ಒಂದ್ ಮಸ್ಸಾಲೆ…
Team Udayavani, Dec 5, 2017, 1:39 PM IST
ಉದರಕ್ಕೆ ಹಸಿವು ಹೆಚ್ಚಿಸಿ, ಮನಸ್ಸನ್ನು ಬಹುಬೇಗನೆ ಸೆಳೆಯುವ ಈ ಮಸಾಲೆ ದೋಸೆ, ವ್ಯಕ್ತಿತ್ವವನ್ನೂ ನಿರ್ಧರಿಸುತ್ತೆ ಅನ್ನೋದು ನಿಮ್ಗೆ ಗೊತ್ತೇ? ಹೌದು, ಮಸಾಲೆ ದೋಸೆಯೊಳಗೊಬ್ಬ ವ್ಯಕ್ತಿತ್ವ ತಜ್ಞನಿದ್ದಾನೆ. ನಿಮ್ಮ ಕ್ಯಾರೆಕ್ಟರ್ ಅನ್ನು ಅವನು ನಿಮ್‌ಗಿಂತ ಚೆನ್ನಾಗಿ ಹೇಳ್ತಾನೆ…
ನೀವು ಕುಳಿತ ಹೋಟೆಲ್‌ನ ಟೇಬಲ್‌ಗೆ ಮಸಾಲೆ ದೋಸೆ ಬರುತ್ತೆ. ಕೆಂಪು- ಹಳದಿಯಾದ ದೋಸೆಯ ಬೆನ್ನನ್ನು ನೋಡಿ, ನಾಲಗೆ- ಮೂಗು ಒಪ್ಪಿಗೆ ನೀಡುವ ಮೊದಲೇ, ಕೈ ಆ ದೋಸೆಯ ಬೆನ್ನನ್ನು ಸವರಲು ಶುರುಮಾಡಿರುತ್ತೆ. ಹಾಗೆ ಮಸಾಲೆ ದೋಸೆ ಮೆಲ್ಲುವಾಗ ನಿಮ್ಮ ಮನದಲ್ಲಿ ಮೂಡುವ ಭಾವನೆಗಳು ಇಷ್ಟರಲ್ಲಿ ಒಂದಾಗಿರಬಹುದಷ್ಟೇ; ಎ) ಅದ್ಭುತ, ಬಿ) ಆಲೂಗಡ್ಡೆ ಬೇಯಬೇಕಿತ್ತು, ಸಿ) ಮಸಾಲೆ ಹಸಿ ಹಸಿ, ಡಿ) ದೋಸೆ ರೋಸ್ಟ್ ಆಗ್ಬೇಕಿತ್ತು.
ಅದರ ಬೆನ್ನಿಗೆ, ದೋಸೆಯ ಪ್ರತಿ ತುತ್ತಿಗೂ ಒಂದೊಂದು ನೆನಪುಗಳು ಬಿಚ್ಚಿಕೊಳ್ಳಬಹುದೇನೋ. ಮೊದಲೆಲ್ಲ ಮಸಾಲೆ ದೋಸೆ ಆರ್ಡರ್ ಮಾಡಿದರೆಂದರೆ, ಆತ ಶ್ರೀಮಂತ, ಒಳ್ಳೆಯ ಟೇಸ್ಟ್ ಇರುವವ ಎಂದೆಲ್ಲ ಅಂದಾಜಿಸುವ ಕಾಲ ಈಗಿಲ್ಲ. ಆದರೂ ಮಸಾಲೆ ದೋಸೆಗಾಗಿಯೇ ಹೋಟೆಲ್ಲನ್ನು ಹುಡುಕಿಕೊಂಡು ಹೋಗುವ ಮೋಹ ಅನೇಕರನ್ನು ಬಿಟ್ಟಿಲ್ಲ.
ಯಾವ ಮೂಲೆಯ ಹೋಟೆಲ್ಲಿನಲ್ಲಿದ್ದರೂ, ಪುಟ್ಟ ಹೋಟೆಲ್ಲಿನ ತವಾದ ಮೇಲೆಯೇ ಅದು ಚುಂಯ್ ಎಂದರೂ, ಅಲ್ಲಿಗೆ ಹೋಗಿ ತಿಂದು ಬರುತ್ತಾರೆ. ಈ ದೋಸೆ ಬೇರೆಲ್ಲ ತಿನಿಸಿಗಿಂತ ಬಹುಬೇಗನೆ ಬಾಯಿಪ್ರಚಾರ ಪಡೆಯುತ್ತೆ. ಇದೆಲ್ಲ “ಮಸಾಲೆ’ಯ ಮಾಯೆ ಆಯಿತು. ಉದರಕ್ಕೆ ಹಸಿವು ಹೆಚ್ಚಿಸಿ, ಮನಸ್ಸನ್ನು ಬಹುಬೇಗನೆ ಸೆಳೆಯುವ ಈ ದೋಸೆ, ವ್ಯಕ್ತಿತ್ವವನ್ನೂ ನಿರ್ಧರಿಸುತ್ತೆ ಅನ್ನೋದು ನಿಮ್ಗೆ ಗೊತ್ತೇ? ಹೌದು, ಮಸಾಲೆ ದೋಸೆಯೊಳಗೊಬ್ಬ ವ್ಯಕ್ತಿತ್ವ ತಜ್ಞನಿದ್ದಾನೆ.
1. ದೋಸೆಯನ್ನು ಅಗಲ ಬಿಡಿಸ್ಕೊಂಡು ತಿಂತೀರಾ?
ಮಸಾಲೆ ದೋಸೆಯನ್ನು ಅಗಲ ಬಿಡಿಸಿಕೊಂಡು, ತಿನ್ನುವವರು ನೀವಾಗಿದ್ದರೆ, ನೀವು ಓಪನ್ ಮೈಂಡೆಡ್ ಆಗಿರುತ್ತೀರಿ. ನೀವು ಯಾವ ವಿಚಾರವನ್ನೂ ಮುಚ್ಚಿಡುವವರಲ್ಲ. ನಿಮ್ಮ ವ್ಯಕ್ತಿತ್ವ ಪಾರದರ್ಶಕ. ಯಾವಾಗಲೂ ಸತ್ಯವನ್ನೇ ಹೇಳುತ್ತೀರಿ, ಸುಳ್ಳನ್ನು ಖಂಡಿಸುವ ಸ್ವಭಾವ ನಿಮ್ಮದಾಗಿರುತ್ತೆ.
2. ಎರಡೂ ಬದಿಯಿಂದ ತಿಂದು, ನಂತರ ಮಸಾಲೆ ತಿಂತೀರಾ?
ಮಸಾಲೆ ದೋಸೆಯ ಎಡ ಬಲ ಬದಿಯಿಂದ ತಿನ್ನುತ್ತಾ, ಅಂತಿಮವಾಗಿ ಮಸಾಲೆ ದೋಸೆ ತಿನ್ನುವವರಾಗಿದ್ದರೆ, ನೀವು ಆಶಾವಾದಿಗಳು.ಯಾವುದೋ ಶುಭ ದಿನಕ್ಕಾಗಿ ನೀವು ಕಾಯುತ್ತಿರುತ್ತೀರಿ. ವರ್ತಮಾನ ಎಷ್ಟೇ ಸವಾಲೊಡ್ಡಿದ್ದರೂ, ಬೋರ್ ಆಗಿದ್ದರೂ, ನಿಮ್ಮನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೂ, ಅದಕ್ಕೆ ತಲೆಕೆಡಿಸಿಕೊಳ್ಳದೇ, ಒಂದು ಕನಸಿನ ಸಾಕಾರಕ್ಕಾಗಿ ನೀವು ಕಾಯುತ್ತಿರುತ್ತೀರಿ.
3. ಮಧ್ಯಭಾಗದಲ್ಲಿ ದೋಸೆ, ಜತೆ ಮಸಾಲೆಯನ್ನು ತಿನ್ನುವವರಾ?
ದೋಸೆಯ ಮಧ್ಯಭಾಗದಿಂದ, ಮಸಾಲೆಯನ್ನೂ ಜತೆಗೆ ಸೇರಿಸಿಕೊಂಡು ತಿನ್ನುವವರಾಗಿದ್ದರೆ, ನೀವು ಬದುಕಿನ ಬಗ್ಗೆ ಸ್ಪಷ್ಟತೆ ಹೊಂದಿದ್ದೀರಿ ಅಂತರ್ಥ. ನಿಮ್ಮ ಯಾವುದೇ ಕಾರ್ಯಕ್ಕೂ ಗಟ್ಟಿ ಬುನಾದಿ ಇರುತ್ತೆ. ಬದುಕಿನಲ್ಲಿ ಏನನ್ನು ತಗೋಬೇಕು, ಏನನ್ನು ತಗೋಬಾರದು ಎನ್ನುವ ವಿಚಾರದಲ್ಲಿ ನೀವು ತುಂಬಾ ಪಫೆಕ್ಟ್.
4. ದೋಸೆ ಮೊದಲು, ಮಸಾಲೆ ಆಮೇಲೆ ತಿಂತೀರಾ?
ಮಸಾಲೆ ದೋಸೆಯನ್ನು ನಿರ್ದಿಷ್ಟ ಭಾಗವೆನ್ನದೆ, ಎಲ್ಲ ದಿಕ್ಕುಗಳಿಂದಲೂ ಸೇವಿಸಿ, ಕೊನೆಯಲ್ಲಿ ಮಸಾಲೆಯನ್ನು ತಿನ್ನುವಿರಾದರೆ, ಬದುಕಿನಲ್ಲಿ ಡಿಸ್ಟರ್ಬ್ ಆಗಿದ್ದೀರಿ ಅಂತರ್ಥ. ಜೀವನದ ಮೇಲೊಂದು ವೈರಾಗ್ಯ ಹುಟ್ಟಿ, ಯಾವುದನ್ನು, ಯಾವಾಗ, ಆಯ್ಕೆ ಮಾಡಿಕೊಳ್ಳಬೇಕೆಂಬ ನಿರ್ಧಾರ ಸರಿಯಾಗಿರುವುದಿಲ್ಲ. ಲಯ ತಪ್ಪಿರುತ್ತದೆ. ಟ್ರಾಕಿಗೆ ಬರಲು ಒದ್ದಾಡುತ್ತಿರುತ್ತೀರಿ.
5. ಮಸಾಲೆ ದೋಸೆಯನ್ನು ನೀವು ಶೇರ್ ಮಾಡೋಲ್ವೇ?
ಫ್ರೆಂಡ್ಸ್ ಜತೆಗಿದ್ದಾಗ ಮಸಾಲೆ ದೋಸೆಯನ್ನು ನೀವು ಅವರೊಟ್ಟಿಗೆ ಹಂಚಿಕೊಳ್ಳದಿದ್ದರೆ, ನೀವು “ಅತಿ ರಹಸ್ಯ ವ್ಯಕ್ತಿ’ ಅಂತರ್ಥ. ಒಂದೋ ನೀವು ಲೆವೆಲ್ ಮೆಂಟೇನ್ ಮಾಡುತ್ತಿರುತ್ತೀರಿ, ಇಲ್ಲಾಂದ್ರೆ ಹೆಚ್ಚು ರಹಸ್ಯವಾಗಿ ಜೀವನ ಸಾಗಿಸುತ್ತಿರುತ್ತೀರಿ. ನಿಮ್ಮ ಬದುಕಿನ ಎಳ್ಳಂಶವೂ ಹೊರಗಿನವರಿಗೆ ಗೊತ್ತಾಗುವುದಿಲ್ಲ.
6. ನಿಮ್ಮ ಮೊದಲ ತುತ್ತನ್ನು ಫ್ರೆಂಡ್ಸ್‌ಗೆ ಆಫರ್ ಮಾಡ್ತೀರಾ?
ದೋಸೆಯ ಮೊದಲ ತುತ್ತನ್ನು ನಿಮ್ಮ ಪಕ್ಕದಲ್ಲಿದ್ದ ಫ್ರೆಂಡ್ಸ್‌ಗೆ, “ಟೇಸ್ಟ್ ನೋಡಿ’ ಎನ್ನುತ್ತಾ ಆಫರ್ ಮಾಡುತ್ತೀರಿ. ಹಾಗಿದ್ದರೆ, ನೀವು ಉದಾರ ಸ್ವಭಾವದವರು. ನಿಮ್ಮ ಜತೆಗಾರರ “ಕೇರ್’ ಬಯಸುವವರು.
7. ಬೇರೆಯವರು ಕೊಡ್ಲಿ ಅಂತ ಕಾಯ್ತಿರಾ?
ಫ್ರೆಂಡ್ಸ್ ದೋಸೆ ತಿಂತೀರ್ತಾರೆ, ಅವರು ಟೇಸ್ಟ್ ನೋಡಲು ಹೇಳಿದ್ರೆ ಅನ್ನೋ ಹಂಬಲ ನಿಮ್ಮೊಳಗಿದ್ದರೆ, ನಿಮ್ಮದು ಟಿಪಿಕಲ್ ವ್ಯಕ್ತಿತ್ವ. ನಿಮ್ಮನ್ನು ಸಲೀಸಾಗಿ ಅರ್ಥಮಾಡ್ಕೊಳ್ಳೋದು ಕಷ್ಟ ಅಂತರ್ಥ. ನಿಮ್ಮನ್ನು ಅರ್ಥಮಾಡಿಕೊಳ್ಳುವ ಕೆಲಸ ಆಪ್ತರಿಂದಲೂ ಸಾಧ್ಯ ಆಗೋದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.