ಆವತ್ತು ಬಿದ್ದ ಕಣ್ಣ ಹನಿಗೆ ನೂರು ಸಾರಿ…
Team Udayavani, Mar 10, 2020, 5:45 AM IST
ನಿನ್ನ ಕೊನೆಯ ಮೆಸೇಜ್ ಮಾತ್ರ ನನ್ನನ್ನು ಅಕ್ಷರಶಃ ತಿವಿದಿತ್ತು. “ಏನಾಗಿದೆಯೋ ನಿನಗೆ? ನನ್ನ ಕಣ್ಣಲ್ಲಿ ನೀರು ನಿಲ್ಲುತ್ತಿಲ್ಲ. ಸಾರಿ ಕಣೋ, ಒಮ್ಮೆ ಫೋನ್ ತೆಗಿ’ ಅನ್ನುವ ಸಾಲುಗಳನ್ನು ಓದಿಕೊಂಡಾಗ ಎದೆಯ ಹಾದಿಯು ಕಣ್ಣೀರಿನಿಂದ ಕಟ್ಟಿಕೊಂಡಿತು.
ನಿನ್ನ ಕಣ್ಣೊಳಗೆ ನೀರು ತುಂಬಿಕೊಂಡು ಅದೆಷ್ಟು ಕಡಲಾಯಿತು ಎಂದು ನಾನು ಊಹಿಸಬಲ್ಲೆ. ಸಾರಿ, ಕೇಳುವುದು ತೀರಾ ಸಿಲ್ಲಿ ಅನಿಸಿಬಿಡುತ್ತದೆ. ಅಷ್ಟಕ್ಕೂ ಪ್ರೀತಿಯ ಮಧ್ಯೆ ಸಬೂಬುಗಳನ್ನು ಸಾಕಿಕೊಳ್ಳಬಾರದು ಅಂತ ನಾನೇ ನಿನ್ನ ಮುಂದೆ ಸಬೂಬೊಂದನ್ನು ಹಿಡಿದು ನಿಲ್ಲುವುದಕ್ಕೆ ಒಂಥರಾ ಇರಿಸುಮುರುಸು. ಒಂದು ಸಣ್ಣ ತಲೆನೋವು ದಿನಪೂರ್ತಿ ಹಿಡಿದು ಕಾಡಿಸಿತ್ತು. ಸಂಜೆಗೆ ಕಾಫಿಗೆ ನೀನು ಸಿಗುತ್ತಿಯಾ ಅಂದುಕೊಂಡಿದ್ದೆ, ಸಿಗಲಿಲ್ಲ. ನನಗೊಂದು ಕಪ್ ಕಾಫಿ ಬೇಕೇ ಬೇಕಿತ್ತು. ತಲೆನೋವನ್ನು ಸ್ವಲ್ಪವಾದರೂ ಸೈಡಿಗಿಟ್ಟು ನಿನ್ನೊಂದಿಗೆ ಕಾಫಿ ಹೀರುತ್ತಾ ಕಣ್ಣು ಕಣ್ಣುಗಳ ಮಧ್ಯೆ ಒಂದು ಜಗಳ ಹೂಡಬೇಕು ಅಂದುಕೊಂಡೇ ಬಂದಿದ್ದೆ. ನೀನು ಸಿಗಲಿಲ್ಲವಲ್ಲ ಡಿಯರ್.
ನಿನ್ನ ಮೊಬೈಲ್‌ಗೆ ಕಾಲ್‌ಮಾಡಿದಾಗಲೆಲ್ಲ ಆ ಹುಡುಗಿ ನೀವು ಕರೆ ಮಾಡಿರುವ ಚಂದಾದಾರರು ಸ್ವಿಚ್ ಆಫ್ ಮಾಡಿದ್ದಾರೆ ಅನ್ನುತ್ತಲೇ ಇದ್ದಳು. ನೂರೆಂಟು ಬಾರಿ ಪ್ರಯತ್ನ ಮಾಡಿ ಕೊನೆಗೆ ಭಾರವಾದ ಹೆಜ್ಜೆ ಹಾಕಿಕೊಂಡು ಕಾಫಿ ಡೇ ಗೆ ಹೋಗಿ ಕೂತೆ. ನೀ ಇಲ್ಲದೆ ಅಲ್ಲಿ ಒಂದು ನಿಮಿಷವೂ ಕೂರಲಾಗಲಿಲ್ಲ. ಒಂದು ಕಪ್ ಕಾಫಿ ಕೊಂಡುಕೊಂಡೆ. ನೀ ಕೂರುತ್ತಿದ್ದ ಜಾಗ ಖಾಲಿ ಇತ್ತು. ಕಣ್ಣು ತನ್ನ ಜಗಳಕ್ಕಾಗಿ ನಿನ್ನನ್ನು ಹುಡುಕುತ್ತಲೇ ಇತ್ತು. ತಲೆನೋವು ತನ್ನ ಪಾಡಿಗೆ ತಾನು ಜಾರಿಯಲ್ಲಿತ್ತು. ಕೇವಲ ಒಂದು ಸಿಪ್ ಕುಡಿತಕ್ಕೆ ಕಾಫಿ ಸಾಕು ಅನ್ನಿಸಿಬಿಟ್ಟಿತ್ತು. ನೀನಿಲ್ಲದೆ ಕಾಫಿ ಕುಡಿಯುವುದು ಆಕ್ಷಣಕ್ಕೆ ನನಗೊಂದು ಮಹಾಪಾಪ ಅನ್ನಿಸಿಬಿಡು¤ ನೋಡು. ಕಾಫಿ ಬಿಟ್ಟು, ತಲೆನೋವನ್ನು ಹಾಗೆಯೇ ಉಳಿಸಿಕೊಂಡು ಅಲ್ಲಿಂದ ಎದ್ದು ಬಂದು ಬಿಟ್ಟೆ.
ನಿನ್ನ ಮೊಬೈಲಿಗೆ ಅದೆಂಥ ಗರಬಡಿದಿತ್ತೂ! ಸ್ವಿಚ್ ಆನ್ ಆಗಲೇ ಇಲ್ಲ. ತಲೆನೋವು ಅನಾಥವಾಯಿತು. ಯಾಕೆ ಪುಟ್ಟ ತಲೆನೋವಾ? ಅನ್ನುವ ಒಂದು ಡೋಸ್ ಮಾತ್ರೆಗೆ ಅದು ಕಾದಿತ್ತು. ಮನೆ ಸೇರಿ ಒಂದು ಪೈನ್ ಕಿಲ್ಲರ್ ನುಂಗಿಕೊಂಡು, ಹಾಲಲ್ಲಿ ಸೋಫಾದ ಮೇಲೆ ಮೈ ಚೆಲ್ಲಿದೆ. ಅದ್ಯಾವ ಮಾಯೆಯಲ್ಲಿ ನನ್ನ ಮೊಬೈಲ್ ಸೈಲೆಂಟ್ ಮೋಡಿಗೆ ಜಾರಿತ್ತೂ ನನಗೆ ಗೊತ್ತಿಲ್ಲ. ಮಾತ್ರೆ ಏಟಿಗೆ ಗಡದ್ದು ನಿದ್ದೆ. ನೀನು ಮಾಡಿದ ನೂರಾರು ಕಾಲುಗಳು, ರಾಶಿಗಟ್ಟಲೆ ಎಸ್‌ಎಂಎಸ್ ಗಳು ನನ್ನ ನಿದ್ದೆ ತಡೆದು ಒಳಗೆ ಬರಲೇ ಇಲ್ಲ. ಮೊಬೈಲ್ ಸೈಲೆಂಟಾಗಿ ಅವುಗಳನ್ನು ನುಂಗಿಕೊಂಡು ಕೂತಿತ್ತು. ಪಾಪ, ನೀನು ಅದೇನೋ ಆಗಿ ಹೋಗಿಬಿಟ್ಟಿದೆ ಅನ್ನುವಂತೆ ಪೇಚಾಡಿದ್ದೆ ಅನ್ನುವುದು ನಂತರ ನಿನ್ನ ಕಾಲ್ ಮೆಸೇಜ್ ನೋಡಿದ ಮೇಲೆಯೇ ನನಗೆ ಗೊತ್ತಾಗಿದ್ದು. ನಿನ್ನ ಕೊನೆಯ ಮೆಸೇಜ್ ಮಾತ್ರ ನನ್ನನ್ನು ಅಕ್ಷರಶಃ ತಿವಿದಿತ್ತು. “ಏನಾಗಿದೆಯೋ ನಿನಗೆ? ನನ್ನ ಕಣ್ಣಲ್ಲಿ ನೀರು ನಿಲ್ಲುತ್ತಿಲ್ಲ. ಸಾರಿ ಕಣೋ, ಒಮ್ಮೆ ಫೋನ್ ತೆಗಿ’ ಅನ್ನುವ ಸಾಲುಗಳನ್ನು ಓದಿಕೊಂಡಾಗ ಎದೆಯ ಹಾದಿಯು ಕಣ್ಣೀರಿನಿಂದ ಕಟ್ಟಿಕೊಂಡಿತು. ಮರಳಿ ನಿನಗೊಂದು ಕಾಲ್ ಮಾಡಲು ಫೋನ್ ಎತ್ತಿಕೊಂಡೆ. ಕೈ ಸಣ್ಣಗೆ ನಡುಗಿತು. ನಿನಗೆ ಸಬೂಬು ಹೇಳುವ ಅನಿವಾರ್ಯತೆ ಬಂದಿದ್ದಕ್ಕೆ ನನಗೊಂದು ದಿಕ್ಕಾರವಿರಲಿ ಅಂತ ನನ್ನಷ್ಟಕ್ಕೆ ನಾನೇ ಅಂದುಕೊಂಡೆ.
ನಿನ್ನ ಫೋನ್ ರಿಂಗಾಗತೊಡಗಿತು..
ಸದಾಶಿವ್ ಸೊರಟೂರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.