ಸೇವ್ ಜಾಬ್
Team Udayavani, Dec 17, 2019, 6:05 AM IST
ಆಸ್ತಿ ಮಾಡುವುದು ಎಷ್ಟು ಕಷ್ಟವೋ, ಅದನ್ನು ಕಾಪಾಡುವುದು ಅದಕ್ಕಿಂತ ಕಷ್ಟ ಅನ್ನುವಂತೆಯೇ, ಕೆಲಸ ಹಿಡಿಯುವುದು ಕಷ್ಟ. ದೊರೆತ ಮೇಲೆ ಅದನ್ನು ಕಾಪಾಡಿಕೊಳ್ಳುವುದು ಇನ್ನೂ ಕಷ್ಟ. ಈ ಕಷ್ಟದ ಬಂಧನದಿಂದ ಹೊರಬರಬೇಕಾದರೆ ಏನು ಮಾಡಬೇಕು? ಇಲ್ಲಿದೆ ಒಂದಷ್ಟು ಟಿಪ್ಸ್.
ಜೀವನದೊಂದು ಕಲೆ, ಕಲೆಯ ಕಲಿಸುವುದೆಂತು?
ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ
ಆವುದೋ ಕುಶಲತೆಯೊಂದಿರದೆ ಜಯವಿರದು,
ಆ ವಿವರ ನಿನ್ನೊಳಗೆ ಮಂಕುತಿಮ್ಮ ಎನ್ನುತ್ತಾನೆ ಕಗ್ಗದ ಕವಿ. ಇದು ನಮ್ಮ ಉದ್ಯೋಗಕ್ಷೇತ್ರಕ್ಕೂ ಅನ್ವಯ. ಕೆಲಸ ಸಿಗುವವರೆಗೆ ಸಿಗಲಿಲ್ಲವೆಂಬ ಚಿಂತೆ, ಸಿಕ್ಕ ಬಳಿಕ ಅದನ್ನು ಉಳಿಸಿಕೊಳ್ಳುವ ಚಿಂತೆ. ಉಳಿಸಿಕೊಂಡ ಬಳಿಕ ಅದರಲ್ಲಿ ಬೆಳೆಯುವುದು ಹೇಗೆ, ಬಡ್ತಿಗಳನ್ನು ಪಡೆಯುವುದು ಹೇಗೆ ಎಂಬ ಚಿಂತೆ. ಹೀಗೆ, ಚಿಂತೆಯಲ್ಲಿ ಓದಿ, ಚಿಂತೆಯಲ್ಲೇ ಕೆಲಸ ಹಿಡಿದು, ಚಿಂತೆಯಲ್ಲೇ ಬದುಕಲ್ಲಿ ಮೇಲೆ ಬರಬೇಕು. ಇದು ಇಂದಿನ ಅನಿವಾರ್ಯ. ಕೆಲಸ ಸಿಕ್ಕರೆ ಸಾಕು. ಆಮೇಲೆ ನೋಡೋಣ ಅನ್ನೋ ಕಾಲ ಒಂದಿತ್ತು. ಅದು ಆಕಾಲ. ಈಗ ಹಾಗಿಲ್ಲ, ಆಸ್ತಿ ಮಾಡುವುದು ಎಷ್ಟು ಕಷ್ಟವೋ, ಅದನ್ನು ಕಾಪಾಡುವುದು ಅದಕ್ಕಿಂತ ಕಷ್ಟ ಅನ್ನುವಂತೆಯೇ, ಕೆಲಸ ಹಿಡಿಯುವುದು ಕಷ್ಟ. ಅದನ್ನು ಕಾಪಾಡಿಕೊಳ್ಳುವುದು ಇನ್ನೂ ಕಷ್ಟ. ಈ ಕಷ್ಟದ ಬಂಧನದಿಂದ ಹೊರಬರಬೇಕಾದರೆ ಏನು ಮಾಡಬೇಕು? ಇಲ್ಲಿದೆ ಒಂದಷ್ಟು ಟಿಪ್ಸ್.
1.ಕೆಲಸವನ್ನು ಪ್ರೀತಿಸಿ: ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಕೆಲಸ ಮಾಡುವುದು ಮೊದಲ ಹಂತ. ಆದರೆ, ಉದ್ಯೋಗದ ಗುರಿ ಅಷ್ಟಕ್ಕೇ ಸೀಮಿತವಲ್ಲ. ನಾವು ಮಾಡುವ ಕೆಲಸ ನಮಗೆ ಜೀವನೋಪಾಯದ ಜೊತೆಗೆ ಜೀವನೋತ್ಸಾಹವನ್ನೂ ತಂದುಕೊಡಬೇಕು. ಅದನ್ನು ಕಂಡುಕೊಳ್ಳಲು ಹಲವು ವರ್ಷಗಳನ್ನು, ಹಲವು ವೃತ್ತಿಗಳನ್ನು ದಾಟಿ ಬರಬೇಕು. ನಮ್ಮ ಸ್ವಭಾವ, ಕೌಶಲಗಳಿಗೆ ಹೊಂದುವಂಥ ಕೆಲಸ ಹಿಡಿಯಲು ಐದಾರು ವರ್ಷಗಳೇ ಬೇಕಾಗಬಹುದು. ಅದಾದ ಬಳಿಕ ಒಂದು ಸಮತೋಲನ ಕಂಡುಕೊಳ್ಳುವ ವೇಳೆಗೆ ಮತ್ತೆ ಇಪ್ಪತ್ತು ವರ್ಷ ಹಿಡಿದೀತು. ಅದಾದ ನಂತರ, ಮತ್ತೂಂದು ಹೆಜ್ಜೆ ಮುಂದಿಡುವ ಸಮಯ ಸನ್ನಿಹಿತವಾಗುತ್ತದೆ. ಅಂದರೆ, ಆ ಕೆಲಸ ಚೆನ್ನಾಗಿ ಕಲಿತ ಬಳಿಕ ಬಡ್ತಿ ಅಥವಾ ಉನ್ನತ ಪದವಿಗಾಗಿ ಪ್ರಯತ್ನಿಸುವ ಕಾಲ ಬರುತ್ತದೆ. ಹೆದರದೆ ಹೆಜ್ಜೆ ಹೊರಗಿಡಬೇಕು, ಮತ್ತಷ್ಟು ಅದೃಷ್ಟವನ್ನು ಅರಸಬೇಕು. ಕೆಲಸ ಯಾವುದೇ ಬಂದರೂ ಮೊದಲು ಅದನ್ನು ಪ್ರೀತಿಸಬೇಕು.
2.ಸಹನೆಯ ಸದ್ವರ್ತನೆ: ಬಹುತೇಕ ಕಂಪೆನಿಗಳಲ್ಲಿ ಒಂದು ಶ್ರೇಣೀಕೃತ ಅಧಿಕಾರ ಹಂಚಿಕೆ, ಜವಾಬ್ದಾರಿಯ ನಿರ್ವಹಣೆ ಇರುತ್ತದೆ. ಕೆಲಸಕ್ಕೆ ಸೇರುವಾಗ ನಮಗೆ ಹುದ್ದೆಯ ಜವಾಬ್ದಾರಿ, ಅದಕ್ಕೆ ದೊರೆಯುವ ಸಂಭಾವನೆ, ಸೇವಾ ಸವಲತ್ತು, ರಜೆ ಹಾಗೂ ಇತರ ನಿಯಮಗಳ ಬಗ್ಗೆ ತಿಳಿಸಿಕೊಡಲಾಗಿರುತ್ತದೆ. ಮೊದಲಿಗೆ ನಮ್ಮ ಕಾರ್ಯಪರಿಸರದ ಪರಿಚಯ ಮಾಡಿಕೊಳ್ಳಬೇಕು. ನಮ್ಮ ಮೇಲಧಿಕಾರಿಗಳೊಂದಿಗೆ ಗೌರವದಿಂದ ವರ್ತಿಸಬೇಕು. ನಮ್ಮ ಕೈಕೆಳಗೆ ಕೆಲಸ ಮಾಡುವವರನ್ನು ಪ್ರೀತಿ-ವಿಶ್ವಾಸದಿಂದ ಕಾಣಬೇಕು. ನಾವು ಯಾರಿಗೆ ವರದಿ ಮಾಡಬೇಕು, ಯಾರಿಂದ ವರದಿ ತರಿಸಿಕೊಳ್ಳಬೇಕು ಎಂಬ ಸ್ಪಷ್ಟತೆ ಇರಬೇಕು. ಈ ಶಿಷ್ಟಾಚಾರವನ್ನು ಮೀರಬಾರದು. ಅನವಶ್ಯಕವಾಗಿ ಇತರರ ವಿಚಾರಗಳಲ್ಲಿ, ಇತರ ವಿಭಾಗಗಳ ನಿರ್ವಹಣೆಯಲ್ಲಿ ತಲೆಹಾಕಬಾರದು. ತಲೆಹರಟೆ (ಲೂಸ್ ಟಾಕ್) ಮಾಡಲೇಬಾರದು. ಜೊತೆಗೆ ಗಾಳಿಮಾತುಗಳನ್ನು ಹರಡುವವರಿಂದ ದೂರವಿರಬೇಕು. ಏಕೆಂದರೆ, ಅಂತಹ ಗಾಸಿಪ್ ಸುಳಿಯಲ್ಲಿ ಒಮ್ಮೆ ಸಿಲುಕಿದರೆ, ಮತ್ತೆ ಬಿಡಿಸಿಕೊಳ್ಳುವುದು ಕಷ್ಟ.
3.ಸಮೃದ್ಧ ಸಂವಹನ: ವೃತ್ತಿಜೀವನದಲ್ಲಿ ಬಹುಮುಖ್ಯಪಾತ್ರ ಸಂವಹನಕ್ಕೆ. ಹೇಳಬೇಕಾದುದನ್ನು ಬಹಳ ಸ್ಪಷ್ಟವಾಗಿ ಹೇಳಬಲ್ಲವರು ಬಹುಬೇಗ ಪ್ರಗತಿ ಕಾಣುತ್ತಾರೆ. ಯಾರಿಗೆ ಸಂವಹನ ಕೊರತೆಯೋ ಅವರಲ್ಲಿ ಪ್ರಗತಿ ಕುಂಠಿತ. ಭಾಷೆಯ ಅಭಾವವೊ, ಅಭದ್ರತೆಯೊ, ಸಂಕೋಚವೊ, ಕಾರಣ ಏನೇ ಇರಲಿ. ತನ್ನ ಭಾವನೆಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಲಾಗದವರು ಉತ್ತಮ ಕೆಲಸಗಾರರಾಗುವುದಿಲ್ಲ. ಸರಳ ಭಾಷಾ ಕಲಿಕೆಗೆ ದಿನಪತ್ರಿಕೆಯ ಓದು, ಉತ್ತಮ ಟಿ.ವಿ. ಚಾನಲ್‌ಗಳ ವೀಕ್ಷಣೆ ನೆರವಾಗುತ್ತದೆ. ಕಂಪೆನಿ ನಡೆಸುವ ಟೀಂ ಆಕ್ಟಿವಿಟಿ, ಔಟಿಂಗ್ ಮುಂತಾದ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಮೂಲಕ ಸಂಬಂಧ ಮತ್ತು ಸಂವಹನ ಎರಡೂ ಬೆಳೆಯುತ್ತದೆ. ನೆನಪಿರಲಿ, ಯಾರ ನಾಲಿಗೆಯಲ್ಲಿ ಜೇನಿದೆಯೊ ಅವರ ತಟ್ಟೆಯಲ್ಲಿ ಮೃಷ್ಟಾನ್ನವಿರುತ್ತದೆ. ಅಂದರೆ ಯಾರು ಚೆನ್ನಾಗಿ, ಪರಿಣಾಮಕಾರಿಯಾಗಿ ಮಾತನಾಡುತ್ತಾರೋ ಅವರು ಸುಭಿಕ್ಷ ಜೀವನ ನಡೆಸುತ್ತಾರೆ.
4.ಹೊಸ ಕೌಶಲಗಳನ್ನು ನಿಮ್ಮದಾಗಿಸಿಕೊಳ್ಳಿ: ಎಲ್ಲ ಕ್ಷೇತ್ರಗಳು ಸದಾ ಪರಿವರ್ತನಾಗತಿಯಲ್ಲಿರುತ್ತವೆ. ತಂತ್ರಜ್ಞಾನ, ವಿಚಾರಧಾರೆ, ಕೆಲಸ ಮಾಡುವ ಕ್ಷೇತ್ರದ ಬೆಳವಣಿಗೆ ಇವೆಲ್ಲ ಒಂದರೊಳಗೊಂದು ಬೆಸೆದ ಕೊಂಡಿ. ನಮ್ಮ ನಮ್ಮ ಕ್ಷೇತ್ರದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸಂಬಂಧಿತ ಕೌಶಲಗಳನ್ನು ಕಲಿಯುತ್ತಿರಬೇಕು. ನಿನ್ನೆ ಕಲಿತಿದ್ದು ಇಂದು ಹಳತಾಗುವುದರಿಂದ. ನಾವು ನಾಳೆಗೇನು ಬೇಕು ಎಂಬುದನ್ನು ಯೋಚಿಸಿ ಅದನ್ನು ಇಂದೇ ಕಲಿಯಬೇಕು. ಇಲ್ಲವಾದರೆ, ಕೆಲವೇ ವರ್ಷಗಳಲ್ಲಿ ನಾವು ಮೂಲೆಗುಂಪಾಗಿಬಿಡುತ್ತೇವೆ. ಅಧ್ಯಾಪಕನಾದವನು ಹೊಸ ಭೋದನಾ ಸಾಮಗ್ರಿ ಸಿದ್ಧಿಪಡಿಸಿದಂತೆ, ವಕೀಲ ಕಾನೂನಿನ ಹೊಸ ತಿದ್ದುಪಡಿಗಳನ್ನು ಮನದಟ್ಟು ಮಾಡಿಕೊಳ್ಳುವಂತೆ ಪ್ರತಿ ಕ್ಷೇತ್ರದವರೂ ತಮ್ಮ ತಮ್ಮ ವೃತ್ತಿ ಕೌಶಲವನ್ನು ತಪ್ಪದೆ ಬೆಳೆಸಿಕೊಳ್ಳಬೇಕು. ಹಾಗೆ ಅಪ್‌ಡೇಟ್ ಮಾಡಿಕೊಂಡಾಗ ಮಾತ್ರ ಮುಂದಿನ ಪ್ರಗತಿ, ಬಡ್ತಿ ಹೊಂದಲು ಸಾಧ್ಯ.
5.ಎಚ್ಚರಿಕೆ ಘಂಟೆಗಳನ್ನು ಗಮನಿಸುತ್ತಿರಿ: ಕೆಲವೊಮ್ಮೆ ಕೆಲಸ ಬದಲಾಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಬಹುದು. ಆಗ ನಾವು ಜಾಗರೂಕರಾಗಿದ್ದರೆ ಅದಕ್ಕೆ ಸನ್ನದ್ಧರಾಗಬಹುದು. ಇಲ್ಲವಾದರೆ ದಿಢೀರನೆ ಶಾಕ್‌ಗೆ ಒಳಗಾಗಿಬಿಡುತ್ತೇವೆ. ನಮ್ಮ ಬಾಸ್ ನಮ್ಮನ್ನು ಹೊರಗೆ ಕಳಿಸಲು ಸಿದ್ಧರಾಗುತ್ತಿದ್ದಾರೆ ಎಂಬುದನ್ನು ಸೂಚಿಸುವ ಹಲವಾರು ಸಂಕೇತಗಳಿರುತ್ತವೆ. ಅವರು ನಮ್ಮನ್ನು ಕ್ರಮೇಣ ಕಡೆಗಣಿಸಲು ಆರಂಭಿಸಬಹುದು ಅಥವಾ ಪ್ರಾಜೆಕ್ಟ್‌ನ ಪ್ರಗತಿ ವರದಿಯನ್ನು ಇತರರಿಂದ ತರಿಸಿಕೊಳ್ಳಲು, ನಮ್ಮನ್ನು ಬಿಟ್ಟು ಮೀಟಿಂಗ್ ಮಾಡಲು ಆರಂಭಿಸಬಹುದು. ಇದೆಲ್ಲದರ ಮೊದಲ ಹಂತವಾಗಿ ಅವರು ನಮ್ಮ ಪ್ರಾಜೆಕ್ಟ್‌ನ ಬಗ್ಗೆ ಪದೇ ಪದೆ ನಮ್ಮಿಂದ ವಿವರಣೆ ಪಡೆಯುವುದು, ನಮ್ಮ ಕೆಲಸದಲ್ಲಿ ಅತೀವ ಕುತೂಹಲ ತೋರುವುದು ಮಾಡಬಹುದು. ಜೊತೆಗೆ ನಮ್ಮ ಅನುಪಸ್ಥಿತಿಯಲ್ಲೂ ಕಚೇರಿ ಅಥವಾ ಕೆಲಸ ಸುಸೂತ್ರವಾಗಿ ನಡೆಯಬಹುದೊ? ಎಂದು ತಿಳಿಯಲು ಅವರು ಪ್ರಯತ್ನಿಸಬಹುದು.
ಬೇಕೆಂದೇ ನಮ್ಮನ್ನು ಹೊರಗಿಟ್ಟು ಕೆಲಸ ಹೇಗೆ ಸಾಗುತ್ತದೆ ಎಂದು ಪರಿಶೀಲಿಸಬಹುದು. ಇದೆಲ್ಲದರ ಅರ್ಥ, ಅವರಿಗೆ ನಮ್ಮ ಆವಶ್ಯಕತೆ ಇಲ್ಲ ಅಥವಾ ನಾವಿಲ್ಲದೆಯೂ ಅವರು ಕಂಪೆನಿ ನಡೆಸಲು ಸಿದ್ಧ ಎಂದು. ಮೊದಲ ಹಂತದಲ್ಲಿ ಅವರ ಈ ನಿಲುವಿಗೆ ಕಾರಣ ತಿಳಿಯಲು ಪ್ರಯತ್ನಿಸಿ, ನಮ್ಮಿಂದ ತಪ್ಪಿದ್ದರೆ ತಿದ್ದಿಕೊಂಡು ಕೆಲಸದಲ್ಲಿ ಮುಂದುವರಿಯಲು ಪ್ರಯತ್ನಿಸಬಹುದು. ಅದಾಗದಿದ್ದರೆ, ಹೆಚ್ಚು ಚಿಂತಿಸದೆ ಹಿಂದೆ ಹೇಳಿದಂತೆ ಕೌಶಲಗಳನ್ನು ವೃದ್ಧಿಸಿಕೊಂಡಿದ್ದರೆ, ಉತ್ತಮ ಸಂವಹನ ಕೌಶಲ ಹೊಂದಿದ್ದರೆ, ನಾವು ಹೊಸ ಕಂಪೆನಿ, ಹೊಸ ಕೆಲಸ, ಹೊಸ ಜವಾಬ್ದಾರಿ ಹೊರಬಹುದು. ಹೊಸ ಕನಸು, ಹೊಸ ಪ್ರಯತ್ನ ಆರಂಭವಾಗುವುದೇ ಇಂತಹ ಅನಿರೀಕ್ಷಿತ ತಿರುವುಗಳಿಂದ. ಉತ್ತಮ ವೃತ್ತಿಜೀವನ ಎಲ್ಲರ ಗುರಿಯಾಗಿರಲಿ. ಎಲ್ಲರಿಗೂ ಗುಡ್‌ಲಕ್!
* ಪ್ರೊ|| ರಘು ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.