ಆಮ್ಲಜನಕ ಇಲ್ವಲ್ಲ, ಹೇಗಪ್ಪಾ ಉಸಿರಾಡ್ತೀರಿ?
Team Udayavani, Dec 26, 2017, 7:25 AM IST
ನನಗೆ ಯಾವ ರಾಸಾಯನಿಕ ವಸ್ತುವಿನ ಹೆಸರೂ ಮತ್ತು ಅದರ ಸಂಕೇತ ನೆನಪಿನಲ್ಲಿ ಉಳಿಯುವುದಿಲ್ಲ ಎಂದೆ. ಅದಕ್ಕೆ ಅವರು ನಗುತ್ತ ನಿನ್ನ ಸಮಸ್ಯೆಯನ್ನು ನಾನು ಪರಿಹರಿಸುತ್ತೇನೆ ಎಂದರು.
ಹೈಸ್ಕೂಲಿನಲ್ಲಿ ಹೆಚ್ಚಿನ ಸಹಪಾಠಿಗಳಿಗೆ ವಿಜಾnನ ಕಬ್ಬಿಣದ ಕಡಲೆಯಾಗಿತ್ತು. ಅದರಲ್ಲೂ ರಸಾಯನ ಶಾಸ್ತ್ರದಲ್ಲಿ ಬರುವ ರಾಸಾಯನಿಕ ವಸ್ತುಗಳ ಹೆಸರುಗಳನ್ನು ಎಷ್ಟು ಕಲಿತರೂ ಮರೆತುಹೋಗುತ್ತಿತ್ತು. ಇನ್ನು ಹಲವರಿಗೆ ಜೀವಶಾಸ್ತ್ರದಲ್ಲಿ ಅಭಿರುಚಿಯಿದ್ದರೂ ಅಧ್ಯಾಪಕರು ನೀಡುತ್ತಿದ್ದ ಉದಾಹರಣೆಗಳ ಹೊರತು ಬೇರೇನೂ ಸ್ಮತಿಯಲ್ಲಿ ಉಳಿಯುತ್ತಿರಲಿಲ್ಲ. ಇಂದಿನಷ್ಟು ಸಡಿಲಿಕೆ ಕೂಡ ಅಂದು ಇರಲಿಲ್ಲ. ಏಪ್ರಿಲ್ 10ರಂದು ಎಲ್ಲರೂ ದೇವಸ್ಥಾನದಲ್ಲಿ- “ದೇವರೇ, ಇದೊಂದು ಬಾರಿ ಪಾಸ್ ಮಾಡಿಸಪ್ಪ, ಮುಂದಿನ ವರ್ಷದಿಂದ ಖಂಡಿತಾ ಪ್ರಾರಂಭದಿಂದಲೇ ಓದುತ್ತೇನೆ’ ಎಂದು ಅಲವತ್ತುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.
ಹೀಗಿರುವಾಗಲೇ, ನಮಗೆ ಹೊಸದಾಗಿ ವಿಜಾnನಕ್ಕೆ ಶಿಕ್ಷಕಿಯಾಗಿ ಬಂದವರು ಧಾರಿಣಿ ಮೇಡಂ. ಅವರು ಕಲಿಸುತ್ತಿದ್ದ ರೀತಿ ಬಹಳ ಸ್ವಾರಸ್ಯಕರವಾಗಿತ್ತು. ನಮ್ಮ ಅದೃಷ್ಟವೋ ಏನೋ, ಅವರೇ ನಮಗೆ ತರಗತಿ ಅಧ್ಯಾಪಕರಾಗಿಬಿಟ್ಟರು. ಮೊದಲ ದಿನವೇ ನಮ್ಮ ಬಳಿ, “ನಿಮಗೆ ವಿಜಾnನ ಇಷ್ಟವಾದರೆ, ಯಾಕಿಷ್ಟ? ಇಷ್ಟವಿಲ್ಲ ಎಂದಾದರೆ ಯಾಕೆ ಇಷ್ಟವಿಲ್ಲ?’ ಎಂದು ಪ್ರಶ್ನೆಯನ್ನೆಸೆದರು. ನನ್ನ ಸರದಿ ಬಂದಾಗ ನಾನು- “ಮೇಡಂ, ನನಗೆ ರಸಾಯನ ಶಾಸ್ತ್ರದಲ್ಲಿ ಬರುವ ರಾಸಾಯನಿಕ ವಸ್ತುಗಳ ಹೆಸರು ಮತ್ತು ರಾಸಾಯನಿಕ ಕ್ರಿಯೆಗಳು ಎಂದರೆ ಕಷ್ಟ’ ಎಂದೆ. ಅದಕ್ಕೆ ಅವರು ಯಾಕೆ? ಏನು ಕಾರಣ? ಎಂದು ಪ್ರಶ್ನಿಸಿದರು. ನನಗೆ ಯಾವ ರಾಸಾಯನಿಕ ವಸ್ತುವಿನ ಹೆಸರೂ ಮತ್ತು ಅದರ ಸಂಕೇತ ನೆನಪಿನಲ್ಲಿ ಉಳಿಯುವುದಿಲ್ಲ ಎಂದೆ. ಅದಕ್ಕೆ ಅವರು ನಗುತ್ತ ನಿನ್ನ ಸಮಸ್ಯೆಯನ್ನು ನಾನು ಪರಿಹರಿಸುತ್ತೇನೆ ಎಂದರು.
ಮಾರನೇ ದಿನ ಅವರು ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಒಂದು ಡ್ರಾಯಿಂಗ್ ಪೇಪರ್‌ನಲ್ಲಿ ಬರೆದು ಪ್ರತೀ ಹೆಸರಿನ ಎದುರು ಒಂದೊಂದು ರಾಸಾಯನಿಕ ವಸ್ತುವಿನ ಹೆಸರು ಮತ್ತು ಅದರ ಸಂಕೇತವನ್ನು ಬರೆದು ತಂದು ತರಗತಿಯ ನೋಟಿಸ್ ಬೋರ್ಡಿನಲ್ಲಿ ಅಂಟಿಸಿದರು. ನಂತರ “ನೋಡಿ ಮಕ್ಕಳೇ, ನಾಳೆಯಿಂದ ನಾನು ಹಾಜರಾತಿ ಕರೆಯುತ್ತೇನೆ, ನೀವು ಪ್ರಸೆಂಟ್ ಮೇಡಂ ಎನ್ನುವ ಬದಲು ನಿಮಗೆ ಕೊಡಲಾದ ರಾಸಾಯನಿಕ ವಸ್ತುವಿನ ಹೆಸರನ್ನು ಹೇಳಬೇಕು’ ಎಂದರು. ಈ ಹೊಸ ಪ್ರಯೋಗದಿಂದ ನಮ್ಮಲ್ಲಿ ಹೆಚ್ಚಿನವರಿಗೆ ಸರಿಸುಮಾರು ನಲವತ್ತು ರಾಸಾಯನಿಕ ವಸ್ತುಗಳ ಹೆಸರು ಬಾಯಿಪಾಠವಾಯಿತು.
ಹಾಜರಾತಿಯನ್ನು ಕರೆಯುವಾಗ ಧಾರಿಣಿ ಮೇಡಂ ತಮಾಷೆ ಮಾಡುತ್ತಿದ್ದ ಪರಿ ಮರೆಯಲಸಾಧ್ಯ. ಉದಾಹರಣೆಗೆ ಅನಿತಾ ಎಂಬುವಳು “ಆಮ್ಲಜನಕ’ವಾಗಿದ್ದಳು. ಅವಳು ಗೈರಾದರೆ ಮೇಡಂ “ಹೋ, ಇವತ್ತು ಆಮ್ಲಜನಕ ಇಲ್ವಲ್ಲ ಹೇಗೆ ಉಸಿರಾಡುತ್ತೀರಿ?’ ಎಂದು ಹಾಸ್ಯ ಮಾಡುತ್ತಿದ್ದರು. ಅವರ ಈ ವಿನೂತನ ಶೈಲಿಯಿಂದ ನಮಗೆ ಒಂದೆಡೆ ಧಾರಿಣಿ ಮೇಡಂ, ಇನ್ನೊಂದೆಡೆ ರಸಾಯನ ಶಾಸ್ತ್ರವೂ ಹತ್ತಿರಾಗತೊಡಗಿತು.
ನಮಗೆ ನಮ್ಮ ನಮ್ಮ ರಾಸಾಯನಿಕ ವಸ್ತುವಿನ ಹೆಸರು ಪರಿಚಯವಾದ ನಂತರ, ಹಾಜರಾತಿ ಕರೆಯುವ ಶೈಲಿಯನ್ನು ಪುನಃ ಬದಲಾಯಿಸಿದರು. ತದನಂತರ ನಮ್ಮ ಹಾಜರಾತಿಗೆ ಹೆಸರಿನ ಬದಲಾಗಿ ನಮಗೆ ಕೊಡಲಾದ ರಾಸಾಯನಿಕ ವಸ್ತುವಿನ ಹೆಸರನ್ನು ಕರೆಯುತ್ತಿದ್ದರು. ನಾವು ಪ್ರಸೆಂಟ್ ಮೇಡಂ ಎನ್ನುವ ಬದಲಾಗಿ ಅದರ ಸಂಕೇತವನ್ನು ಹೇಳಬೇಕಿತ್ತು. ಉದಾಹರಣೆಗೆ ನಾನು ಜಲಜನಕವಾಗಿದ್ದೆ. ಅವರು ಜಲಜನಕ ಎಂದು ಕರೆದಾಗ ನಾನು “ಎಚ್’ ಎಂದು ಪ್ರತಿಸ್ಪಂದಿಸುತ್ತಿದ್ದೆ.
ತರಗತಿಯ ನಾಯಕ ಅಥವಾ ನಾಯಕಿಯರು ತರಗತಿಯಲ್ಲಿ ಅಧ್ಯಾಪಕರಿಲ್ಲದಾಗ ಮಾತನಾಡಿದವರ ಹೆಸರನ್ನು ಪಟ್ಟಿ ಮಾಡಿ ಶಿಕ್ಷಕ/ಶಿಕ್ಷಕಿಯರಿಗೆ ನೀಡಬೇಕಿತ್ತು. ಹಾಗೆ ತರಗತಿಯಲ್ಲಿ ಗಲಾಟೆ ಮಾಡಿದವರ ಮೇಲೆ ಧಾರಿಣಿ ಮೇಡಂ ಕೊಡುವ ಶಿಕ್ಷೆ ಕಲಿಕಾ ರೂಪದಲ್ಲಿ ಇರುತ್ತಿತ್ತು. ಒಮ್ಮೆ ನನ್ನ ಮತ್ತು ಗೆಳತಿಯೊಬ್ಬಳ ಹೆಸರು ಆ ಚೀಟಿಯಲ್ಲಿತ್ತು. ಆಗ ಅವರು ನಮ್ಮನ್ನುದ್ದೇಶಿಸಿ-“ನಾಳೆ ನೀವಿಬ್ಬರೂ ಬ್ಯಾಕ್ಟೀರಿಯಾ ಆಗಿ ಹತ್ತು ನಿಮಿಷಗಳ ಕಾಲ ಚಿಕ್ಕ ವೈಜಾnನಿಕ ನಾಟಕ ಮಾಡಬೇಕು. ಇದೇ ನಿಮಗೆ ಶಿಕ್ಷೆ’ ಎಂದುಬಿಟ್ಟರು. ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಒಮ್ಮೆ ಹಾದಿಯಲ್ಲಿ ಎದುರುಬದುರಾದಾಗ ಹೇಗೆ ಸಂಭಾಷಣೆ ನಡೆಸಬಹುದು ಎಂದು ನಾನು ನನ್ನ ಗೆಳತಿ ಪ್ರಸ್ತುತಪಡಿಸಿದೆವು.
ಹೈಸ್ಕೂಲು ಶಿಕ್ಷಣ ಮುಗಿದು ಆಗಲೇ ಹದಿನೈದು ವರ್ಷಗಳು ಸಂದಿವೆ. ಯಾವ ಶಿಕ್ಷಕರನ್ನು ಮರೆತರೂ ಧಾರಿಣಿ ಮೇಡಂ ಅವರನ್ನು ಮರೆಯುವುದಿಲ್ಲ. ಎಲ್ಲಾ ಶಿಕ್ಷಕರೂ ಪುಸ್ತಕದಲ್ಲಿರುವುದನ್ನು ಕಲಿಸಬಲ್ಲರು. ಆದರೆ ವಿಶೇಷವಾಗಿ ಮಕ್ಕಳ ಮಾನಸಿಕ ಮಟ್ಟವನ್ನು ಅರ್ಥ ಮಾಡಿಕೊಂಡು ಕಲಿಸುವ ಶಿಕ್ಷಕರು ಮನಸ್ಸಿನಲ್ಲಿ ಗೌರವ ಮತ್ತು ಪ್ರೀತಿಯನ್ನು ಹಸಿರಾಗಿಸುತ್ತಾರೆ. ಅಂಥವರ ಪೈಕಿ ನಮ್ಮ ಧಾರಿಣಿ ಮೇಡಂ ಕೂಡ ಒಬ್ಬರು ಎಂದು ಹೇಳಲು ನನಗೆ ಹೆಮ್ಮೆ.
-ಚೇತನಾ ಶೆಣೈ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.