ಆಗಾಗ ಸಿಕ್ತಾ ಇರು, ಯಾವಾಗ್ಲೂ ಚೆನ್ನಾಗಿರು!
Team Udayavani, Nov 21, 2017, 5:57 PM IST
ನಿನ್ನ ಮುಂದೆ ಸುಳಿದು ಹೋಗುವ ನೂರಾರು ಮುಖಗಳಲ್ಲಿ ನನ್ನದೂ ಒಂದು. ನಾನು ದಿನವೂ ನಿನ್ನನ್ನು ಹುಡುಕುವುದಿಲ್ಲ. ನಿಜ ಹೇಳಬೇಕೆಂದರೆ, ನನಗೆ ನೀನು ಕಂಡರೆ ಮಾತ್ರ ನಿನ್ನ ನೆನಪಾಗುತ್ತದೆ. ಆದರೆ, ನೂರು ಮುಖಗಳ ಮಧ್ಯೆ ನೀನು ಕಾಣಿಸಿದಾಗ ಅದೆಂಥದೋ ನೆಮ್ಮದಿ!
ಹೆಸರು ಗೊತ್ತಿಲ್ಲದವಳೇ,
ಏನೆಂದು ಕರೆಯಲಿ ನಿನ್ನ? “ಹೆಸರು ಗೊತ್ತಿಲ್ಲದವಳೇ’ ಎಂದು ಸಂಬೋಧಿಸುವುದೇ ಸೂಕ್ತ. ನಿನಗೆ ನಿನ್ನಷ್ಟೇ ಚಂದದ ಒಂದು ಹೆಸರಿದೆಯಲ್ಲ, ಅದೇನಂತ ನನಗೆ ಗೊತ್ತಿಲ್ಲ. ನನ್ನ ಮನಸ್ಸಿಗೆ ಬಂದ ಹೆಸರನ್ನು ನಿನಗಿಡುವುದಕ್ಕೂ ಇಷ್ಟವಿಲ್ಲ. ವಾರಕ್ಕೊಮ್ಮೆಯೋ, ಹದಿನೈದು ದಿನಕ್ಕೊಮ್ಮೆಯೋ ನೀನು ಕಂಡಾಗ ನನ್ನ ಮನಸ್ಸಿನಲ್ಲಿ ಮೂಡುತ್ತದಲ್ಲ; ಆ ಭಾವನೆಗೂ ಹೆಸರು ತೋಚಿಲ್ಲ.
ನಮ್ಮಿಬ್ಬರ ಮಧ್ಯೆ ಪ್ರೀತಿ, ಸ್ನೇಹ, ಪರಿಚಯ ಹೋಗಲಿ, ನಾನು ನಿನ್ನನ್ನು ಗಮನಿಸುತ್ತೇನೆಂಬ ಕನಿಷ್ಠ ವಿಷಯವೂ ನಿನಗೆ ಗೊತ್ತಿಲ್ಲ. ಹಾಗಾಗಿ ಈ ಎಲ್ಲ ಭಾವನೆಗಳು ನನಗೆ ಮತ್ತು ನನಗೆ ಮಾತ್ರ ಸಂಬಂಧಿಸಿದ್ದು. ನನ್ನ ಪರಿಚಯ ನಿನಗೆ ಬೇಡ. ನಿನ್ನ ಪರಿಚಯ ಮಾಡಿಕೊಳ್ಳುವ ಕುತೂಹಲವೂ ನನಗಿಲ್ಲ. ನೀನು ದಿನಾ ಹೋಗ್ತಿàಯಲ್ಲ, ಅದೇ ರೈಲಿನ ನಿತ್ಯದ ಪ್ರಯಾಣಿಕರಲ್ಲಿ ನಾನೂ ಒಬ್ಬ. ನಿನ್ನ ಮುಂದೆ ಸುಳಿದು ಹೋಗುವ ನೂರಾರು ಮುಖಗಳಲ್ಲಿ ನನ್ನದೂ ಒಂದು.
ನಾನು ದಿನವೂ ನಿನ್ನನ್ನು ಹುಡುಕುವುದಿಲ್ಲ. ನಿಜ ಹೇಳಬೇಕೆಂದರೆ, ನನಗೆ ನೀನು ಕಂಡರೆ ಮಾತ್ರ ನಿನ್ನ ನೆನಪಾಗುತ್ತದೆ. ಆದರೆ, ನೂರು ಮುಖಗಳ ಮಧ್ಯೆ ನೀನು ಕಾಣಿಸಿದಾಗ ಅದೆಂಥದೋ ನೆಮ್ಮದಿ! ನೋಡಿ ಮರೆತುಬಿಡುವ ಮುಖವಲ್ಲ ನಿನ್ನದು. ಹಿಂದಿನ ಜನ್ಮದಲ್ಲೇನಾದರೂ ನನ್ನ ಗೆಳತಿಯಾಗಿದ್ದೀಯಾ? ಬಿಡು, ಮೊನ್ನೆ ನೋಡಿದ ಸಿನಿಮಾ ಕಥೆಯೇ ಸರಿಯಾಗಿ ನೆನಪಿಲ್ಲ, ಇನ್ನು ಹಿಂದಿನ ಜನ್ಮದ ವಿಷಯವೇಕೆ?
ಕಳೆದ ವಾರ, ಇನ್ನೇನು ನಾನು ರೈಲು ಹತ್ತಬೇಕು, ಆಗ ನೀನು ದೂರದಲ್ಲಿ ಓಡೋಡಿ ಬರುತ್ತಿರುವುದು ಕಾಣಿಸಿತು. ದೇವರೇ, ಆಕೆ ಬಂದಮೇಲೆಯೇ ರೈಲು ಹೊರಡಲಿ ಅಂತ ನಾನು ಪ್ರಾರ್ಥಿಸಿದ್ದು ನಿಜ. ಆಮೇಲೆ ನಾನಿದ್ದ ಬೋಗಿಯನ್ನೇ ನೀನು ಹತ್ತಿದೆ. ಹಣೆಯಲ್ಲಿ ಸಣ್ಣಗೆ ಬೆವರಿನ ಸಾಲು, ಕೈಯಲ್ಲಿ ಮೊಬೈಲು, ಲಂಚ್ ಬಾಕ್ಸ್. ದಣಿದ ಮುಖದಲ್ಲೂ ಎಂದಿನದೇ ಮಂದಹಾಸ. ಆ ನಗುವೇ ನನ್ನನ್ನು ಸೆಳೆದಿದ್ದು.
ಆವತ್ತು ನಾನು-ನೀನು ಒಂದೇ ಸ್ಟೇಶನ್‌ನಲ್ಲಿ ಇಳಿದೆವು. ಬೇಕಂತಲೇ ನಾನು ನಿನ್ನನ್ನು ದಾಟಿ ಬೇಗ ಬೇಗ ಮುಂದೆ ಹೆಜ್ಜೆ ಹಾಕಿದೆ. ಮತ್ತೆ ನೀನು ನೆನಪಾಗಿದ್ದು ನಿನ್ನನ್ನು ಇವತ್ತು ಕಂಡಾಗಲೇ. ನೀನೊಂಥರಾ ಅಪರಿಚಿತ ಪರಿಚಿತೆ. ಒಮ್ಮೊಮ್ಮೆ ಅನಿಸುತ್ತದೆ, ನಿನ್ನನ್ನು ಮಾತಾಡಿಸಬೇಕು, ನಿನ್ನತ್ತ ಪರಿಚಯದ ನಗು ಬೀರಬೇಕು ಅಂತ. ತಕ್ಷಣವೇ ಹೃದಯವೇಕೋ ಹಿಂಜರಿಯುತ್ತದೆ.
ನನಗೆ ನಿನ್ನ ಸ್ವರ ಇಷ್ಟವಾಗದಿದ್ದರೆ, ನಿನ್ನ ಹೆಸರು ಚೆನ್ನಾಗಿಲ್ಲದಿದ್ದರೆ, ನೀನು ನನ್ನನ್ನು ಜೊಲ್ಲುಪಾರ್ಟಿ ಅಂದುಕೊಂಡುಬಿಟ್ಟರೆ, ನೀನು ಕೆಟ್ಟ ಮನಸ್ಸಿನವಳಾಗಿದ್ದರೆ, ನಿನ್ನ ಆಸಕ್ತಿಯ ವಿಷಯಗಳು ನನಗೆ ಹಿಡಿಸದಿದ್ದರೆ, ನಿನಗೆ ನನ್ನ ಭಾಷೆ ಅರ್ಥವಾಗದಿದ್ದರೆ, ಯಾರು ನೀವು ಅಂತ ಒರಟಾಗಿ ಕೇಳಿಬಿಟ್ಟರೆ, ಮಾತಾಡದೇ ಮುಖ ತಿರುವಿದರೆ….ಈ ಎಲ್ಲಾ “ರೆ’ಗಳು ನನ್ನ ಬಾಯಿ ಮುಚ್ಚಿಸಿಬಿಡುತ್ತವೆ. ಕೊನೆಗೆ ನಿನ್ನ ಮುಖ ನೋಡುವುದೇ ಬೇಡ ಅಂತ ನನಗನ್ನಿಸಿಬಿಟ್ಟರೆ ಏನು ಮಾಡಲಿ?
ಬೇಡ, ಹೀಗೆಯೇ ಇದ್ದು ಬಿಡೋಣ. ನಿನ್ನ ಪ್ರಪಂಚದಲ್ಲಿ ಯಾರ್ಯಾರೋ ಇದ್ದಾರೆ. ನಾನು ಅದರೊಳಗೆ ತೂರಿಕೊಳ್ಳಲು ಬಯಸುವುದಿಲ್ಲ. ಹೇಳಿದೆನಲ್ಲ, ಇದು ನನಗೆ ಮತ್ತು ನನಗೆ ಮಾತ್ರ ಸಂಬಂಧಿಸಿದ ಭಾವನೆ. ಆದರೆ, ಒಂದೂ ಮಾತನ್ನಾಡದೆ, ನನ್ನತ್ತ ತಿರುಗಿಯೂ ನೋಡದೆ, ನನ್ನನ್ನು ಸೆಳೆದ ನಿನ್ನ ಶಕ್ತಿಗೆ ಶರಣು. ಆಗಾಗ ಕಾಣಿಸುತ್ತಿರು, ದೂರದಿಂದಲೇ ನಿನ್ನನ್ನು ನೋಡಿ ಖುಷಿ ಪಡುತ್ತೇನೆ. ಯಾವಾಗಲೂ ಚೆನ್ನಾಗಿರು..
ಇಂತಿ
ನಿನಗೆ ಸಂಬಂಧವಿಲ್ಲದವನು
* ಪ್ರಿಯಾಂಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.