ಮುಗಿದೇಹೋಯ್ತು ಕನಸಿನ ಟೂರು ಏನೇ ಹೇಳಿ, ನಮ್ಮ ದೇಶ ತುಂಬಾ ಚೆಂದ
Team Udayavani, Jan 17, 2017, 3:45 AM IST
ಬೆಳಿಗ್ಗೆ ಎದ್ದು ಹೊರಟಾಗ ಮಳೆ ಜಿನುಗುಡುತ್ತಿತ್ತು. ಮಳೆಯ ಮಂಜಿಗೆ ಮನಾಲಿ ಮಾಯಾನಗರದಂತೆ ಮಿಂಚುತ್ತಿತ್ತು. ಬೀಸ್ ನದಿಯ ದಡದ ಮೇಲೆ ಹೊರಟು ಕುಲು ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಕುಲುವಿನ ಘಾಟಿನಲ್ಲಿರುವ ಹೋಟೆಲ್ ಒಂದರಲ್ಲಿ ಪರೋಟ ಹಾಗೂ ದಹಿ ತಿಂದಾಗ ಹಸಿವು ತಣ್ಣಗಾಯಿತು. ತಡಮಾಡದೆ ಅಲ್ಲಿಂದ ಹೊರಟು ಮಧ್ಯಾಹ್ನ ಚಂಡೀಗಢ್ ಸೇರಿದಾಗ 3 ಘಂಟೆ. ಹೈವೇ ಪಕ್ಕದ ಹೋಟೆಲ್‌ನಲ್ಲಿ ಊಟ ಮುಗಿಸಿ ನೇರವಾಗಿ ದೆಹಲಿಯ ರಸ್ತೆ ಹಿಡಿಯುವ ಮುನ್ನ ಕರೋಲ್ ಬಾಗ್‌ನಲ್ಲಿ ಒಂದು ಅರಿಹಂತ್ ಇನ್ ಎಂಬ ಹೋಟೆಲ್ ಬುಕ್ ಮಾಡಿದೆವು.
ಕರೋಲ್ ಬಾಗ್, ದೆಹಲಿ
ಜನಸಂದಣಿಯ ಮಧ್ಯದಲ್ಲಿ, ಟ್ರಾಫಿಕ್‌ನಲ್ಲಿ ಸುತ್ತಾಡಿ ಹರಸಾಹಸ ಪಟ್ಟು ಹೋಟೆಲ್ ಹುಡುಕುವಷ್ಟರಲ್ಲಿ ರಾತ್ರಿಯಾಗಿತ್ತು. ಚೆಕ್ ಇನ್ ಆಗಿ ಸ್ವಲ್ಪ ಫ್ರೆಶ್ ಆಗಿ ಕರೋಲ್ ಬಾಗ್‌ನ ಬೀದಿಯಲ್ಲಿ ಊಟ ಮಾಡಲು ಹೊರಟೆವು. ದೆಹಲಿಯ ಪ್ರಮುಖ ವ್ಯಾಪಾರಿ ಕೇಂದ್ರಗಳಲ್ಲಿ ಒಂದಾದ ಇಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳು ಸೆಳೆಯುತ್ತಿದ್ದವು. ಪ್ರಸಿದ್ಧ ಶವರ್ಮಾ ರೋಲ್ ಜೊತೆಗೆ ಬಿರಿಯಾನಿ ತಿಂದು ಹೋಟೆಲ್‌ಗೆ ಬಂದು ಮಲಗಿದೆವು.
ಕೊನೆಯ ದಿನ
ಬೆಳಿಗ್ಗೆ ಬೇಗ ಎದ್ದು ವಿಆರ್‌ಎಲ್ ಆಫೀಸ್‌ಗೆ ಹೋಗಿ ಬುಲೆಟ್‌ಗಳನ್ನು ಕಾರ್ಗೋಗೆ ಕಳಿಸುವುದು ಪ್ರಮುಖವಾದ ಕೆಲಸವಾಗಿತ್ತು. ಬೆಂಗಳೂರಿಗೆ ರಾತ್ರಿ 10 ಘಂಟೆಗೆ ಫ್ಲೈಟ್ ಬುಕ್ ಆಗಿರುವುದರಿಂದ ಸುಮಾರು ಕಾಲಾವಕಾಶ ದೊರೆಯುವುದರಿಂದ, ಸ್ವಲ್ಪ ದೆಹಲಿಯ ಸುತ್ತ ಸುತ್ತಾಡೋಣ ಎಂದುಕೊಂಡೆವು.
ವಿಆರ್‌ಎಲ್ ಆಫೀಸ್‌ಗೆ ಹೋಗಿ ಸುಸಜ್ಜಿತವಾದ ಬೋನಿನಲ್ಲಿ ನಮ್ಮ ಬುಲ್ಲೆಟ್‌ಗಳನ್ನು ಹಾಕಿ, ಬಿಗಿಗೊಳಿಸಿ ಬೆಂಗಳೂರಿನ ಅಡ್ರೆಸ್ ಬರೆದು ಅಲ್ಲಿಂದ ಹೊರಟಾಗ ಏನನ್ನೋ ಕಳೆದುಕೊಂಡಂತಹ ಅನುಭವ. ಮಧ್ಯಾಹ್ನ 1 ಘಂಟೆ ಆಗಿರುವುದರಿಂದ ಅಲ್ಲೇ ಊಟ ಮುಗಿಸಿ, ಟಾಂಗಾ ಏರಿ ಮೆಟ್ರೋ ಸ್ಟೇಷನ್ ಕಡೆಗೆ ಹೊರೆಟೆವು. ಮುಂಬೈನ ಲೋಕಲ್ ಟ್ರೆ„ನ್‌ಗಳನ್ನು ನಾಚಿಸುವ ನೂಕು ನುಗ್ಗಲು ದೆಹಲಿಯ ಮೆಟ್ರೋದಲ್ಲಿ, ದೆಹಲಿಯ ಪ್ರತಿಯೊಂದು ನಗರವು ಮೆಟ್ರೋದಿಂದ ಕನೆಕ್ಟ್ ಆಗಿದ್ದು, ಅತಿಯಾಗಿ ಜನರು ಮೆಟ್ರೋವನ್ನು ಅವಲಂಬಿಸಿದ್ದಿದ್ದು ಬಾಹ್ಯ ನೋಟಕ್ಕೆ ಕಾಣುತ್ತಿತ್ತಾದರೂ, ಟ್ರಾಫಿಕ್ ಏನು ಅಷ್ಟೊಂದು ಕಡಿಮೆ ಅನಿಸಲಿಲ್ಲ.
ನೇರವಾಗಿ ಅಲ್ಲಿಂದ ಇಂಡಿಯಾ ಗೇಟ್ ಕಡೆಗೆ ಹೊರಟು, ಪಾರ್ಲಿಮೆಂಟ್ ಭವನ ಹಾಗೂ ಇಂಡಿಯಾ ಗೇಟ್ ಪಕ್ಕ ನಿಂತು ಫೋಟೋ ತೆಗೆಸಿಕೊಳ್ಳುವಾಗ ದೂರದರ್ಶನದಲ್ಲಿ ಎಷ್ಟೋ ಬಾರಿ ನೋಡಿದ ಸ್ಥಳಗಳ ಮೆಲುಕು. ಮತ್ತೆ ಅದೇ ಮೆಟ್ರೋ ಹಿಡಿದು ನಮ್ಮ ಹೋಟೆಲ್‌ಗೆ ಹೋಗಿ ಚೆಕ್-ಔಟ್ ಮಾಡಿ ಏರ್‌ಪೋರ್ಟ್ ಕಡೆಗೆ ಹೊರಟೆವು.
ಕೊನೆಯ ಸೆಲ್ಫಿ
ಈ ಕನಸಿನ ಪ್ರವಾಸದ ಕೊನೆಯ ಸೆಲ್ಫಿ, ನಾನು ಹೊರಡುವ ಮೊದಲ ವಿಮಾನಯಾನದ ಮುಂದೆ ನಿಂತು ತೆಗೆದಾಗ ಏನೋ ಸಾಧಿಸಿದ ಹುಮ್ಮಸ್ಸು. ಅದನ್ನು ಫೇಸ್‌ಬುಕ್‌ನಲ್ಲಿ ಹಾಕಿ, ವಿಮಾನವನ್ನು ಏರಿ ಕುಳಿತುಕೊಂಡೆವು.
ನಕ್ಷೆಯಲ್ಲಿ ದೂರ ಎಂದೆನಿಸಿದ ಊರುಗಳು, ಇಲ್ಲೇ ಪಕ್ಕದಲ್ಲಿವೆ ಎಂಬ ಭಾವನೆ ಇಂದು. ಯಾರೆಲ್ಲ ಅಪರಿಚಿತರು ಎಂದುಕೊಂಡವರೆಲ್ಲ ಎಲ್ಲೋ ಹತ್ತಿರದವರು ಎನಿಸುವಂತಹ ಕಲ್ಪನೆ, ಪ್ರಯಾಣ ಎಂಬುದು ನಿಜವಾಗಲೂ ಒಂದು ಪಾಠ. ಲೇಹ್ ಲಡಾಖ್ ಹೋಗಬೇಕು ಎಂಬ ಕನಸಿನ ಕಿರೀಟಕ್ಕೆ, ಕಾಶ್ಮೀರದಿಂದ ಕನ್ಯಾಕುಮಾರಿ ಎಂಬ ರೆಕ್ಕೆ ಸಿಕ್ಕಿಸಿ, ಅದನ್ನು ತೊಟ್ಟು ಒಮ್ಮೆ ಹಿಂದಿರುಗಿ ನೋಡಲು, ಪಯಣಿಸಿದ ದಾರಿ ಒಂದು ಪುಟ್ಟ ಪ್ರಪಂಚ.
ನಮ್ಮ ದೇಶವೇ ಚೆಂದ
ನಾನು ಕಂಡಂತೆ ನಮ್ಮ ದೇಶ ನಮ್ಮ ಊಹೆಗಿಂತ ಮಿಗಿಲಾಗಿ ಸುಂದರವಾಗಿದೆ. ನೈಸರ್ಗಿಕವಾಗಿ ಇದು ನಿಜಕ್ಕೂ ಸ್ವರ್ಗ. ಜಾತ್ಯಾತೀತತೆಯಲ್ಲಿ ಏಕತೆ, ಅತಿಥಿ ದೇವೋ ಭವ ಅನ್ನೋ ಪದಗಳ ಅರ್ಥ ಹುಡುಕಿ ನೀವು ದೇಶಾಂತರ ಹೊರಟು ನೋಡಿ. ಅದರ ಅರಿವು ನಿಮ್ಮನ್ನು ಮಂತ್ರಮುಗ್ಧನಾಗಿಸಿ ಇದು ನನ್ನ ದೇಶ, ನಮ್ಮ ಜನ ಅನ್ನೋವಷ್ಟರ ಮಟ್ಟಿಗೆ ಮೋಡಿ ಮಾಡಿ ನಿಮ್ಮಲ್ಲಿರುವ ಇನ್ನೊಂದು ವ್ಯಕ್ತಿತ್ವವನ್ನು ಹೊರತರುತ್ತದೆ ಅನ್ನುವುದು ನನ್ನ ಭಾವನೆ.
ಅಪ್ಪನಿಗೆ ಕೊನೆಯ ಬಾರಿ ಸುಳ್ಳು ಹೇಳುವುದಾಗಿ ಅಂದುಕೊಂಡು, ಫೋನ್ ಮಾಡಿ ಮನೆಯಲ್ಲಿಯೇ ಊಟ ಮುಗಿಸಿರುವುದಾಗಿ ತಿಳಿಸಿ ಗುಡ್ ನೈಟ್ ಹೇಳಿದಾಗ, ಊರಿಗೆ ಹೋಗಿ ಸತ್ಯವನ್ನು ಹೇಗೆ ಹೇಳುವುದು? ಹೇಳಿದ ಮೇಲೆ ಅವರ ಪ್ರತಿಕ್ರಿಯೆ ಹೇಗಿರಬಹುದು? ಎಂದು ಊಹಿಸಿಕೊಂಡು ನನಗೆ ನಾನೆ ಸಮಾಧಾನ ಮಾಡಿಕೊಳ್ಳುತ್ತ, ಅವರು ನಿನ್ನ ಸಾಧನೆಗೆ ಮೆಚ್ಚುವರು ಎಂದುಕೊಂಡೆ.
ನಮ್ಮ ಈ ಪ್ರಯಾಣಕ್ಕೆ ಶುಭಹಾರೈಸಿದ ಎಲ್ಲಾ ಮಿತ್ರರಿಗೂ ದಾರಿಯುದ್ದಕ್ಕೂ ಸಹಕರಿಸಿದ ಎಲ್ಲಾ ಹೊಸ ಪರಿಚಯಸ್ಥರಿಗೂ ವಾಟ್ಸಾಪ್‌ನಲ್ಲಿ ವೀ ಆರ್ ಕಮಿಂಗ್ ಬ್ಯಾಕ್ ಎಂದು ಮೆಸೇಜ್ ಕಳಿಸಿದಾಗ ಏನೋ ಮನಸ್ಸಲ್ಲಿ ದ್ವಂದ್ವ. ಪ್ರತಿಯೊಬ್ಬರಿಗೂ ಕನಸು ಇದ್ದೇ ಇರುತ್ತದೆ. ಅದನ್ನು ಪೂರೈಸಲು ಸರಿಯಾದ ಕ್ಷಣದ ಅವಶ್ಯಕತೆ ಇಲ್ಲ, ಕನಸಿದ್ದರೆ ಇಂದೇ ಮಾರ್ಗ ಎಂಬ ಮುಂದಾಲೋಚನೆ ಇದ್ದಿದ್ದರೆ ಈ ಕನಸು, ಕನಸು ಎನಿಸಿಕೊಳ್ಳುವ ಮೊದಲೇ ಅನುಭವಿಸಬಹುದಾಗಿತ್ತು ಎನಿಸಿತು. ಕ್ರಮಿಸಿದ ದೂರ ಚಿಕ್ಕದು ಎನಿಸತೊಡಗಿತು.
ನಮಸ್ಕಾರ
“ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರಿಲ್ಲ’ ಈ ಅದ್ಭುತವಾದ ಹೇಳಿಕೆಯನ್ನು ಕೊಟ್ಟ ಮಹಾನುಭಾವ ಯಾರೆಂದು ಅಲೆಮಾರಿಗಳೇ ಹುಡುಕಬೇಕು. ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದ ಕಣಿವೆಯಲ್ಲಿ ಮನಸ್ಸು ಮುಗುಳ್ನಗುತ್ತಾ ಉಸಿರಾಡಿ, ಲೇಹ್, ಲಡಾಕ್ ಮತ್ತು ಕಾರ್ಗಿಲ್‌ಗಳನ್ನು ಸುತ್ತಾಡಿ 22 ದಿನಗಳ ನಂತರ ದೆಹಲಿಯ ಏರ್‌ಪೋರ್ಟ್‌ನಲ್ಲಿ ವಿಮಾನದ ವಿಂಡೋ ಸೀಟಲ್ಲಿ ಕುಳಿತಾಗ ಮನಸ್ಸಿಗೆ ಏನೋ ಕಳೆದುಕೊಂಡಂತೆ ಕಳವಳ.
ಮತ್ತೆ ಬರುವೆನು ಎಂದು ಹೇಳಿ ಕೈಬೀಸಿ ಬಂದ ಊರುಗಳು ಕರೆಯುತ್ತಿವೆ ಅನಿಸುತ್ತಿತ್ತು. ಮೊದಲ ಬಾರಿ ನೋಡಿ, ಆಡಿದ ಹಿಮವು ಇನ್ನೂ ಅಂಗೈಯಲ್ಲಿ ಹೆಪ್ಪುಗಟ್ಟಿರುವ ಅನುಭವ. ಮೇಲಿನ ಕಣ್ಣುರೆಪ್ಪೆ ಕುಸಿದಾಗ ಮತ್ತೆ ಕಣ್ಣ ಮುಂದೆ ಆ ಎಂದೂ ಮುಗಿಯದ ರೋಮಾಂಚಕ ರಸ್ತೆಗಳು, ನಾನು ಮತ್ತು ಆಕಾಶ್, 7450 ಕಿಮೀ ಓಡಿಸಿದ 2 ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳು, ಅಲೆಮಾರಿಗಳಂತೆ ಕಳೆದ 22 ದಿನಗಳ ಪ್ರತಿಯೊಂದು ಕ್ಷಣಗಳು, ಲೆಕ್ಕವಿಡದಷ್ಟು ಹೊಸ ಗೆಳೆಯರು ಮತ್ತು ನೆನಪುಗಳು.
– ವಿಶ್ವಜಿತ್ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.