ಸಮಯದ ಸದ್ಬಳಕೆಯೇ ಯಶಸ್ವಿ ಬದುಕಿಗೆ ದಾರಿದೀಪ
Team Udayavani, Feb 21, 2017, 3:45 AM IST
ಪರೀಕ್ಷೆಗೂ ಮುಂಚಿತವಾಗಿ,ಅಭ್ಯರ್ಥಿಗಳು, ಎಷ್ಟೇ ಓದಿಕೊಂಡು ತಯಾರಿಯನ್ನು ನಡೆಸಿದ್ದರೂ, ಪರೀಕ್ಷೆಗೆಂದು ನಿಗದಿಪಡಿಸಿದ ವೇಳೆಯಲ್ಲಿ ಎಷ್ಟರಮಟ್ಟಿಗೆ ಅವರು ಸಮಯವನ್ನು ಯಶಸ್ವಿಯಾಗಿ ಬಳಸಿಕೊಂಡು ಉತ್ತರಗಳನ್ನು ಬರೆಯುತ್ತಾರೆ ಎಂಬುದರ ಮೇಲೆ ಸಫಲತೆ ನಿರ್ಧಾರವಾಗುತ್ತದೆ. ಎಷ್ಟೇ ಸ್ಪೀಡಾಗಿ ಬರೆದರೂ ಸಮಯ ಸಾಕಾಗಲೇ ಇಲ್ಲ, ಸ್ವಲ್ಪ ಹೆಚ್ಚು ಸಮಯವಿದ್ದಿದ್ದರೆ ಇನ್ನೂ ಚೆನ್ನಾಗಿ ಉತ್ತರಿಸಬಹುದಿತ್ತು ಎಂಬ ಅಭ್ಯರ್ಥಿಗಳ ಆಕ್ಷೇಪಗಳನ್ನು ನಾವು ನೀವೆಲ್ಲಾ ಹಲವು ಸಂದರ್ಭಗಳಲ್ಲಿ ಕೇಳೇ ಇರುತ್ತೇವೆ. ಇವೆಲ್ಲವೂ ಅಸಮರ್ಥ ಸಮಯ ನಿರ್ವಹಣೆಯ ನಿದರ್ಶನಗಳು.
ಸಮಯ ನಿರ್ವಹಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯ. ನಾವು ಕಳೆಯುವ ಪ್ರತಿಯೊಂದು ಕ್ಷಣ ಕೂಡ ಬಹಳ ಮಹತ್ವವನ್ನು ಹೊಂದಿರುತ್ತದೆ. ಏಕೆಂದರೆ, ಒಮ್ಮೆ ಕಳೆದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಎಷ್ಟರಮಟ್ಟಿಗೆ ತನ್ನ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ ಎಂಬುದನ್ನು ಅವನ ಸಮಯ ನಿರ್ವಹಣೆ ಕೌಶಲದ ಆಧಾರದ ಮೇಲೆ ಅಳೆಯಬಹುದು.
ಸಣ್ಣದೊಂದು ಅಂಗಡಿಯನ್ನು ನಡೆಸುವವರಿಂದ ಹಿಡಿದು ದೊಡ್ಡ ಬಹುಕೋಟಿ ಕಂಪನಿಯನ್ನು ನಡೆಸುವ ವ್ಯಕ್ತಿಗಳ ಹತ್ತಿರ ಕೂಡ ಇರುವುದು, ದಿನದಲ್ಲಿ ಅದೇ 24 ಘಂಟೆಗಳು. ಆದರೂ ಏಕೆ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಯಶಸ್ಸನ್ನು ಕಾಣುತ್ತಾರೆ ಎಂದು ನಮ್ಮನ್ನು ನಾವು ಪ್ರಶ್ನಿಸಿದರೆ, ಅದಕ್ಕೆ ಉತ್ತರ ಬಹುಪಾಲು ಸಂದರ್ಭಗಳಲ್ಲಿ ಸಮಯದ ನಿರ್ವಹಣೆಯೇ ಆಗಿರುತ್ತದೆ. ಯಶಸ್ವಿ ವ್ಯಕ್ತಿಗಳ ಚರಿತ್ರೆಯನ್ನು ಒಮ್ಮೆ ಗಮನಿಸಿದರೆ ನಮಗೆ ಕಾಣುವ ಮುಖ್ಯವಾದ ಸಂಗತಿ, ಅವರ ಸಾಧನೆಯಲ್ಲಿ ಸಮಯದ ಸಮರ್ಥವಾದ ಬಳಕೆಯ ಪಾತ್ರ.ಅದನ್ನೆ ಇಂಗ್ಲಿಷಿನಲ್ಲಿ ನಾವು “ಎಫೆಕ್ಟಿವ್ ಟೈಂ ಮ್ಯಾನೇಜ್‌ಮೆಂಟ್’ (Effective Time Management) ಎನ್ನುವುದು. ಸಮಯದ ಸಮರ್ಥ ಬಳಕೆ ಮತ್ತು ಪ್ರತಿಯೊಂದು ಕೆಲಸಕ್ಕೆ ಪ್ರಾಥಮಿಕತೆಯ ಆಧಾರದ ಮೇಲೆ ನಿರ್ದಿಷ್ಟ ಸಮಯವನ್ನು ಮೀಸಲಿಡುವುದರ ಮೂಲಕ ಪ್ರತಿಯೊಬ್ಬರೂ ತಮ್ಮ ಗುರಿಯನ್ನು ತಲುಪಬಹುದು ಮತ್ತು ಜೀವನದಲ್ಲಿ ಯಶಸ್ಸನ್ನು ಕಾಣಬಹುದು
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಯದ ನಿರ್ವಹಣೆಯ ಮಹತ್ವ
ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಎಲ್ಲ ಅಭ್ಯರ್ಥಿಗಳಿಗೆ ಸಮಯ ನಿರ್ವಹಣೆ ಬಹಳ ಮುಖ್ಯವಾಗುತ್ತದೆ. ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಓದಿನ ಜೊತೆಜೊತೆಗೆ ಇನ್ನಿತರೆ ವ್ಯಕ್ತಿತ್ವ ಬೆಳವಣಿಗೆಯ ಚಟುವಟಿಕೆಗಳಿಗೆ ಕೂಡ ಸಮಯವನ್ನು ಮೀಸಲಿಡಬೇಕು.
ಕೇಂದ್ರ ಲೋಕಸೇವಾ ಆಯೋಗ, ಕರ್ನಾಟಕ ಲೋಕಸೇವಾ ಆಯೋಗ,ಸಿಬ್ಬಂದಿ ನೇಮಕಾತಿ ಆಯೋಗ, ಐ.ಬಿ.ಪಿ.ಎಸ್ (IBPS-Indian BankingPersonnel Services) ಅಥವಾ ಇನ್ನಿತರೆ ಯಾವುದೇ ಸಂಸ್ಥೆಯು ನಡೆಸುವ ವಸ್ತುನಿಷ್ಠ ಮಾದರಿಯ ಆಪ್ಟಿಟ್ಯೂಡ್ (Aptitude) ಆಧಾರಿತ ಪರೀಕ್ಷೆಗಳಲ್ಲಿ ಪ್ರಶ್ನೆಗಳು ಸುಲಭವಾಗಿದ್ದರೂ ಕೂಡ, ಉತ್ತರ ಬರೆಯಲು ಅಲ್ಲಿ ನಿಗದಿಗೊಳಿಸಿದ ಸಮಯ ಬಹಳ ಕಡಿಮೆಯಿರುತ್ತದೆ. ಒಂದು ಪ್ರಶ್ನೆಯನ್ನು ಉತ್ತರಿಸಲು ಸರಾಸರಿ 40-45 ಸೆಕೆಂಡುಗಳನ್ನು ಮಾತ್ರ ನೀಡಲಾಗಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ತ್ವರಿತವಾಗಿ ಪ್ರಶ್ನೆಗಳನ್ನು ಬಿಡಿಸುತ್ತಾ ಮುಂದೆ ಸಾಗಬೇಕು.
ಕೆಲವೊಮ್ಮೆ ಕೇವಲ ಹತ್ತನೇ ತರಗತಿಯ ಬುದ್ದಿಮಟ್ಟಕ್ಕೆ ಪಠ್ಯಕ್ರಮವಿದ್ದರೂ ಸಹ, ಯಾರು ಸಮಯವನ್ನು ಸಂಪೂರ್ಣವಾಗಿ ಬಳಸಿಕೊಂಡು, ತ್ವರಿತವಾಗಿ ಉತ್ತರಗಳನ್ನು ಬಿಡಿಸುತ್ತಾರೋ ಅವರು ಮಾತ್ರ ಸಫಲತೆಯನ್ನು ಕಾಣಲು ಸಾಧ್ಯ. ಇದೆಲ್ಲ ಸಾಧ್ಯವಾಗಬೇಕಾದರೆ, ಪರೀಕ್ಷೆಗೂ ಪೂರ್ವದಲ್ಲಿ, ಅಭ್ಯರ್ಥಿಗಳು, ಕೃತಕ ಪರೀಕ್ಷಾ ವಾತಾವರಣವನ್ನು ನಿರ್ಮಿಸಿಕೊಂಡು, ಅಣಕು ಪರೀಕ್ಷೆಗಳನ್ನು (Mock Tests) ಬರೆಯಬೇಕು. ಇದರಿಂದ ಮೆದುಳನ್ನು ಪರೀಕ್ಷಾ ಸಮಯಕ್ಕೆ ಸಿದ್ದಗೊಳಿಸಿದಂತಾಗುತ್ತದೆ. ಇದನ್ನು ಇಂಗ್ಲಿಷಿನಲ್ಲಿ Setting the Circadian Rhythm ಎನ್ನುತ್ತಾರೆ. ಹೀಗೆ ಅಭ್ಯಾಸ ಮಾಡುವುದರಿಂದ ಪರೀಕ್ಷಾ ಸಮಯದಲ್ಲಿ ಮೆದುಳು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ.
ಅಭ್ಯಾಸದ ವೇಳೆಯಲ್ಲಿ ಸಮಯದ ನಿರ್ವಹಣೆ
ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿರುವ ಅಭ್ಯರ್ಥಿಗಳು ಕೇಳುವ ಸಾಮಾನ್ಯವಾದ ಪ್ರಶ್ನೆಯೆಂದರೆ, ದಿನದಲ್ಲಿ ಎಷ್ಟು ಘಂಟೆಗಳ ಕಾಲ ಅಭ್ಯಾಸ ಮಾಡಿದರೆ ಪಠ್ಯಕ್ರಮದಲ್ಲಿರುವ ಎಲ್ಲ ವಿಷಯಗಳನ್ನು ಪೂರ್ಣವಾಗಿ ಓದಬಹುದು ಎಂದು. ಆದರೆ, ಈ ಪ್ರಶ್ನೆಗೆ ಅಭ್ಯರ್ಥಿಗಳೇ ಸರಿಯಾಗಿ ಉತ್ತರಿಸಬಹುದು. ಬೇರೆ ಯಾರೂ ಕೂಡ ಸಮರ್ಥವಾಗಿ ಉತ್ತರಿಸಲು ಸಾಧ್ಯವಿಲ್ಲ. ಏಕೆಂದರೆ, ಪ್ರತಿಯೊಬ್ಬರ ಅಭ್ಯಾಸ ಶೈಲಿ ಹಾಗೂ ವಿಧಾನ ಬೇರೆಬೇರೆಯಾಗಿರುತ್ತದೆ. ಅಭ್ಯರ್ಥಿಗಳು ತಮ್ಮ ಬುದ್ದಿಮಟ್ಟಕ್ಕೆ ಹಾಗೂ ಅನುಕೂಲಕ್ಕೆ ತಕ್ಕಹಾಗೆ ಒಂದು ವೇಳಾಪಟ್ಟಿಯನ್ನು ಸಿದ್ದಪಡಿಸಿಕೊಂಡು, ಅದರಂತೆ ಅಭ್ಯಾಸ ಮಾಡಬೇಕು. ಹೀಗೆ ಮಾಡುವುದರಿಂದ ಅಭ್ಯರ್ಥಿಗಳಿಗೆ ಅವರ ಓದಿನ ಪ್ರಗತಿಯ ಬಗೆಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಅದರ ಜೊತೆಗೆ ಎಲ್ಲಿ ತಪ್ಪುಗಳಾಗುತ್ತಿದೆಯೆಂಬುದು ಕೂಡ ಗಮನಕ್ಕೆ ಬರುತ್ತದೆ.
ನಾವು ಎಷ್ಟು ಗಂಟೆಗಳು ಓದುತ್ತೇವೆ ಎಂಬುದು ಮುಖ್ಯವಾಗುವುದಿಲ್ಲ. ಬದಲಾಗಿ, ಓದಿದ್ದನ್ನು ಎಷ್ಟು ಸಮರ್ಥವಾಗಿ ಅರ್ಥಮಾಡಿಕೊಂಡಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಗಂಟೆಗಟ್ಟಲೆ ಪುಸ್ತಕದ ಮುಂದೆ ಕೂತರೆ ಪ್ರಯೋಜನವಿಲ್ಲ. ದಿನದಲ್ಲಿ ಕೆಲವೇ ಗಂಟೆಗಳು ಅಭ್ಯಾಸ ಮಾಡಿದರೂ ಕೂಡ ಗಮನವಿಟ್ಟು ಓದಬೇಕು. ಆಗಲೇ ನಮ್ಮ ಪರಿಶ್ರಮಕ್ಕೆ ಅರ್ಥ ದೊರಕುತ್ತದೆ. ಸಮಯ ಒಂದು ಅಮೂಲ್ಯವಾದ ಸಂಪನ್ಮೂಲ. ಅದನ್ನು ಬಹಳ ಚಾಣಾಕ್ಷತನದಿಂದ ಬಳಕೆ ಮಾಡಬೇಕು. ಸಮಯದ ಸದ್ಭಳಕೆ ಜೀವನದ ಯಶಸ್ಸಿಗೆ ದಾರಿದೀಪವಾಗುತ್ತದೆ.
– ಪ್ರಶಾಂತ್ ಎಸ್. ಚಿನ್ನಪ್ಪನವರ್, ಚಿತ್ರದುರ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Crime: ಕತ್ತು ಬಿಗಿದು ಇಬ್ಬರು ಮಕ್ಕಳನ್ನು ಕೊಂದ ಅಮ್ಮ!
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.