ಏನು, ಸ್ಕೋಪಾ? ಸ್ಕೋಪ್ ಇರೋ ಕೋರ್ಸಲ್ಲಿ ಹಂಪ್‌ಗ್ಳಿವೆ, ಎಚ್ಚರ!
Team Udayavani, May 9, 2017, 3:45 AM IST
ಇಷ್ಟರಲ್ಲೇ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮೊದಲೇ ಕಿವಿಯೇ ಬಿಸಿ ಆಗುವಂತೆ ಮಕ್ಕಳ ನೂರಾರು ಟಿಪ್ಸ್ ಕೇಳಿರುತ್ತಾರೆ. ಅವರ ಆಸಕ್ತಿಗಳನ್ನೆಲ್ಲ ಗಾಳಿಗೆ ತೂರುವಂತೆ ನಾನಾ ಉಪದೇಶಗಳು ಅವರನ್ನು ಗೊಂದಲಕ್ಕೆ ನೂಕಿರುತ್ತವೆ. ತುಂಬಾ ಸ್ಕೋಪ್ ಇದೆಯೆಂದು ಜನಪ್ರಿಯ ಕೋರ್ಸ್ ಅನ್ನು ಆರಿಸಿಕೊಂಡ್ರೆ ಏನಾಗುತ್ತೆ? ಆಸಕ್ತಿಯ ಹಾದಿ ಮರೆತು, ಬೇರೆ ಇನ್ನಾವುದೋ ಸಬೆಕ್ಟ್ ಅನ್ನು ಅಪ್ಪಿಕೊಂಡರೆ ಆಗುವ ಪರಿಣಾಮ ಏನು? ಮಕ್ಕಳ- ಪೋಷಕರ ಪ್ರಜ್ಞೆಯ ಕಿಟಕಿ ತೆರೆಸುವ ಬರಹವಿದು…
ಪಿಯುಸಿಯಲ್ಲಿ ಕ್ಲಾಸ್‌ಮೇಟ್ ಆಗಿದ್ದವನು ಮೊನ್ನೆ ಅಚಾನಕ್ಕಾಗಿ ಎದುರು ಸಿಕ್ಕ. “ನನ್ನ ಗುರುತು ಸಿಕ್ತಾ?’ ಎನ್ನುವ ಪ್ರಶ್ನೆಯೊಂದಿಗೆ ಶುರುವಾದ ಮಾತುಕತೆ ಮತ್ತಷ್ಟು ಮುಂದುವರಿಯಿತು. ಪಿಯುಸಿಯಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿದ್ದವನು ಇದೀಗ ಸರ್ಕಾರಿ ಕಾಲೇಜಿನಲ್ಲಿ ಇತಿಹಾಸ ಬೋಧಿಸುವ ಅಧ್ಯಾಪಕನಾಗಿರುವ ವಿಚಾರ ಕೇಳಿ ಹುಬ್ಬೇರಿಸುವ ಸರದಿ ನನ್ನದಾಗಿತ್ತು. ನನ್ನಲ್ಲಿನ ಅಚ್ಚರಿ ಕಂಡು ವಿಜ್ಞಾನದಿಂದ ಆರ್ಟ್ಸ್ನೆಡೆಗಿನ ಪಯಣದ ಕಥೆ ಬಿಚ್ಚಿಟ್ಟ. ನಮ್ಮ ಹಾಗೆಯೇ ಪಿಯು ಮುಗಿದ ನಂತರ ಎಂಜಿನಿಯರಿಂಗ್ ಸೇರಿದ್ದ ಅವನು, ಎರಡು ವರ್ಷ ಎಂಜಿನಿಯರಿಂಗ್ ಓದಿ ಆನಂತರ ಇದು ತನ್ನ ಆಸಕ್ತಿಗೆ ಪೂರಕವಾದ ಕೋರ್ಸ್ ಖಂಡಿತಾ ಅಲ್ಲ ಎಂಬುದನ್ನು ತನಗೆ ತಾನೆ ಮನದಟ್ಟು ಮಾಡಿಕೊಳ್ಳುವುದಲ್ಲದೆ ಮನೆಯವರಿಗೂ ಕನ್ವಿನ್ಸ್ ಮಾಡಿ, ಎಂಜಿನಿಯರಿಂಗ್‌ಗೆ ಎಳ್ಳು ನೀರು ಬಿಟ್ಟು ಬಿಎ, ಎಂಎ ಓದಿ ಇದೀಗ ಇತಿಹಾಸ ಬೋಧಿಸುವ ಕಾಯಕದಲ್ಲಿ ಕಾರ್ಯನಿರತನಾಗಿರುವುದಾಗಿ ತಿಳಿಸಿದ.
“ಇದೆಲ್ಲ ಬೇಕಿತ್ತಾ?’ ಎಂಬ ಪ್ರಶ್ನೆ ನನ್ನೊಳಗೆ ರೂಪುಗೊಳ್ಳುತ್ತಿರುವ ಸೂಚನೆ ಅರಿತು, ನಾನು ಆ ಪ್ರಶ್ನೆ ಕೇಳುವ ಮುನ್ನವೇ ಅವನು ಪ್ರತಿಕ್ರಿಯಿಸತೊಡಗಿದ. “ಅವತ್ತು ನಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ಇಂದಿಗೂ ನನ್ನಲ್ಲಿ ಖುಷಿ ಇದೆ. ನಾನೀಗ ಎಂಜಿನಿಯರಿಂಗ್ ಓದಿದ ನನ್ನ ಸ್ನೇಹಿತರಿಗಿಂತ ಕೊಂಚ ಕಡಿಮೆ ಸಂಬಳ ಪಡೆಯುತ್ತಿರಬಹುದೇನೊ. ಆದರೆ, ಮಾಡುತ್ತಿರುವ ವೃತ್ತಿಯ ಕುರಿತು ತೃಪ್ತಿ ಇದೆ. ದಿನಾ ಬೆಳಗ್ಗೆ ಎದ್ದು ಕೆಲಸಕ್ಕೆ ಹೊರಡುವಾಗ, ಒಮ್ಮೆಯೂ ಈ ಕೆಲ್ಸ ಯಾವನಿಗೆ ಬೇಕು ಎಂಬ ಅಸಮಾಧಾನ ಹತ್ತಿರ ಸುಳಿದಿಲ್ಲ. ನಾನೇನಾದರೂ ಆಸಕ್ತಿ ಇಲ್ಲದಿದ್ದರೂ ಎಂಜಿನಿಯರಿಂಗ್ ಪೂರ್ಣಗೊಳಿಸಿ ಅದೇ ಕ್ಷೇತ್ರದಲ್ಲಿ ಮುಂದುವರಿದಿದ್ದರೆ ಹೀಗೆ ನೆಮ್ಮದಿಯಿಂದಿರಲು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ಮಂಡಿಸಿದ.
ಕೆಲ ವರ್ಷಗಳ ನಂತರ ತೀರಾ ಅನಿರೀಕ್ಷಿತವಾಗಿ ಎದುರಾದ ಸ್ನೇಹಿತ, ಹೇಳಿಕೊಂಡ ತನ್ನದೇ ಬದುಕಿನ ಈ ಆಸಕ್ತಿದಾಯಕ ಕಥೆ “ಮುಂದೇನು ಮಾಡುವುದು?’ ಎಂಬ ಪ್ರಶ್ನೆಗೆ ಉತ್ತರ ಅರಸುವ ಹಂತದಲ್ಲಿರುವ ವಿದ್ಯಾರ್ಥಿಗಳು ಹಾಗೂ ತಮ್ಮ ಮಕ್ಕಳ ಪರವಾಗಿ ಸ್ವತಃ ತಾವೇ ನಿರ್ಧಾರ ಕೈಗೊಳ್ಳುವ ಪೋಷಕರಿಗೆ ಒಂದೊಳ್ಳೆ ಸಂದೇಶ ರವಾನಿಸುವಂತಿದೆ. ಈಗಷ್ಟೇ ಪಿಯುಸಿ ಮುಗಿಸಿ ಮುಂದೆ ಯಾವ ಪದವಿಗೆ ಪ್ರವೇಶ ಪಡೆಯುವುದು ಎಂಬ ಆಲೋಚನೆಯಲ್ಲಿರುವವರು ಕೂಡ ತಮ್ಮ ಆಸಕ್ತಿಗೆ ಅನುಗುಣವಾದ ಆಯ್ಕೆಯನ್ನೇ ಮಾಡಿಕೊಳ್ಳಲು ಸಾಕಷ್ಟು ಸಕಾರಣಗಳಿವೆ.
“ಈ ಕೋರ್ಸಿಗೆ ಸಾಕಷ್ಟು ಬೇಡಿಕೆ ಇದೆ. ಇದನ್ನು ಓದಿದ್ರೆ ಕೆಲ್ಸ ಗ್ಯಾರಂಟಿ. ಲೈಫಲ್ಲಿ ಬೇಗ ಸೆಟ್ಲ ಆಗ್ಬಹುದು’ ಎಂಬಂಥ ಅಭಿಪ್ರಾಯಗಳಿಗೆ ಓಗೊಟ್ಟು ಆಸಕ್ತಿಯ ಕ್ಷೇತ್ರ ಬದಿಗಿರಿಸುವುದರಲ್ಲಿ ಅರ್ಥ ಇದೆಯೇ ಎಂದೂ ಪರಿಶೀಲಿಸಬೇಕಿದೆ.
ಜಾಗತೀಕರಣಕ್ಕೆ ತೆರೆದುಕೊಂಡಿರುವ ನಮ್ಮ ಉದ್ಯೋಗಾವಕಾಶಗಳ ಮೇಲೆ ಜಗತ್ತಿನ ಯಾವುದೋ ಮೂಲೆಯಲ್ಲಿ ಜರುಗುವ ಬೆಳವಣಿಗೆಯೂ ನೇರ ಪರಿಣಾಮ ಬೀರುತ್ತದೆಂಬ ಸಂಗತಿಯನ್ನು ಪರಿಗಣನೆಗೆ ತೆಗೆದುಕೊಂಡು ನೋಡಿದರೆ ಸಾಕು, ನಿರ್ದಿಷ್ಟ ಕೋರ್ಸುಗಳ ಸುತ್ತ ಹರಡಿಕೊಳ್ಳುವ ಸ್ಕೋಪ್‌ನ ಗುಳ್ಳೆಗಳು ಒಡೆಯಲು ಹೆಚ್ಚು ಸಮಯ ಬೇಕಿಲ್ಲದಿರುವುದು ಮನದಟ್ಟಾಗುತ್ತದೆ. ಉದ್ಯೋಗಾವಕಾಶ ಸೃಷ್ಟಿಯ ಹಿನ್ನೆಲೆಯಲ್ಲಿ ರೂಪುಗೊಳ್ಳುವ ಸ್ಕೋಪ್‌ನ ಎದೆ ಸೀಳಲು ಡಿಮಾನಿಟೈಸೇಷನ್, ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ, ಬದಲಾದ ಹೆಚ್1 ಬಿ ವೀಸಾ ನೀತಿ, ಬ್ರೆಕ್ಸಿಟ್, ಹೆಚ್ಚುತ್ತಿರುವ ಆಟೊಮೇಷನ್ ತಂತ್ರಜ್ಞಾನದ ಬಳಕೆ- ಹೀಗೆ ಏನೇನೋ ನೆಪಗಳಿವೆ. ಹಾಗಾಗಿ ಸ್ಕೋಪ್‌ಗಿಂತ ಆಸಕ್ತಿಯೇ ಕೊನೆಗೂ ಕೈ ಹಿಡಿದು ನಡೆಸುವ ಜೊತೆಗೆ ನೆಮ್ಮದಿಯನ್ನೂ ದಯಪಾಲಿಸುವ ಆಯ್ಕೆಯಾಗಿ ತೋರುತ್ತದೆ.
ವೃತ್ತಿಪರ ಹಣೆಪಟ್ಟಿ ಹೊತ್ತಿರುವ ಕೋರ್ಸುಗಳನ್ನು ಪೂರೈಸಿರುವವರು ಕೂಡ ಕೆಲಸ ಸಿಗದೆ, ಸಿಕ್ಕಿರುವ ಕೆಲಸವೂ ಸಹನೀಯವಾಗದೆ ಅತಂತ್ರರಾಗುತ್ತಿರುವ ಉದಾಹರಣೆಗಳು ಬೇಕಾದಷ್ಟಿವೆ. ಹಾಗಂತ ಅವುಗಳ ಸಹವಾಸವೇ ಬೇಡವೆಂಬ ನಿಲುವು ತಳೆಯುವ ಅಗತ್ಯವಿಲ್ಲ. ಆಸಕ್ತಿ ಇದ್ದರೆ ವೃತ್ತಿಪರ ಶಿಕ್ಷಣವೂ ಉತ್ತಮ ಆಯ್ಕೆಯೇ. ಫೋಟೋಗ್ರಫಿ ಕುರಿತು ಒಲವು ಬೆಳೆಸಿಕೊಂಡಿರುವ ಕೆಲ ಎಂಜಿನಿಯರಿಂಗ್ ಪದವೀಧರರು, ಸಂಪಾದನೆಗಾಗಿ ವೆಡ್ಡಿಂಗ್ ಫೋಟೊಗ್ರಫಿ ಮಾಡುತ್ತ, ಉಳಿದ ವೇಳೆಯಲ್ಲಿ ತಮ್ಮ ಆಸಕ್ತಿಗನುಗುಣವಾದ ವಿಷಯ- ವಿದ್ಯಮಾನಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸರೆ ಹಿಡಿಯುವ ಮೂಲಕ ತಮ್ಮ ಮನಸ್ಸಿಗೆ ಮುದ ನೀಡುವ ಕ್ಷೇತ್ರದಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿರುವ ನಿದರ್ಶನಗಳೂ ಕಣ್ಣ ಮುಂದಿವೆ.
ಲೈಫ್ನಲ್ಲಿ ಬೇಗ ಸೆಟಲ್ ಆಗಬೇಕು ಎಂಬ ಧಾವಂತದಲ್ಲಿ ದೀರ್ಘಕಾಲ ನಮ್ಮನ್ನು ಸಲಹಬಹುದಾದ ಕ್ಷೇತ್ರಗಳತ್ತ ಕಣ್ಣು ಹಾಯಿಸದೆ ಹೋಗುವುದು, ನಮ್ಮೆದುರು ಇರಬಹುದಾದ ನಿಟ್ಟುಸಿರಿನ ಹಾದಿಗಳಿಗೆ ನಾವೇ ಬೆನ್ನು ತೋರಿದಂತೆ ಅಲ್ಲವೇ? ಸ್ಕೋಪ್‌ನ ಗುಳ್ಳೆ ಒಡೆದರೂ ಬದುಕು ಕಟ್ಟಿಕೊಳ್ಳುವ ಆತ್ಮಸ್ಥೈರ್ಯ ರೂಪುಗೊಳ್ಳುವಂತೆ ಎಚ್ಚರ ವಹಿಸುವುದು ಒಳಿತು. ಯಾವುದೂ ಸ್ಥಿರವಲ್ಲದ ವರ್ತಮಾನದಲ್ಲಿ ಆಸಕ್ತಿಯೆಡೆಗೆ ವಾಲುವುದೇ ಸೂಕ್ತ ಆಯ್ಕೆಯಾಗಿ ತೋರುತ್ತಿದೆ.
ಅಪ್ಪ- ಅಮ್ಮನ ಮಾತಿಗೆ ಮಣಿಯದಿರಿ. ಲೈಫು ನಿಮೆ ಸಿನಿಮಾ, ನೀವೇ ಡೈರೆಕ್ಟ್ ಮಾಡಿ… ಬಚಾವ್ ಆಗಲು ಇದೊಂದೇ ದಾರಿ…
– ಕೋರ್ಸ್‌ನ ಆಯ್ಕೆಗೂ ಮುನ್ನ ಅಪ್ಪ- ಅಮ್ಮನ ಬಳಿ ನಿಮ್ಮ ಆಸಕ್ತಿಯ ಬಗ್ಗೆ ಹೇಳಿಕೊಳ್ಳಿ.
– ನಿಮ್ಮ ಆಸಕ್ತಿಯಲ್ಲಿ ನೀವೇನು ಸಾಧಿಸಿದ್ದೀರಿ ಎಂಬುದನ್ನು ಪೋಷಕರಿಗೆ ಮನದಟ್ಟು ಮಾಡಿಕೊಡಿ.
– ಹವ್ಯಾಸವನ್ನೇ ಬದುಕಿಗೆ ದಾರಿ ಮಾಡಿಕೊಂಡವರ ಉದಾಹರಣೆಯನ್ನು ಅವರ ಮುಂದಿಡಿ.
– ವೃತ್ತಿಪರ ಕೋರ್ಸ್ ತೆಗೆದುಕೊಂಡವರ ಸ್ಥಿತಿಗತಿಗಳನ್ನು ಅವರಿಗೆ ತಿಳಿಸಿ.
– ಸ್ಕೋಪ್ ಇದೆಯೆಂಬ ಕಾರಣಕ್ಕೆ ಆಸಕ್ತಿಯ ಹಾದಿಯನ್ನು ಬದಲಿಸೋದು ಅಷ್ಟು ಸಮಂಜಸವಲ್ಲ.
– ಒಂದು ವೇಳೆ ಬಲವಂತವಾಗಿ ಬೇರೆ ಹಾದಿಯನ್ನೇ ಒಪ್ಪಿಕೊಂಡರೂ, ಅದರ ಕಷ್ಟ-ನಷ್ಟಗಳ ಬಗ್ಗೆ ಮನೆಯವರಿಗೆ ವಿವರಿಸಿ.
– ಅದು ಡಬ್ಟಾ ಕೋರ್ಸ್, ನೀನ್ಯಾಕೆ ತಗೊಂಡೆ?
ಆ ಕೋರ್ಸಿಗೆ ಸಿಕ್ಕಾಪಟ್ಟೆ ಡಿಮ್ಯಾಂಡು
– ಇದನ್ನು ಓದಿದ್ರೆ ನಿಂಗೆ ಕೆಲ್ಸ ಸಿಗುತ್ತಾ?
– ನೀನು ಲೈಫಲ್ಲಿ ಸೆಟಲ್ ಆದ್ಹಂಗೆ…
– ನಿಂಗೆ ಆ ಸಬೆjಕ್ಟ್ ಸೂಟ್ ಆಗುತ್ತಾ?
ಎಚ್.ಕೆ. ಶರತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.