ನೂರೊಂದು ಪರಿಯಲ್ಲಿ ಕಾಡುವ ನೂರು ರುಪಾಯಿ
Team Udayavani, Mar 28, 2017, 3:50 AM IST
ಅಮ್ಮನೂ ತುಂಬಾ ಖುಷಿಯಾಗಿದ್ದರು. ಆದರೆ ಹೇಳಿಕೊಳ್ಳಲಿಲ್ಲ. ಅವರ ಕಣ್ಣುಗಳು ಅದನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದವು. ಒಂದು ವೇಳೆ ಅವರ ಸಂತಸವನ್ನು ಮಾತಿನಲ್ಲಿ ಹೇಳಿದ್ದರೂ ನನಗೆ ಅದನ್ನು ಇಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲವೇನೋ. ಅವರ ಕಣ್ಣುಗಳಲ್ಲಿನ ಸಂತಸ ನನ್ನ ಖುಷಿಯನ್ನು ಇಮ್ಮಡಿಗೊಳಿಸಿತ್ತು.
“ಆರನೇ ತರಗತಿ ವಿದ್ಯಾರ್ಥಿ ಅಭಿಷೇಕ್ ವೇದಿಕೆಗೆ ಬರಬೇಕು’ ಎಂದು ಮೈಕ್‌ನಲ್ಲಿ ಕೂಗಿದ ಹಾಗಾಯಿತು. ಗೆಳೆಯರೊಂದಿಗೆ ಮಾತಾಡುತ್ತಾ ಕಡ್ಲೆ ಮಿಠಾಯಿ ತಿನ್ನುತ್ತಿದ್ದ ನನಗೆ ಒಂದು ಕ್ಷಣ ಗಾಬರಿ. ಇಷ್ಟು ದೊಡ್ಡ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ನನ್ನನ್ನು ಯಾಕೆ ವೇದಿಕೆಗೆ ಕರೆಯುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ. ಏನು ಮಾಡಬೇಕೆಂದು ಕೂಡಲೇ ತಿಳಿಯಲಿಲ್ಲವಾದರೂ ಅರ್ಧ ತಿಂದಿದ್ದ ಕಡ್ಲೆ ಮಿಠಾಯಿ ಪೊಟ್ಟಣವನ್ನು ಗೆಳೆಯನಿಗೆ ನೀಡಿ ಶರ್ಟಿನ ತುದಿಯಿಂದ ಬಾಯಿಯನ್ನು ಒರೆಸುತ್ತಾ ವೇದಿಕೆ ಕಡೆ ಓಡಿದೆ. ವೇದಿಕೆ ಮೇಲೆ ಹೋದಾಗಲೇ ತಿಳಿದದ್ದು: ಶಾಲಾವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯುತ್ತಾ ಇದೆ, ಮತ್ತು ಅಚ್ಚರಿ ಎಂಬಂತೆ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನಾನು ಸಹ ಇದ್ದೇನೆ ಎಂದು.
ವೇದಿಕೆಯಲ್ಲಿ ಬಹುಮಾನ ಕೊಡಲು ಎದ್ದು ನಿಂತಿದ್ದ ಅತಿಥಿಗಳ ಬಳಿ ಹೋದೆ. ಅವರು ನಗುತ್ತಾ ಕೈಯಲ್ಲಿದ್ದ ಕವರನ್ನು ನನ್ನ ಕೈಗೆ ಇಟ್ಟು “ಹೀಗೇ ಚೆನ್ನಾಗಿ ಓದು’ ಎಂದರು. ಅಷ್ಟರಲ್ಲೇ ಅಲ್ಲಿದ್ದ ಛಾಯಾಗ್ರಾಹಕ ಒಂದು ಫೋಟೋ ಕ್ಲಿಕ್ಕಿಸಿಕೊಂಡ.
ವೇದಿಕೆಯಿಂದ ಕೆಳಗಿಳಿದ ನಾನು ಸೀದಾ ಗೆಳೆಯರ ಬಳಿಗೆ ಓಡಿದೆ. ಕೈಯಲ್ಲಿದ್ದ ಕವರನ್ನೊಮ್ಮೆ ದಿಟ್ಟಿಸಿ ನೋಡಿದೆ. ಅದು ಮದುವೆ ಸಮಾರಂಭಗಳಲ್ಲಿ ವಧು ವರರಿಗೆ ಉಡುಗೊರೆಯಾಗಿ ಹಣ ನೀಡಲು ಬಳಸುವ ಕವರ್‌ನಂತೆ ಇತ್ತು. ಅದರ ಮೇಲೆ “ಅಭಿಷೇಕ್ ಎಂ. ಆರನೇ ತರಗತಿ’ ಎಂದು ಬರೆದಿತ್ತು. ನಿಧಾನವಾಗಿ ಆ ಕವರ್‌ನ ಮೇಲ್ಭಾಗ ಹರಿದು ಒಳಗೆ ಕೈ ಹಾಕಿದೆ. ಏನೋ ಕಾಗದ ಇದ್ದ ಹಾಗಾಯಿತು. ಅದನ್ನು ಹಾಗೆಯೇ ಹೊರ ತೆಗೆದು ನೋಡಿದರೆ ಅದರಲ್ಲಿ 100 ರು. ನೋಟು! ನನ್ನ ಕಣ್ಣುಗಳನ್ನು ಒಂದು ಸಲ ನನಗೇ ನಂಬಲಾಗಲಿಲ್ಲ. ಅಷ್ಟೂ ದಿನ ಕೇವಲ ಅಪ್ಪನ ಕೈಯಲ್ಲಿ ನೋಡುತ್ತಿದ್ದ ನೂರು ರುಪಾಯಿ ನೋಟು ಇವತ್ತು ನನ್ನ ಕೈಯಲ್ಲಿತ್ತು. ಅದೂ ಕೂಡ ನಾನೇ ಸಂಪಾದಿಸಿದ್ದು. ಕೂಡಲೇ ಅದನ್ನು ಕವರ್‌ನಲ್ಲೇ ಮಡಚಿ ಶರ್ಟಿನ ಜೇಬಿನಲ್ಲಿಟ್ಟೆ. ನನ್ನಂತೆಯೇ ಗೆಳೆಯರೂ ಕೂಡ ಆಶ್ಚರ್ಯಗೊಂಡಿದ್ದರು. ಸಮಾರಂಭ ಮುಗಿಯುವವರೆಗೂ ಮನೆಗೆ ಹೋಗುವ ಹಾಗಿರಲಿಲ್ಲ. ಹಾಗಾಗಿ ಮುಗಿಯುವುದನ್ನೇ ಕಾಯುತ್ತಾ ಇದ್ದೆ.
ಅಲ್ಲಿಯವರೆಗೆ ಪಾಕೆಟ್ ಮನಿಯಾಗಿ ಅಮ್ಮ ಕೊಡುತ್ತಿದ್ದ ಒಂದು ರುಪಾಯಿ, ಎರಡು ರುಪಾಯಿ ಹಣವೇ ದೊಡ್ಡದಾಗಿತ್ತು. ರಜಾ ದಿನಗಳಲ್ಲಿ ಅಜ್ಜಿ ಮನೆಗೆ ಹೋದಾಗ ಅವರು ಕೊಡುತ್ತಿದ್ದ ಹತ್ತು ರುಪಾಯಿ ಎಂದರೆ ನನ್ನ ಪಾಲಿಗೆ ತುಂಬಾ ದೊಡ್ಡದು.
ಆಗಿನ ದಿನಗಳಲ್ಲಿ ಅಮ್ಮ 100 ರುಪಾಯಿಯೊಂದಿಗೆ ವಾರದ ಸಂತೆಗೆ ಹೋದರೆ ಬರುವಾಗ ಚೀಲದ ತುಂಬಾ ತರಕಾರಿಗಳನ್ನು ಕೊಂಡು ತರುತ್ತಿದ್ದರು. ನೂರು ರುಪಾಯಿಗೆ ಆಗ ಅಷ್ಟೊಂದು ಬೆಲೆಯಿತ್ತು. ಅಜ್ಜಿ ಕೊಡುತ್ತಿದ್ದ ಹತ್ತು ರುಪಾಯಿಗಳನ್ನು ಒಮ್ಮೆಲೇ ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತಿದ್ದವನು ನಾನು. ಹೀಗಿದ್ದಾಗ ಒಮ್ಮೆಲೇ ನೂರು ರುಪಾಯಿ ಸಿಕ್ಕಿದೆ. ಇದನ್ನೀಗ ಏನು ಮಾಡುವುದು? ಹೇಗೆ ಖರ್ಚು ಮಾಡುವುದು? ಖರ್ಚು ಮಾಡಿದರೂ ಎಷ್ಟು ಮಾಡುವುದು? ಎಂಬಿತ್ಯಾದಿ ಯೋಚನೆಗಳು ಮೂಡತೊಡಗಿದವು.
ಸಮಾರಂಭ ಮುಗಿಯುವ ಹೊತ್ತಾಗುತ್ತಾ ಬಂತು. ಆಗಾಗ ನನ್ನ ಶರ್ಟಿನ ಜೇಬಿನ ಮೇಲೆ ಕೈಯಾಡಿಸುತ್ತಾ ಅದು ಭದ್ರವಾಗಿದೆಯೇ ಎಂಬುದನ್ನು ಪರೀಕ್ಷಿಸುತ್ತಾ ಇದ್ದೆ. ಸಮಾರಂಭ ಮುಗಿದ ಮೇಲೆ ಯಾರಿಗೂ ಕಾಯದೆ ಒಬ್ಬನೇ ಮನೆಯ ಕಡೆ ವೇಗವಾಗಿ ನಡೆದೆ. ಶಾಲೆಯಿಂದ ಮನೆಗೆ ಸುಮಾರು ಎರಡು ಕಿಲೋಮೀಟರ್ ದೂರ. ಇವತ್ತು ಯಾಕೋ ಎಷ್ಟು ನಡೆದರೂ ದಾರಿ ಸಾಗುತ್ತಲೇ ಇರಲಿಲ್ಲ. ಬೇಗ ಬೇಗ ಹೆಜ್ಜೆ ಹಾಕುತ್ತಿದ್ದೆ. ಇದಕ್ಕೆ ಕಾರಣವೂ ಇತ್ತು. ಅದೇನೆಂದರೆ, ನನ್ನ ಬಳಿ 100 ರು. ಇರುವ ವಿಚಾರ ತಿಳಿದು ಯಾರಾದರೂ ಕಳ್ಳರು ಅಡ್ಡಗಟ್ಟಿ ದುಡ್ಡನ್ನು ಕಿತ್ತುಕೊಂಡರೇ? ಎಂಬ ಯೋಚನೆ ಕೂಡ ಬಂದಿತ್ತು. ಈಗ ನೆನೆಸಿಕೊಂಡರೆ ನಿಜಕ್ಕೂ ನಗು ಬರುತ್ತಿದೆ. ಕೊನೆಗೂ ಮನೆ ತಲುಪಿದೆ, ಮನೆಗೆ ಬಂದವನೇ ನೇರವಾಗಿ ಅಮ್ಮನ ಬಳಿ ಓಡಿ ಹೋಗಿ ನನ್ನ ಬಳಿ ಸಣ್ಣದಾಗಿ ಮಡಚಿ ಇಟ್ಟಿದ್ದ ಕವರನ್ನು ಅವರ ಕೈಗಿತ್ತೆ. “ಇದೇನು?’ ಎಂದು ಕೇಳಿದಾಗ “ನೀವೇ ನೋಡಿ’ ಎಂದು ನಗುತ್ತಾ ಹೇಳಿದೆ. ಅದನ್ನು ಬಿಡಿಸಿ ನೋಡಿದಾಗ ಅದರಲ್ಲಿದ್ದ ನೂರು ರುಪಾಯಿಗಳನ್ನು ನೋಡಿ “ಎಲ್ಲಿಂದ ಬಂತು ಇದು?’ ಎಂದು ಕೇಳಿದರು. ನಾನು ನಡೆದುದೆಲ್ಲವನ್ನೂ ವಿವರಿಸಿ “ಇದು ನಿನ್ನ ಮಗನ ಮೊದಲ ಸಂಪಾದನೆ’ ಎಂದು ಹೆಮ್ಮೆಯಿಂದ ಹೇಳಿದೆ. ಅದನ್ನು ಹೇಳುತ್ತಿದ್ದಾಗ ನನ್ನ ಮನದಲ್ಲಾಗುತ್ತಿದ್ದ ಖುಷಿಗೆ, ಸಂತಸಕ್ಕೆ ಪಾರವೇ ಇರಲಿಲ್ಲ. ಅಮ್ಮನೂ ತುಂಬಾ ಖುಷಿಯಾಗಿದ್ದರು. ಆದರೆ ಹೇಳಿಕೊಳ್ಳಲಿಲ್ಲ. ಅವರ ಕಣ್ಣುಗಳು ಅದನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದವು. ಒಂದು ವೇಳೆ ಅವರ ಸಂತಸವನ್ನು ಮಾತಿನಲ್ಲಿ ಹೇಳಿದ್ದರೂ ನನಗೆ ಅದನ್ನು ಇಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲವೇನೋ. ಅವರ ಕಣ್ಣುಗಳಲ್ಲಿನ ಸಂತಸ ನನ್ನ ಖುಷಿಯನ್ನು ಇಮ್ಮಡಿಗೊಳಿಸಿತ್ತು.
ಮಾರನೇ ದಿನ ಗೆಳೆಯರೆಲ್ಲರೂ ಆ ದುಡ್ಡನ್ನು ಏನು ಮಾಡಿದೆ ಎಂದು ಕೇಳಿದಾಗ ಅಮ್ಮನಿಗೆ ಕೊಟ್ಟೆ ಎಂದು ಹೆಮ್ಮೆಂದಲೇ ಹೇಳಿಕೊಂಡಿದ್ದೆ. ಅಮ್ಮ ಅದರಲ್ಲಿ ಒಂದು ರುಪಾಯಿಯನ್ನು ಕೂಡ ತೆಗೆದುಕೊಳ್ಳದೆ ನನಗೋಸ್ಕರವೇ ಖರ್ಚು ಮಾಡಿದ್ದಳು. ಇದು ನನಗೆ ತಿಳಿದದ್ದು ದೊಡ್ಡವನಾದ ನಂತರ. ಇದಾಗಿ ಹತ್ತು ಹನ್ನೆರಡು ವರ್ಷಗಳು ಕಳೆದಿವೆ. ಬಳಿಕ ಪಾರ್ಟ್‌ಟೈಂ ಜಾಬ್‌ಗಳಲ್ಲಿ ಅಥವಾ ಇನ್ನಾವುದೋ ಕೆಲಸಗಳಲ್ಲಿ ಬಂದಂಥ ಹಣವನ್ನು ನೇರವಾಗಿ ಅಮ್ಮನಿಗೇ ತಂದು ಕೊಡುತ್ತಿದ್ದೇನೆ. ನನಗೆ ಬೇಕಾದುದನ್ನೆಲ್ಲಾ ಅಮ್ಮನೇ ಕೊಡಿಸುತ್ತಾಳೆ. ಪ್ರತೀ ಸಲವೂ ಅಮ್ಮನ ಕೈಗೆ ಹಣವಿತ್ತಾಗಲೂ ಈ ಹಳೆಯ ನೆನಪು ಮರುಕಳಿಸುತ್ತಲೇ ಇರುತ್ತದೆ. ಎಷ್ಟೇ ಸಂಪಾದಿಸಿದರೂ ನಾನು ಅಮ್ಮನ ಕೈಗಿತ್ತ ಆ ನೂರು ರುಪಾಯಿಯೇ ನನಗೆ ಅಮೂಲ್ಯವಾದದ್ದು.
ಅಭಿಷೇಕ್ ಎಂ. ತೀರ್ಥಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.