![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 8, 2020, 7:37 PM IST
ನಾವಿಬ್ಬರೂ ಇನ್ನಿಲ್ಲದ ಆಸೆಯಿಂದ, ಮಮತೆಯಿಂದ, ಸಂಯಮದಿಂದ ಮತ್ತು ಉತ್ಸಾಹದಿಂದ ಕಟ್ಟಿದ ಪ್ರೀತಿಯ ಅರಮನೆಯಿಂದ, ನಿನಗೆ ಒಂದು ಮಾತನ್ನೂ ಹೇಳದೇ ಹೊರನಡೆಯುತ್ತಿದ್ದೇನೆ. ಅದಕ್ಕಾಗಿ ನನ್ನನ್ನು ಕ್ಷಮಿಸಿಬಿಡು. ನಿನ್ನೆದೆಯೊಳಗಿನ ಅಷ್ಟೂ ಮಮತೆಗೆ “ಗುಡ್ ಬೈ’ ಹೇಳಬೇಕಾಗಿ ಬಂದ ನನ್ನ ಅಸಹಾಯಕತೆಯನ್ನ ಮನ್ನಿಸಿಬಿಡು. ನಿನ್ನ ಜೊತೆ ಹೆಜ್ಜೆ ಜೋಡಿಸಲು ಸಮ್ಮತಿಸದ ಈ ನತದೃಷ್ಟೆಯನ್ನು ಮರೆತುಬಿಡು.
ಪ್ರಪಂಚದಲ್ಲಿರುವ ಎಲ್ಲ ಪ್ರೇಮಕಥೆಗಳನ್ನ ನಿನ್ನ ಭುಜಕ್ಕೊರಗಿ ಓದಿ ಹೇಳುತ್ತಾ,ಕೊನೆಗೆನಮ್ಮ ಪಾಲಿನ ಪ್ರೇಮದ ಪುಸ್ತಕದಲ್ಲಿ ಒಂದೇ ಒಂದು ವಾಕ್ಯವನ್ನೂ ಬರೆಯದೇ ಎದ್ದು ಬಂದ ಈ ನಿನ್ನ ಹುಡುಗಿಯನ್ನಕೊನೆಯ ಸಲ ಕ್ಷಮಿಸಿಬಿಡೋ ಪ್ಲೀಸ್… ನಿನ್ನ ಕುರಿತಾಗಿ ನಾನುಕಂಡಿದ್ದ ಕನಸುಗಳಿಗೆ ಲೆಕ್ಕವಿಲ್ಲ. ಆದರೆ ಇವನೇ, ಅಷ್ಟು ಕನಸುಗಳಲ್ಲಿ ಒಂದೇ ಒಂದಾದರೂ ನನಸಾಗೋದು ಬ್ಯಾಡವಾ? ಕೂತು ಎಣಿಸಿದ್ದರೆ, ಆ ಕನಸುಗಳ ಸಂಖ್ಯೆಯೇ ನೂರನ್ನು ದಾಟುತ್ತಿತ್ತೇನೋ; ಅಷ್ಟುಕನಸುಗಳ ಮೇಲೆ ನೆಪ ಮಾತ್ರಕ್ಕಾದರೂ ದೇವರುಗಳ ಆಶೀರ್ವಾದ ಬೀಳಲಿಲ್ಲ. ಒಂದೇ ಒಂದು ಕನಸು ನನಸಾಗಿದ್ದರೂ ನಾನು ನಿನ್ನ ಮಡಿಲಲ್ಲಿರುತ್ತಿದ್ದೆ. ಕನಸೊಂದು ನನಸಾಯಿತು ಎಂಬ ಹುಮ್ಮಸ್ಸಿನಲ್ಲೇ ಸುಮ್ಮನೇ ಮುನಿಸಿಕೊಳ್ಳುತ್ತಿದ್ದೆ, ವಿನಾಕಾರಣ ಜಗಳ ಆರಂಭಿಸುತ್ತಿದ್ದೆ.ಕೊನೆಗೆ ನಾನೇ ಮೊದಲು ಸ್ಸಾರಿ ಕೇಳುತ್ತಿದ್ದೆ. ಉಹೂಂ, ಅಂಥ ಸಂದರ್ಭ ಬರಲೇ ಇಲ್ಲ. ಇದನ್ನೆಲ್ಲಾ ನೋಡಿದ್ರೆ-ಪ್ರಪಂಚದ ದುರದೃಷ್ಟಪ್ರೇಮಿಗಳಲ್ಲಿ ಮೊದಲ ಸಾಲಲ್ಲಿ ನಿಲ್ಲುವವರು ನಾವೇ ಇರ್ಬೇಕು ಅನ್ನಿಸಿಬಿಡುತ್ತೆ…
ಬದುಕು ಬಹಳಕೆಟ್ಟದುಕಣೋ. ಇಲ್ಲಿ ನಮ್ಮಂಥವರ ಪ್ರೀತಿ ಗುಣಿಸಿಕೊಳ್ಳೋದಿಲ್ಲ. ಕೇವಲ ಕಳೆದುಕೊಳ್ಳುತ್ತದೆ.ಕೆಲವು ಬಿಡಿಸಲಾರದ ಬಂಧನಗಳ ಸಂಕೋಲೆಗಳು, ಒಂದು ನಿರ್ಮಲವಾದ ಪ್ರೀತಿಯನ್ನ ಬಂಧಿಸಿಬಿಡುತ್ತವೆ. ನನ್ನಂಥ ಸೆಂಟಿಮೆಂಟಲ್ ಹುಡುಗಿಯರು ಬಂಧನದಿಂದಬಿಡಿಸಿಕೊಳ್ಳಲಾರದೆ ಕಣ್ಣೀರಿಡುತ್ತಾರೆ. ಆ ಮೂಲಕ, ಹುಡುಗಿಯರೆಂದರೆ ಬರೀಕೈಕೊಡೋರು ಅನ್ನುವ ಮಾತಿಗೆ ಮತ್ತಷ್ಟು ಪುರಾವೆ ಒದಗಿಸುತ್ತಾರೆ. ಒಂದಷ್ಟು ಧೈರ್ಯ ತೆಗೆದುಕೊಂಡು ಒಂದಡಿ ಮುಂದೆ ಹೆಜ್ಜೆಯಿಟ್ಟರೂ,ಕಾಣದಕೈಗಳು ಮತ್ತಷ್ಟು ಹಿಂದಕ್ಕೆಳೆಯುತ್ತವೆ. ಬದುಕು ಅಂದ್ರೆ ಕಾಂಪ್ರೊಮೈಸ್ ಅಂದ್ಕೊಂಡಿದ್ದೆ. ಆದರೆ ಇಷ್ಟೊಂದು ಅಂತ ನಿನ್ನಾಣೆಗೂ ಗೊತ್ತಿರಲಿಲ್ಲ. ನನ್ನ ಮುಂದಿದ್ದುದು ಎರಡು ಆಯ್ಕೆಕಣೊ… ಅಪ್ಪ- ಅಮ್ಮ ಮತ್ತು ನೀನು. ನಾನು ಮೊದಲನೆಯದನ್ನ ಆಯ್ದುಕೊಂಡು ಮುದ್ದಿನ ಮಗಳು ಅನ್ನಿಸಿಕೊಂಡರೂ, ಪ್ರೇಮಲೋಕದ ಪಾಲಿಗೆ ಕೈಕೊಟ್ಟವಳು, ನಂಬಿಕೆ ದ್ರೋಹಿ ಅನ್ನಿಸಿಕೊಳ್ತಾನೇ ನಿನ್ನ ಮನದ ಗುಡಿಯಿಂದ ಎದ್ದು ಹೋಗ್ತಾ ಇದ್ದೀನಿ… ನೀನು ನನ್ನನ್ನು ಪ್ರೀತಿಸಿದ್ದು ನಿಜವೇ ಆಗಿದ್ದರೆ, ನನ್ನನ್ನಕೊನೆಯ ಬಾರಿಗೆ ಕ್ಷಮಿಸಿ ಬಿಡು.
-ಸುಮಿತ್ರಾ
You seem to have an Ad Blocker on.
To continue reading, please turn it off or whitelist Udayavani.