ಗುಡ್ಡ ಹತ್ತೋ ಹುಡ್ಗರು
ಹುಡುಗ ಪಾದಕ್ಕೆ ಬೆಟ್ಟ ಒಲಿಯಿತು...
Team Udayavani, Aug 20, 2019, 5:00 AM IST
ಬಾದಾಮಿ ಬೆಟ್ಟಗಳು ಹತ್ತುವುದೆಂದರೆ ಈ ಹುಡುಗರಿಗೆ ಕಡ್ಲೆಪುರಿ ತಿಂದಂತೆ. ಶನಿವಾರ, ಭಾನುವಾರ ಬಂದರೆ ಸಾಕು ಹೆತ್ತವರ ಜೊತೆ ಬಂದು ಬೆಟ್ಟ ಹತ್ತಿಹೋಗುತ್ತಾರೆ. ಅಂದಹಾಗೇ, ಇವರಿಗೆ ಈ ಬೆಟ್ಟಗಳು ಒಲಿದಿದ್ದಾದರೂ ಹೇಗೆ?
ಬಾದಾಮಿ ಬೆಟ್ಟಗಳ ಸುತ್ತ ತಿರುಗಾಡುವುದಕ್ಕೂ ಭಯ ಆಗುತ್ತೆ. ಆ ಪಾಟಿ ದಪ್ಪ, ಎತ್ತರ. ರಂಗನಾಥ ದೇವಾಲಯದ ಹತ್ತಿರವಿರುವ 25ರಿಂದ 30 ಅಡಿ ಎತ್ತರದ ಗಣೇಶ, ದ್ಯಾವಮ್ಮ, ವಾತಾಪಿ ಪ್ರದೇಶದಲ್ಲಿರುವ ಬೆಟ್ಟಗಳು ಹುಡುಗರಿಗೆ ಪ್ರಿಯ. ಪುಟ್ಟ ಪುಟ್ಟ ಮಕ್ಕಳೂ ಇಲ್ಲಿನ ಬೆಟ್ಟಗಳ ಮೈ ಮೇಲೆ ಹೆಜ್ಜೆ ಹಾಕಿ ಪಟ ಪಟನೆ ಸಲೀಸಾಗಿ ಹತ್ತುವುದನ್ನು ನೋಡಿದರೆ ಸಖೇದಾಶ್ಚರ್ಯ ಆದೀತು. ಬಹುತೇಕ ವಿದೇಶಿಗರು ಮಾತ್ರ ಮಾಡುವ ರಾಕ್ ಕ್ಲೈಬಿಂಗ್ ಸಾಹಸವನ್ನು ಇಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳೂ ಮಾಡುತ್ತಿದ್ದಾರೆ.
“ಕೆಳಗ್ ನಿಂತು, ಮ್ಯಾಗ್ ನೋಡಿದ್ರ ಮೊದಲ ಬಾಳ್ ಹೆದರಕಿ ಆಗಿತ್ರಿ. ಅಣ್ಣಾಗೋಳು, ತಲಿಗೆ ಹೆಲ್ಮೆಟ್, ಸೊಂಟಕ್ಕ ಹಗ್ಗ ಎಲ್ಲಾ ಕಟ್ಟಿ ಮ್ಯಾಗ್ ಹತ್ತು ಎಂದು ಹೇಳಿದ್ರು. ಮೊದಲಿಗಿ ಏರಾಕ್ ಆಗ್ಲಿಲ್ಲ. ಆಮ್ಯಾಲ್ ಪ್ರಯತ್ನ ಮಾಡಿ, ಏರದೇವಿ. ಬಾಳ್ ಖುಷಿ ಆಯಿತು. ನಾವು, ಗುಡ್ಡ ಹತ್ತೂದು ಟಿವಿಯೊಳಗ ನೋಡಿದ್ವಿ. ಈಗ ನಾವೇ ಹತ್ತಿದ್ದು ಖುಷಿ ಆಗೇತ್ರಿ’ ಅಂದ ಪಕ್ಕದಲ್ಲಿ ನಿಂತಿದ್ದ ಚೋಳ ಗುಡ್ಡದ ನವಚೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಬಸಮ್ಮ ಸಂಗಳದ. ಹೀಗೆ ಹೇಳುತ್ತಿದ್ದರೆ ಅವನ ಖುಷಿ ಮತ್ತಷ್ಟು ಹೆಚ್ಚಾಯಿತು.
ಶನಿವಾರ, ಭಾನುವಾರ ಈ ಕಡೆ ಬಂದರೆ, ಬಾದಾಮಿ ತಾಲೂಕಿನ ನಂದಿಕೇಶ್ವರ, ಚೋಳಚಗುಡ್ಡ, ಬಾದಾಮಿಯ ಪಟ್ಟಣ ಹಾಗೂ ಹುನಗುಂದ ತಾಲೂಕಿನ ಸಿದ್ದನಕೊಳ್ಳ ಹೀಗೆ ಹಲವು ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳ 5ರಿಂದ 7ನೇ ತರಗತಿ ಮಕ್ಕಳು ಮೇಲುಬಸದಿಯನ್ನು ಸರಾಗವಾಗಿ ಹತ್ತಿ ಇಳಿಯುವುದನ್ನು ನೋಡಬಹುದು. ಅಗಸ್ತ್ಯತೀರ್ಥದ ಸುತ್ತಮುತ್ತಲಿನ ಸಣ್ಣ ಬೆಟ್ಟಗಳು ಇವರಿಗೆ ಲೆಕ್ಕವಿಲ್ಲ. 60 ಅಡಿಗಿಂತ ಹೆಚ್ಚು ಬೆಟ್ಟಗಳ ತಂಟೆಗೆ ಹೋಗುವುದಿಲ್ಲ. ಸುಮಾರು 80ಕ್ಕೂ ಹೆಚ್ಚು ಮಕ್ಕಳಿಗೆ ವಾರಾಂತ್ಯದಲ್ಲಿ ಇದೇ ಕೆಲಸ.
ಹೇಗೆ ಕಲಿತರು?
ರಾಕ್‌ಕ್ಲೈಂಬಿಂಗ್ ಅನ್ನೋದು ವಿದೇಶಿಗರ ಹವ್ಯಾಸಗಳಲ್ಲಿ ಒಂದು. ನಮ್ಮಲ್ಲಿ ದೊಡ್ಡವರು ಮಾತ್ರ ಈ ಸಾಹಸಕ್ಕೆ ಮುಂದಾಗುತ್ತಿದ್ದರು.
ಆದರೆ, ಈ ಪುಟಾಣಿಗಳ ಪಾದಕ್ಕೆ ಬೆಟ್ಟ ಒಲಿದದ್ದಾದರೂ ಹೇಗೆ ಅಂತ ನೋಡಿದರೆ, ಇದರಲ್ಲಿ ಬದಾಮಿಯ ಚಾಲುಕ್ಯ ರಾಕ್ ಕ್ಲೈಬಿಂಗ್ ಅಸೋಶಿಯೇಷನ್ ಕಾಣುತ್ತದೆ. ಗಣೇಶ ವಡ್ಡರ, ಮಹಾಂತೇಶ ವಡ್ಡರ, ಸಂತೋಷ ಕಾಟಾಪುರ, ಮಾರುತಿ ವಡ್ಡರ, ವಿಜಯ, ಹನಮಂತ, ರಾಜು ಹಾಗೂ ಭಾರತಿ ಪಾಟೀಲ ಅವರ ಮಾರ್ಗದರ್ಶನದಲ್ಲಿ ಹುಡುಗರಿಗೆ ಒಳ್ಳೆ ತರಬೇತಿ ನಿಡಿದ್ದಾರೆ.
“ಬೆಟ್ಟ ಹತ್ತುವುದರಿಂದ ಮಕ್ಕಳಲ್ಲಿನ ಭಯ ಹೋಗಲಾಡಿಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಜೊತೆಗೆ ಯಾವುದೇ ಸಂದರ್ಭದಲ್ಲಿ ಅವರು ಇಕ್ಕಟ್ಟಿನಲ್ಲಿ ಸಿಲುಕಿದ್ದರೆ ಧೈರ್ಯದಿಂದ ಹೊರ ಬರಲು ನೆರವಾಗುತ್ತದೆ. ಇಂಥ ರಾಕ್ ಕ್ಲೈಂಬಿಂಗ್ ತರಬೇತಿಗೆ ಸರ್ಕಾರಿ ಶಾಲೆಗಳ ಮಕ್ಕಳನ್ನೇ ಆಯ್ಕೆ ಮಾಡಿಕೊಂಡು, ಅವರ ಪಾಲಕರು, ಆಯಾ ಶಾಲೆಗಳ ಶಿಕ್ಷಕರ ಒಪ್ಪಿಗೆ ಪಡೆದು, ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ, ಮಕ್ಕಳಿಗೆ ಗುಡ್ಡ ಹತ್ತುವುದನ್ನು ಉಚಿತವಾಗಿ ಕಲಿಸಿಕೊಡುತ್ತಿದ್ದೇವೆ’ ಎನ್ನುತ್ತಾರೆ ಗಣೇಶ್.
ಇದರಿಂದ ಮಕ್ಕಳ ಮಾನಸಿಕ, ಬೌದ್ಧಿಕ ಬೆಳವಣಿಗೆ ಕೂಡ ಆಗುತ್ತದೆ. ಸಾಮಾನ್ಯ ಕ್ರೀಡೆಗಳಿಂದ ದೇಹದ ಒಂದೊಂದು ಅಂಗದ ಬೆಳವಣಿಗೆಗೆ ನೆರವಾದರೆ, ಈ ಸಾಹಸ ಕ್ರೀಡೆಯಿಂದ ಇಡೀ ದೇಹ ಉಲ್ಲಾಸಮಯವಾಗಿರುತ್ತದೆ. ಜೊತೆಗೆ ಮಾನಸಿಕ ಧೈರ್ಯವೂ ಬರುತ್ತದೆ ಎಂಬುದು ಅವರ ಮಾತು.
ಮೊನ್ನೆ ತಂದೆ-ತಾಯಿ, ಶಾಲೆಯ ಶಿಕ್ಷಕರೊಂದಿಗೆ ಬಂದಿದ್ದ ಮಕ್ಕಳು, ಪಟ ಪಟನೇ ಗುಡ್ಡ ಹತ್ತಿದ್ದಂತೆ, ಕೆಳಗಿಳಿದ ಬಳಿಕ ಉಸಿರು ಬಿಡದೇ ಪಟ ಪಟನೇ ತಮ್ಮ ಅನುಭವ ಹೇಳಿಕೊಳ್ಳುತ್ತಿದ್ದರು. ಚೋಳಚಗಡ್ಡದ ನವಚೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಸವರಾಜ ಬಿಸನಳ್ಳಿ, ಅಮರೇಶ ತಳಗಡೆ, ಅಭಿಷೇಕ ತಳಗಡೆ, ಸಂದೇಶ ಈಳಗೇರ, ಅನುಷಾ ಯರಗೇರ, ಬಸಮ್ಮ ಸಂಗಳದ ಹಾಗೂ ನಂದಿಕೇಶ್ವರದ ಮಹಾಕೂಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಸಾಗರ ಗೌಡರ, ಸಹನಾ ಪಾಟೀಲ ಮುಂತಾದವರು, ರಾಕ್ ಕ್ಲೈಬಿಂಗ್ ತೊಡಗಿಕೊಂಡಿದ್ದರು.
ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.