ಸರ್ವರಿಗೂ ಸಾವರ್ಕರ್
Team Udayavani, Nov 5, 2019, 6:01 AM IST
ಸಾವರ್ಕರ್ ಅಂದಿಗೂ, ಇಂದಿಗೂ ಯುವ ಸಮುದಾಯದ ಕಣ್ಮಣಿ. ಕಾರಣ, ಅವರ ಕ್ರಿಯಾಶೀಲತೆ,
ಕಣ್ಣ ಮುಂದೆ ಗುರಿ ಇಟ್ಟುಕೊಂಡು ಅದಕ್ಕಾಗಿ ಎಲ್ಲ ದಿಕ್ಕುಗಳಿಂದಲೂ ದುಡಿಯುತ್ತಿದ್ದ ಅಪರೂಪದ ಗುಣ. ಯಾವುದೇ ಸೋಶಿಯಲ್ ಮೀಡಿಯಾ ಇಲ್ಲದ ಆ ಕಾಲದಲ್ಲಿ ಅದ್ಬುತವಾದ ಸಂಪರ್ಕಜಾಲವನ್ನು ಹೆಣೆದು ಕೊಂಡಿದ್ದ ಸಾವರ್ಕರ್, ಅನುಬಂಧದ ರೂವಾರಿಯೇ ಆಗಿದ್ದರು. ಎಲ್ಲರನ್ನೂ ಒಗ್ಗೂಡಿಸುವ ಅವರ ನಾಯಕತ್ವ ಗುಣ, ತುಕ್ಕು ಹಿಡಿಯದ ಕ್ರಿಯಾಶೀಲತೆ, ನಿಖರ ಮುನ್ನೋಟ ತಯಾರಿಸುವ ರೀತಿ ಇವೆಲ್ಲವೂ ಇಂದಿನ ಯುವ ತಲೆಮಾರಿಗೆ ಮಾದರಿ.
ಸಾವರ್ಕರ್ ಅಂದರೆ ಅದೊಂಥರ ದೇಶ ಕಟ್ಟಲು ಇದ್ದ ದೊಡ್ಡ ಎಂಜಿನ್; ಇದು ದಿನದ ಅಷ್ಟೂ ಗಂಟೆಗಳು, ಬದುಕಿನ ಅಷ್ಟೂ ದಿನಗಳ ಕಾಲ ನಾನ್‌ಸ್ಟಾಪ್ ಆಗಿ ದುಡಿಯುತ್ತಲೇ ಇತ್ತು. ಹೀಗಾಗಿಯೇ ಜಗತ್ತಿನ ಮನ್ನಣೆಗೆ ಪಾತ್ರವಾಗಿದ್ದು. ಇವತ್ತಿನ ಯುವಕರಿಗೆ ಸಾವರ್ಕರ್ ಬದುಕಿದ ರೀತಿ, ಬದುಕಿನುದ್ದಕ್ಕೂ ಕ್ರಿಯಾಶೀಲತೆಯನ್ನು ಕಾಪಿಟ್ಟುಕೊಂಡ ಬಗೆ ಹಾಗೂ ಇತಿಹಾಸದ ಆಧಾರದ ಮೇಲೆ ದೂರದೃಷ್ಟಿಯನ್ನು ಹೆಣೆಯುವುದರಲ್ಲಿ ನಿಜಕ್ಕೂ ಸಾವರ್ಕರ್ ನಮಗೆ ಅದ್ಬುತವಾದ ಮಾದರಿ.
ಇವತ್ತಿನ ಯುವಕರು ಸಮಾಜ ಸೇವೆ ಮಾಡೋದು, ದೇಶ ಕಟ್ಟೋದು ಅಂತೆಲ್ಲಾ ಮಾತಾಡ್ತಾ ಇರ್ತಾರೆ. ಹಾಗಂದ್ರೆ ಏನು ಅನ್ನೋದಕ್ಕೆ ಸಾವರ್ಕರ್ ಬದುಕೇ ವ್ಯಾಖ್ಯಾನ. ಸಮಾಜವನ್ನು, ರಾಷ್ಟ್ರವನ್ನು ಕಟ್ಟುವುದು ಅಂದರೆ, ನಮ್ಮ ಕೈಲಾದ ಕೆಲಸ ಮಾಡಿ ಸುಮ್ಮನಿದ್ದು ಬಿಡುವುದು ಅಂತಲ್ಲ. ಅದಕ್ಕೆ ತಕ್ಕುನಾದ ನಾನ್‌ಸ್ಟಾಪ್ ಕ್ರಿಯಾಶೀಲತೆ ಇರಬೇಕು; ಗಳಿಸಲು ಎಲ್ಲ ದಿಕ್ಕುಗಳಿಂದ ಕೆಲಸ ಮಾಡಬೇಕು. ಸಾವರ್ಕರ್ ತಮ್ಮ ಬದುಕಿನದ್ದಕ್ಕೂ ಮಾಡಿದ್ದೂ ಇದೇ. ಅವರೂ ಕೂಡ ನಮ್ಮಂಥದೇ ಕಾಲಘಟದಲ್ಲಿ ಬದುಕಿದ್ದವರು. ಆಗೆಲ್ಲಾ ನಮಗಿಂತಲೂ ಹೆಚ್ಚು ಚಾಲೆಂಜ್ ಆದ ಸ್ಥಿತಿ ಇತ್ತು. ಈಗಿನಂತೆ , ಫೇಸ್‌ಬುಕ್, ವ್ಯಾಟ್ಸ್ ಆ್ಯಪ್, ಟ್ವಿಟರ್, ಯೂಟ್ಯೂಬ್ ಯಾವುದೂ ಇರಲಿಲ್ಲ. ಆದರೂ, ಅವರ ನೆಟ್‌ವರ್ಕ್ ಈ ನಮ್ಮ ಎಲ್ಲಾ ಸೋಶಿಯಲ್ ಮೀಡಿಯಾಗಳನ್ನೂ ಮೀರಿಸುವಂತಿತ್ತು. ಒಂದು ಗುರಿಯನ್ನು ಮುಂದಿಟ್ಟುಕೊಂಡು, ಅದಕ್ಕಾಗಿ ಎಲ್ಲಾ ದಿಕ್ಕುಗಳಿಂದಲೂ ಕೆಲಸ ಮಾಡುವುದು ಹೇಗೆ ಅನ್ನೋದನ್ನು ಸಾವರ್ಕರ್ ರಿಂದಲೇ ಕಲಿಯಬೇಕು. ಸಾವರ್ಕರ್‌ಗೆ ರೆಸ್ಟ್ ಮಾಡಲಿಕ್ಕೆ ಪುರುಸೊತ್ತೇ ಇರಲಿಲ್ಲ. ಹಾಗೆ ಬದುಕನ್ನು ಇಟ್ಟುಕೊಂಡಿದ್ದರು.
ಇವತ್ತಿನ ಯುವಕರಿಗೆ ಈ ರೀತಿಯ ಮನೋಭಾವ ಅಗತ್ಯವಿದೆ. ಏಕೆಂದರೆ, ಗುರಿ ಇದ್ದರೂ, ಅದನ್ನು ಹೇಗೆ ತಲುಪಬೇಕು ಅನ್ನೋ ಹಾದಿ ತಿಳಿದಿರುವುದಿಲ್ಲ, ತಿಳಿದರೂ ಅದು ಎಲ್ಲ ದಿಕ್ಕುಗಳದ್ದಾಗಿರುವುದಿಲ್ಲ. ಇವತ್ತು ನಾವೆಲ್ಲ ಏನು ಮಾಡ್ತಾ ಇದ್ದೀವಿ? ಮನರಂಜನೆಯ ಹೆಸರಲ್ಲಿ ಕಾಲಹರಣ. ಸಮಾಜ ಸೇವೆಯಲ್ಲೋ, ದೇಶ ಕಟ್ಟುವ ಕಾಯಕದಲ್ಲಿ ತೊಡಗಿಕೊಳ್ಳುವುದರ ಮೂಲಕ ಮನೋರಂಜನೆ ಗಳಿಸಬಹುದಲ್ಲ? ಅಂದರೆ, ನಾಲ್ಕು ಜನಕ್ಕೆ ಉಪಯೋಗಕ್ಕೆ ಬರುವುದು ಕೂಡ ಸೇವೆಯೇ ಅಲ್ಲವೆ? ಇದನ್ನೇ ಸಾವರ್ಕರ್ ಮಾಡಿದ್ದು. ತಮ್ಮ ಬದುಕನ್ನು ಸಮಾಜಕ್ಕೆ, ದೇಶಕ್ಕೇ ಸಮರ್ಪಿಸಿಕೊಂಡಿದ್ದರು. ಇವತ್ತಿಗೂ, ಆ ಪುಣ್ಯಾತ್ಮನ ಬಗ್ಗೆ ಇಷ್ಟೆಲ್ಲ ಚರ್ಚೆ ನಡೆಯುತ್ತದೆ ಅಂದರೆ, ಅದಕ್ಕೆಲ್ಲಾ ಆತ ಆ ಕಾಲದಲ್ಲಿ ನಿಸ್ವಾರ್ಥದಿಂದ ಬದುಕಿದ್ದೇ ಕಾರಣ.
ಹೌದು, ನಮ್ಮ ಯುವಕರು ಸಾವರ್ಕರ್‌ರಿಂದ ಹೆಕ್ಕಿ, ಅಳವಡಿಸಿಕೊಳ್ಳಲೇ ಬೇಕಾದದ್ದು ಈ ನಿಸ್ವಾರ್ಥ ಗುಣವನ್ನು. ನಾನು ಎಲ್ಲರಿಗಿಂತಲೂ ಶ್ರೇಷ್ಠ ಅನ್ನಿಸಿಕೊಳ್ಳಬೇಕು, ಎಲ್ಲರಿಂದ ಗೌರವಕ್ಕೆ ಪಾತ್ರನಾಗಬೇಕು ಹೀಗಂತ ಸಾವರ್ಕರ್ ಯಾವತ್ತೂ ಯೋಚಿಸಲಿಲ್ಲ. ಅದನ್ನು ಬದುಕಿನ ಗುರಿಯನ್ನಾಗಿ ಕೂಡ ಮಾಡಿಕೊಂಡರಲಿಲ್ಲ. ಸಮಯ ವ್ಯರ್ಥ ಮಾಡದೇ, ಅಪೇಕ್ಷೆಗಳನ್ನೆಲ್ಲಾ ಬದಿಗೊತ್ತಿ ನಿಸ್ವಾರ್ಥವಾಗಿ ಕೆಲಸಗಳಲ್ಲಿ ತೊಡಗಿಕೊಂಡರು. ಹೀಗಾಗಿಯೇ, ಜಗ ಮನ್ನಣೆ ದೊರೆತಿದ್ದು.
ಒಬ್ಬ ವ್ಯಕ್ತಿಯಲ್ಲಿ ಎಷ್ಟು ಕಡಿಮೆ ಸ್ವಾರ್ಥ ಇರುತ್ತದೋ ಅಷ್ಟು ದೊಡ್ಡ ಗೌರವಕ್ಕೆ ಪಾತ್ರನಾಗುತ್ತಾ ಹೋಗುತ್ತಾನೆ. ಶ್ರೇಷ್ಠ ಅಂತ ಅನ್ನಿಸಿಕೊಳ್ಳುವುದೇ ಆವಾಗ. ಸಾವರ್ಕರ್‌ರ ಬದುಕು ಹೇಳುವ ದೊಡ್ಡ ಪಾಠ ಇದೇನೇ; ಪರಮ ನಿಸ್ವಾರ್ಥಿಗಳಾಗಿ ಅಂತ.
ಹಾಗಂತ, ಸಾವರ್ಕರ್‌ನ ಬದುಕಿನ ಎಲ್ಲಾ ಮೂಲೆ ಸರಿ ಇತ್ತು ಅಂದುಕೊಂಡರೆ ತಪ್ಪಾಗುತ್ತದೆ. ಯೌವ್ವನದಲ್ಲಿ ಅಂದರೆ ಹೆಂಡತಿ ಮಕ್ಕಳ ಜೊತೆ ಇರಬೇಕಾದ ಕಾಲದಲ್ಲಿ ಲಂಡ್‌ನಿ°ಗೆ ಹೋದರು, ದುಡಿಯಬೇಕಾದ ಕಾಲದಲ್ಲಿ ಜೈಲ್‌ನಲ್ಲಿ ಬಂಧಿಯಾದರು, ಆಗ ಬ್ಯಾರಿಸ್ಟರ್ ಪದವಿ ಕೂಡ ಹೋಯಿತು, ವಾಪಸ್ಸು ಭಾರತಕ್ಕೆ ಬರಬೇಕು ಅಂದುಕೊಳ್ಳುವ ಹೊತ್ತಿಗೆ ಬಂದರು. ಆದರೆ, ಆಗಲೇ ಬ್ರಿಟಿಷರನ್ನು ಅಂಡಮಾನಿನ ಜೈಲಿಗೆ ಕಳುಹಿಸಿಬಿಟ್ಟರು. ಸಾಲದ್ದಕ್ಕೆ, ಬ್ರಿಟೀಷ್ ಸರ್ಕಾರ ಸಾವರ್ಕರ್ ಆಸ್ತಿಪಾಸ್ತಿ ಗಳನ್ನೆಲ್ಲಾ ಜಪ್ತಿ ಮಾಡಿತು. ಅಣ್ಣನನ್ನು ಜೈಲಿಗೆ ದಬ್ಬಿದರು. ಹೀಗೆ, ತನಗಾಗಿ ಇರಬಹುದಾದ ಸುಖ ಸೌಖರ್ಯಗಳನ್ನು ಕಳೆದುಕೊಂಡ ನಂತರವೂ ಸಾವರ್ಕರ್ ತನ್ನೊಳಗಿನ ಚಿಂತನೆ ಕಳೆದುಕೊಳ್ಳಲಿಲ್ಲ. ಮತ್ತಷ್ಟು ಗಟ್ಟಿಯಾಗುತ್ತಾ ಹೋದರು. ತಮ್ಮೊಳಗೆ ಅಡಗಿರಬಹುದಾದ ಲವಲೇಶದ ಸ್ವಾರ್ಥವನ್ನು ಕಳೆದು ಕೊಂಡಾಗ ಮಾತ್ರ ಇವೆಲ್ಲ ಸಾಧ್ಯ.
ನಿಮಗೆ ಸಾವರ್ಕರ್ ಅಗಾಧವಾದ ನೆಟ್‌ವರ್ಕ್ ಇಟ್ಟುಕೊಂಡಿದ್ದರು ಅಂತ ಹೇಳಿದೆ, ಅದು ಹೇಗೆ ಅನ್ನೋದಕ್ಕೆ ಇಲ್ಲೊಂದು ಘಟನೆ ಹೇಳ್ತೀನಿ ಕೇಳಿ. ಸಾವರ್ಕರ್ ವಿದೇಶಕ್ಕೆ ಅಧ್ಯಯನದ ನೆಪದಲ್ಲಿ ಹೋಗ್ತಾರೆ. ಇದರ ಮೂಲ ಉದ್ದೇಶ, ಅಲ್ಲಿರುವ ಭಾರತೀಯರನ್ನು ಒಗ್ಗೂಡಿಸಿ, ಅವರ ನೆಲದಲ್ಲೇ ಬ್ರಿಟೀಷರನ್ನು ಬಗ್ಗು ಬಡಿಯಬೇಕು ಅನ್ನೋದು. ಅಲ್ಲಿದ್ದ ಫ್ರಾನ್ಸಿನ ಕ್ರಾಂತಿಕಾರಿಗಳು ಇವರ ಜೊತೆ
ಕೈ ಜೋಡಿಸುತ್ತಾರೆ. ಹೀಗಾಗಿ, ಬ್ರಿಟೀಷರಿಗೆ ಸಾವರ್ಕರ್‌ರನ್ನು ಸಹಿಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಏನೋ ನೆಪ ಹುಡುಕಿ ಬಂಧಿಸಿ, ಅಲ್ಲಿನ ಜೈಲಿಗೆ ಹಾಕುತ್ತಾರೆ. ಇವರ ನೆಟ್‌ವರ್ಕ್ ಹೇಗಿತ್ತು ಅಂದರೆ, ಜೈಲಿನ ಒಳಗೆ ನಡೆಯೋ ಸಂಗತಿಗಳು ಇಡೀ ದೇಶಕ್ಕೆಲ್ಲಾ ಹರಡುತ್ತಿತ್ತು. ಸಾವರ್ಕರ್ ಗಾಣವನ್ನು ಸುತ್ತುತ್ತಿದ್ದದ್ದು, ಛಡಿ ಏಟುಗಳನ್ನು ತಿನ್ನುತ್ತಿದ್ದದ್ದು ಎಲ್ಲವೂ ಜಗತ್ತಿಗೆಲ್ಲಾ ತಿಳಿಯುವಂತೆ ಮಾಡುತ್ತಿದ್ದರು. ಒಂದು ಸಲ ಗೃಹ ಕಾರ್ಯದರ್ಶಿ ಕ್ರಡಾಕ್, ಸಾವರ್ಕರ್ ಬದಲಾಗಿದ್ದಾರ ಅಂತ ನೋಡೋಕೆ ಬಂದವರು.
-“ನಿಮ್ಮ ಹುಡುಗರು, ಹೊರಗಡೆ ಬಹಳ ಪುಂಡಾಟಿಕೆ ಮಾಡುತ್ತಾ ಇದ್ದಾರೆ. ಅವರು ಸುಮ್ಮನೆ ಇದ್ದರೆ ನಾವು ಏನಾದರೂ ಬದಲಾವಣೆ ತರಬಹುದು’ ಅಂದರು. ಆಗ ಸಾವರ್ಕರ್, “ನೀವು ನನ್ನನ್ನು ಜೈಲಿಗೆ ಹಾಕಿದ್ದೀರ. ಹೊರಗಡೆ ಸಂಪರ್ಕ ನನಗಿಲ್ಲ. ಏನಾಗ್ತಿದೆ ಅಂತಲೂ ನನಗೆ ಗೊತ್ತಿಲ್ಲ. ಆದರೆ, ಒಂದು ಮಾತಂತೂ ಸತ್ಯ. ಬ್ರಿಟಿಷ್ ಸರ್ಕಾರ, ಭಾರತದ ಉದ್ದಾರಕ್ಕೆ ಕೆಲಸ ಮಾಡುತ್ತಿದೆ ಅಂತ ಗೊತ್ತಾದರೆ, ಯಾರಿಗೂ ನಿಮ್ಮನ್ನು ವಿರೋಧ ಮಾಡುವ ಪ್ರಮೇಯ ಇರೋಲ್ಲ ‘ ಅಂತ ಹೇಳುವ ಮೂಲಕ ನೀವು ಭಾರತ ವಿರೋಧಿ ಕೆಲಸ ಮಾಡುತ್ತಿದ್ದೀರ ಅನ್ನೋ ದನಿಯಲ್ಲಿ ಹೇಳಿದರು. ಈಯಪ್ಪ ಬದಲಾಗಲ್ಲ ಅಂತ ಸಿಟ್ಟು ಮಾಡಿಕೊಂಡ ಕ್ರಡಾಕ್ ಎದ್ದು ಹೊರಟೇ ಹೋದರಂತೆ. ಕೊನೆಗೆ ಎಲ್ಲ ರೀತಿಯ ಒತ್ತಡಕ್ಕೆ ಒಳಗಾದ ಬ್ರಿಟಿಷ್ ಸರ್ಕಾರ, ಸಾವರ್ಕರ್‌ರನ್ನು ಬಿಡುಗಡೆ ಗೊಳಿಸಿ ಗೃಹ ಬಂಧನದಲ್ಲಿ ಇರಿಸಿತು. ಹೀಗೆ, ಸಾವರ್ಕರ್ ಗಳಿಸಿಕೊಂಡ ನೆಟ್‌ವರ್ಕ್ ಅಥವಾ ಜನರೊಂದಿಗಿನ ಅನುಬಂಧ ಇದೆಯಲ್ಲ, ಅದು ಇಂದಿನ ಯುವಕರಿಗೆ ಬೇಕು.
ಯಾವುದೇ ಕೆಲಸಕ್ಕೆ , ಯಾರನ್ನೇ ಆಗಲಿ ಮನವೊಲಿಸುವುದು ಒಬ್ಬ ನಾಯಕನ ನಿಜವಾದ ಗುಣ. ಸಾವರ್ಕರ್ ಇದನ್ನು ಚೆನ್ನಾಗಿ ಮಾಡೋರು. ಸಾಮಾನ್ಯನನ್ನು ಕೂಡ ಹೇಗೆ ಕ್ರಾಂತಿಕಾರಿ ನಾಯಕನನ್ನಾಗಿ ಮಾಡಬಲ್ಲವರಾಗಿದ್ದರು ಅನ್ನೋದಕ್ಕೆ ಇನ್ನೊಂದು ಉದಾಹರಣೆ ಕೊಡ್ತೀನಿ.
ಮಹಾರಾಷ್ಟದ ಕಾಲೇಜ್ ಒಂದರಲ್ಲಿ ಸಾವರ್ಕರ್ ಓದುತ್ತಾ ಇರುವಾಗ, ಒಂದು ಕಡೆ ರೂಮ್ ಮಾಡಿಕೊಂಡಿದ್ದರು. ಕಾಲೇಜಿನಿಂದ ರೂಮಿಗೆ ಬಂದು ಹೋಗುವ ದಾರಿಯಲ್ಲಿ ಒಬ್ಬ ಪೋಲಿಯೋ ಪೀಡಿತ ವ್ಯಕ್ತಿಯನ್ನು ಕಂಡರು. ಅವನ ಹೆಸರು ಆಬಾ ಪಾಂಗ್ಲೆ ಅಂತ. ಆತ ಮಾತನಾಡುವುದೂ, ಹುಡುಗಿಯರನ್ನ ಚುಡಾಯಿಸುವುದೂ ಕವನಗಳ ಮೂಲಕವೇ. ಆ ಮಟ್ಟಿಗೆ ಆಶುಕವಿತ್ವ ಹೊಂದಿದ್ದಂಥವನು. ಸಾವರ್ಕರ್ ಒಂದು ದಿನ ನಡೆದುಕೊಂಡು ಹೋಗ್ತಿದ್ದಾಗ ಅವನ ಕವಿತೆ ಕೇಳಿ, ಸೂ½ರ್ತಿ ಗೊಂಡರು.
“ಅಬ್ಟಾ, ಎಷ್ಟು ಚೆನ್ನಾಗಿ ಕವನ ಬರೀತಾನೆ’ ಅಂತೆಲ್ಲ ಬೆರಗುಗೊಂಡವರೇ, ಅರೇ, ಇದು ರಾಷ್ಟ್ರದ ಕುರಿತಾಗಿ ಇದ್ದಿದ್ದರೆ ಇನ್ನೂ ಚೆನ್ನಾಗಿರ್ತಿತ್ತು ಅಲ್ವಾ? ಅಂದುಕೊಂಡು, ಆಬಾ ಪಾಂಗ್ಲೆಯನ್ನು ರೂಮಿಗೆ ಕರೆಸಿಕೊಂಡು ಒಂದು ಗಂಟೆ ಮಾತನಾಡಿದರು. ಅವರು ಎಷ್ಟು ಪ್ರಭಾವ ಬೀರಿದರು ಅಂದರೆ, ಇದೇ ಆಬಾ ಪಾಂಗ್ಲೆ ಮುಂದೆ ಶ್ರೇಷ್ಠ ಸಾಹಿತಿಯಾಗಿ, ಸ್ವಾತಂತ್ರ್ಯ ಕವಿ ಗೋವಿಂದ ಧರೇಕರ್ ಎಂಬ ಹೆಸರಿನಿಂದ ಗುರುತಿಸಿಕೊಂಡರು.
ಮಹಾಭಾರತದಲ್ಲಿ ಕೃಷ್ಣ, ಸತ್ವ, ರಜಸ್ಸು ಮತ್ತು ತಮಸ್ಸು ಈ ಮೂರು ಗುಣದ ಬಗ್ಗೆ ಕೃಷ್ಣ ಮಾತನಾಡುತ್ತಾನೆ. ನಮ್ಮೆಲ್ಲರ ಸಮಸ್ಯೆ ಅಂದ್ರೆ ಸಹಜವಾದ ಆಲಸ್ಯ, ನಿದ್ದೆ, ನಮ್ಮಪಾಡಿಗೆ ನಾವು ಇರೋಣ ಅನ್ನಿಸುವುದು, ಕೆಲಸ ಮಾಡದೇ ಇರೋದು- ಇವು. ಈ ಸ್ಥಿತಿಯಿಂದ ಸತ್ವಕ್ಕೆ ಹೋಗೋದು ಕಷ್ಟವೇ. ಸತ್ವ ಗುಣದವರು ಹೆಚ್ಚಿದಷ್ಟೂ ಆ ರಾಷ್ಟ್ರದ ಔನತ್ಯ ಹೆಚ್ಚು ಅಂತ ನಾವು ಭಾರತೀಯ ಕಾಂಟೆಸ್ಟ್‌ನಲ್ಲಿ ಭಾವಿಸುತ್ತೇವೆ. ಆದರೆ, ಈ ರಜಸ್ಸಿಗೆ ಹೋಗಲಿಕ್ಕೆ ಏಕೈಕ ಮಾರ್ಗ ರಾಷ್ಟ್ರಭಕ್ತಿ ಮಾತ್ರ. ರಜಸ್ಸಿಗೆ ಹೋಗದೇ ತಮಸ್ಸನ್ನು ಮುಟ್ಟೋಕೆ ಆಗೋಲ್ಲ. ರಜಸ್ಸು ಕ್ರಿಯಾಶೀಲತೆಯನ್ನು ತೋರಿಸುತ್ತೆ. ಹೀಗಾಗಿಯೇ ವಿವೇಕಾನಂದರು ಹೇಳುತ್ತಿದದ್ದು, ರಾಷ್ಟ್ರಭಕ್ತಿಯನ್ನು ಪ್ರಚೋದಿಸುವಂಥ ಕೆಲಸ ಯಾವಾಗಲೂ ಆಗ್ತಾ ಇರಬೇಕು ಅಂತ.
ನಮ್ಮ ಈಗಿನ ಯುವಕರಲ್ಲಿ ರಜಸ್ಸು ಬೇಕೇಬೇಕು. ಹಾಗಾಗಿ, ಅವರು ಸಾವರ್ಕರ್ ದಾರಿಯಲ್ಲಿ ನಿಲ್ಲಬೇಕು.
1 ಒಬ್ಬ ವ್ಯಕ್ತಿಯಲ್ಲಿ ಎಷ್ಟು ಕಡಿಮೆ ಸ್ವಾರ್ಥ ಇರುತ್ತದೋ ಅಷ್ಟು ದೊಡ್ಡ ಗೌರವಕ್ಕೆ ಪಾತ್ರನಾಗುತ್ತಾ ಹೋಗುತ್ತಾನೆ.
2 ಸಾವರ್ಕರ್ ದೃಷ್ಟಿಯಲ್ಲಿ ಸಾಯೋದು ಮುಖ್ಯ ಅಲ್ಲ. ಸಾಯೋದರಲ್ಲಿ ಮಜ ಇಲ್ಲ. ಬದುಕಬೇಕು, ಬದುಕುವ ಸ್ವಾತಂತ್ರ್ಯವನ್ನು ಇಂಚು ಇಂಚು ಪಡೆಯಬೇಕು
3 ರಜಸ್ಸು ಅಂದರೆ ಕ್ರಿಯಾಶೀಲತೆ. ಅದನ್ನು ರಾಷ್ಟ್ರ ಭಕ್ತಿಯಿಂದ ಮಾತ್ರ ಉದ್ದೀಪಿಸಲು ಸಾಧ್ಯ. ಹೀಗಾಗಿಯೇ ವಿವೇಕಾನಂದರು ರಾಷ್ಟ್ರಭಕ್ತಿಯನ್ನು ಪ್ರಚೋದಿಸುವಂಥ ಕೆಲಸ ಯಾವಾಗಲೂ ಆಗ್ತಾ ಇರಬೇಕು ಅಂತ ಹೇಳಿದ್ದು.
4 ಯುವಕರು ಸಾವರ್ಕರ್‌ರಿಂದ ದೂರ ದೃಷ್ಟಿಯ ಗುಣವನ್ನು, ಜಾತೀಯತೆಯನ್ನು ಮೀರಿ ಬದುಕುವುದನ್ನು ಕಲಿಯಬೇಕು
ಚಕ್ರವರ್ತಿ ಸೂಲಿಬೆಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.