ಹಳ್ಳಿ ಮಕ್ಕಳ ಲೈಫು @ ಕೋವಿಡ್ ಟೈಂ .!
Team Udayavani, Dec 29, 2020, 7:52 PM IST
ಹೆಚ್ಚುಕಮ್ಮಿ ಈ ವರ್ಷವಿಡೀ ಕ್ಲಾಸ್‌ಗಳು ನಡೆಯಲೇ ಇಲ್ಲ. ಆನ್ಲçನ್ ಕ್ಲಾಸ್‌ಗಳು ನಡೆದರೂ ಅವು ಎಲ್ಲಾ ಮಕ್ಕಳನ್ನೂ ತಲುಪಲು ಸಾಧ್ಯವಾಗಲಿಲ್ಲ. ಇಷ್ಟು ವರ್ಷ ದಸರೆ, ಬೇಸಿಗೆಗಷ್ಟೇ ಸೀಮಿತ ಆಗಿದ್ದ ದೀರ್ಘ ರಜೆ ಈ ವರ್ಷದ ಉದ್ದಕ್ಕೂ ವಿಸ್ತರಣೆ ಆಗಿದ್ದು ಕೋವಿಡ್ ಕಾರಣದಿಂದ. ಇದು ಮಕ್ಕಳಲ್ಲಿ ಓದು-ಬರಹದಒತ್ತಡಕ್ಕೆ ಇತಿಶ್ರೀ ಇಟ್ಟು, ಬರೀ ಆಡುವ ಹಿಗ್ಗು-ಸುಗ್ಗಿ ತಂದಿಟ್ಟಿತು! ಆಟಕ್ಕೆ ನಿಂತ ಮಕ್ಕಳ ಹಠ, ತರ್ಲೆ, ತುಂಟತನ… ಇತ್ಯಾದಿಗೆ ಮನೆಮಂದಿಯಲ್ಲ ರೋಸಿದ್ದರು.
ಸಿಟಿಯ ಬಹುತೇಕ ಮಕ್ಕಳು ಆನ್ಲೈನ್ ಕ್ಲಾಸ್ ಜೊತೆಜೊತೆಗೆ ಆನ್/ಆಫ್ಲೈನ್ ಗೇಮ್, ವಿಡಿಯೋ ಗೇಮ್, ಟಿ.ವಿ ಗೀಳು.. ಇತ್ಯಾದಿಗೆ ಅಂಟಿಕೊಂಡರು! ಆದರೆ ಹಳ್ಳಿ ಮಕ್ಕಳು..? ಅವರ ಪ್ರಪಂಚವೇ ಬೇರೊಂದು ಬಗೆಯದ್ದು.ಹಳ್ಳಿಗಳಲ್ಲಿ ಇರುವ ಮಕ್ಕಳು ಕೊರೊನಾ ನೆಪದಲ್ಲಿ ಒದಗಿಬಂದ ರಜೆಯನ್ನು ಹೇಗೆ ಕಳೆಯುತ್ತಿದ್ದಾರೆ ಎಂದು ತಿಳಿಯುವ ಮನಸ್ಸಾಯಿತು. ಕುತೂಹಲ ದಿಂದಲೇ ಹತ್ತಾರು ಹಳ್ಳಿಗಳ ಪ್ರದಕ್ಷಿಣೆ ಹಾಕಿದೆ. ಈಗ ಕೊರೊನಾದ ಎರಡನೇ ಅಲೆಶುರುವಾಗಿದೆ ಎಂಬ ಸುದ್ದಿಯಿಂದ ತಲ್ಲಣಿಸಿರುವುದು ನಿಜ. ಈ ಸಂದರ್ಭದಲ್ಲಿಯೇ ಕೋವಿಡ್ ಸೋಂಕು ಭಾಗಶಃ ನಿಯಂತ್ರಣಕ್ಕೆ ಬಂದಿದೆ ಎಂಬುದೂ ನಿಜ. ಇದನ್ನುಖಚಿತಪಡಿಸಿಕೊಂಡೇ ಹೊಸ ವರ್ಷದ ಮೊದಲ ದಿನದಿಂದ ವಿದ್ಯಾಗಮ, ಪಿಯು ತರಗತಿ ಆರಂಭಿಸಲುಸರ್ಕಾರ ಚಿಂತನೆ ನಡೆಸಿದೆ. ಹಾಗಾಗಿ, ಮತ್ತೆ ಜ್ಞಾನದೇಗುಲಗಳಲ್ಲಿ ಮಕ್ಕಳ ಕಲರವ ಕೇಳಲಿದೆ. ಈ ಹೊತ್ತಲ್ಲಿ ಹಳ್ಳಿ ಮಕ್ಕಳು ಕೋವಿಡ್ ಟೈಂನಲ್ಲಿ ಕಳೆದ ದಿನಗಳು, ಆ ಮೂಲಕ ಕಲಿತ ಪಾಠದ ಹಿನ್ನೋಟದ ಮೆಲುಕು ಇಲ್ಲಿದೆ.
ಆಟದ ಬದಲು ಬದುಕಿನ ಪಾಠ :
ಕೋವಿಡ್ ಕೊಟ್ಟ ಓದಿನ ಬಿಡುವಿನಲ್ಲಿ ಹಳ್ಳಿ ಮಕ್ಕಳು ಸಮಯ ಕಳೆಯುತ್ತಿದ್ದುದು ಮತ್ತು ಕಲಿಯುತ್ತಿದ್ದುದನ್ನು ನೋಡಿ ಅಚ್ಚರಿ ಆಯ್ತು. ಇಷ್ಟು ದಿನ ಪಾರ್ಟ್ ಟೈಂ ಆಗಿದ್ದ ಹೊಲ-ಮನೆ ಕೆಲಸಗಳಲ್ಲಿ ಫುಲ್ ಟೈಂ ದುಡಿಯುತ್ತಿದ್ದರು!ಇದಕ್ಕಾಗಿ ಹೆಚ್ಚು ಹೊತ್ತು-ಒತ್ತು ಕೊಟ್ಟಿದ್ದರು! ಆ ಮೂಲಕ ಇವರು ಗೊತ್ತಿದ್ದೋ ಗೊತ್ತಿಲ್ಲದೋ ನೈಜ ಬದುಕಿನ ಪಾಠಕ್ಕೆ ಒಗ್ಗಿಕೊಂಡು ಬಿಟ್ಟಿದ್ದರು! ಪಠ್ಯ- ಪಾಠ ಬದಿಗಿರಿಸಿ ಜೀವನ ಪಾಠ, ಅನುಭವಕ್ಕೆ ಬಂದಾಗ ಸಿಟಿ ಮಕ್ಕಳಿಗಿಂತ ಹಳ್ಳಿ ಮಕ್ಕಳು ಕಲಿತಿದ್ದು ತುಸು ಹೆಚ್ಚೇ ಅನಿಸುತ್ತದೆ.
ಕೆಲಸದ ಬದಲಾವಣೆಯೇ ವಿಶ್ರಾಂತಿ’ ಎನ್ನುವ ಮಾತಿಗೆ ಅನ್ವರ್ಥದಂತಿತ್ತು ಇವರ ಬದುಕಿನ ದಿನಚರಿ!. ದನ ಕಾಯುತ್ತಲೋ, ಕುರಿ ಮೇಯಿಸುತ್ತಲೋ, ಹೊಲ- ಗದ್ದೆಗಳಲ್ಲಿ ಕೆಲಸ ಮಾಡುತ್ತಲೋ ತಮ್ಮ ವಾರಿಗೆಯವರೊಂದಿಗೆ ಆಟಕ್ಕಿಳಿದಿದ್ದು ಕಂಡಿತು. ರಜೆಯ ದಿನಗಳಲ್ಲಿ ಈ ಮಕ್ಕಳ ಕಣ್ಣಿಗೆ ಬಿದ್ದ ವಸ್ತುಗಳೆಲ್ಲ ಆಟಿಕೆಗಳಾಗಿ ಬಿಡುತ್ತಿದ್ದವು! ಇನ್ನು ಮರಕೋತಿ, ಚಿನ್ನಿ ದಾಂಡು, ಬುಗುರಿ.. ಇಂತಹ ಗ್ರಾಮೀಣ ಆಟಗಳಿಂದ ಮನೋರಂಜನೆ ಜೊತೆಗೆ ದೈಹಿಕ ವ್ಯಾಯಾಮ ಮಕ್ಕಳಿಗೆ ಸಿಕ್ಕ ಬೋನಸ್! ಮಕ್ಕಳ ಈ ಆಟಗಳನ್ನು ನೋಡಿದವರಿಗೆಲ್ಲ ಅವರವರ ಬಾಲ್ಯದ ದಿನಗಳು ನೆನಪಾಗಿ ರೋಮಾಂಚನವಾದದ್ದು ದಿಟ.
ಜೀವನ ಮೌಲ್ಯಗಳನ್ನು ಕಲಿತರು :
ಹೀಗೆ ಹಳ್ಳಿ ಮಕ್ಕಳು ಆಟ, ವಿರಾಮ, ಆರಾಮ ಜೊತೆಗೆ ತಮ್ಮ ಕುಲಕಸುಬು, ಕೃಷಿಯ ನಂಟನ್ನು ಗಾಢವಾಗಿ ಬೆಳೆಸಿಕೊಂಡಿದ್ದರು. ಹಸಿವು, ನಿದ್ದೆ, ನೀರಡಿಕೆಯ ಪರಿವೇ ಇಲ್ಲದೆ ಆಟ, ದುಡಿಮೆಯಲ್ಲಿ ತೊಡಗಿದ್ದರು. ಸುಂದರ ನಾಳೆಗಳಿಗಾಗಿ ತಮ್ಮ ಬುದ್ಧಿವಂತಿಕೆ, ಶಕ್ತಿಯ ಅನುಸಾರ ಹಣ ಗಳಿಕೆ ಮತ್ತು ಉಳಿತಾಯಗಳತ್ತ ಗಮನ ಹರಿಸಿ, ಪ್ರಾಪಂಚಿಕ ಮತ್ತು ವ್ಯವಹಾರಿಕ ಜ್ಞಾನ ಪಡೆದರು. ವಯಸ್ಸಿಗೂ ಮೀರಿದ ಜವಾಬ್ದಾರಿ ಯನ್ನು ನಿರಾಯಾಸವಾಗಿ ನಿಭಾಯಿಸುವ ಮೂಲಕ,ಆಡುವ ವಯಸ್ಸಲ್ಲಿ ಬದುಕು ಲೀಡ್ ಮಾಡುವ ಕಲೆ ಕರಗತ ಮಾಡಿಕೊಂಡಿ ದ್ದರು.
ಒಟ್ಟಿನಲ್ಲಿ ಇವರು ಈ ವರ್ಷವನ್ನು ವ್ಯರ್ಥ ವರ್ಷವಾಗಿ ಕಳೆಯದೇ, ಅರ್ಥ ವತ್ತಾದ ವರ್ಷವಾಗಿ ಕಳೆದಿದ್ದು ವಿಶೇಷ.ಕುಟುಂಬದ ಕಷ್ಟ ಕಾರ್ಪಣ್ಯ, ತಂದೆ-ತಾಯಿಗಳ ಶ್ರಮವನ್ನು ಹತ್ತಿರದಿಂದ ನೋಡಿದ್ದಲ್ಲದೆ, ಕೈಲಾದಷ್ಟು ಅವರಹೊರೆಯನ್ನು ಕಡಿಮೆ ಮಾಡಿದರು! ಈ ಕ್ರೆಡಿಟ್ ಕೋವಿಡ್ ಗೆ ಸಲ್ಲುತ್ತದೆ. ಸಮಯದ ಸದ್ವಿನಿಯೋಗ,ಆತ್ಮವಿಶ್ವಾಸ, ಕಷ್ಟಗಳನ್ನು ಸಹಿಸಿ ಹಿಮ್ಮೆಟ್ಟಿಸುವ ಕಲೆ, ಸ್ನೇಹ,ಸಹಬಾಳ್ವೆ, ತ್ಯಾಗ, ಮಮತೆ, ಕರುಣೆ, ಪ್ರೀತಿ.. ಮುಂತಾದಜೀವನ ಮೌಲ್ಯಗಳನ್ನು ಕಲಿತರು. ಒಟ್ಟಿನಲ್ಲಿ ಈ ಮಕ್ಕಳು ತಮ್ಮ ಓದಿನ ಉದ್ದಕ್ಕೂ ಪಡೆಯದ ಬದುಕಿನ ಪಾಠವನ್ನು ಕೋವಿಡ್ ಈ ಒಂದು ವರ್ಷದಲ್ಲಿ ಕಲಿಸಿಬಿಟ್ಟಿತು! ಹೀಗೆ, ಹೊಸದೊಂದು ಬಗೆಯ ಕಲಿಕೆಗೆ ಕಾರಣವಾದ ಕೋವಿಡ್ ಗೆ ಒಂದು ಥ್ಯಾಂಕ್ಸ್ ಹೇಳಬೇಕು ಅನ್ನುವಷ್ಟರ ಮಟ್ಟಕ್ಕೆ ಹಳ್ಳಿಯ ಮಕ್ಕಳ ಬದುಕಿನ ಚಿತ್ರ ಹೊಸದಾಗಿ ಕಾಣಿಸಿತು.
ಚಿತ್ರ-ಲೇಖನ: ಸ್ವರೂಪಾನಂದ ಕೊಟ್ಟೂರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.