ನೆಟ್ಟಗೆ ತಯಾರಾಗಿ!
Team Udayavani, Oct 1, 2019, 5:57 AM IST
ನೆಟ್ ಪರೀಕ್ಷೆ ಪಾಸು ಮಾಡೋದು ತಪಸ್ಸೇ. ಒಂದಷ್ಟು ತಿಂಗಳುಗಳ ಕಾಲ ಎಲ್ಲ ಕನಸನ್ನು ಗಂಟು ಕಟ್ಟಿ ಅಟ್ಟಕ್ಕೆ ಎಸೆದು, ಆ ಜಾಗದಲ್ಲಿ ಪರೀಕ್ಷೆ ಪಾಸು ಮಾಡುವ ಕನಸಷ್ಟೇ ಕಾಣಬೇಕು. ಇದು ಒಂದು ರೀತಿ ಎಲ್ಲಾ ಪರೀಕ್ಷೆಗಳ ತಂದೆ ಇದ್ದಂತೆ. ಹಾಗಾಗಿ, ತುಸು ಕಷ್ಟವೇ ಆದರೂ, ಶ್ರಮ ಹಾಕಿ ಓದಿದರೆ ಕಷ್ಟವೇನಲ್ಲ. ಈ ಪರೀಕ್ಷೆಯನ್ನು “ನೆಟ್ಟಗೆ ‘ ಪಾಸ್ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಫುಲ್ ಡೀಟೇಲ್ಸ್.
ಏನಾದರಾಗಲಿ, ಈ ಬಾರಿ ನೆಟ್ ಪರೀಕ್ಷೆ ಪಾಸಾಗಿಬಿಡಬೇಕು ಎಂದು ಗಟ್ಟಿ ಮನಸ್ಸು ಮಾಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು, ಸಾಫ್ಟ್ವೇರ್ ಎಂಜಿನಿಯರುಗಳಂತೆ ಸಂಬಳ ಪಡೆಯುತ್ತಿರುವುದು, ಇಂತಹ ಹುದ್ದೆಗೆ ಆಯ್ಕೆಯಾಗಲು ನೆಟ್ (ಎನ್‌ಇಟಿ) ಪರೀಕ್ಷೆ ಪ್ರಾಥಮಿಕ ಅರ್ಹತೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ.
ಯುಜಿಸಿ-ಎನ್‌ಇಟಿ ಹಿಂದಿನಿಂದಲೂ ಒಂದು ಪ್ರತಿಷ್ಠಿತ ಪರೀಕ್ಷೆ. ಅದನ್ನು ತೇರ್ಗಡೆಯಾದವರೆಲ್ಲರಿಗೂ ಸರ್ಕಾರಿ ನೇಮಕಾತಿ ಖಾತ್ರಿಯಲ್ಲವಾದರೂ, ತೇರ್ಗಡೆಯಾಗುವುದೇ ಒಂದು ಹೆಮ್ಮೆಯ ಸಂಗತಿ. ಒಮ್ಮೆ ತೇರ್ಗಡೆಯಾದರೆ, ಅದು ಜೀವಮಾನದ ಅರ್ಹತೆ – ಅದಕ್ಕೆ ಎಕ್ಸ್‌ಪಯರಿ ಡೇಟೇ ಇಲ್ಲ; ಅವಕಾಶ ಕೂಡಿ ಬಂದಾಗ ಈ ಅರ್ಹತೆ ಬೆನ್ನಿಗೆ ನಿಲ್ಲುತ್ತದೆ. ಖಾಸಗಿ ಕಾಲೇಜುಗಳೂ ನೆಟ್ ತೇರ್ಗಡೆಯಾದ ಅಭ್ಯರ್ಥಿಗಳಿಗೇ ಮಣೆ ಹಾಕುತ್ತವೆ. ಅತ್ಯುನ್ನತ ಶ್ರೇಣಿಯಲ್ಲಿ ನೆಟ್ ತೇರ್ಗಡೆಯಾದವರು ಪಿಎಚ್.ಡಿ ಸಂಶೋಧನೆ ಕೈಗೊಳ್ಳುವುದಕ್ಕೆ ಸರ್ಕಾರದಿಂದ ಆಕರ್ಷಕ ಶಿಷ್ಯವೇತನ (ಜೆಆರ್‌ಎಫ್) ಪಡೆಯುವುದೂ ನೆಟ್‌ನ ಜನಪ್ರಿಯತೆಗೆ ಇನ್ನೊಂದು ಕಾರಣ.
ಈ ಪರೀಕ್ಷೆ ಕಷ್ಟವೆನ್ನುವವರಿಗೆ ಕಷ್ಟ, ಸುಲಭವೆನ್ನುವವರಿಗೆ ಸುಲಭ. ಈಜು ಬಲ್ಲವರಿಗೆ ಅದೊಂದು ಆಟ, ನಿಂತು ನೋಡುವವರಿಗೆ ಆತಂಕ ಇದ್ದಹಾಗೆ. ಆದರೆ, ಇದು ಎಂ.ಎ., ಎಂಎಸ್ಸಿ ಪರೀಕ್ಷೆಗಳನ್ನು ಬರೆದಂತೆ ಅಲ್ಲ. ರಾಷ್ಟ್ರೀಯ ಅರ್ಹತಾ ಪರೀಕ್ಷೆ ತೇರ್ಗಡೆಯಾದವರು ದೇಶದ ಯಾವ ಭಾಗದಲ್ಲಾದರೂ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಬಹುದು. ಹೀಗಾಗಿ, ಸ್ನಾತಕೋತ್ತರ ಹಂತದ ಪಠ್ಯಕ್ರಮವೇ ಆದರೂ, ಪರೀಕ್ಷಾ ವಿಧಾನ ಹಾಗೂ ಪ್ರಶ್ನೆಗಳ ಸಂಕೀರ್ಣತೆಯಿಂದಾಗಿ ಗಟ್ಟಿ ಮನಸ್ಸು, ಅಪಾರ ಬದ್ಧತೆ ಹಾಗೂ ಶ್ರದ್ಧೆಯ ತಯಾರಿಯನ್ನು ಅಪೇಕ್ಷಿಸುತ್ತದೆ.
ತಯಾರಿ ಹೇಗೆ?
ಎನ್‌ಇಟಿ ಪರೀಕ್ಷೆಗೆ ಕನಿಷ್ಠ ಆರು ತಿಂಗಳ ಗಂಭೀರ ತಯಾರಿ ಬೇಕು. ಮಾನಕ ವಿಷಯಗಳ ಪಠ್ಯಕ್ರಮ ugcnet online.in ಜಾಲತಾಣದಲ್ಲಿಯೂ, ವಿಜ್ಞಾನ ವಿಷಯಗಳ ಪಠ್ಯಕ್ರಮ https://csirhrdg.res.in ಜಾಲತಾಣದಲ್ಲಿಯೂ ಲಭ್ಯ. ನೆಟ್ ಸಾಮಾನ್ಯ ಪತ್ರಿಕೆಯ ಪಠ್ಯಕ್ರಮದಲ್ಲಿ 10 ಅಧ್ಯಾಯಗಳಿವೆ. ಬೋಧನೆ ಹಾಗೂ ಸಂಶೋಧನೆಯ ಕೌಶಲ, ವಿಷಯ ಗ್ರಹಿಕೆ, ಸಂವಹನ, ಪ್ರಾಥಮಿಕ ಗಣಿತ, ತಾರ್ಕಿಕ ಚಿಂತನೆ, ದತ್ತಾಂಶ ವಿಶ್ಲೇಷಣೆ, ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ), ಅಭಿವೃದ್ಧಿ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ- ಹೀಗೆ ವೈವಿಧ್ಯಮಯ ವಿಷಯಗಳಿರುತ್ತವೆ. ಐಚ್ಛಿಕ ವಿಷಯದ ಪಠ್ಯಕ್ರಮ ಸ್ನಾತಕೋತ್ತರ ಕೋರ್ಸಿಗೆ ಸಮಾನವಾಗಿದ್ದು, ಸಮಗ್ರ ಹಾಗೂ ಆಳವಾದ ಅಧ್ಯಯನ ಅಗತ್ಯ.
ಒಂದು ವೇಳಾಪಟ್ಟಿಯನ್ನು ಹಾಕಿಕೊಂಡು ದಿನದಲ್ಲಿ ಕನಿಷ್ಠ 3-4 ಗಂಟೆಯನ್ನಾದರೂ ಅಭ್ಯಾಸಕ್ಕೆ ಮೀಸಲಿಡುವುದು ಒಳ್ಳೆಯದು. ಪರೀಕ್ಷೆ ವಸ್ತುನಿಷ್ಠ ಮಾದರಿಯದ್ದಾಗಿರುವುದರಿಂದ, ಸಣ್ಣಸಣ್ಣ ವಿವರಗಳಿಗೂ ಹೆಚ್ಚಿನ ಗಮನ ಕೊಡುವುದು ಮುಖ್ಯ. ಓದುತ್ತಲೇ ನೋಟ್ಸ್ ಮಾಡಿಕೊಳ್ಳುವುದು ಕೊನೆಯ ಕ್ಷಣದ ರಿವಿಶನ್‌ಗೆ ಬಹಳ ಅಗತ್ಯ. ಈಗ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಪುಸ್ತಕಗಳು ಲಭ್ಯ. ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಕೊಂಡು ಗೊಂದಲಕ್ಕೆ ಬೀಳುವುದಕ್ಕಿಂತ, ಉತ್ತಮ ಗುಣಮಟ್ಟದ ಒಂದೋ ಎರಡೋ ಪುಸ್ತಕ ಸಾಕು.
ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಅತ್ಯಂತ ಮುಖ್ಯ. ಕನಿಷ್ಠ 7-8 ವರ್ಷಗಳ ಹಿಂದಿನ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಕಲಿತರೆ, ಪರೀಕ್ಷೆ ತೇರ್ಗಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆಯಾ ಪರೀಕ್ಷೆಗಳ ವೆಬ್‌ಸೈಟಿನಿಂದ ಅನೇಕ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ, ಈ ಪರೀಕ್ಷೆಗೆ ಪ್ರತ್ಯೇಕ ಕೋಚಿಂಗ್ ಅನಿವಾರ್ಯವೇನೂ ಅಲ್ಲ. ಪರಿಶ್ರಮಪಟ್ಟು ಸ್ವಂತ ಅಧ್ಯಯನ ಮಾಡಿದರೆ ಸಾಕು. ಈಗಂತೂ ಇಂಟರ್‌ನೆಟ್‌ನಲ್ಲಿ ಧಾರಾಳ ಅಭ್ಯಾಸ ಸಾಮಗ್ರಿಗಳು, ಮಾಕ್ ಟೆಸ್ಟ್‌ಗಳು ದೊರೆಯುತ್ತವೆ. ತೀರಾ ಅರ್ಥವಾಗದ ವಿಷಯಗಳಿದ್ದರೆ ಸ್ನೇಹಿತರ ಅಥವಾ ಅಧ್ಯಾಪಕರ ಬಳಿ ಪಾಠ ಹೇಳಿಸಿಕೊಳ್ಳಬಹುದು.
“ಮೊದಲನೇ ಪತ್ರಿಕೆ ಜನರಲ್. ಅಷ್ಟಾಗಿ ಓದಿಕೊಳ್ಳದಿದ್ದರೂ ಪರವಾಗಿಲ್ಲ; ಐಚ್ಛಿಕ ಪತ್ರಿಕೆಗೆ ಚೆನ್ನಾಗಿ ತಯಾರಾಗೋಣ’ ಎಂದು ಭಾವಿಸುವವರು ಹೆಚ್ಚು. ಇಲ್ಲೇ ಅವರು ಎಡವುವುದು. ಮೊದಲನೇ ಪತ್ರಿಕೆ ಅಂದುಕೊಂಡಷ್ಟು ಸುಲಭವಲ್ಲ. ಅಂದಾಜಿನ ಮೇಲೆ ಉತ್ತರ ಗುರುತು ಮಾಡುವುದೂ ಸರಿಯಲ್ಲ. ಮೊದಲನೆಯದರಲ್ಲಿ ತೇರ್ಗಡೆಯಾಗದೆ ಎರಡನೆಯದರಲ್ಲಿ ಉನ್ನತ ಶ್ರೇಣಿ ಪಡೆದೂ ಪ್ರಯೋಜನವಿಲ್ಲ. ಆದ್ದರಿಂದ, ಎರಡೂ ಪತ್ರಿಕೆಗಳಿಗೆ ಸಮಾನ ಆದ್ಯತೆ ನೀಡುವವರೇ ಜಾಣರು.
ಪ್ರತಿ ಅಧ್ಯಾಯದಿಂದಲೂ ಸಮಾನ ಸಂಖ್ಯೆಯ ಪ್ರಶ್ನೆಗಳನ್ನು ಕೇಳಿರುತ್ತಾರೆ. ಸಾಮಾನ್ಯವಾಗಿ ಜನರಲ್ ಪತ್ರಿಕೆಯ ಮೆಥಮೆಟಿಕಲ್ ರೀಸನಿಂಗ್ ಆಪ್ಟಿಟ್ಯೂಡ್, ಲಾಜಿಕಲ್ ರೀಸನಿಂಗ್ ಡೇಟಾ ಇಂಟರ್‌ಪ್ರಿಟೇಶನ್ ಅಧ್ಯಾಯಗಳನ್ನು ನಿರ್ಲಕ್ಷಿಸುವವರು ಹೆಚ್ಚು. ಅದರಲ್ಲೂ ಕಲಾ ವಿಭಾಗದ ಅಭ್ಯರ್ಥಿಗಳಿಗೆ ಇವೆಲ್ಲ ಕೊಂಚ ಕಷ್ಟ ಅನಿಸಿ, ಬಿಟ್ಟುಬಿಡುವುದೂ ಇದೆ. ಹಾಗೆ, ಮಾಡುವುದು ತಪ್ಪು. ಅನೇಕ ಅಭ್ಯರ್ಥಿಗಳು ಮೊದಲ ಪತ್ರಿಕೆಯಲ್ಲಿ ಫೇಲ್ ಆಗುವುದಕ್ಕೆ ಇದೇ ಕಾರಣ.ಒಂದಷ್ಟು ಮಾದರಿ ಪ್ರಶ್ನೆಗಳನ್ನು ಅಭ್ಯಾಸ ಮಾಡಿದರೆ ಇವೆಲ್ಲ ಅಂಥ ಕಠಿಣ ವಿಷಯಗಳೇನಲ್ಲ. ಎರಡನೇ ಪತ್ರಿಕೆಯಲ್ಲಂತೂ ಹೊಂದಿಸಿ ಬರೆಯುವ, ಕಾಲಾನುಕ್ರಮದಲ್ಲಿ ಜೋಡಿಸುವ, ಪ್ರತಿಪಾದನೆ-ತರ್ಕ ಮಾದರಿಯ ಪ್ರಶ್ನೆಗಳೇ ಹೆಚ್ಚಾಗಿರುವುದರಿಂದ, ಸಮಯ ಬೇಗನೆ ಕಳೆದುಹೋಗುತ್ತದೆ. ಕೊಂಚ ಏಕಾಗ್ರತೆ ತಪ್ಪಿದರೂ ಚೆನ್ನಾಗಿ ಗೊತ್ತಿರುವ ಪ್ರಶ್ನೆಗೇ ತಪ್ಪು ಉತ್ತರ ಬರೆಯುವ ಸಾಧ್ಯತೆ ಹೆಚ್ಚು. ಹಳೆಯ ಪ್ರಶ್ನೆಪತ್ರಿಕೆಗಳನ್ನು ಹೆಚ್ಚುಹೆಚ್ಚು ಬಿಡಿಸಿದಷ್ಟೂ ಈ ಸಮಸ್ಯೆ ಮನವರಿಕೆ ಆಗುವುದರಿಂದ ಸಂಭವನೀಯ ತಪ್ಪುಗಳಿಂದ ಬಚಾವಾಗಬಹುದು.
ಏನಿದು ಜೆಆರ್‌ಎಫ್?
ನೆಟ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಎಂಬ ಬಂಪರ್ ಬಹುಮಾನವಿದೆ. ಪಿಎಚ್.ಡಿ ಮಾಡಲು ಯುಜಿಸಿ ಪ್ರತಿ ತಿಂಗಳೂ ಕೈತುಂಬ ಫೆಲೋಶಿಪ್ ನೀಡುತ್ತದೆ. ಮೊದಲ ಎರಡು ವರ್ಷ ಪ್ರತೀ ತಿಂಗಳೂ ರೂ. 31,000, ಮುಂದಿನ ಮೂರು ವರ್ಷ (ಎಸ್‌ಆರ್‌ಎಫ್) ಪ್ರತಿ ತಿಂಗಳೂ ರೂ. 35,000 ಲಭ್ಯ. ಬೇರೆ ಭತ್ಯೆಗಳೂ ಇವೆ. ಜೆಆರ್‌ಎಫ್ ಬಯಸುವವರು ನೆಟ್ ಅರ್ಜಿ ತುಂಬುವಾಗ ಮಾತ್ರ ‘ಅಸಿಸ್ಟೆಂಟ್ ಪೊ›ಫೆಸರ್ ಜೆಆರ್‌ಎಫ್’ ಎಂಬ ಅಂಕಣವನ್ನು ಕಡ್ಡಾಯ ತುಂಬಬೇಕು. ಇದನ್ನು ಪಡೆಯಲು ವಯಸ್ಸು 30 ದಾಟಿರಬಾರದು. ಸ್ನಾತಕೋತ್ತರ ಪದವೀಧರರು ಅಥವಾ ಅದರ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಪರೀಕ್ಷೆ ಬರೆಯಬಹುದು.
ಹೇಗಿರುತ್ತದೆ ನೆಟ್?
ಈಗ ಎನ್‌ಇಟಿ ಪರೀಕ್ಷೆ ಆನ್‌ಲೈನ್ ಮಾದರಿಯಲ್ಲಿ ನಡೆಯುತ್ತದೆ. ಕಲೆ/ವಾಣಿಜ್ಯ/ಸಾಹಿತ್ಯ ವಿಷಯಗಳಲ್ಲಿ ಎರಡು ಪ್ರತ್ಯೇಕ ಪತ್ರಿಕೆಗಳಿದ್ದು, ಒಟ್ಟು ಮೂರು ಗಂಟೆಯ ಅವಧಿ ಇರುತ್ತದೆ. ಪ್ರಶ್ನೆಗಳು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯವು. ಮೊದಲನೇ ಪತ್ರಿಕೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೂ ಸಾಮಾನ್ಯ. ಇದರಲ್ಲಿ ಎರಡು ಅಂಕಗಳ 50 ಪ್ರಶ್ನೆಗಳಿದ್ದು ಅವು ಬೋಧನೆ ಹಾಗೂ ಸಂಶೋಧನ ಕೌಶಲಗಳಿಗೆ ಸಂಬಂಧಪಟ್ಟವು. ಎರಡನೇ ಪತ್ರಿಕೆ, ಆಯಾ ಅಭ್ಯರ್ಥಿಗಳ ಸ್ನಾತಕೋತ್ತರ ಪದವಿಯಲ್ಲಿ ಓದಿದ ವಿಷಯಗಳಿಗೆ ಸಂಬಂಧಪಟ್ಟವು; ಇದರಲ್ಲಿ ತಲಾ ಎರಡು ಅಂಕಗಳ 100 ಪ್ರಶ್ನೆಗಳಿರುತ್ತವೆ. ಎರಡೂ ಪರೀಕ್ಷೆಗಳ ನಡುವೆ ಬ್ರೇಕ್ ಇಲ್ಲ. ಪ್ರಶ್ನೆಗಳ ನಡುವೆ ಆಯ್ಕೆ ಇಲ್ಲ, ನೆಗೆಟಿವ್ ಮಾರ್ಕಿಂಗ್ ಕೂಡ ಇಲ್ಲ.
ವಿಜ್ಞಾನ ವಿಷಯಗಳಲ್ಲಿ ಮೂರು ಗಂಟೆ ಅವಧಿಯ ಒಂದೇ ಪರೀಕ್ಷೆ. ಎರಡು ಪತ್ರಿಕೆಗಳಿಲ್ಲ. 200 ಅಂಕಗಳ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯ ಪತ್ರಿಕೆ. ಇದರಲ್ಲಿ ಮೂರು ವಿಭಾಗಗಳಿರುತ್ತವೆ: ಮೊದಲನೇ ವಿಭಾಗ (30 ಅಂಕ) ಎಲ್ಲರಿಗೂ ಸಾಮಾನ್ಯ; ಎರಡನೇ ವಿಭಾಗ (70 ಅಂಕ) ಅವರವರ ಎಂಎಸ್ಸಿ ವಿಷಯಗಳಿಗೆ ಸಂಬಂಧಿಸಿದ್ದು; ಮೂರನೇ ವಿಭಾಗ (100 ಅಂಕ) ಅದೇ ವಿಷಯ, ಕೊಂಚ ಹೆಚ್ಚಿನ ಸಂಕೀರ್ಣತೆ ಹೊಂದಿರುವ ಪ್ರಶ್ನೆಗಳಿರುತ್ತವೆ. ಇಲ್ಲಿ ಪ್ರಶ್ನೆಗಳ ಆಯ್ಕೆಯೂ ಇರುತ್ತದೆ, ನೆಗೆಟಿವ್ ಮಾರ್ಕಿಂಗ್ ಕೂಡ ಇರುತ್ತದೆ.
ಯುಜಿಸಿ-ಎನ್‌ಇಟಿ ಈ ಬಾರಿ ಡಿಸೆಂಬರ್ 2ರಿಂದ 6ರವರೆಗೆ, ಸಿಎಸ್‌ಐಆರ್-ಎನ್‌ಇಟಿ ಡಿಸೆಂಬರ್ 15ಕ್ಕೆ ನಡೆಯಲಿದೆ. ಎರಡೂ ಪರೀಕ್ಷೆಗಳ ಫಲಿತಾಂಶ ಡಿಸೆಂಬರ್ 31ಕ್ಕೆ ಲಭ್ಯವಾಗಲಿದೆ. ಯುಜಿಸಿ-ಎನ್‌ಇಟಿ ಎರಡು ಪಾಳಿಗಳಲ್ಲಿ ನಡೆಯಲಿದೆ. ಆನ್‌ಲೈನ್ ಪರೀಕ್ಷೆಗಾಗಿ ದೇಶದ ವಿವಿಧ ಭಾಗಗಳಲ್ಲಿ ಕಂಪ್ಯೂಟರ್ ಸೌಲಭ್ಯವಿರುವ ಕೇಂದ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಲ್ ಟಿಕೆಟ್‌ನಲ್ಲಿ ಪರೀಕ್ಷೆಯ ಸ್ಥಳ, ದಿನಾಂಕ ಹಾಗೂ ಸಮಯ ನಮೂದಿಸುತ್ತಾರೆ.
ಕೆ-ಸೆಟ್ ಬರೆಯಿರಿ
ನೆಟ್ ಪರೀಕ್ಷೆಗೆ ಸಮಾನವಾಗಿ ರಾಜ್ಯಮಟ್ಟಗಳಲ್ಲಿ ಸೆಟ್ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಯ ವಿಧಾನ, ಮಾದರಿ, ಪಠ್ಯಕ್ರಮ ಎಲ್ಲವೂ ಯುಜಿಸಿ-ನೆಟ್‌ನಂತೆಯೇ ಇರುತ್ತದೆ. ಆದರೆ ಇದನ್ನು ತೇರ್ಗಡೆಯಾದವರು ನಮ್ಮ ರಾಜ್ಯದ ಕಾಲೇಜುಗಳಲ್ಲಿ ಮಾತ್ರ ಉದ್ಯೋಗ ಪಡೆಯಬಹುದು, ಬೇರೆ ರಾಜ್ಯಗಳಲ್ಲಿ ಅರ್ಜಿ ಸಲ್ಲಿಸುವಂತಿಲ್ಲ.
ಸಂಪೂರ್ಣ ವಿವರಗಳಿಗೆ ಜಾಲತಾಣ- http://kset.uni-mysore.ac.in.
ಯಾರು ನಡೆಸುತ್ತಾರೆ?
ಹಿಂದೆ ಎನ್‌ಇಟಿ ಪರೀಕ್ಷೆಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ನಡೆಸುತ್ತಿತ್ತು. ಈಗ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸ್ಥಾಪಿತವಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸುತ್ತದೆ. ಮಾನಕ ವಿಷಯಗಳ (ಕಲೆ, ವಾಣಿಜ್ಯ, ಸಾಹಿತ್ಯ) ಎನ್‌ಇಟಿ ಪರೀಕ್ಷೆಗೆ ಯುಜಿಸಿ ಪ್ರಾಧಿಕಾರವಾದರೆ, ವಿಜ್ಞಾನ ವಿಷಯಗಳ ಎನ್‌ಇಟಿ ಪರೀಕ್ಷೆಗೆ ಯುಜಿಸಿ-ಸಿಎಸ್‌ಐಆರ್ ಪ್ರಾಧಿಕಾರವಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) ನಮ್ಮ ದೇಶದ ಅತಿದೊಡ್ಡ ಸಂಶೋಧನ ಸಂಸ್ಥೆಗಳಲ್ಲೊಂದು. ಎರಡೂ ಪರೀಕ್ಷೆಗಳಿಗೆ ಬೇರೆಬೇರೆ ಸಮಯದಲ್ಲಿ ಪ್ರತ್ಯೇಕ ಅಧಿಸೂಚನೆ, ಪ್ರಕ್ರಿಯೆ ನಡೆಯುತ್ತದೆ.
ಮಾನಕ ವಿಭಾಗದಲ್ಲಿ ಸುಮಾರು 100 ವಿಷಯಗಳಲ್ಲಿ ಎನ್‌ಇಟಿ ಪರೀಕ್ಷೆ ತೆಗೆದುಕೊಳ್ಳಬಹುದು. ವಿಜ್ಞಾನ ವಿಷಯಗಳಲ್ಲಿ ರಾಸಾಯನಿಕ ವಿಜ್ಞಾನ, ಭೂ ವಿಜ್ಞಾನ, ಜೀವ ವಿಜ್ಞಾನ, ಗಣಿತಶಾಸ್ತ್ರೀಯ ವಿಜ್ಞಾನ ಹಾಗೂ ಭೌತಶಾಸ್ತ್ರೀಯ ವಿಜ್ಞಾನಗಳೆಂಬ ಐದು ಭಾಗಗಳಿವೆ. ತಾವು ಎಂಎಸ್ಸಿ ಓದಿದ ವಿಷಯದ ಎನ್‌ಇಟಿಯನ್ನು ಸಂಬಂಧಿತ ಭಾಗದಲ್ಲಿ ಬರೆಯಬಹುದು. ಹಿಂದೆ ಇಂಜಿನಿಯರಿಂಗ್ ವಿಷಯಗಳಿಗೂ ಎನ್‌ಇಟಿ ನಡೆಯುತ್ತಿತ್ತು, ಈಗ ಇಲ್ಲ.
ಸಿಬಂತಿ ಪದ್ಮನಾಭ. ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.