ಬೆನ್ನ ಹಾಳೆಯಲ್ಲಿ ಮೂಡಿದ ಕವಿತೆ…
Team Udayavani, Oct 29, 2019, 4:36 AM IST
“ಸಿದ್ರಾಮ, ಸ್ಟ್ಯಾಂಡ್ ಅಪ್…’ ಎಂದರು ಟೀಚರ್. ಕೈಲಿದ್ದ ನೋಟ್ ಪುಸ್ತಕವನ್ನು ಗಬಕ್ಕನೆ ಮುಚ್ಚಿ , ಗೆಳಯ ಸಿದ್ರಾಮ ಎದ್ದುನಿಂತ. ಹಣೆಯಲ್ಲಾಗಲೇ ಬೆವರಿನ ಹನಿಗಳು ಮೂಡಲು ಶುರುವಾಗಿದ್ದವು. ನಮಗೆಲ್ಲಾ ಗಾಬರಿ, ಇವನಂತೆ ನಮ್ಮನ್ನೂ ಎಬ್ಬಿಸುತ್ತಾರೆಯೋ ಏನೋ ಅಂತ. ಆದರೂ, ಇದ್ದಕ್ಕಿದ್ದಂತೆ ಸಿದ್ರಾಮನನ್ನು ಏಕೆ ಈ ರೀತಿ ಎಬ್ಬಿಸಿದರು ಅನ್ನೋದು ಮಾತ್ರ ಯಾರಿಗೂ ತಿಳಿಯಲಿಲ್ಲ. ಆಮೇಲೆ ನಡೆದದ್ದನ್ನು ಇವತ್ತು ನೆನಪಿಸಿಕೊಂಡರೂ ನಗು ತಡೆಯೋದಕ್ಕೆ ಆಗೋಲ್ಲ…
ಆಗ ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದೆ. ಮೀಸೆ ಮೂಡುವ ವಯಸ್ಸು. ಆಗಷ್ಟೇ ಕಾಲೇಜಿನ 49 ಮೆಟ್ಟಿಲು ಹತ್ತಿದ್ದೆ. ಜಗತ್ತೆಲ್ಲ ಬಣ್ಣ ಬಣ್ಣದ ಚಿತ್ತಾರದಂತೆ ಕಾಣುತ್ತಿದೆ. ಏನೋ ಹುರುಪು, ಏನೋ ಉಲ್ಲಾಸ, ವಿಶ್ವವನ್ನೇ ಗೆಲ್ಲುವೆನೆಂಬ ಗೈರತ್ತು. ಇದು ನನಗೊಬ್ಬನಿಗೇ ಅಲ್ಲ. ಇಡೀ ಕಾಲೇಜೇ ಹೀಗಾಡುತ್ತಿದೆ ಅನ್ನುವಂಥ ವಾತಾವರಣ ಇತ್ತು.
ನಮ್ಮ ಕ್ಲಾಸ್‌ರೂಂನಲ್ಲಿ ಹುಡುಗಿಯರಿಗೆಂದೇ 6 ಡೆಸ್ಕ್ ಮೀಸಲಿಟ್ಟಿದ್ದೆವು. 7ನೇ ಡೆಸ್ಕ್ನಲ್ಲಿ ನಾವು 6 ಜನ ವಿರಾಜಮಾನ!
ನಮ್ಮಲ್ಲೊಬ್ಬ ದ್ಯಾಪನಹಳ್ಳಿಯ ಸಿದ್ರಾಮ ಅಂತ ಗೆಳೆಯನಿದ್ದ. ಪಕ್ಕಾ ಆಶುಕವಿ. ಮಾತಿನ ಮಧ್ಯೆ ಕತೆ ರಚಿಸುತ್ತಿದ್ದ. ನಿಂತಲ್ಲಿ, ಕುಂತಲ್ಲಿ, ಅಪಾನವಾಯು ಬಿಟ್ಟಾಗಲೂ ಅದರ ಮೇಲೊಂದು ಕವಿತೆಕಟ್ಟಿ ಹಾಡುವಷ್ಟು ಅಪ್ರತಿಭಾವಂತ ಕವಿಯಾಗಿದ್ದ. ಈತನ ಕವನದ ಪರಿಣಾಮ ಯಾವ ರೀತಿ ಆಯಿತು ಅನ್ನೋದಕ್ಕೆ ಇಲ್ಲೊಂದು ಘಟನೆ ಇದೆ ಕೇಳಿ:
ಒಂದು ದಿನ ಕಾಲೇಜಿನಲ್ಲಿ ಹಿಸ್ಟರಿ ಪಾಠ ನಡೆದಿತ್ತು. ಕೆಂಪಯ್ಯ ಮಾಸ್ತರರು ಒಂದೇ ಲಹರಿಯಲ್ಲಿ ಓತಪ್ರೋತವಾಗಿ ಪುರಾತನ ಚರಿತ್ರೆ ಹೇಳುತ್ತಿದ್ದರು. ಪಾಠ ಮಾಡುತ್ತಿದ್ದವರು ಒಮ್ಮೆಲೇ ನಿಲ್ಲಿಸಿ ನಮ್ಮೆಡೆಗೆ ನೋಡಲು ಶುರು ಮಾಡಿದರು. ನಮಗೆಲ್ಲ ಏನಾಯ್ತು ತಿಳಿಯುತ್ತಿಲ್ಲ. ಹಾಗೇ ಹತ್ತಿರ ಬಂದು.
“ಸಿದ್ರಾಮ, ಸ್ಟ್ಯಾಂಡ್ ಅಪ್…’ ಎಂದರು. ಕೈಲಿದ್ದ ನೋಟ್ ಪುಸ್ತಕವನ್ನು ಗಬಕ್ಕನೆ ಮುಚ್ಚುತ್ತ ಗೆಳಯ ಸಿದ್ರಾಮ ಎದ್ದುನಿಂತ. ಹಣೆಯಲ್ಲಾಗಲೇ ಬೆವರಿನ ಹನಿಗಳು ಮೂಡಲು ಶುರುವಾಗಿದ್ದವು. ನಮಗೆಲ್ಲಾ ಗಾಬರಿ, ಇವನಂತೆ ನಮ್ಮನ್ನೂ ಎಬ್ಬಿಸುತ್ತಾರೆಯೋ ಏನೋ ಅಂತ. ಆದರೂ, ಇದ್ದಕ್ಕಿದ್ದಂತೆ ಸಿದ್ರಾಮನನ್ನು ಏಕೆ ಈ ರೀತಿ ಎಬ್ಬಿಸಿದರು ಅನ್ನೋದು ಮಾತ್ರ ಯಾರಿಗೂ ತಿಳಿಯಲಿಲ್ಲ.
“ನೋಟ್ಸ್ ಎಲ್ಲಾ ಬರೆದುಕೊಂಡಿದ್ದೀಯಾ? ‘ ಮತ್ತೆ ಗಡಸು ದನಿಯಲ್ಲಿ ಪ್ರಶ್ನೆ ಎಸೆದರು.
” ಹೂ ಸಾರ್…’ ಅಂದವನೇ ಸಿದ್ರಾಮ ಸ್ವಲ್ಪ ತೊದಲಿದ.
“ಕೊಡಿಲ್ಲಿ, ಹೇಗೆ ಬರೆದು ಕೊಂಡಿದ್ದೀಯ ನೋಡೋಣ’ ಅಂದರು. ಸಿದ್ರಾಮ ಲೆಕ್ಟರರ್‌ಗೆ ಬೆದರುತ್ತಲೇ ಪುಸ್ತಕ ಕೊಟ್ಟ.
ಪುಸ್ತಕ ತೆರೆದು ನೋಡಿದ ಕೆಂಪಯ್ಯನವರ ಹುಬ್ಬು ಮೇಲೇರಿದವು. ಮೂಗಿನ ಹೊಳ್ಳೆಗಳು ಹೈವೇ ರಸ್ತೆಯಂತೆ ಅಗಲವಾದವು. ನಾವು ಅವರ ಮುಖದ ಹಾವಭಾವವನ್ನೇ ಗಮನಿಸುತ್ತಿದ್ದೆವಾದ್ದರಿಂದ ಎಲ್ಲೋ ಏನೋ ಆಗಿದೆ ಅನ್ನೋ ಸುಳಿವು ಸಿಕ್ಕಿತು. ಆನಂತರ, ಅವರು ಎಲ್ಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತು ಶುರುಮಾಡಿದರು.
“ಡಿಯರ್ ಸ್ಟೂಡೆಂಟ್ಸ್, ನಮ್ಮ ಸಿದ್ರಾಮಯ್ಯನವರು ಬರೆದುಕೊಂಡಿರುವ ಪ್ರತಿಭಾಶಾಲಿ ನೋಟ್ಸ್‌ನ್ನು ಅವರೇ ಓದುತ್ತಾರೆ,
ದಯವಿಟ್ಟು ಕೇಳಿ’ ಅಂದು, “ಓದಪ್ಪಾ, ಕವಿ ಮಹಾಶಯ…..’ ಆಜ್ಞಾಪಿಸಿದರು.
ಸಿದ್ರಾಮ ಅಳುಕುತ್ತಲೇ ಪುಸ್ತಕ ತೆರೆದು ಓದಿದ
” ನಿನ್ನ ಬೆನ್ನ ಬಿಳಿ ಹಾಳೆಯಲ್ಲಿ ನನ್ನಂದದ ಬಿಂಬ ಕಂಡೆ,
ರಮ್ಯ ಚಿತ್ತದ ಭಿತ್ತಿಯಲ್ಲಿ
ಸಿಹಿ ಕಜ್ಜಾಯ ಮೆದ್ದೆ
ಓ, ಚೆಲುವೆ…….’
ಕವಿತೆ ಮುಗಿಯುವ ಹೊತ್ತಿಗೆ- ಇಡೀ ತರಗತಿ ಗೊಳ್ಳೆಂದಿತು. ಇವನ ಮುಂದೆ ಕುಳಿತಿದ್ದ ಪ್ರತಿಭಾಳ ಬೆನ್ನನ್ನೇ ಎಲ್ಲರೂ ದಿಟ್ಟಿಸಿ ನೋಡಲಾರಂಭಿಸಿದರು. ಲಂಗದ ಮೇಲೆ ಲೋ ಕಟ್‌ನೆಕ್‌ನ ರವಿಕೆ ಧರಿಸಿ ಬಂದಿದ್ದ ಪ್ರತಿಭಾ, ಪುಸ್ತಕದಲ್ಲಿ ಮುಖ ಹುದುಗಿಸಿಕೊಂಡಳು. ಅಂದು ದಿನವಿಡೀ ಸಿದ್ರಾಮ ತಲೆ ಎತ್ತಿ ಎದುರಿನ ಹುಡುಗಿಯರ ಕಡೆ ನೋಡಲಿಲ್ಲ. ಮರುದಿನ ಪ್ರತಿಭಾ ಬಂದಳು. ಆಕೆಯ ಲಂಗದ ಮೇಲೆ ಪೂರ್ಣ ಬೆನ್ನು ಮುಚ್ಚುವ ರವಿಕೆ, ಮೇಲೊಂದು ಮುಸುಕು ಧರಿಸಿದ್ದಳು. ಇದು ಕವಿತೆಯ ಪರಿಣಾಮವೋ ಏನೋ ಎಂಬಂತಾಯಿತು. ವಿಶೇಷವೆಂದರೆ, ನಮ್ಮ ಕವಿಪುಂಗವ ಸಿದ್ರಾಮನ 2 ಕವನಗಳು ಆ ವರ್ಷದ ಕಾಲೇಜ್ ಮ್ಯಾಗ್‌ಜಿನ್‌ನಲ್ಲಿ ಪ್ರಕಟವಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದವು. ಕಾಲೇಜು ದಿನಗಳ ಬಗ್ಗೆ ಆಗಾಗ ಅಪ್ಪಳಿಸುವ ನೆನಪುಗಳ ಪೈಕಿ ಸಿದ್ರಾಮನ ಘಟನೆ ನನ್ನನ್ನು ಆಗಾಗ ಬಹಳ ಕಾಡುತ್ತದೆ.
ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.