ನಿಜ ಹೇಳು, ನಾನು ನೆನಪಾಗ್ತಿಲ್ವ?
Team Udayavani, Nov 28, 2017, 2:17 PM IST
ಈ ಬದುಕಿನಿಂದ ಹೋಗಲೇಬೇಕು ಎಂದು ನಿರ್ಧರಿಸಿದ್ದರೆ ಮರುಮಾತಿಲ್ಲದೆ ಹೋಗಿಬಿಡು ಅನ್ನುತ್ತೇನೆ ನಿಜ. ಆದರೆ, ಅಷ್ಟುದೂರ ಹೋದಮೇಲೆ, ಈ ಹುಡುಗನ ಮೇಲೆ ಕರುಣೆ ಹುಟ್ಟಿ ನೀನು ವಾಪಸ್ ಬಂದುಬಿಡುವಂತಾಗಲಿ ಎಂದೂ ಪ್ರಾರ್ಥಿಸುತ್ತೇನೆ…
ಸ್ವಪ್ನಸುಂದರಿಯೇ, ಒಲವಿನ ಹೊನಣಿಯೇ… ನನ್ನೆದೆಯ ತೋಟದಲ್ಲಿ ಅರಳಿ ನಿಂತಿರುವ ಹೂವಿನಂತೆ ನೀನು. ಆ ದಿನವನ್ನು ನಾನು ಮರೆಯುವುದಾದರೂ ಹೇಗೆ? ಅವತ್ತು ಸಮುದ್ರ ತೀರಕ್ಕೆ ಹೋದಾಗ ನೀನು ಹಿಂದೆಂದೂ ನದಿಯನ್ನು, ನೀರನ್ನು ಕಾಣದ ಪುಟ್ಟ ಹುಡುಗಿಯ ಹಾಗೆ ತೆರೆಗಳನ್ನು ಹಿಡಿಯುತ್ತಿದ್ದೆ. ತೀರದ ಮರಳ ರಾಶಿಯ ಮೇಲೆ ದಿಲ್ ಚಿತ್ರದೊಳಗೆ ನನ್ನ-ನಿನ್ನ ಹೆಸರನ್ನು ಕೂಡಿಸಿ ಬರೆದು, ನಮ್ಮ ಪ್ರೀತಿಯ ಸವಿ ನೆನಪುಗಳನ್ನು ಬರೆಯಲು ಈ ಮರಳ ಹಾಳೆಯೂ ಸಾಲದೆಂದು ಚಿಕ್ಕ ಮಗುವಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ.
ಹೌದು ಗೆಳತೀ. ನನ್ನ ಪಾಲಿಗೆ ನಿನ್ನ ಆಗಮನ, ನಿರ್ಗಮನಗಳು ಆಕಸ್ಮಿಕ ಮತ್ತು ವಿಧಿಲಿಖೀತ. ಆದರೆ ನಿನ್ನ ನೆನಪುಗಳು ಶಾಶ್ವತ. ನಿನ್ನೊಲವಿನ ಕುರಿತಾಗಿಯೇ ನೂರೆಂಟು ಕನಸುಗಳು, ನೂರಾರು ನೆನಪುಗಳು ಅಚ್ಚಳಿಯದ ಹಾಗೇ ಛಾಪು ಮೂಡಿವೆ ನನ್ನ ಮನಸ್ಸೆಂಬ ಹೊತ್ತಿಗೆಯಲಿ. ಈ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಏನು ಎಂದು ವಿವರಿಸಲು ಅಸಂಖ್ಯಾತ ಉತ್ತರಗಳು ಸಿಗುತ್ತವೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಅದು ಕೇವಲ ನೀನು.! ಸಾವಿರ ಕನಸುಗಳು ಸಾಲಾಗಿ ಬಂದರೂ ಮಾಸಿ ಹೋಗದು ನಿನ್ನ ಪ್ರೀತಿಯ ಸವಿ ನೆನಪು.
ಅಂದು ನೀನಿದ್ದೆ, ಇಂದು ನೀನಿಲ್ಲ. ನಿನ್ನನ್ನು ಕಾರಣವಿಲ್ಲದೇ ಪ್ರೀತಿಸಿದವನು ನಾನು. ಕಾರಣವಿಲ್ಲದೇ ದೂರವಾದವಳು ನೀನು. ಕತ್ತಲೆ ತುಂಬಿದ ಬದುಕಿನಲ್ಲಿ ತಾರೆಗಳು ಮಿಂಚುವ ಬೆಳಕಲ್ಲಿ ಒಂಟಿಯಾಗಿ ಸಾಗುತ್ತಿದೆ ನನ್ನ ಪ್ರೇಮ ಪಯಣ!! ಈಗ ನೆನಪುಗಳು ನೆಲಸಮವಾಗಿ, ಕನಸುಗಳು ಕೊಚ್ಚಿ ಹೋಗಿವೆ.
ನನ್ನಿಂದ ಬೇರಾಗಿ, ದೂರಾಗಿ ಬಹುದೂರ ಸಾಗಿರುವೆ. ನಾನು ನೆನಪಾಗ್ತಿಲ್ವ? ನನ್ನ ಪ್ರೀತಿಯೂ ನೆನಪಾಗ್ತಿಲ್ವ? ನನ್ನ ಮೇಲಿದ್ದ ಆ ಮುಗ್ಧ ಪ್ರೀತಿ ಎಲ್ಲಿ ಹೋಗಿದೆ? ನನ್ನ ಬದುಕಿಂದ ದೂರ ಹೋಗಲೇಬೇಕೆಂಬ ಗಟ್ಟಿ ನಿಲುವು ನಿನ್ನದಾಗಿದ್ದರೆ, ಹೋಗಿಬಿಡು ಚಿಂತೆಯಿಲ್ಲ. ಆದರೆ ನಾನು ಮಾಡಿದ ತಪ್ಪುಗಳನ್ನು ಎತ್ತಿ ತೋರಿಸು. ಒಪ್ಪಿಕೊಂಡು ತಲೆಬಾಗುತ್ತೇನೆ. ಮತ್ತೆ ಯಾವತ್ತೂ ತಪ್ಪು ಮಾಡಲಾರೆನೆಂಬ ಮಾತು ಕೊಡುವೆ. ನಿನ್ನ ಜೀವನದಲ್ಲಿ ನನ್ನ ಅಸ್ತಿತ್ವವಾದರೂ ಏನಿತ್ತು ಹೇಳು? ಇದ್ದಕ್ಕಿದ್ದಂತೆ ಸಿನಿಮಾ ಮುಗಿದ ಮೇಲೆ ಎದ್ದು ಹೋಗೋ ಪ್ರೇಕ್ಷಕನಂತೆ ಆಕಳಿಸುತ್ತಾ ನನ್ನ ಬಾಳಿನಿಂದ ನಡೆದು ಹೋದದ್ದಾದರೂ ಯಾಕೆ? ಕಾರಣ ಹೇಳುವೆಯಾ?
ಈ ಸ್ವಚ್ಛ ಮನಸ್ಸಿನ, ಹುಚ್ಚು ಹುಡುಗನ ಪ್ರಾಮಾಣಿಕ ಪ್ರೀತಿಗೆ ಮನಸೋತಾದರೂ ನೀನು ಮರಳಿ ಬಂದೇ ಬರುತ್ತೀಯಾ ಎಂಬ ಚೂರೇ ಚೂರು ಹುಸಿನಂಬಿಕೆಯಿಂದ ನೀನು ಬರೋ ದಾರಿಯಲ್ಲೇ ಚಾತಕ ಪಕ್ಷಿಯಂತೆ ಕಾಯುತ್ತಿರುವೆ. ನಿನ್ನೊಲವಿನ ಬಲೆಯೊಳಗೆ ಬಂಧಿಯಾಗುವಾಸೆ. ನಿನ್ನ ಪ್ರೀತಿಯ ಮಳೆಯಲ್ಲಿ ಸ್ವಾತಿಮುತ್ತಾಗುವಾಸೆ. ದೊಡ್ಡಮನಸ್ಸು ಮಾಡಿ ಬಂದುಬಿಡು ನನ್ನ ಒಡಲಿಗೆ, ಪ್ರೇಮದ ಕಡಲಿಗೆ. ಸೇರಿಬಿಡು ಜೀವದ ಸೆಲೆಗೆ.
ರಂಗನಾಥ ಎಸ್. ಗುಡಿಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.