ ಹೋಗದಂತೆ ಕಚೇರಿಯ ಕೆಲಸವನ್ನೂ ಮಾಡುವ ಅನಿವಾರ್ಯ. ದಿನ ಕಳೆದಂತೆ ನಿದ್ದೆಗೇ ಮೂಗುದಾರ ಹಾಕಿರುತ್ತಾರೆ. ಎಂಟು ತಾಸಿನ ನಿದ್ದೆಯನ್ನು ಎರಡೂವರೆ ಮೂರು ತಾಸಿಗೆ ಇಳಿಸಿಕೊಂಡಿರುತ್ತಾರೆ. ಕಚೇರಿಯಿಂದ ಕ್ಯಾಬ್ ಹತ್ತುತ್ತಿದ್ದಂತೆ ನಿದ್ದೆಗೆ ಜಾರಿ ಅರ್ಧ ಮುಕ್ಕಾಲು ಗಂಟೆ ಮುಗಿಸಿದರೆ ಮನೆಗೆ ಬಂದು ಮತ್ತೆ ಒಂದೆರಡು ಗಂಟೆ ನಿದ್ದೆ ಮುಗಿಸಿ, ರಾತ್ರಿ ಮತ್ತೆ ಕಚೇರಿಗೆ ಕ್ಯಾಬ್ ಹತ್ತುತ್ತಿದ್ದಂತೆ ಅರ್ಧ ಗಂಟೆ ನಿದ್ದೆ ಮಾಡಿ ಎದ್ದು ಕೆಲಸಕ್ಕೆ ಹಾಜರ್!
ಈ ನೈಟ್ ಶಿಫ್ಟ್ ಎಂಬುದು ನಮ್ಮ ದೇಹವನ್ನು ಹೇಗೆ ಹುರಿಗೊಳಿಸುತ್ತದೆ ಎಂದರೆ, ನಿದ್ದೆ ಎಂಬ ಮಾಯಾವಿಯನ್ನ ನೀಟಾಗಿ ಒಪ್ಪಗೊಳಿಸಿ, ನಮ್ಮ ಅಣತಿಗೆ ಆಡುವ ಕೈಗೊಂಬೆಯನ್ನಾಗಿಸುತ್ತದೆ. ಕೆಲವರಿಗೆ ಹೊಸ ಜಾಗದಲ್ಲಿ ಮಲಗಿದರೆ ನಿದ್ದೆ ಬರೋದಿಲ್ಲ, ದಿಂಬು-ಹಾಸಿಗೆ ಬದಲಾದರೆ ನಿದ್ದೆ ಬರಲ್ಲ, ಇನ್ನೂ ಕೆಲವರಿಗಂತೂ ಫ್ಯಾನ್ ಗಾಳಿ ಇಲ್ಲದೇ ನಿದ್ದೆಯೇ ಸುಳಿಯದು. ಆದರೆ, ಒಂದು ತಿಂಗಳು ನೈಟ್ ಶಿಫ್ಟ್ ಮಾಡಿದರೆ ಸಾಕು. ನಾನು ಈಗ ನಿದ್ದೆ ಮಾಡಬೇಕು ಎಂದರೆ ನಿದ್ದೆ, ಬೇಡ ಎಂದರೆ ಇಲ್ಲ. ಬೇಕಾದಾಗ ಬೇಕು, ಬೇಡವಾದಾಗ ಬೇಡ. ನಿದ್ದೆಗೆ ನಾವು ಹಾಕಿದ್ದೇ ಮಿತಿ. ಎದ್ದಾಗಲೇ ಎಚ್ಚರ. ಅಲಾರಂ ನಮಗೇ ಕೀಲಿ ಕೊಡುವ ಯಂತ್ರ. ನಾವು ಅಲಾರಂಗೆ ಕೀ ಕೊಟ್ಟರೆ ನಮ್ಮ ನಿದ್ದೆಗೆ ಕೀ ಕೊಟ್ಟಂತೆ.
ನೈಟ್ ಶಿಫ್ಟ್ಗೆ ಹೋಗ್ತಿನಿ ಎನ್ನುವವರಿಗೆ ವಿಶಿಷ್ಟವಾದ ಒಂದು ಅನುಕಂಪವೂ ಸಿಗುತ್ತದೆ. ಪಾಪ, ನೈಟ್ ಶಿಫ್ಟ್ ಮಾಡಿ ಬಂದಿದ್ದಾನೆ/ಳೆ. ಹೋಗ್ಲಿ ಬಿಡು ನಿದ್ದೆ ಮಾಡ್ಲಿ ಅಂತ ಮನೆ ಮಂದಿಯೂ ಸೇರಿದಂತೆ ಇಡೀ ಸಮಾಜದಲ್ಲೊಂದು ಪ್ರತ್ಯೇಕ ಸ್ಥಾನವೂ ಸಿಗುತ್ತದೆ.
ನೈಟ್ ಶಿಪ್ಟ್ ಕನಸು…
ರಾತ್ರಿ ಪಾಳಿ ಮಾಡಿದರೆ ಕನಸಿನ ಮಜವೇ ಕಳೆಯುತ್ತದೆ. ಕೂತಲ್ಲೂ ನಿಂತಲ್ಲೂ ನಿದ್ದೆಗೆ ಜಾರಿ ಡೀಪ್ ಸ್ಲೀಪ್‌ಗೆ ಹೋಗುವುದರಿಂದ ವಾಸ್ತವಕ್ಕೂ ಕನಸಿಗೂ ಕ್ಲಾಶ್ ಆಗದು. ಅರ್ಧಮರ್ಧ ನಿದ್ರೆ ಇದ್ದಾಗಲೇ ನಮಗೆ ಕನಸು ನೆನಪಿರುತ್ತದೆ. ಡೀಪ್ ಸ್ಲೀಪ್‌ನಿಂದ ರಪ್ಪನೆ ಏಳುವುದರಿಂದ ಕಂಡ ಕನಸು ಎದ್ದ ನಂತರ ನೆನಪೇ ಇರದು. ಹೀಗಾಗಿ, ನನಗೆ ಬೆಳಗಿನ ಜಾವದಲ್ಲೊಂದು ಇಂಥಾ ಕನಸು ಬಿತ್ತು. ಆಚೆ ಮನೆ ಅಜ್ಜಯ್ಯನ ನೆನಪು ಕನಸಲ್ಲಿ ಬಂತು. ಬೆಳಗಿನ ಜಾವ ಯಾರದ್ದಾದರೂ ಕನಸು ಬಿದ್ದರೆ ಅವರು ಸತ್ತೇ ಹೋಗುತ್ತಾರೆ ಅಂತ ಹೇಳ್ತಾರೆ. ಯಾವುದಕ್ಕೂ ಊರಿಗೆ ಫೋನು ಮಾಡಿ ಕೇಳಬೇಕು ಎಂಬ ವಿಚಿತ್ರ ಗೊಂದಲ ಇರದು. ಹಾಗೆಯೇ, ಕನಸಿಗೂ ವಾಸ್ತವಕ್ಕೂ ಮಿಕ್ಸ್ ಅಪ್ ಆಗಿ ಎಚ್ಚರಾದ ಮೇಲೆ ನೆನಪಿಸಿಕೊಂಡು ನಗಲೂ ಆಗದು. ಇಂಥದ್ದೊಂದು ಪುಕ್ಕಟೆ ಹಾಗೂ ನಿಗೂಢ ಮನರಂಜನೆಗೆ ಕುತ್ತು ಬರುವುದಂತೂ ಖಚಿತ.
ಡೀಪ್ ಸ್ಲೀಪ್‌ನಿಂದ ಎದ್ದ ತಕ್ಷಣದ ಭಾವವಿದೆಯಲ್ಲ ಅದು ಈ ಲೋಕದಿಂದಲೇ ನಮಗೆ ಒಂದಷ್ಟು ಸೆಕೆಂಡುಗಳ ಕಾಲ ಮುಕ್ತಿ ನೀಡಿದಂತಿರುತ್ತದೆ. ಆಳ ನಿದ್ರೆಯಿಂದ ಎದ್ದ ತಕ್ಷಣ ನಮ್ಮ ಎದುರು ಇರುವ ಜಗತ್ತು ವಾಸ್ತವವೋ ಅಥವಾ ಈವರೆಗೆ ಕಾಣುತ್ತಿರುವ ಕನಸಿನ ಎಕ್ಸ್‌ಟೆಂಡೆಡ್ ವರ್ಷನ್ನಾ ಎಂಬ ಗೊಂದಲ ಮೂಡಿಸುತ್ತದೆ. ಇದು ಕನಸಲ್ಲ ಅಂತ ಖಚಿತವಾಗುವವರೆಗೂ ಅದು ನನಸೂ ಆಗಿರುವುದಿಲ್ಲ. ನಮ್ಮ ಎದುರಿರುವ ವ್ಯಕ್ತಿಗಳು ಕನಸಿನ ವಿಸ್ತೃತ ಪಾತ್ರವಾಗುತ್ತಾರೆ. ಒಂದು ಹತ್ತು ಸೆಕೆಂಡಾದರೂ ಈ ಅನುಭವವನ್ನು ಆನಂದಿಸುವುದೇ ಖುಷಿಯ ಸಂಗತಿ. ಇದೊಂದು ರೀತಿಯಲ್ಲಿ ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಭೌತಿಕ ರಿಯಾಲಿಟಿಯಂತೆ.
ರಜೆ ದಿನಗಳಲ್ಲಿ ನಮ್ಮ ರಾತ್ರಿ ಪಾಳಿಯ ಯುವಕಪಾಡು ಹೇಳತೀರದು. ಇಡೀ ಜಗತ್ತು ಮಲಗಿದಾಗ ಇವರು ಮಾತ್ರ ನಿಶಾಚರಿಗಳಂತೆ ಪಿಳಿ ಪಿಳಿ ಕಣ್ಣು ಬಿಟ್ಟು ಎದ್ದು ಕೂತಿರುತ್ತಾರೆ. ಕಣ್ಣ ರೆಪ್ಪೆಗೆ ನಿದ್ದೆ ಹತ್ತುವುದೇ ಇಲ್ಲ. ನಿದ್ದೆ ಹತ್ತುವಂತೆ ಪ್ರಾಕ್ಟೀಸ್ ಆಗಬೇಕಾದರೆ, ಕನಿಷ್ಠ ಎರಡು, ಮೂರು ದಿನ ಫಾಲ್ಸ್ ಸ್ಲಿಪ್ (ನಿದ್ದೆ ಬಂದಂತೆ ನಟಿಸಿ) ಪ್ರಾಕ್ಟೀಸ್ ಮಾಡಬೇಕು. ವಾರ ರಜೆ ಹಾಕಿ, ಮೂರು ದಿನ ಹೀಗೆ ಸರ್ಕಸ್ಸು ಮಾಡಿ, ನಿದ್ದೆ ಹತ್ತಿಸಿಕೊಳ್ಳುವ ಹೊತ್ತಿಗೆ, ರಜೆಯ ಮುಗಿದಿರುತ್ತದೆ. ಮತ್ತೆ ಆಫೀಸಲ್ಲಿ ಆ ಸಮಯಕ್ಕೆ ಆಕಳಿಸುವ ಅನಿವಾರ್ಯ ಎದುರಾಗಬಹುದು.
ಇನ್ನು, ನೈಟ್‌ಶಿಫ್ಟ್ಗೆ ಅಡಿಕ್ಟಾದವರ ಬೆಳಗುಗಳೇನು ಬೆಳ್ಳಗೆ ಇರೋಲ್ಲ. ಇವರು ಸೂರ್ಯನ ಹುಟ್ಟನ್ನು ನೋಡುವುದಿಲ್ಲ. ಹೂ ಮಾರುವವರ ಕೂಗು ಕೇಳಲ್ಲ, ಶಾಲೆಗೆ ಹೋಗುವ ಮಕ್ಕಳಿಗೆ ಬಾಯ್ ಹೇಳುವ ಸುಖ ಇವರ ಪಾಲಿಗೆ ಸಿಗುವುದಿಲ್ಲ. ಒಂದು ಪಕ್ಷ ಶುಭ ಸಮಾರಂಭಗಳು, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು, ಸಾವು ನೋವಿನಂಥ ಸಂದರ್ಭಗಳು ಎದುರಾದರಂತೂ ಹೊಂಚು ಹಾಕಿ ನಿದ್ದೆ ಮಾಡಬೇಕು.
ಇವರ ಬೆಳಗುಗಳು ಮಧ್ಯಾಹ್ನವೇ.
ಕೃಷ್ಣ ಭಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.