ಎಲ್ಲೂ ಹೋಗೋಲ್ಲ, ನಾನು ನಿನ್ನನು ಬಿಟ್ಟು…
Team Udayavani, Jun 12, 2018, 6:00 AM IST
ಇಷ್ಟು ದಿನ ಕಣ್ಣೆದುರು ಆಟವಾಡಿಕೊಂಡು, ಮನೆ ತುಂಬಾ ಅಂಬೆಗಾಲಿಡುತ್ತಾ ನಗು ಚೆಲ್ಲಿಕೊಂಡು ನಲಿದಾಡುತ್ತಿದ್ದ ಮಗುವನ್ನು ಶಾಲೆಗೆ ಸೇರಿಸುವುದರ ಹಿಂದಿನ ನೋವು, ಅನುಭವಿಸಿದವರಿಗೆ ಮಾತ್ರ ಗೊತ್ತು. ನಮ್ಮ ಕಾಲದಲ್ಲಿ ಶಾಲೆಗೆ ಸೇರುವಾಗ ಇಷ್ಟೆಲ್ಲಾ ಕಾಂಪ್ಲಿಕೇಷನ್‌ಗಳಿರಲಿಲ್ಲ ಎಂದುಕೊಂಡರೂ ವೇಗವಾಗಿ ಮುನ್ನುಗ್ಗುತ್ತಿರುವ ಜಗತ್ತಿನಲ್ಲಿ ಹಿಂದೆ ಬೀಳದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಅನಿವಾರ್ಯವಾಗಿ ಬೇಗನೇ ಶಾಲೆ ಮೆಟ್ಟಿಲು ಹತ್ತಿಸಬೇಕಾದ ಅನಿವಾರ್ಯತೆ ಈಗಿನ ಪಾಲಕರದು. ಈ ಶುಭಾರಂಭದ ಘಳಿಗೆಯನ್ನು ಇಬ್ಬರು ಅಪ್ಪಂದಿರು “ಜೋಶ್’ ಜೊತೆ ಹಂಚಿಕೊಂಡಿದ್ದಾರೆ.
ಮೊದಲ ದಿನದ ಅಳುವೇ ಗಾನ
– ಪ್ರಶಾಂತ್ ಭಟ್, ಕುತೆತೂರ್
ಕಳೆದ ವರ್ಷವಷ್ಟೇ ತಂಗಿ ಮಗಳು ಮಾಂಟೆಸ್ಸರಿಗೆ ಹೋಗುವಾಗ “ಏನಪ್ಪಾ ಇದು!? ಈಗಿನ್ನೂ ಮೂರು. ನಾವೆಲ್ಲ ಹಾಯಾಗಿ ಮಂಗಾಟ ಆಡಿಕೊಂಡು ಆರರವರೆಗೆ ಲಾಗ ಹಾಕ್ತಾ ಆರಾಮಾಗಿದ್ವಿ. ಬರೀ ಮೂರು ವರ್ಷಕ್ಕೆ ಯಾಕೆ ಶಾಲೆ? ಹೀಗೆ ಮುಂದುವರಿದರೆ ಭವಿಷ್ಯದಲ್ಲಿ, ಹುಟ್ಟಿದ ಕೂಡಲೇ ಮಗುವನ್ನು ಶಾಲೆಗೆ ಸೇರಿಸುತ್ತಾರೇನೋ’ ಅಂತ ನಗೆಯಾಡಿದ್ದೆ. ಆ ದಿನವೇನೋ ಹಾಸ್ಯ ಮಾಡಿದೆ, ಆದರೆ, ನನ್ನ ಪುಟ್ಟ ಮಗಳನ್ನೂ ಶಾಲೆಗೆ ಸೇರಿಸಬೇಕಾಗಿ ಬಂದಾಗ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿತ್ತು. “ಅವಳಿಗಿನ್ನೂ ಎರಡೂವರೆ ವರ್ಷ ಮಾರಾಯ್ತಿ. ಇಷ್ಟು ಬೇಗ ಶಾಲೆ ಬೇಕಾ?’ ಅಂತ ರಾಗ ಎಳೆದರೆ, ಅವಳಮ್ಮ “ನಾಲ್ಕು ಜನ ಮಕ್ಕಳೊಂದಿಗೆ ಆಟವಾಡಿದ್ರೆ ಎಲ್ಲ ಕಲೀತಾಳೆ. ಅಲ್ಲದೇ, ಇವತ್ತಲ್ಲ ನಾಳೆ ಹೋಗಲೇಬೇಕು. ಹೊರ ಜಗತ್ತೂ ಗೊತ್ತಾಗುತ್ತೆ’ ಅಂತಂದಳು. ಸರಿ ಅಂತ ಮನೆಯ ಹತ್ತಿರವೇ ಇದ್ದ ಶಿಶುಮಂದಿರಕ್ಕೆ ಸೇರಿಸೋದು ಅಂತಾಯ್ತು.
ನನ್ನ ಚಿಂತೆ ಬೇರೆಯದೇ ಇತ್ತು. ಹಿಂದೊಮ್ಮೆ ನನ್ನ ಮೆಡಿಕಲ್ ಬಿಲ್ ತರಲೆಂದು ಡಾಕ್ಟರ್‌ರ ಕ್ಲಿನಿಕ್‌ಗೆ ತೆರಳಿದ್ದೆವು. ಗಾಡಿ ಪಾರ್ಕ್ ಮಾಡಿ ಇಳಿದಿದ್ದಷ್ಟೆ. ಅಷ್ಟು ಹೊತ್ತು ಮುಂದೆ ನಿಂತುಕೊಂಡಿದ್ದ ಮಗಳು ಕಾಣಿಸಲಿಲ್ಲ. ಎಲ್ಲಿ ಹೋದಳು ಅಂತ ನೋಡಿದರೆ ಅವಳು ಕ್ಲಿನಿಕ್ ಕಂಡು ಗಾಬರಿಯಿಂದ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಅಲ್ಲಿಂದ ದೂರ ಓಡುತ್ತಿದ್ದಾಳೆ. ಆಮೇಲೆ “ನಿನಗೇನು ಚುಚ್ಚಲ್ಲಮ್ಮಾ’ ಅಂತ ಸಮಾಧಾನ ಮಾಡಿ ಎತ್ಕೊಂಡು ಬಂದಿದ್ದಾಯ್ತು. ಆವತ್ತೇ ಆ ರೀತಿ ಓಡಿ ಹೋದವಳು ಇನ್ನು ಶಿಶುಮಂದಿರದಲ್ಲಿ ಹೇಗಿರುತ್ತಾಳ್ಳೋ ಎಂಬುದೇ ದೊಡ್ಡ ಚಿಂತೆಯಾಯಿತು.
“ಜೂನ್ ಒಂದಕ್ಕೆ ಕರಕೊಂಡು ಬನ್ನಿ. ಮೊದಲೆರಡು ದಿನ ಒಂದೇ ಗಂಟೆ, ಆಮೇಲೆ ಮೂರು ಗಂಟೆ’ ಅಂದಿದ್ದರು ಶಿಶುಮಂದಿರದವರು. ಆವತ್ತು ಜೋರು ಮಳೆ ಊರಿಡೀ. ಹಾಗಾಗಿ ಎರಡು ದಿನ ಮುಂದೆ ಹೋಯ್ತು. “ಬದುಕಿದೆಯಾ ಬಡಜೀವವೇ’ ಅಂದುಕೊಂಡೆ ನಾನು ಮನಸ್ಸೋಳಗೆ. ಆ ಎರಡು ದಿನವೂ ಬೇಗನೆ ಕಳೆದುಹೋಯ್ತು. “ನಾಳೆ ಕಳಿಸಬೇಕು’ ಅಂದಳು ಹೆಂಡತಿ. ನನ್ನ ಎದೆ ಧಸಕ್ಕೆಂದಿತು. “ನಾಳೆಯಾ? ನಾಳೆ ಕೆಲಸ ಇದೆ. ನೀನೇ ಹೋಗು’ ಅಂದೆ. “ನಂಗೊತ್ತಿತ್ತು ನೀವು ಹೀಗೇ ಹೇಳ್ತೀರಾ ಅಂತ. ಏನು ನಡೆಯೊಲ್ಲ ಸುಮ್ಮನೆ ಬನ್ನಿ ನಂಜೊತೆ’ ಅಂತ ಸುಗ್ರೀವಾಜ್ಞೆ ಜಾರಿಯಾಯ್ತು.
ಆ ರಾತ್ರಿಯಿಡೀ ಏನೇನೋ ಯೋಚನೆಗಳು. ನಮ್ಮ ಪುಟ್ಟಿ ಅಲ್ಲಿನ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಾಳ್ಳೋ ಇಲ್ಲವೋ? ಅಥವಾ ಗಲಾಟೆ ಮಾಡುತ್ತಾಳ್ಳೋ? ಹೀಗೆ ಏನೇನೋ ಚಿಂತೆಗಳು. ಕೂಸು ಬಾಯಲ್ಲಿ ಬೆರಳಿಟ್ಟರೆ ಕಚ್ಚಲ್ಲ ಅಂತ ಒಂದ್ಸಲ ಅವಳ ಬಾಯಿಗೆ ಬೆರಳಿಟ್ಟಿದ್ದೆ. ನನ್ನ ದುರಾದೃಷ್ಟಕ್ಕೆ ಕಚಕ್ ಅಂತ ಕಚ್ಚಿಯೇಬಿಟ್ಳು. ಪ್ರಾಣವೇ ಹೋದಂತಾಗಿತ್ತು ನನಗೆ. ಇದೇ ತರಹ ಶಿಶುಮಂದಿರದಲ್ಲಿ ಬೇರೆ ಮಕ್ಕಳಿಗೆ ಮಾಡಿದ್ರೆ?
ರಾತ್ರಿ ಕಳೆದು ಬೆಳಗಾಯಿತು. ಬಟ್ಟೆ ಹಾಕಲು ಹೋದಾಗಲೇ ಪುಟ್ಟಿಗೆ ಅದೇನೋ ಸೂಚನೆ ಸಿಕ್ಕಿಬಿಟ್ಟಿತು. ಒಂದೇ ಸಮನೆ ಗಲಾಟೆ ಶುರು ಹಚ್ಚಿಕೊಂಡಳು. ಹೇಗೋ ಸಮಾಧಾನ ಮಾಡಿ ಬ್ಯಾಗು, ವಾಟರ್ ಬಾಟಲ್‌ಗಳನ್ನೆಲ್ಲಾ ಎತ್ತಿಕೊಂಡು ಹೊರಟೆವು.
ನಮ್ಮ ಪುಟ್ಟಿಯದೇ ರಂಪ ಅಂತ ಅಂದುಕೊಂಡು ಶಿಶುಮಂದಿರಕ್ಕೆ ಕಾಲಿಟ್ಟರೆ ಅಲ್ಲಿ ನಮಗಿಂತ ಮೊದಲೇ ಬಂದಿದ್ದ ಮಕ್ಕಳೆಲ್ಲಾ ಅದಕ್ಕಿಂತ ದೊಡ್ಡ ರಂಪ ಶುರುಹಚ್ಚಿಕೊಂಡಿದ್ದರು! ಎಲ್ಲಾ “ಹೋ’ ಅಂತಾ ಅಳ್ತಾ ಇವೆ. ಅವರನ್ನು ಕಂಡು ಪುಟ್ಟಿ ನನ್ನ ಹೆಗಲಿನಿಂದ ಇಳಿಯುತ್ತಲೇ ಇಲ್ಲ. ಕೊನೆಗೆ ಭಾರವಾದ ಮನಸ್ಸಿನಿಂದ ಅವಳನ್ನು ಬಲವಂತವಾಗಿ ಮಕ್ಕಳಿದ್ದ ಕೋಣೆಯಲ್ಲಿ ಬಿಟ್ಟು ನಾನೂ, ಹೆಂಡ್ತಿ ಹೊರಗೆ ಬಂದು ಕುಳಿತೆವು. ಒಂದು ಗಂಟೆ ಕಾದು ಕರಕೊಂಡು ಹೋಗೋಣ ಅಂತ ಕೂತಿದ್ದೆವು. ಒಳಗಿನಿಂದ ಮಕ್ಕಳ ಅಳು, ಬೊಬ್ಬೆ ಕೇಳಿಬರುತ್ತಲೇ ಇದ್ದವು. ಅದರ ನಡುವೆ ಪತ್ನಿ “ಇದು ನಮ್ಮ ಪಾಪುದೇ ಸ್ವರ’ ಅಂತಂದಳು. ಆ ಬೊಬ್ಬೆಯ ನಡುವೆ ಅದು ಬೇರೆ ಗೊತ್ತಾಗುತ್ತಾ? ಅಮ್ಮಂದಿರ ಮನಸೇ ವಿಚಿತ್ರ. ಹಾಗೂ ಹೀಗೂ ಒಂದೂವರೆ ಗಂಟೆ ಕಳೆದ ಮೇಲೆ ಬಾಗಿಲು ತೆರೆಯಿತು. ನಮ್ಮ ಮುಖ ಕಂಡೊಡನೆ ದಢ ದಢ ಓಡಿಬಂದು ತೆಕ್ಕೆ ಬಿದ್ದಳು ಮಗಳು. “ಅಯ್ಯೋ ಪಾಪ, ಕೂಸೇ…’ ಅಂತ ಗೊತ್ತಿಲ್ಲದಂತೆ ನನ್ನ ಕಣ್ಣುಗಳು ತೇವಗೊಂಡವು. ವಾಪಸ್ ಬರುವಾಗ ಏನು ಮಾಡಿದರೂ ಗಾಡಿಯಿಂದ ಇಳಿಯಲೊಪ್ಪಲಿಲ್ಲ. ಅವಳನ್ನು ಅಳಿಸಿದ್ದಕ್ಕೆ ಅಂತ ಐಸ್‌ಕ್ರೀಮ್ ಕೊಡಿಸಿದಾಗ ಮುನಿಸು ಸ್ವಲ್ಪ ಮಟ್ಟಿಗೆ ತಗ್ಗಿತು.
ಹೋಗ್ತಾ ಹೋಗ್ತಾ ಎಲ್ಲಾ ಸರಿಯಾಗ್ತದೆ, ಕಲಿಯಲೇಬೇಕಲ್ವಾ, ಅಂತೆಲ್ಲ ನನಗೆ ನಾನೇ ಸಮಾಧಾನ ಹೇಳಿಕೊಂಡರೂ ಮಗಳನ್ನು ಬಿಡುವಾಗ, ಅವಳ ಅಳುವ ಕಣ್ಣು, ಸಪ್ಪೆ ಮೋರೆ ನೋಡಿದಾಗ ಎದೆಯೊಳಗೇನೋ ಜಗ್ಗಿದಂತಾಗಿ ಮನಸು ಬಾಡಿತು. ಇದಿನ್ನೂ ಆರಂಭ, ಇಂಥ ಸಂದರ್ಭಗಳು ಇನ್ನೆಷ್ಟಿದೆಯೋ ಅನ್ನುವುದೇ ಯೋಚನೆ!
ಅಪ್ಪಾ… ಕೈಗಳ ಮೇಲೆ ಪೇಂಟು!
ಹರ್ಷ ರಾಜ್ ಗಟ್ಟಿ, ಮಂಗಳೂರು
ಮಗಳು ರಿದ್ದಿಮಾಳಿಗೆ 2 ವರ್ಷ 2 ತಿಂಗಳು ತುಂಬಿದಾಗ ಅವಳನ್ನು ಕಿಂಡರ್‌ಗಾರ್ಡನ್‌ಗೆ ಸೇರಿಸಲು ನಿರ್ಧರಿಸಿದೆವು. ಪರಿಚಿತರು, ಸಂಬಂಧಿಕರೆಲ್ಲರ ಪ್ರಶ್ನೆಗಳಿಗೆ, ಟೀಕೆಗಳಿಗೆ ಉತ್ತರಿಸುವಷ್ಟರಲ್ಲಿ ಸಾಕು ಸಾಕಾಗಿತ್ತು. ಪತ್ನಿ ತುಂಬಾ ಸಂಶೋಧನೆ ನಡೆಸಿ, ವಿಚಾರ ವಿನಿಮಯ ಮಾಡಿ ನನಗೆ ಮನವರಿಕೆ ಮಾಡಿದ ನಂತರವೇ ಆ ನಿರ್ಧಾರಕ್ಕೆ ಬಂದಿದ್ದು. ಜೂನ್ 4, ಮಗಳಿಗೆ ಶಾಲೆಯ ಮೊದಲ ದಿನ. ನೆಂಟರಿಷ್ಟರಿಂದೆಲ್ಲಾ ಶುಭಾಶಯ, ಆಲ್ ದಿ ಬೆಸ್ಟ್ ಮೆಸೇಜುಗಳ ಸುರಿಮಳೆ. ಮಗಳನ್ನು ಹೊರಡಿಸಿದೆವು. ಅವಳು ನಮ್ಮನ್ನು ಬಿಗಿದಪ್ಪಿ ಗಲ್ಲಕ್ಕೆ ಮುತ್ತಿಟ್ಟಾಗಲಂತೂ ನಮ್ಮ ಸ್ವಾರ್ಥಕ್ಕೆ ಅವಳನ್ನು ಬೇಗ ಶಾಲೆಗೆ ಸೇರಿಸುತ್ತಿದ್ದೇವೇನೋ ಎಂದೆನಿಸಿಬಿಟ್ಟಿತ್ತು. ಆದರೆ, ಅವಳ ಒಳ್ಳೆಯದಕ್ಕೇ ಅಲ್ಲವಾ ಅಂತ ಸಮಾಧಾನ ಮಾಡಿಕೊಂಡು ಅವಳನ್ನು ಕರೆದುಕೊಂಡು ಹೊರಟೆವು.
ಕದ್ರಿ ಪೇಟೆಯ ಅಂಚಿನಲ್ಲಿದ್ದ ಪುಟ್ಟ ಮನೆಯನ್ನೇ ಶಾಲೆಯನ್ನಾಗಿ ಪರಿವರ್ತಿಸಿದ್ದರು. ಒಂದು ಕೈಯಲ್ಲಿ ರಿದ್ದಿಮಾಳನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಅವಳ ಬ್ಯಾಗು ಮತ್ತಿತರ ವಸ್ತುಗಳನ್ನು ಹಿಡಿದುಕೊಂಡು ನಡೆದೆ. ಆಟದ ಮೈದಾನದಲ್ಲಿದ್ದ ಜಾರುಬಂಡಿ, ತೂಗುಯ್ನಾಲೆಗಳನ್ನು ಕಂಡು ರಿದ್ದಿಮಾಳ ಕಣ್ಣರಳಿತು. ಟೀಚರ್, “ಗುಡ್ ಮಾರ್ನಿಂಗ್ ರಿದ್ದಿಮಾ’ ಎಂದಾಗ ಅವಳು ಹೆದರಿ ನನ್ನ ಹಿಂದೆ ಅವಿತಳು. ಅದಕ್ಕೆ ಅವಳನ್ನು ತರಗತಿಯೊಳಗೆ ಬಿಟ್ಟು ಸ್ವಲ್ಪ ಹೊತ್ತು ಹೊರಗೆ ನಿಂತೆ. ಐದಾರು ನಿಮಿಷಗಳ ನಂತರ ಕಿಟಾರನೆ ಕಿರುಚಿದ ದನಿ ಕೇಳಿತು. ಅದು ರಿದ್ದಿಮಾಳದೇ ಎಂದು ನನಗೆ ಯಾರೂ ಹೇಳಿಕೊಡಬೇಕಿರಲಿಲ್ಲ. ಸೀದಾ ಕ್ಲಾಸೊಳಗೆ ಹೋದೆ. ಟೀಚರ್ “ಮೊದ ಮೊದಲು ಇದೆಲ್ಲಾ ಕಾಮನ್’ ಅಂತ ನನ್ನನ್ನು ಸಮಾಧಾನ ಪಡಿಸಿ ಕಳಿಸಿದರು. ರಿದ್ದಿಮಾಳ ಧ್ವನಿ ಮತ್ತೆ ಕೇಳಲಿಲ್ಲ.
ಒಂದು ಗಂಟೆ ನಿಧಾನವಾಗಿ ಸರಿಯಿತು. ಟೀಚರ್ ನನ್ನ ಬಳಿ ಬಂದು ಕರೆದುಕೊಂಡು ಹೋಗಬಹುದು ಅಂದರು. ನನ್ನನ್ನು ನೋಡುತ್ತಿದ್ದಂತೆಯೇ ನೋಡಿ ವರ್ಷವಾಗಿತ್ತು ಅನ್ನುವಂತೆ ಗಟ್ಟಿಯಾಗಿ ಅಪ್ಪಿದಳು. ಆ ದಿನದ ತರಗತಿಯಲ್ಲಿ ಟೀಚರ್ ಇವಳ ಕೈಗಳ ಮೇಲೆ ಪೇಂಟ್ ಚೆಲ್ಲಿ ಚಿತ್ರ ಬಿಡಿಸಲು ಹೇಳಿದ್ದನ್ನು ತೊದಲುತ್ತಾ ಮುಗ್ಧವಾಗಿ ಹೇಳಿದಾಗ ಆ ಸನ್ನಿವೇಶವನ್ನು ಅವಳದೆಷ್ಟು ಎಂಜಾಯ್ ಮಾಡಿರಬಹುದು ಎಂದು ಖುಷಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.