ನೂರೊಂದು ನೆನಪು… ಎದೆಯಾಳದಿಂದ…
ಟೀನ್ ಅಡ್ಡಾ : ಹೃದಯರಾಗ
Team Udayavani, Apr 30, 2019, 6:00 AM IST
ಹೇ ಗೌಡ್ತಿ,ಬಿಟ್ಯಾಕೆ ಹೋದೆ ನೀ ನನ್ನ?
ನನ್ನ ಮೇಲೆ ನಿಂಗ್ಯಾಕೆ ಅಷ್ಟು ಸಿಟ್ಟು ಅಂತ ತಿಳಿದುಕೊಳ್ಳುವ ಮುನ್ನವೇ ಇಬ್ಬರೂ ದೂರಾಗಿಬಿಟ್ಟೆವು. ಮತ್ತೆ ನೀನು ಎಲ್ಲಿಗೆ ಹೋದೆ, ಯಾವ ಕಾಲೇಜು ಸೇರಿದೆ ಅಂತ ನನಗೆ ಗೊತ್ತಾಗಲೇ ಇಲ್ಲ.
ಹೇ ಗೌಡ್ತಿ,
ನಾನು ಯಾರಂತ ಗೊತ್ತಾಯ್ತಾ? ನೆನಪಾಗ್ತಾ ಇಲ್ವಾ? ಹಾಗಾದ್ರೆ ಇನ್ನೊಮ್ಮೆ ಪರಿಚಯ ಮಾಡಿಕೊಳ್ತೀನಿ ಕೇಳು…
ನಾನು ನಿನ್ನನ್ನು ನೋಡಿದ್ದು 2001ರಲ್ಲಿ. ಆಗ ನಾವಿಬ್ರೂ ಒಂದನೇ ಕ್ಲಾಸ್‌ನಲ್ಲಿದ್ದೆವು. ನೀನಂದ್ರೆ ನಂಗೆ ಒಂಥರಾ ಇಷ್ಟ. ದೊಡ್ಡ ದೊಡ್ಡ ಕಣ್ಣು, ಕಿವಿಯನ್ನು ಮುಚ್ಚುವಷ್ಟಿದ್ದ ಕೂದಲು, ಚಂದ ಕಾಣಲಿ ಅಂತ ಅಮ್ಮ ಹಾಕಿದ್ದ ಹೇರ್‌ಕ್ಲಿಪ್‌ನಲ್ಲಿ ನೀನೆಷ್ಟು ಮುದ್ದಾಗಿ ಕಾಣ್ತಿದ್ದೆ ಗೊತ್ತಾ? ಮೊದಲ ದಿನ ನಿನ್ನನ್ನು ನೋಡಿದಾಗ, “ಇವಳೇ ನನ್ನ ಬೆಸ್ಟ್‌ಫ್ರೆಂಡ್ ಆಗ್ಬೇಕು’ ಅಂತ ಆಸೆಪಟ್ಟಿದ್ದೆ. ಅದಕ್ಕಾಗೇ ನಿನ್ನನ್ನ ಬೇಕಂತ ಅಣಕಿಸುವುದು, ಕೆಣಕುವುದು, ಹೊಡೆಯುವುದೆಲ್ಲ ಮಾಡ್ತಿದ್ದೆ. ನೀನೇನು ಕಡಿಮೆ ಇದ್ಯಾ? ಕಟ್ಟಿಗೆ ತುಂಡು ಹಿಡಿದು ಅಟ್ಟಿಸಿಕೊಂಡು ಬರ್ತಿದ್ದೆ. ನಿನ್ನ ಕೈಗೆ ಸಿಗದೆ ತಪ್ಪಿಸಿಕೊಂಡಾಗ ನಿನ್ನ ಮುಖ ಸಣ್ಣದಾಗ್ತಿತ್ತು. ಆಗ ನಂಗೆ ಜೋರು ನಗು!
ನಮ್ಮಿಬ್ಬರ ಸ್ನೇಹ ಶುರುವಾಗಿದ್ದು ಹೀಗೆ. ಆಮೇಲೆ ಗೊತ್ತಾಯ್ತು, ನೀನು ನಮ್ಮೂರಿನ ಗೌಡನ ಮಗಳೆಂಬ ವಿಷಯ. ಗೌಡನ ಮಗಳಾದರೇನು, ಸಾಹುಕಾರನ ಮಗಳಾದರೇನು? ಅವಳು ನನ್ನ ಹುಡುಗಿ ಎಂಬ ಹುಚ್ಚು ಆಸೆಯೊಂದು ಅದಾಗಲೇ ಹುಟ್ಟಿ ಕೊಂಡಿತ್ತು. ಮುಂದಿನ ವರ್ಷ ನೀನು ಪೇಟೆ ಶಾಲೆಗೆ ಸೇರಿದೆ. ಒಂದು ದಿನವೂ ಚಕ್ಕರ್ ಹೊಡೆಯದೆ ಶಾಲೆಗೆ ಬರುತ್ತಿದ್ದವನಿಗೆ, ಶಾಲೆ ಸಪ್ಪೆ ಸಪ್ಪೆ ಅನ್ನಿಸಿದ್ದು ಆಗಲೇ. ಮುಂದೆ ಒಂದೆರಡು ವರ್ಷ ನೀನು ಕಾಣಿಸಲೇ ಇಲ್ಲ. ಇನ್ನೇನು ಮರೆತೇಬಿಟ್ಟೆ ನಿನ್ನನ್ನು ಅನ್ನುವಾಗ, ಮತ್ತೆ ತರಗತಿಯಲ್ಲಿ ಪ್ರತ್ಯಕ್ಷಳಾದೆ! “ಇನ್ಮೇಲೆ ಪೇಟೆ ಶಾಲೆಗೆ ಹೋಗಲ್ಲ. ಇಲ್ಲಿಗೇ ಬರ್ತೀನಿ’ ಅಂದಾಗ ನನಗೆ ಖುಷಿಯೋ, ಖುಷಿ!
ಆಮೇಲೆ ನಾವಿಬ್ಬರೂ ಒಟ್ಟೊಟ್ಟಿಗೆ ಸೈಕಲ್ ಕಲಿತೆವು, ಕುಂಟೋಬಿಲ್ಲೆ, ಲಗೋರಿ, ಕ್ರಿಕೆಟ್, ಖೋಖೋ ಆಡಿದೆವು. “ಈ ಹುಡುಗಿಗಾಗಿ ಜೀವ ಬೇಕಾದ್ರೂ ಕೊಡ್ತೀನಿ’ ಅನ್ನುವಷ್ಟರ ಮಟ್ಟಿಗೆ ನಾನು ನಿನ್ನನ್ನು ಹಚ್ಚಿಕೊಂಡು ಬಿಟ್ಟೆ. ಒಂದು ದಿನ ನಾನು ಕನ್ನಡಕ ಹಾಕಿಕೊಂಡು ಶಾಲೆಗೆ ಬಂದಾಗ, ನೀನು ಗೆಳತಿಯರಲ್ಲಿ “ಅರೆ, ನಮ್ಮ ಹುಡುಗ ಹೀರೋ ಥರ ಕಾಣ್ತಿದ್ದಾನೆ ನೋಡು’ ಅಂತ ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೆ. ಅವತ್ತು ಖುಷಿಯಲ್ಲಿ ಫ್ರೆಂಡ್ಸ್‌ಗೆಲ್ಲ ಚಾಕೋಲೇಟ್ ಕೊಡಿಸಿದ್ದೆ ಗೊತ್ತಾ?
ಆದರೆ ಒಂದು ದಿನ ನೀನು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದೆ. ಅಷ್ಟೊತ್ತಿಗೆ ನಮ್ಮ ಶಾಲಾ ದಿನಗಳೂ ಮುಗಿಯುತ್ತಾ ಬಂದಿದ್ದವು. ನನ್ನ ಮೇಲೆ ನಿಂಗ್ಯಾಕೆ ಅಷ್ಟು ಸಿಟ್ಟು ಅಂತ ತಿಳಿದುಕೊಳ್ಳುವ ಮುನ್ನವೇ ಇಬ್ಬರೂ ದೂರಾಗಿಬಿಟ್ಟೆವು. ಮತ್ತೆ ನೀನು ಎಲ್ಲಿಗೆ ಹೋದೆ, ಯಾವ ಕಾಲೇಜು ಸೇರಿದೆ ಅಂತ ನನಗೆ ಗೊತ್ತಾಗಲೇ ಇಲ್ಲ.
ಇದೆಲ್ಲಾ ನಡೆದು ಹತ್ತು ವರ್ಷಗಳೇ ಕಳೆದಿದ್ದರೂ ನನಗೆ ನಿನ್ನನ್ನು ಮರೆಯಲು ಆಗುತ್ತಲೇ ಇಲ್ಲ. ಹೇ, ಗೌಡ್ತಿ, ಈ ಪತ್ರ ಓದಿಯಾದ್ರೂ ನನ್ನನ್ನೊಮ್ಮೆ ನೆನಪಿಸಿಕೋ.
ಇಂತಿ ನಿನ್ನ ಬಾಲ್ಯದ ಗೆಳೆಯ.
ದಸ್ತಗೀರ ನದಾಫ್, ಯಳಸಂಗಿ
ಎಲ್ಲಿ ಮರೆಯಾದೆ ಗೆಳೆಯಾ ಏಕೆ ದೂರಾದೆ
ನನ್ನ ಮನಸ್ಸು ಹಾಳಾಗಿದ್ದೇ ನಿನ್ನನ್ನು ಕಂಡ ಕ್ಷಣದಿಂದ. ಈಗಂತೂ ಎಲ್ಲಿ ನೋಡಿದರೂ ನನಗೆ ನೀನೇ ಕಾಣುತ್ತಿದ್ದೀಯ. ಮನದ ಕನ್ನಡಿಯ ತುಂಬಾ ನಿನ್ನದೇ ಪ್ರತಿಬಿಂಬ. ಕುಡಿಮೀಸೆಯ ಕಿರುನಗೆ, ಎಡಭಾಗದ ಮೀಸೆಯಡಿಯ ಕಪ್ಪುಮಚ್ಚೆ ನನ್ನನ್ನು ಬಹುವಾಗಿ ಸೆಳೆದಿದೆ. ನಿನ್ನ ಜಪದ ಹೊರತಾಗಿ ಊಟ, ತಿಂಡಿ, ನಿದ್ದೆ ಯಾವುದೂ ಈ ದೇಹಕ್ಕೆ ಬೇಕಾಗಿಲ್ಲ. ಏನೆಂದು ಹೆಸರಿಡಡಲಿ ಗೆಳೆಯ ಈ ಕನವರಿಕೆಗೆ?
ಇಂದ್ಯಾಕೋ ಮನಸ್ಸು ಮತ್ತೂ ಭಾರವಾಗಿದೆ. ಈ ಸಮುದ್ರ ಕಿನಾರೆಯ ಕಲ್ಲು ಮಂಚದ ಮೇಲೆ ಕುಳಿತಾಗ ಬೀಸುವ ತಂಗಾಳಿಯೂ ನಿನ್ನ ನೆನಪನ್ನು ಹೊತ್ತು ತರುತ್ತಿದೆ. ಸಮುದ್ರದ ತೆರೆಗಳು ಕಾಲಿಗೆ ಸೋಕಿದರೆ ಸಾಕು, ನಿನ್ನ ಸ್ಪರ್ಶದ ಅನುಭವವಾಗಿ ಮನಸ್ಸು ಮುಳ್ಳಿಂದ ಚುಚ್ಚಿಸಿಕೊಂಡಂತೆ ಚಡಪಡಿಸುತ್ತಿದೆ.
ನನಗೆ ಸರಿಯಾಗಿ ನೆನಪಿದೆ ಗೆಳೆಯ. ಅಮ್ಮನ ಬಳಿ, ಗೆಳತಿ ಸರಿತಾಳ ಮನೆಗೆ ಹೋಗಿ ಬರ್ತೀನಿ ಅಂತ ಸುಳ್ಳುಹೇಳಿ ನಿನ್ನನ್ನು ನೋಡಲು ಈ ಕಿನಾರೆಗೆ ಓಡಿ ಬಂದಿದ್ದೆ. ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಕಿರುನಗುತ್ತಾ ನಿಧಾನವಾಗಿ ನನ್ನ ಕೈ ಸ್ಪರ್ಶಿಸಿದಾಗ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಗಿ ನಾಚಿಕೆಯಿಂದ ಕಣ್ಮುಚ್ಚಿದ್ದೆ. ನಾಚಿ ನೀರಾದ ನನ್ನನ್ನು ಬಿಗಿಯಾಗಿ ಆಲಂಗಿಸಿ “ಐ ಲವ್ ಯು ಕಣೇ ಹುಡುಗಿ. ಏಳುಜನ್ಮಕ್ಕೂ ನೀನೇ ನನ್ನ ಬಾಳಸಂಗಾತಿಯಾಗಿ ಸಿಗಬೇಕು’ ಅಂತ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ದೆ. ಆದಷ್ಟು ಬೇಗ ನಾವು ಮದುವೆಯಾಗೋಣ ಅಂತ ಭರವಸೆಯನ್ನೂ ನೀಡಿದವನು, ಹೀಗ್ಯಾಕೆ ಮೋಸ ಮಾಡಿದೆ?
ಅಂದು ಹಾಗೆ ಮನಸ್ಸಿಗೆ, ದೇಹಕ್ಕೆ ಕಚಗುಳಿಯಿಟ್ಟು ಹೋದ ನೀನು ಎಲ್ಲಿ ಮಾಯವಾದೆ? ಮನಮಂದಿರದಿ ಕನಸಿನರಮನೆ ಕಟ್ಟಿ ನಿನ್ನನ್ನಲ್ಲಿ ಪ್ರತಿಷ್ಠಾಪಿಸಿ, ಕಾಯುತ್ತಾ ಕುಳಿತಿದ್ದೇನೆ. ಕನಸಿನ ಸೌಧ ಕುಸಿಯುವ ಮುನ್ನ ಒಮ್ಮೆಯಾದರೂ ಕಣ್ಮುಂದೆ ಬಾರೋ.
— ಗೀತಾ ಎಸ್. ಭಟ್
ಕ್ಯಾ ಸೆ ಕ್ಯಾ ಹೋಗಯಾ?
“ತಪ್ಪು ಮಾಡಿಬಿಟ್ಟೆನಲ್ಲೋ ಹುಡುಗಾ… ತಿಳಿದೂ ತಿಳಿದೂ ಹಾಗೆ ಮಾಡಿದೆನಲ್ಲ? ಈಗ ನೋಡು, “ಎಲ್ಲಿ ನನ್ನ ನಲ್ಲ?’ ಅಂತ ಪರದಾಡುವಂತಾಗಿದೆ. ಅಲ್ಲಿಯ ತನಕ ಹಾಲುಜೇನಿನಂತೆ ಇದ್ವಿ. ಆಮೇಲ್ಯಾಕೋ ಎಣ್ಣೆ ಸೀಗೆಕಾಯಿ ಥರ ಆದ್ವಿ? ಮಾತಿಲ್ಲ ಕಥೆಯಿಲ್ಲ…
ಇದರಲ್ಲಿ ನಿನ್ನ ತಪ್ಪೇನೂ ಇಲ್ಲ ಬಿಡು. ಎಲ್ಲಾ ನನ್ನ ಕಡೆಯಿಂದಲೇ ಆದ ಎಡವಟ್ಟು. ನನಗು ನಿನಗೂ ಕಣ್ಣಲ್ಲೇ ಪರಿಚಯವಾದದ್ದು. ಆ ಪರಿಚಯ ಅದೆಷ್ಟು ಬೇಗ ಮನದಾಳದವರೆಗೆ ಇಳಿದು ಬಿಟ್ಟಿತಲ್ಲ? ಈ ಸ್ನೇಹ, ಪ್ರೀತಿಯಾಗಿ ಕೊನೆಯವರೆಗೂ ಜೊತೆಗಿರುತ್ತೆ ಅಂತ ಕನಸು ಕಂಡಿದ್ದೆ.
ಆದರೆ ಹೀಗೇಕಾಯ್ತು?
ಒಂದು ಸ್ಮೈಲ್ ಎಮೋಜಿಯೂ ಇಲ್ಲದೆ ಇನ್‌ಬಾಕ್ಸ್ ಖಾಲಿ ಬಿದ್ದಿದೆ. ಆಗಲೇ ಒಂದು ವಾರ ಆಯ್ತು; ನಾನು ನಾನಾಗಿಲ್ಲ. ಅವತ್ತು ಪಾರ್ಕ್‌ನಲ್ಲಿ ದಿಢೀರ್ ಅಂತ ಮಳೆ ಬಂದಾಗ ನನ್ನ ಕರ್ಚೀಫ್ ತಗೊಂಡು ನಿನ್ನ ತಲೆ ಕವರ್ ಮಾಡಿಕೊಂಡೆ ನೆನಪಿದೆಯಾ? ಆಗ ನಾನು ಕೊಡಬಾರದಿತ್ತು.
ಅದೇ ಇದಕ್ಕೆಲ್ಲ ಕಾರಣ! ಸ್ನೇಹಿತರು ಕರ್ಚೀಫ್ ಗಿಫ್ಟ್ ಕೊಟ್ಟರೆ, ಸ್ನೇಹ ಮುರಿದು ಹೋಗುತ್ತೆ ಅಂತ ಎಲ್ಲೋ ಓದಿದ್ದೆ. ನೋಡು ಅದೀಗ ನಿಜ ಆಗೋಯ್ತು! ಮೊದಲು ಅದನ್ನು ಬಿಸಾಕು. ನನಗೆ ನಿನ್ನ ಗೆಳೆತನ ಬೇಕು. ಪ್ಲೀಸ್ ಮಾತಾಡು….’ ಮೌನ ಮುರಿಯಲು ಅವಳೇ ಉದ್ದದ ಮೆಸೇಜ್ ಕಳಿಸಿದಳು.
ಎರಡೇ ನಿಮಿಷದಲ್ಲಿ ಅವನಿಂದ ಉತ್ತರ ಬಂತು:
“ನನ್ನ ಬಂಗಾರಿ, ಅದೇನು ಟೆಲಿಪತಿ ಕಣೆ? ಕ್ಯಾ ಸೆ ಕ್ಯಾ ಹೋಗಯಾ, ದೇಖ್‌ತೆ ದೇಖ್‌ತೆ ಅನ್ನುವ ಹಾಗಾಯ್ತಲ್ಲ? ವಾರದಿಂದ ಊರಲ್ಲಿ ಇರಲಿಲ್ಲ. ಹೊರಡುವಾಗ ಜೇಬಿನಲ್ಲಿ ನೀ ಕೊಟ್ಟ ಕರ್ಚೀಫ್ ಮತ್ತು ಮೊಬೈಲ್ ಇಟ್ಟುಕೊಂಡಿದ್ದೆ. ಆದರೆ, ಆಮೇಲೆ ಹುಡುಕಿದರೆ ಮೊಬೈಲ್ ಮಾಯ! ಮೊಬೈಲ್ ಕಳಕೊಂಡ ದುಃಖದಲ್ಲೇ ಒಂದು ವಾರ ಕಳೆದೆ. ಈಗಷ್ಟೇ ರೂಮಿಗೆ ಬಂದಿದ್ದು.
ನೀನು ಕರ್ಚೀಫ್ ಕೊಟ್ಟ ದಿನವೇ ನಾವಿಬ್ಬರೂ ಕೊನೆಯದಾಗಿ ಮಾತಾಡಿದ್ದು. ಅದೇನೋ ಹೇಳ್ತಾರಲ್ಲ, ಫ್ರೆಂಡ್ಸ್‌ಗಳು ಕರ್ಚೀಫ್ ಗಿಫ್ಟ್ಕೊ ಟ್ಟುಕೊಳ್ಳಬಾರದು ಅಂತ. ಅದೇ ನಮ್ಮನ್ನು ಒಂದು ವಾರ ದೂರ ಮಾಡಿತೋ ಏನೋ ಅನ್ನಿಸಿ, ಅದನ್ನು ನಿನಗೆ ವಾಪಸ್ ಮಾಡೋಕೆ ನಿರ್ಧರಿಸಿದ ಕೂಡಲೇ ಶೆಲ್ಫ್ ನಲ್ಲಿ ಪುಸ್ತಕದ ನಡುವೆ ಛಾರ್ಜಿಗೆ ಇಟ್ಟಿದ್ದ ಮೊಬೈಲು ಕಾಣಿಸಿತು. ಹೋದ ಜೀವ ವಾಪಸ್ ಬಂತು. ಸಂಜೆ ಪಾರ್ಕ್‌ಗೆ ಬರ್ತೀನಿ, ಸಿಗ್ತೀಯಲ್ಲ?’ ಈ ಮೆಸೇಜ್ ನೋಡಿ, ಕಂದಿದ್ದ ಅವಳ ಮೊಗ ಸಾವಿರ ವೋಲ್ಟ್ ಬಲ್ಬ್ ನಂತೆ ಬೆಳಗಿತು.
— ಕೆ.ವಿ.ರಾಜಲಕ್ಷ್ಮಿ
ನೋ ಎಂದು ಮಾತ್ರ ಹೇಳಲೇಬೇಡ…
ಮುಂದೆ ನನ್ನದೇ ಕ್ಯಾಟರಿಂಗ್ ವ್ಯವಹಾರ ಶುರು ಮಾಡಬೇಕೆಂದು ನಿರ್ಧರಿಸಿದ್ದೇನೆ. ನೀನು ಸುಮ್ಮನೆ ಜೊತೆಗಿದ್ದರೆ ಸಾಕು. ಚಂದಗೆ ಬದುಕಲಿಕ್ಕೆ ಅದೊಂದು ಧೈರ್ಯ. ಈಗ ಪ್ರೀತಿ ಹೇಳಿಕೊಳ್ಳದಿದ್ದರೆ ಮುಂದೆ ನೀನು ಸಿಗದಿದ್ದರೆ ಕಷ್ಟ ಎನ್ನುವ ಭಯ ಕಾಡಲಾರಂಭಿಸಿದೆ.
ಅಡುಗೆ ಮನೆಯ ಹುಡುಗಿಗೆ,
ಹೆಚ್ಚು ಕಡಿಮೆ, ವಾರದಲ್ಲಿ ಮೂರ್‍ನಾಲ್ಕು ಬಾರಿ ಎದುರೆದುರಿಗೆ ಭೇಟಿಯಾಗುವ, ಒಂದೇ ಕಡೆಯಲ್ಲಿ ಕೆಲಸ ಮಾಡುವ, ಒಂದಷ್ಟು ಮಾತಿಗೂ ಸಿಗುವ ನಾನು, ನಿನಗೆ ಯಾಕೆ ಪತ್ರ ಬರೆಯುತ್ತಿದ್ದೇನೆ ಎಂದು ನಿನಗನ್ನಿಸಬಹುದು. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಿನ್ನನ್ನೇ ಮದುವೆಯಾಗಲು ಬಯಸಿದ್ದೇನೆ ಎಂಬ ವಿಚಾರವನ್ನು ನಿನ್ನೆದುರು ನಿಂತು ಹೇಳಲು ಅದೇನೋ ಒಂಥರಾ ಸಂಕೋಚ, ಭಯ. ಅದಕ್ಕಾಗಿಯೇ ಈ ಪತ್ರ ಬರೀತಿದ್ದೇನೆ.
ತಪ್ಪು ತಿಳಿಯದಿರು. ನಾನು ಈ ಹೊತ್ತಿಗೂ, ನೀನು ಇಷ್ಟು ದಿನ ನೋಡಿದ ಮಾಮೂಲಿ ಹುಡುಗನೇ. ನಿನ್ನ ಕಡೆಗಿನ ಒಲವೊಂದು ಮಾತ್ರ ಯಾಕೋ ವಿಪರೀತ ಎನ್ನಿಸುವಷ್ಟು ಬೆಳೆಯತೊಡಗಿದೆಯಷ್ಟೆ. ನಾನು ನಾರಾಯಣ ಭಟ್ಟರ ಕ್ಯಾಟರಿಂಗ್ ಸರ್ವಿಸ್‌ನಲ್ಲಿ ಅಡುಗೆ ಕೆಲಸಕ್ಕೆ ಸೇರಿ ಐದು ತಿಂಗಳಾಗಿದೆ. ನೀನು ಬಂದು ಇವತ್ತಿಗೆ ಸರಿಯಾಗಿ ಎರಡು ತಿಂಗಳಾಗಿದೆ ಎನ್ನುವುದು ನನಗೆ ಚೆನ್ನಾಗಿ ನೆನಪಿದೆ.
ಆವತ್ತು ನಾರಾಯಣ ಭಟ್ಟರು, “ನಾಳೆಯಿಂದ ಕೆಲಸಕ್ಕೆ ಇಬ್ಬರು ಹೆಂಗಸರು ಕೂಡ ಬರುತ್ತಾರೆ. ಸರಿಯಾಗಿ ನಡೆಸಿಕೊಳ್ಳಿ. ಬೇಡದ ಕೀಟಲೆ ಎಲ್ಲಾ ಮಾಡಬೇಡಿ’ ಅಂತ ಸ್ವಲ್ಪ ಗಂಭೀರವಾಗಿಯೇ ಹೇಳಿ ಹೋಗಿದ್ದರು. ಯಾರು ಬರುತ್ತಾರಪ್ಪಾ ಅಂತನ್ನೋ ಕುತೂಹಲ ಇದ್ದಿದ್ದು ನಿಜ. ಯಾರೋ ಹಳೆಯ ಹೆಂಗಸರು ಬರುತ್ತಾರೇನೋ ಅಂದುಕೊಂಡಿದ್ದೆ.
ಮರುದಿನ ಇದ್ದುದರಲ್ಲೇ ಸ್ವಲ್ಪ ಹೊಸದೆನ್ನಿಸುವ ಬಟ್ಟೆ ತೊಟ್ಟು ಎಂದಿನಂತೆ ಹತ್ತು ಗಂಟೆಗೆ ಕೆಲಸಕ್ಕೆ ಹಾಜರಾಗಿದ್ದೆ. ಅದಾಗಲೇ ನೀನು ಮತ್ತು ನಿನ್ನಮ್ಮ ಅಲ್ಲಿ ಅವತ್ತಿನ ಅಡುಗೆಗೆ ತೊಂಡೆಕಾಯಿ ಹೆಚ್ಚುತ್ತಾ ಕುಳಿತಿದ್ದಿರಿ. ಸಪೂರ ದೇಹದ, ಸಣ್ಣ ಜಡೆಯ, ನಸುಗಪ್ಪು ಬಣ್ಣದ, ತುಸು ಚಂದ ಎನ್ನಿಸುವಂಥ ಹುಡುಗಿ ನೀನು. ಪಕ್ಕದಲ್ಲಿದ್ದುದು ನಿನ್ನಮ್ಮ ಎನ್ನುವುದು ರೂಪಿನಲ್ಲೇ ಗೊತ್ತಾಗಿತ್ತು. ಆವತ್ತೆಲ್ಲಾ ಬಹಳ ವಿಶೇಷ ಅಂತೇನೂ ಅನ್ನಿಸಿರಲಿಲ್ಲ. ಹಾಗೆ ಸಣ್ಣ ಪರಿಚಯವಾಗಿ ನಮ್ಮ ನಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದೆವು.
ಬರುಬರುತ್ತಾ ನೀನು ಕೆಲಸ ಮಾಡುವ ಸ್ಪೀಡ್ ನೋಡಿ ನಾನು ನಿಜಕ್ಕೂ ದಂಗಾಗಿ ಬಿಡುತ್ತಿದ್ದೆ. ಅದಕ್ಕಿಂತ ಹೆಚ್ಚಾಗಿ, ನೀನು ಎಷ್ಟೆಲ್ಲಾ ಕೆಲಸ ಮಾಡಿದ ಮೇಲೂ ಹಣೆಯ ಮೇಲಿನ ಬೆವರನ್ನು ಸೀರೆಯ ಚುಂಗಿನಲ್ಲಿ ಒರೆಸಿಕೊಳ್ಳುತ್ತಾ, “ಮತ್ತೇನಾದ್ರೂ ಕೆಲಸ ಮಾಡಲಿಕ್ಕಿದೆಯಾ?’ ಎಂದು ಸಣ್ಣದೊಂದು ನಗುವನ್ನು ಮುಖದ ತುಂಬಾ ತುಂಬಿಕೊಂಡು ಕೇಳುತ್ತೀಯಲ್ಲಾ, ಆಗೆಲ್ಲಾ “ಭಪ್ಪರೇ ಹುಡುಗಿ’ ಅಂತನ್ನಿಸುತ್ತದೆ. ಸಾಮಾನ್ಯವಾಗಿ ಇಂತಹ ಕೆಲಸಗಳಲ್ಲಿ ನಾನೇ ಸ್ಪೀಡು ಅಂತನ್ನೋ ಸಣ್ಣ ಅಹಂ ನಂಗಿತ್ತು. ಆದರೆ ನೀನು ಚಕಾಚಕ್ ಅಂತ ಕೆಲಸ ಮಾಡುವ ರೀತಿ ನೋಡಿಯೇ ನಾನು ಶರಣಾಗಿದ್ದೀನಿ.
ನೀನು ಮಾಡುವ ಕೆಲಸ ಇಷ್ಟ ನಿಜ. ಅದಕ್ಕಿಂತ ಹೆಚ್ಚಾಗಿ ನೀನಿಷ್ಟ. ಹಾಗಾಗಿ ನಿನಗೆ ತುಂಬಾ ಕೆಲಸ ಖಂಡಿತಾ ಕೊಡಲ್ಲ. ನಿನ್ನನ್ನು ಚಂದಗೆ ನೋಡಿಕೊಳ್ಳುತ್ತೀನಿ. ನಿನ್ನ ಅಮ್ಮನನ್ನು ಕೂಡ. ನೀನು ಸುಸ್ತಾಗಿ ನಿಟ್ಟುಸಿರು ಬಿಡುವುದು ನನಗಿಷ್ಟವಿಲ್ಲ. ನಮಗೆ ಸ್ವಲ್ಪ ಜಮೀನು ಇದೆ. ಮುಂದೆ ನನ್ನದೇ ಕ್ಯಾಟರಿಂಗ್ ವ್ಯವಹಾರ ಮಾಡಬೇಕೆಂದುಕೊಂಡಿದ್ದೇನೆ. ನೀನು ಸುಮ್ಮನೆ ಜೊತೆಗಿದ್ದರೆ ಸಾಕು. ಚಂದಗೆ ಬದುಕಲಿಕ್ಕೆ ಅದೊಂದು ಧೈರ್ಯ. ಈಗ ಪ್ರೀತಿ ಹೇಳಿಕೊಳ್ಳದಿದ್ದರೆ ಮುಂದೆ ನೀನು ಸಿಗದಿದ್ದರೆ ಕಷ್ಟ ಎನ್ನುವ ಭಯ ಕಾಡಲಾರಂಬಿಸಿದೆ. ಅದಕ್ಕಾಗಿ ಇದೆಲ್ಲವನ್ನೂ ಬರೆದೆ.
ದಯವಿಟ್ಟು ಇಲ್ಲ ಎನ್ನಬೇಡ. ನೀನು ಹೂಂ ಎಂದು ಚಂದಗೆ ನಗುತ್ತೀಯ ಎನ್ನುವ ಅದಮ್ಯ ನಿರೀಕ್ಷೆಯೊಂದಿಗೆ ನಿನಗೆ ಈ ಪತ್ರ ಕೊಡುತ್ತಿದ್ದೇನೆ.
ಇಂತಿ ನಿನ್ನ ನಗುವಿಗಾಗಿ ಕಾಯುತ್ತಿರುವ
– ನರೇಂದ್ರ ಎಸ್ ಗಂಗೊಳ್ಳಿ
ನಿನಗೋಸ್ಕರ ಅಂತಾನೇ ಹಿಂದಿ ಕಲೀತಿದೀನಿ!
ಹಾಯ್ ಡಿಯರ್,
ಅವತ್ತು ಕ್ಯಾಂಟಿನ್‌ನಲ್ಲಿ ಕೂತಿದ್ದ ನಾನು, ಗೆಳೆಯ ಕರೆದೆನೆಂದು ಗಡಿಬಿಡಿಯಲ್ಲಿ ಎದ್ದು ನಡೆದುಬಿಟ್ಟೆ. ಮರುದಿನ ಸಂಜೆ ನೀನು ಬಂದು, ಆ ಜಾಗದಲ್ಲಿ ಕುಳಿತಿದ್ದ ನನ್ನನ್ನು ಕಂಡು “ತುಮಾರಾ ವಾಚ್ ಮಿಲ್‌ಗಯಾ’ ಎಂದು ನನ್ನ ಕೈಗಿಟ್ಟು ನಿನ್ನ ಪಾಡಿಗೆ ನೀನು ಹೊರಟುಬಿಟ್ಟೆ. ಅಲ್ಲ, ವಾಚ್ ಕೊಡುವ ನೆಪದಲ್ಲಿ ಬಂದು ನನ್ನ ಹೃದಯ ಕದ್ದೊಯ್ದಿದ್ದು ಸರಿಯಾ?
ನಿನಗೆ ಕನ್ನಡ ಬರುವುದಿಲ್ಲ. ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಆದರೆ, ನಿನಗೋಸ್ಕರ ಹಿಂದಿ ಕಲಿಯಲು ನಾ ಪಟ್ಟ ಕಷ್ಟವಿದೆಯಲ್ಲ, ಅದರ ಅರಿವಿಲ್ಲ ನಿನಗೆ. “30 ದಿನಗಳಲ್ಲಿ ಹಿಂದಿ ಕಲಿಯಿರಿ’ ಪುಸ್ತಕ ಖರೀದಿಸಿ, ಅದೆಷ್ಟು ಓದಿದರೂ ತುಮ್, ತುಮಾರ ಬಿಟ್ಟು ಹೆಚ್ಚೇನನ್ನೂ ಕಲಿಯಲಾಗಲಿಲ್ಲ. ಗೆಳೆೆಯರ ಸಲಹೆಯಂತೆ ಹಿಂದಿ ಸಿನಿಮಾಗಳನ್ನೂ ನೋಡಲು ಪ್ರಾರಂಭಿಸಿದೆ. ದಿನಕ್ಕೊಂದು ಸಿನಿಮಾದಂತೆ ತಿಂಗಳುಗಟ್ಟಲೆ ನೋಡಿದರೂ, ಹಿಂದಿ ಕಬ್ಬಿಣದ ಕಡಲೆಯಾಗಿಯೇ ಉಳಿದುಬಿಟ್ಟಿತು.
ಆದರೆ, ಕ್ಯಾಂಟೀನ್‌ನಲ್ಲಿ ಪ್ರತಿನಿತ್ಯ ನಿನ್ನನ್ನು ನೋಡುವುದನ್ನು ಮಾತ್ರ ತಪ್ಪಿಸಲಿಲ್ಲ. ಆ ನಿನ್ನ ಬಟ್ಟಲು ಕಣ್ಣುಗಳು, ಕೆಂದುಟಿಯ ಪಕ್ಕದಲಿ ಹೊಳೆಯುವ ಕೆನ್ನೆ, ಗಾಳಿಯ ನರ್ತನಕ್ಕೆ ತೂರಿ ಬರುತ್ತಿದ್ದ ಆ ನಿನ್ನ ಮುಂಗುರುಳನ್ನು ನೋಡುವುದೇ ಮಹದಾನಂದ. ಅದೆಷ್ಟೋ ಸಲ ಮಾತಾಡಬೇಕೆಂದು ಧೈರ್ಯ ಮಾಡಿ ನಿನ್ನ ಮುಂದೆ ಬಂದರೂ, ನಾಲಗೆ ಹೊರಳದೆ ಮೂಕನಾಗಿದ್ದಿದೆ.
ಬಹಳ ಕಷ್ಟಪಟ್ಟು, ಹಿಂದಿ ಮಾತಾಡುವ ಗೆಳೆಯನಿಂದ ಪ್ರತಿದಿನ ಹಿಂದಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದೇನೆ. ಈಗ ಅಲ್ಪಸ್ವಲ್ಪ ಮಾತಾಡಬಲ್ಲೆ ಎಂಬ ಧೈರ್ಯ ಮೂಡುತ್ತಿದೆ. ಆದರೆ, ನೀನೆಲ್ಲಿ ಮಾಯವಾಗಿಬಿಟ್ಟೆ? ಇತ್ತೀಚೆಗೆ ಕ್ಯಾಂಟೀನ್ ಬಳಿ ನೀನು ಕಾಣಿಸುತ್ತಿಲ್ಲ. ಜುಳುಜುಳು ನಾದದ ಹಿಂದಿ ಮಾತುಗಳು ಈಗ ಅಲ್ಲೆಲ್ಲೂ ಕೇಳಿಸುತ್ತಿಲ್ಲ. ಮನಸ್ಸು ಚಡಪಡಿಸುತ್ತಿದೆ. ಹೃದಯದ ಪಾಡು ಕೇಳಲೇಬೇಡ. ಹೇಳತೀರದು. ಅದೇ ಕ್ಯಾಂಟಿನ್ ಕುರ್ಚಿಯ ಮೇಲೆ ನಿನಗಾಗಿ ಕಾಯುತ್ತಿರುವೆ. ಪ್ಲೀಸ್, ಬಂದುಬಿಡು.
– ಸುನೀಲ ಗದೆಪ್ಪಗೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.