ಮೈ ನೇಮ್ ಈಸ್ ರಾಜ್ ರಾಜ್ ;ಕ್ಲಾಸಿನಲ್ಲಿ ಇವರು ಪ್ರಳಯಾಂತಕ ಮೊಟ್ಟೆ
Team Udayavani, Jul 18, 2017, 3:45 AM IST
ತೆರೆಯ ಮೇಲೆ “ಒಂದು ಮೊಟ್ಟೆಯ ಕತೆ’ಯಾಗಿ, ಅನುಕಂಪ ಗಿಟ್ಟಿಸಿಕೊಳ್ಳುವ ರಾಜ್ ಬಿ. ಶೆಟ್ಟಿ ಅವರ ವಿದ್ಯಾರ್ಥಿ ಬದುಕಿನ ಕತೆಯೊಂದು ತುಂಟ ಚರಿತ್ರೆ. ಇವರು ಹೇಗೇಗೆಲ್ಲ ಲೆಕ್ಚರರ್‌ಗೆ ಕೀಟಲೆ ಕೊಟ್ಟಿದ್ದಾರೆಂದರೆ…
ಅಂಗಾಂಗ ದಾನ ಎನ್ನುವ ರೀತಿ ಕೂದಲು ದಾನ ಅಂತೇನಾದರೂ ಇದ್ದಿದ್ದರೆ, ನನ್ನ ತಲೆಕೂದಲನ್ನು ಈ ಮನುಷ್ಯನಿಗೆ ಕೊಡ್ತಿದ್ದೆ…- ಒಂದು ವಾರದಿಂದ ವೈರಲ್ ಆದ ಈ ಟ್ರಾಲ್ ನಿಮ್ಮ ಕಣ್ಣಿಗೂ ಬಿದ್ದಿರಬಹುದು. “ಒಂದು ಮೊಟ್ಟೆಯ ಕತೆ’ ಸಿನಿಮಾ ನೋಡಿದ ಯಾರಿಗೇ ಆದರೂ ಆ ಸಾಧು ಲೆಕ್ಚರರ್ ಮೇಲೆ ಅನುಕಂಪ ಮೂಡುತ್ತದೆ. “ಅಯ್ಯೋ, ಪಾಪ್ರ. ಇಷ್ಟು ಮುಗ್ಧ ಜೀವಿಯನ್ನು ಯಾಕೆ ಇವರೆಲ್ಲ ಗೋಳಾಡಿಸ್ತರಪ್ಪಾ…’ ಎಂಬ ಬೆಂಬಲದ ಓಟೂ ಆತನಿಗೆ ಬೀಳುತ್ತದೆ. ಆದರೆ, ಹೀಗೆ ತೆರೆಯ ಮೇಲೆ “ಮೊಟ್ಟೆ’ಯಾಗಿ, ಅನುಕಂಪ ಗಿಟ್ಟಿಸಿಕೊಳ್ಳುವ ರಾಜ್ ಬಿ. ಶೆಟ್ಟಿ ಅವರ ವಿದ್ಯಾರ್ಥಿ ಬದುಕಿನ ಕತೆ ಒಂದು ತುಂಟ ಚರಿತ್ರೆ. ಮಂಗಳೂರಿನ “ರೋಶ್ನಿ ನಿಲಯ’ ಕಾಲೇಜೊಂದಲ್ಲಿ ರಾಜ್ ಬಿಎಸ್‌ಡಬ್ಲ್ಯು ಓದುತ್ತಿದ್ದಾಗ, ಇವರು “ಪ್ರಳಯಾಂತಕ ಮೊಟ್ಟೆ’! ನಾವೆಲ್ಲ “ಪಾಪ’ ಎಂದ ಈ ಹುಡುಗ ಲೆಕ್ಚರರ್‌ಗಳನ್ನೇ ಸುಸ್ತು ಮಾಡಿಬಿಟ್ಟಿದ್ದರು!
ಕಾಲೇಜು ಡೇ ಸನಿಹದಲ್ಲಿದ್ದಾಗ ನಡೆದ ಒಂದು ಘಟನೆ. ಸಿಕ್ಕಿದ್ದೇ ಚಾನ್ಸು ಎಂದುಕೊಂಡ ರಾಜ್, ಡ್ರಾಮಾ ಪ್ರಾಕ್ಟೀಸ್‌ನ ನೆಪ ಹೇಳಿ, ಕ್ಲಾಸ್ ಬಂಕ್ ಮಾಡಿದ್ದರು. ಆ ಲೆಕ್ಚರರ್ ಕಾಲೇಜು ಡೇ ತಯಾರಿಯ ಗಲಾಟೆ ಕ್ಲಾಸೊಳಗೆ ಬಾರದಿರಲಿಯೆಂದು, ಬಾಗಿಲನ್ನು ಮುಚ್ಚಿ, ಪಾಠ ಮುಂದುವರಿಸಿದ್ದರು. ಆದರೆ, ರಾಜ್ ಮತ್ತು ತಂಡ ಮಾಡಿದ “ಡ್ರಾಮಾ’ ಬೇರೆಯೇ. ಅದೇ ತರಗತಿಯ ಮುಂದೆ, ಗೆಳೆಯರನ್ನೆಲ್ಲ ಕಟ್ಟಿಕೊಂಡು ಕಬಡ್ಡಿ ಆಡತೊಡಗಿದರು. ನೋಡಲು ನೂಡಲ್ಸ್‌ನಂತೆ ಸಣ್ಣಗಿದ್ದರೂ ಇವರೊಳಗೆ ಧೈರ್ಯ ತುಸು ಜಾಸ್ತಿಯೇ ಇದೆಯಂತೆ. ರಾಜ್ “ಕಬಡ್ಡಿ ಕಬಡ್ಡಿ’ ಅಂತ ರೈಡ್‌ಗೆ ಹೋದಾಗ ಹಿಂಬದಿಯಿಂದ ಯಾರೋ ಹಿಡಿದುಕೊಂಡರಂತೆ. “ಏಯ್ ಬಿಡೋ, ಏಯ್ ಬಿಡೋ, ಹಿಂಬದಿಯಿಂದ ಹಿಡಿಯಂಗಿಲ್ಲ’ ಅಂತ ರಾಜ್ ಕೂಗಿ ಯದ್ವಾತದ್ವಾ ಬಯ್ಯುತ್ತಿದ್ದಾರೆ. ಆಮೇಲೆ ಹಿಂತಿರುಗಿ ನೋಡಿದಾಗ ಗೊತ್ತಾಯ್ತು, ಹಾಗೆ ಹಿಡ್ಕೊಂಡಿದ್ದು ಎಚ್‌ಒಡಿ ಅಂತ! ಜತೆಗಿದ್ದ ಗೆಳೆಯರೆಲ್ಲ ಅಲ್ಲಿಂದ ಓಡಿ ಆಗಿದೆ.
“ಏನಪ್ಪಾ… ಡ್ರಾಮಾ ಪ್ರಾಕ್ಟೀಸ್ ಅಂತ, ಕ್ಲಾಸ್ ಬಂಕ್ ಮಾಡಿ, ಕಬಡ್ಡಿ ಆಡಿಸ್ತಿದ್ದೀಯಲ್ಲ…” ಎನ್ನುತ್ತಾ ಎಚ್‌ಒಡಿ ರೇಗಿದರು. “ಇಲ್ಲ ಸಾರ್, ನಾವ್ ಮಾಡ್ತಿರೋ ಡ್ರಾಮಾದಲ್ಲಿ ಕಬಡ್ಡಿ ಸೀನ್ ಇದೆ’ ಎಂದು ರಾಜ್ ಅಲ್ಲೇ ಒಂದು ಸುಳ್ಳನ್ನು ಸ್ಫೋಟಿಸಿದರು. “ಓ ಹೌದಾ? ಮತ್ತೆ ಅವರೆಲ್ಲ ಯಾಕೆ ಓಡಿದ್ದು?’- ಎಚ್‌ಒಡಿ ಮರುಪ್ರಶ್ನೆ. “ನೀವು ಹಿಡ್ಕೊಂಡಿದ್ದು ನೋಡಿ ಭಯ ಆಗಿ ಅವರೆಲ್ಲ ಓಡಿದ್ರು ಸರ್’ ಎಂಬುದು ಇವರ ಸಮಜಾಯಿಷಿ.
ಮರುದಿನ ಮತ್ತೆ ರಿಹರ್ಸಲ್. ಮೂರ್ನಾಲ್ಕು ಗಂಟೆಯ ರಿಹರ್ಸಲ್‌ನಲ್ಲಿ ಕಬಡ್ಡಿ ಇದೆಯಾ ಎಂದು ನೋಡಲೆಂದೇ ಎಚ್‌ಒಡಿ ಕಾದು ಕುಳಿತರಂತೆ. ಆದರೆ, ರಿಹರ್ಸಲ್‌ನಲ್ಲಿ ಕಬಡ್ಡಿ ಬರಲೇ ಇಲ್ಲ. ಅವರಿಗೆ ತುಸು ಕೋಪ ಬಂದು, ರಾಜ್ ಅವರನ್ನು ಕರೆದು ಕೇಳಿದರಂತೆ… “ಎಲ್ಲಿದ್ಯೋ ಕಬಡ್ಡಿ?’. “ಕಬಡ್ಡಿ ಸೀನ್ ಅನ್ನು ಇವತ್ತು ಕಟ್ ಮಾಡಿದ್ದೇವೆ. ನಾಟಕ ದೊಡ್ಡ ಆಯ್ತು ಅಂತ ಪ್ರಿನ್ಸಿಪಾಲ್ ಬಯ್ತಾರಲ್ಲ… ನಾಳೆಯ ನಾಟಕದಲ್ಲಿ ಅದಿರುತ್ತೆ’ ಅಂತ ಮತ್ತೆ ಬಣ್ಣದ ಸುಳ್ಳೊಂದನ್ನು ಬಿಟ್ಟರಂತೆ. ಮರುದಿನ ನಾಟಕದಲ್ಲೂ ಕಬಡ್ಡಿ ಕಾಣಿಸಲೇ ಇಲ್ಲ! ಅಷ್ಟರಲ್ಲಾಗಲೇ ಎಚ್‌ಒಡಿಯ ಸಿಟ್ಟು ಇಳಿದಿತ್ತು.
ಡಿಗ್ರಿಯಲ್ಲಿ ಲೇಡಿ ಲೆಕ್ಚರರ್ ಒಬ್ಬರು ಕ್ಲಾಸ್ ತಗೊಂಡಿದ್ದರು. ಎದುರುಗಡೆಯ ಡೆಸ್ಕ್ ಅನ್ನು ಖಾಲಿಬಿಟ್ಟು, ಎಲ್ಲರೂ ಹಿಂಬದಿ ಕುಳಿತಿದ್ದರು. ಮೇಡಂಗೆ ಕ್ಲಾಸೆಲ್ಲ ಖಾಲಿ ಖಾಲಿ ಅಂತನ್ನಿಸಿತೇನೋ, “ದಯವಿಟ್ಟು ಮುಂದೆ ಬಂದು ಕೂರಿ’ ಅಂತ ವಿದ್ಯಾರ್ಥಿಗಳನ್ನು ಕೇಳಿಕೊಂಡರು. ಆದರೆ, ವಿದ್ಯಾರ್ಥಿಗಳದ್ದು ಒಂದೇ ಹಠ; “ಇಲ್ಲಾ ಮೇಡಂ, ನಾವ್ ಬರೋಲ್ಲ. ಇಲ್ಲೇ ಕಂಫರ್ಟ್ ಆಗಿದ್ದೇವೆ’. ಮೇಡಂಗೆ ಕೋಪ ಬಂತು… “ನೀವು ಕಂಫರ್ಟ್ ಇದ್ಹಂಗಲ್ಲ… ಮುಂದೆ ಬನ್ನಿ’ ಎಂದು ಪುನಃ ಕೇಳಿಕೊಂಡರು. ವಿದ್ಯಾರ್ಥಿಗಳೂ ಪಟ್ಟುಬಿದ್ದು, ಸಣ್ಣ ವಿಚಾರಕ್ಕೆ ಜಗಳವೇ ಆಯಿತು. ಕೊನೆಗೆ ರಾಜ್ ಅವರ ಸ್ನೇಹಿತ, “ಮೊದಲು ಹುಡ್ಗಿàರು ಮುಂದೆ ಹೋಗಿ ಕೂರಲಿ, ಆಮೇಲೆ ನಾವ್ ಬರಿ¤àವಿ’ ಎಂದು ತೀರ್ಪು ಕೊಟ್ಟರಂತೆ. ಅದರಂತೆ, ಹುಡುಗಿಯರು ಮೊದಲು, ನಂತರ ಹುಡುಗರು ಹೋಗಿ ಮುಂದಿನ ಬೆಂಚಿನಲ್ಲಿ ಕೂತರು.
ಕ್ಲಾಸಿನ ನೆಮ್ಮದಿಯೆಲ್ಲ ಹಾಳಾಯಿತಲ್ಲ ಎಂಬ ಬೇಸರದಲ್ಲಿ ಮೇಡಂ, ವಿದ್ಯಾರ್ಥಿಗಳಿಗೆ ಚೆನ್ನಾಗಿ ಬುದ್ಧಿಮಾತು ಹೇಳಿದರು. “ನೀವು ಮುಂದೆ ಸೋಷಿಯಲ್ ವರ್ಕರ್ ಆಗಿ ಹಳ್ಳಿಯಲ್ಲಿ ಕೆಲಸ ಮಾಡೋರು. ನೀವು ಕಾಲೇಜುಗಳಿಗೆ ಹೋಗಿ, ಪ್ರೋಗ್ರಾಮ್ ಮಾಡೋವಾಗ, ಎದುರುಗಡೆ ಚೇರ್ ಎಲ್ಲ ಖಾಲಿ ಇದ್ರೆ ಏನ್ಮಾಡ್ತೀರಾ?’ ಅಂತ ಒಬ್ಬೊಬ್ಬರನ್ನೇ ನಿಲ್ಲಿಸಿ, ಕೇಳತೊಡಗಿದರು. ಒಬ್ಬ “ಇಲ್ಲ ಮೇಡಂ, ನಾನು ಜನರ ಮೇಲೆ ಫೋರ್ಸ್ ಹಾಕೋಲ್ಲ’ ಅಂದ. ಅದಕ್ಕವರು ಮತ್ತೆ ರೇಗಿ, “ಹಂಗಾಗಲ್ಲ, ಎದುಗಡೆ ಚೇರ್ ಖಾಲಿ ಇತ್ತು ಅಂದ್ರೆ ಏನ್ಮಾಡ್ತೀರಾ?’ ಅಂತ ರಾಜ್ ಅವರನ್ನು ಎಬ್ಬಿಸಿ ಕೇಳಿದರು. ರಾಜ್ ಸಹಜವಾಗಿ ಹೇಳಿದರು: “ಎದುರುಗಡೆ ಖಾಲಿ ಇದ್ರೆ, ಚೇರ್ ಎಲ್ಲವನ್ನೂ ಮಡಚಿ ಒಳಗಿಡ್ತೀನಿ…’! ಮೇಡಂ ಮರು ಮಾತನಾಡಲಿಲ್ಲ.
ದೇವರ ದಯೆಯಿಂದ ಡಿಗ್ರಿಯಲ್ಲಿದ್ದಾಗ ರಾಜ್ ಅವರ ತಲೆಯಲ್ಲಿ ಭರ್ತಿ ಕೂದಲಿದ್ದವು! ಉದುರಿದ್ದು ನಂತರವಂತೆ. ಹೀಗೆ ಉದುರಲು ಒಬ್ಬ ಲೆಕ್ಚರರ್ ಅವರ “ಶಾಪ’ವೂ ಇದ್ದಿರಬಹುದು ಎನ್ನುವ ತಮಾಷೆಯ ಗುಮಾನಿ ಅವರಿಗೆ ಈಗಲೂ ಇದೆ. ಡಿಗ್ರಿಯಲ್ಲಿ ಒಬ್ಬರು ಲೆಕ್ಚರರ್ ತಲೆಯಲ್ಲಿ ಕೂದಲೇ ಇರಲಿಲ್ವಂತೆ. ಅವರಿಗೆ ಏನೇನೋ ಹೆಸರಿನಿಂದ ಕರೆಯುತ್ತಾ, ರಾಜ್ ಹಾಸ್ಯ ಮಾಡುತ್ತಿದ್ದರಂತೆ. ಅವರು ಒಳ್ಳೆಯ ಲೆಕ್ಚರರ್ ಆಗಿದ್ದರೂ, ಆ ಒಳ್ಳೆಯತನ ಆಗ ಇವರಿಗೆ ಕಾಣಿಸದೆ, ಕೇವಲ ಖಾಲಿ ತಲೆ ಮಾತ್ರ ಕಾಣಿಸುತ್ತಿತ್ತಂತೆ. ಅವರದ್ದೇ ಕೋಪ ಮುಂದೆ “ಶಾಪ’ವಾಗಿ, ನನ್ನ ಕೂದಲನ್ನೆಲ್ಲ ಬಲಿ ತೆಗೆದುಕೊಂಡಿತೇನೋ ಎನ್ನುತ್ತಾರೆ ರಾಜ್.
ಸ್ಟ್ರಿಕ್ಟ್ ಆಗಿರುವ ಲೆಕ್ಚರರ್ ಕ್ಲಾಸ್ ಇದ್ದಾಗ, ರಾಜ್ ಸುಮ್ಮನೆ ಕೂರುತ್ತಿರಲಿಲ್ವಂತೆ. ಸ್ನೇಹಿತನ ಮೊಬೈಲ್ ತಗೊಂಡು, ತರಗತಿ ವೇಳೆ ಕೂಗುವಂತೆ ಅಲಾರಂ ಸೆಟ್ ಮಾಡಿ, ಆತನಿಗೆ ಚೆನ್ನಾಗಿ ಬೈಸಿ, ಮಜಾ ತೆಗೆದುಕೊಳ್ಳುತ್ತಿದ್ದರು!
ಮುನ್ಸಿಪಾಲಿಟಿ ಕಸದ ಗಾಡಿ ಬಂತು, ರಾಜ್ ಬಂದ್ರು!
ಮಂಗಳೂರಿನಲ್ಲಿ ಮುನ್ಸಿಪಾಲಿಟಿಯ ಕಸದ ಗಾಡಿ ಬಂತೆಂದರೆ, ಎಲ್ಲರಿಗೂ ರಾಜ್ ಶೆಟ್ಟಿ ನೆನಪಾಗುತ್ತಾರೆ. ಎರಡು ವರ್ಷದ ಹಿಂದೆ, ಇವರು ಸ್ವತ್ಛತಾ ಜಾಗೃತಿಗೆ ಕಂಠದಾನ ನೀಡಿದರಂತೆ. “ಆ ಸಾಲುಗಳನ್ನು ಈಗಲೂ ಮೈಕಿನಲ್ಲಿ ಕೂಗಿಸಿಕೊಂಡು ಹಿಂಸೆ ಕೊಡುತ್ತಿದ್ದಾರೆ’ ಎನ್ನುವುದು ರಾಜ್ ಅವರ ತಮಾಷೆಯ ನುಡಿ. ಆದರೆ, ಈಗಲೂ ಮಂಗಳೂರಿನಲ್ಲಿ ಕಾಲೇಜು ಹುಡುಗರು ಇವರ ವಾಯ್ಸ ಅನುಕರಿಸುತ್ತಾ ತಮಾಷೆ ಮಾಡುತ್ತಾರಂತೆ. ಈ ಮುನ್ಸಿಪಾಲಿಟಿಯವರು ಎಲ್ಲೋ ತಮ್ಮನ್ನು ತಿಪ್ಪೆಯ ರಾಯಭಾರಿ ಮಾಡಿದ್ದಾರೇನೋ ಎಂಬ ಆತಂಕ ಅವರಿಗೆ ದೂರವಾಗಿದ್ದು, ಸ್ವತ್ಛಭಾರತ್ ಬಂದ ಮೇಲಂತೆ!
– ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.