ಪ್ಯಾಕೇಜ್ ಆಫ್ ಲೈಫ್
Team Udayavani, Feb 25, 2020, 5:22 AM IST
ಸಹಜ ಜೀವನದಲ್ಲಿ ಈ ಪ್ಯಾಕೇಜ್ ಆಫ್ ಲೈಫ್ ಹೇಗೆ ಟ್ರೆಂಡ್ ಆಗುತ್ತದೆ ಎಂಬುದೆ ಒಂದು ಸೋಜಿಗ. ಜನ ತಮಗೆ ಗೊತ್ತಿಲ್ಲದೆ ಈ ಪ್ಯಾಕೇಜ್ ಗಳ ಬ್ರ್ಯಾಂಡ್ ಅಂಬಾಸಿಡರ್‌ಗಳಾಗುತ್ತಿದ್ದಾರೆ. ಒಂದು ಕಡೆ ಜೀವನ ಸರಳವಾಗುತ್ತಿದೆ ಅನ್ನಿಸುವ ಭ್ರಮೆ(?) ಹುಟ್ಟಿಸಿ, ಯುವ ಸಮೂಹವನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಪ್ಯಾಕೇಜ್‌ನಿಂದ ಅನುಕೂಲಗಳು ಇಲ್ಲವೆಂದಿಲ್ಲ, ಆದರೆ, ಭ್ರಮೆ ಹುಟ್ಟಿಸಿ ಸೆಳೆಯುವುದಂತೂ ನಿಜ.
ಮೊನ್ನೆ ಗೆಳೆಯನ ತಂಗಿ ಮದುವೆಗೆ ಹೋಗಿದ್ದೆ. ಮದುವೆಯ ಕಾರ್ಯಕ್ರಮಗಳು, ಅಲಂಕಾರ ಮತ್ತು ವ್ಯವಸ್ಥೆಗಳೆಲ್ಲವೂ ಬಹಳ ಅಚ್ಚುಕಟ್ಟಾಗಿತ್ತು. ಊಟ ಮತ್ತು ಬಡಿಸುವವರ ನಾಜೂಕುಗಳ ಬಗ್ಗೆ ಹೇಳುವುದೇ ಬೇಡ. ಊಟ ಮುಗಿಸಿ ಹೊರಡುವಾಗ, “ಮಗಾ, ಮದ್ವೆ ಚೆನ್ನಾಗಿತ್ತೋ. ಊಟದ ಮೆನು ಚೆನ್ನಾಗಿತ್ತು. ಅಡುಗೆಯವರು ಎಲ್ಲಿಯವರು?’ ಅಂತ ಕೇಳಿದೆ. ಎಲ್ಲಿಯವರೋ ಗೊತ್ತಿಲ್ಲ ಮಗ. ವೆಡ್ಡಿಂಗ್ ಪ್ಲ್ಯಾನಿಂಗ್ ನವರಿಗೆ ಪ್ಯಾಕೇಜ್ ಮಾತಾಡಿ ವಹಿಸಿಬಿಟ್ಟಿದ್ವಿ.’ ಅಂದ. ಪ್ಯಾಕೇಜ್ ಎಂಬ ಪದ ಹಾಗೇ ಮನಸ್ಸಿನಲ್ಲುಳಿಯಿತು.
ಮೊದಲೆಲ್ಲಾ ಮದುವೆ ತಯಾರಿ ಅಂದರೆ ಜವಳಿಯಿಂದ ಹಿಡಿದು, ಛತ್ರ ನೋಡುವುದು, ಲಗ್ನಪತ್ರಿಕೆ ವಿನ್ಯಾಸ ಆರಿಸುವುದು, ಮದುವೆ ಮನೆಯ ಹೂವಿನ ಅಲಂಕಾರ, ಪೂಜೆಗಳ ತಯಾರಿ, ವಿಧಿ ವಿಧಾನಗಳ ತಯಾರಿ, ಗಂಡು-ಹೆಣ್ಣು ಮತ್ತು ಮನೆಯವರ ತಯಾರಿ, ಬರುವ ಅತಿಥಿಗಳ ಸತ್ಕಾರದ ರೂಪುರೇಶೆ, ಊಟ ಮತ್ತು ಉಡುಗೊರೆಗಳ ಆಯ್ಕೆ, ಹೀಗೆ, ಹತ್ತು ಹಲವು ಕೆಲಸಗಳನ್ನು ಮನೆಯವರೇ ಮಾಡಬೇಕಿತ್ತು. ಈಗ ಏನೇನು ಮಾಡಬೇಕೆಂದು ಹೇಳಿ, ವೆಡ್ಡಿಂಗ್ ಪ್ಲ್ಯಾನರ್ ಗೆ ವಹಿಸಿದರಾಯ್ತು ಅಂತಾರೆ.
ಈ ಯುವ ಸಮೂಹಗಳಲ್ಲಿ ಪ್ಯಾಕೇಜ್ ಕಲ್ಪನೆ ಪ್ರಚಲಿತಗೊಂಡಷ್ಟು ಸಮಾಜದ ಇತರೆ ವಯಸ್ಸಿನ ಜನಸಮೂಹವನ್ನು ತಲುಪುವುದು ಕಷ್ಟವಾಗುವುದಿಲ್ಲ.
ಹಾಗೆ ನೋಡಿದರೆ, ಮನುಷ್ಯ ನವೀನತೆಗೆ ತೆರೆದುಕೊಂಡಷ್ಟೂ, ಪ್ಯಾಕೇಜ್‌ಗಳೊಳಗೆ ಬಂಧಿಯಾಗುತ್ತಿದ್ದಾನಾ ಅನ್ನಿಸುತ್ತದೆ. ನಾವು ದಿನದಿನಕ್ಕೆ ಕಂಡುಕೊಳ್ಳುತ್ತಿರುವ ಆಹಾರ ವಿಧಾನಗಳೂ ಪ್ಯಾಕೇಜ್‌ಗಳೇ ಆಗಿಬಿಟ್ಟಿವೆ. ಒಂದು ದಿನ ಮುಂಚೆಯೇ ಉದ್ದಿನಬೇಳೆ ಮತ್ತು ಅಕ್ಕಿಯನ್ನು ನೆನೆಸಿ, ರಾತ್ರಿ ರುಬ್ಬಿ ಹುಳಿ ಹಿಡಿದ ಮೇಲೆ ಬೆಳಗ್ಗೆಗೆ ತಯಾರಾಗುತ್ತಿದ್ದ ಗರಿ ಗರಿ ದೋಸೆ ಈಗ ಇನ್‌ಸ್ಟಾಂಟ್ ದೋಸೆ ಪೌಡರ್ ಪ್ಯಾಕ್‌ಗಳಾಗಿ ಪ್ಯಾಕೇಜ್‌ನಲ್ಲಿ ಮಾರಾಟಕ್ಕೆ ಸಿಗುತ್ತವೆ. ನಾವು ಬಳಸುವ ದಿನನಿತ್ಯದ ನೀರು ಕೂಡ ಪ್ಯಾಕೇಜ್. ತಿಂಗಳ ಸಾಮಾನಿಗೆ ಲಿಸ್ಟು ಬರೆದು ಕಿರಾಣಿ ಅಂಗಡಿಗೆ ಹೋಗಿ ಕಾಳು, ಬೇಳೆಗಳನ್ನೆಲ್ಲಾ ಪೊಟ್ಟಣ ಕಟ್ಟಿಸಿಕೊಂಡು ಬರುವುದು ಅಪರೂಪವಾಗಿದೆ. ಫ್ಯಾಮಿಲಿ ಮಾರ್ಟಿಗೋ, ಯಾವುದೋ ಮಾರ್ಟಿಗೋ ಹೋಗಿ ಮೊದಲೆ ಅಳೆದು ಪ್ಯಾಕ್ ಮಾಡಿದ ಪ್ಯಾಕೇಟ್ ಗಳನ್ನು ಟ್ರಾಲಿಗೆ ತುಂಬಿಸಿಕೊಂಡು ತಿಂಗಳ ಶಾಪಿಂಗ್ ಮುಗಿಸಿರುತ್ತೇವೆ. ಇಲ್ಲವೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ ಮುಗಿಸುವುದೂ ರೂಢಿಯಾಗಿಬಿಟ್ಟಿದೆ.
ಇತ್ತೀಚೆಗೆ, ಯಾವುದೇ ವಲಯಗಳಲ್ಲಿ ಕೆಲಸ ಹಿಡಿಯುತ್ತಿರುವ ಯುವ ಜನತೆಯ ಟ್ರೆಂಡ್ ಕೂಡ ಈ ಪ್ಯಾಕೇಜ್‌ಮೇಲೆ ನಿಂತಿದೆ. ಮೊದಲೆಲ್ಲಾ ಸಂಬಳದ ಜೊತೆಗಿನ ಉಳಿತಾಯಗಳೆಷ್ಟು – ಅಂದರೆ ಪಿ.ಎಫ್, ಇ.ಎಸ್.ಐ, ಗ್ರ್ಯಾಚುಯಿಟಿಗಳೆಷ್ಟು ಎಂಬ ಬಗ್ಗೆ ಯೋಚಿಸುತ್ತಿದ್ದರು. ಹೆಲ್ತ್ ಇನ್ಸುರೆನ್ಸ್ ಇದೆಯಾ ಎಂದು ಮರೆಯದೇ ಕೇಳುತ್ತಿದ್ದರು. ಇನ್‌ಕ್ರಿಮೆಂಟ್, ಬೋನಸ್ ಇದೆತಾನೆ ಎಂದು ಎರಡೆರಡು ಬಾರಿ ಕೇಳಿ ಖಚಿತಪಡಿಸಿಕೊಳ್ಳುತ್ತಿದ್ದರು. ಕೈಗೆ ಸಿಗುವ ಸಂಬಳ ಸ್ವಲ್ಪ ಕಮ್ಮಿಯಾದರೂ ಭವಿಷ್ಯಕ್ಕೆ ನೆರವಾಗುವಂಥ ಉಳಿತಾಯವಾದರೆ ಸಾಕು ಎಂಬ ಯೋಚನೆಗಳಿದ್ದವು. ಹೊಸ ಕೆಲಸ ಅಂತಾದಾಗ, ಯಾವ ಕಡೆ? ಅಲ್ಲಿರುವ ಸೌಕರ್ಯಗಳೇನು? ಅಪ್ರೈಸಲ್ ಹೇಗೆ? ಬೇರೆ ಉಳಿತಾಯಗಳ ಮೂಲಕ ಸಿಗುವುದೆಷ್ಟು, ವೇರಿಯಬಲ್ ಪೇ ಹೇಗೆ ಅಂತೆಲ್ಲಾ ಮಾತನಾಡುವ ಕಾಲವೂ ಕಾಣೆಯಾಗಿದೆ. ಬದಲಾಗಿ ಪ್ಯಾಕೇಜ್ ಎಷ್ಟು ಕೊಟ್ರಾ ಎಂಬಲ್ಲಿಗೆ ಬಂದು ನಿಲ್ಲುತ್ತಿದೆ. ಅಂದರೆ ಈಗ ವಿವರಗಳ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಳ್ಳುವುದಿಲ್ಲ.
ಎಲ್ಲವನ್ನೂ ಯಾವುದೋ ಒಂದು ಸಿದ್ಧ ಮಾದರಿಯಲ್ಲಿ ಕಸ್ಟಮೈಸ್ ಮಾಡಿ ಇನ್ಸಾಟ್ ಕಾಫಿಯ ರೂಪದಲ್ಲಿ ಕೊಟ್ಟರೆ ಸಾಕು. ರುಚಿ ಕೂಡ ತತ್‌ಕ್ಷಣವೆ ನಾಲಿಗೆಗೆ ಹತ್ತಬೇಕು. ಹಾಲು ಕುದಿಸಿ, ಸಕ್ಕರೆ ಮತ್ತು ಡಿಕಾಕ್ಷನ್ ಬೆರೆಸಿ, ಹದವಾಗಿ ಮತ್ತೆ ಕುದಿಸಿ ಆಸ್ವಾಧಿಸುವ ವ್ಯವಧಾನ ಯಾರಿಗೂ ಇಲ್ಲ. ಎಷ್ಟು ಬೇಗ ಆಸ್ವಾಧನೆಗೆ ಸಿಕ್ಕರೆ ಅಷ್ಟು ಅನುಕೂಲ ಎಂಬ ಮನಃಸ್ಥಿತಿ ಯುವ ಸಮೂಹದಲ್ಲಿ ಬೇರೂರುತ್ತಿದೆ.
ಮದುವೆ ಮತ್ತು ಮಕ್ಕಳ ಬದುಕುಗಳನ್ನು ರೂಪಿಸಿಕೊಳ್ಳುವಾಗಲೂ ಇಂತಿಷ್ಟೇ ಚೌಕಟ್ಟಿನ ಬದುಕು ಪರಿಪೂರ್ಣ ಎಂಬ ಕಲ್ಪನೆ ಬೇರೂರುತ್ತಿದೆ. ಓದು, ಒಂದು ಕೆಲಸ, ಒಂದು ಸೈಟು ಅಥವಾ ಮನೆ, ಒಂದು ಕಾರು. ಇಷ್ಟೆ ವರ್ಷಗಳೊಳಗೆ ಆಗಬೇಕು, ಆಗಷ್ಟೇ ಬದುಕು ಪರಿಪೂರ್ಣ ಎಂಬ ಪ್ಯಾಕೇಜ್ಡ್ ಬದುಕನ್ನು ಕಟ್ಟಿಕೊಳ್ಳುತ್ತಿ¨ªಾರೆ. ಮನೆಗಳನ್ನು ಕಟ್ಟುವುದು ಮತ್ತು ಒಳ ವಿನ್ಯಾಸಗಳು, ಶೃಂಗಾರಕ್ಕೂ ಹೀಗೆ ಸಿದ್ಧ ಮಾದರಿಗಳಿವೆ. ಹೊಸತುಗಳನ್ನು ಪ್ರಯತ್ನಿಸಿದಾಗಲೂ ಜನ ಹೀಗೆ ಯಾಕೆ ಮಾಡಿದಿರಿ ಎಂದು ಕೊಂಕು ತೆಗೆದು ಒಂದು ಪ್ಯಾಕೇಜಿಗೆ ಒಗ್ಗಿಸಲು ನೋಡುತ್ತಾರೆ.
ನಾವು ಪ್ರತಿಯೊಂದು ಪ್ಯಾಕೇಜನ್ನು ಆರಿಸಿಕೊಂಡಾಗಲೂ, ಅದರೊಂದಿಗೆ ಒಂದು ಚೌಕಟ್ಟನ್ನು ಆರಿಸಿಕೊಳ್ಳುತ್ತೇವೆ. ಆ ಚೌಕಟ್ಟಿನೊಂದಿಗೆ ಪಡೆದುಕೊಳ್ಳುವ ಉಪಯೋಗಗಳೆಷ್ಟು, ಕಳೆದುಕೊಳ್ಳುವ ಸ್ವಾತಂತ್ರ್ಯಗಳೆಷ್ಟು ಎಂಬ ಚರ್ಚೆಯನ್ನು ಉಪೇಕ್ಷಿಸುತ್ತೇವೆ. ಸಿದ್ಧ ಮಾದರಿಯೊಂದು ಸಿಕ್ಕರೆ ಸಾಕು. ಅದನ್ನು ಆರಿಸಿಕೊಳ್ಳುವಾಗ ನಮ್ಮ ಮನಸ್ಸು, ಬುದ್ಧಿಗಳೂ ಅವುಗಳಿಗೆ ಹೊಂದಿಸಿಕೊಳ್ಳಲು ಶುರುವಾಗುವುದರಿಂದ ಅದರಿಂದ ಅಂಥದ್ದೇನೂ ಫರಕ್ಕು ಅನ್ನಿಸುವುದಿಲ್ಲ. ಆ ಥರದ ಪ್ಯಾಕೇಜ್ ಗಳಲ್ಲಿ ಯಾವುದನ್ನು ಎಷ್ಟು ಆರಿಸಿಕೊಳ್ಳಬೇಕು, ಎಷ್ಟು ಬಿಡಬೇಕು ಎಂದು ಸ್ವಾತಂತ್ರವಾಗಿ ಯೋಚಿಸದೆ ಸಿದ್ಧಮಾದರಿಗಳಿಗೆ ಜೋತು ಬೀಳುತ್ತೇವೆ.
ಸಹಜ ಜೀವನದಲ್ಲಿ ಈ ಪ್ಯಾಕೇಜ್ ಆಫ್ ಲೈಫ್ ಹೇಗೆ ಟ್ರೆಂಡ್ ಆಗುತ್ತದೆ ಎಂಬುದೆ ಒಂದು ಸೋಜಿಗ. ಜನ ತಮಗೆ ಗೊತ್ತಿಲ್ಲದೆ ಈ ಪ್ಯಾಕೇಜ್ ಗಳ ಬ್ರ್ಯಾಂಡ್ ಅಂಬಾಸಿಡರ್‌ಗಳಾಗುತ್ತಿದ್ದಾರೆ. ಒಂದು ಕಡೆ ಜೀವನ ಸರಳವಾಗುತ್ತಿದೆ ಅನ್ನಿಸುವ ಭ್ರಮೆ(?) ಹುಟ್ಟಿಸಿ, ಯುವ ಸಮೂಹವನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಪ್ಯಾಕೇಜ್‌ನಿಂದ ಅನುಕೂಲಗಳು ಇಲ್ಲವೆಂದಿಲ್ಲ, ಆದರೆ, ಭ್ರಮೆ ಹುಟ್ಟಿಸಿ ಸೆಳೆಯುವುದಂತೂ ನಿಜ. ಇನ್ನೊಂದು ಕಡೆ ಮನುಷ್ಯ ಸಹಜ ಕುತೂಹಲಗಳು, ಯೋಚನಾವ್ಯಾಪ್ತಿ ಮತ್ತು ಶ್ರಮಗಳ ಬಗೆಗಿನ ಅರಿವುಗಳಿಗೆ ತಡೆಗೋಡೆಯಾಗಿಬಿಡುತ್ತದೆ. ಮತ್ತೂಂದು ಪ್ರಮುಖ ಅಂಶವೆಂದರೆ, ಬದುಕು ದಿನಗಳೆದಂತೆ ಕ್ಲಿಷ್ಟವಾಗುತ್ತಾ ಸುಲಭ ದಾರಿಗಳತ್ತ ಯುವ ಸಮುದಾಯವನ್ನು ತಳ್ಳುತ್ತ ಇದೆಯೊ, ಇಲ್ಲ ಯುವ ಸಮುದಾಯವನ್ನು ಸೋಂಬೇರಿಗಳನ್ನಾಗಿಸುತ್ತಿದೆಯೊ ಎಂಬ ಜಿಜ್ಞಾಸೆಯೊಂದಕ್ಕೆ ಉತ್ತರ ಸಿಕ್ಕುವುದಿಲ್ಲ ಎಂಬಲ್ಲಿಗೆ ಮನುಷ್ಯನ ಬದುಕು ಪ್ಯಾಕೇಜ್ಡ್ ಆಗಿ ಅಮೇಜಾನ್, ಫ್ಲಿಪ್ ಕಾರ್ಟ್ ಪಾರ್ಸಲ್ ನೊಂದಿಗೊ ಡೆಲಿವರಿಯಾಗದಿದ್ದರೆ ಸಾಕು.
ಪ್ರಸಾದ್.ಡಿ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.