ಬಂದಾ ನೋಡಿ, ದೇಸಿ ಚಾಪ್ಲಿನ್!; ಲಾಸ್ಟ್‌ಬೆಂಚಿನ ಗೆಳೆಯ ಎಮೋಜಿ
Team Udayavani, Apr 4, 2017, 6:02 PM IST
ಸ್ಮೈಲಿಯಿಂದ ಹಿಡಿದು ಅಳುಮೊಗದ ತನಕ ಮೊಬೈಲುಗಳಲ್ಲಿ ಹರಿದಾಡುವ ಎಮೋಜಿಗಳು ಕಾಲೇಜಿನಲ್ಲೂ ಸಖತ್ ಕ್ರೇಜ್ ಹುಟ್ಟಿಸುವಂಥವು. ಚಾಪ್ಲಿನನ ಹಾವಭಾವಗಳನ್ನು ಇವು ನೆನಪಿಸುತ್ತವೆ. ಕ್ಲಾಸಿನ ಮೌನದ ನಡುವೆಯೇ ಇವು ಮೊಬೈಲುಗಳಲ್ಲಿ ಠಪಕ್ಕನೆ ಹಾರಾಡುತ್ತವೆ. ಒಟ್ಟಾರೆ ಇರುವ 1266 ಎಮೋಜಿಗಳಲ್ಲಿ 102 ಸೂಚಕಗಳಿಗೆ ಐಡಿಯಾ ಕೊಟ್ಟಿದ್ದು ಅಮೆರಿಕ,
ಇಂಗ್ಲೆಂಡ್, ಜರ್ಮನಿಯ ಕಾಲೇಜು ವಿದ್ಯಾರ್ಥಿಗಳು! ಆದರೆ, ಇವುಗಳಲ್ಲಿ ಅನೇಕವು ಭಾರತೀಯ ಕಾಲೇಜು ಹುಡುಗರಿಗೆ ಮ್ಯಾಚ್ ಆಗುವುದೇ ಇಲ್ಲ. ದೇಸಿ ಹುಡುಗರು ಬಯಸುವ ಎಮೋಜಿಗಳು ಬೇರೆಯವೇ ಇವೆ. ಯಾವುವು ಗೊತ್ತಾ?
ಮೂವತ್ತೆರಡು ಹಲ್ಲು ಬಿಟ್ಟು, ನಿನ್ನ ನಗುವಿನ ಸೆಲ್ಫಿ ತೆಗೆದು ಐಶ್ವರ್ಯಾ ರೈಗೆ ಕಳ್ರು ಅಂದಿದ್ದಷ್ಟೇ. ವೇಲ್ ಅನ್ನು ರಪ್ಪನೆ ನನ್ನ ಮುಖಕ್ಕೆ ಬಡಿದು ಯೂ ಟರ್ನ್ ಹೊಡೆದಿದ್ದಳು. ನಾಲ್ಕು ದಿನ ಠೂ ಬಿಟ್ಟವಳು ಪುನಃ ಮಾತೇ ಆಡಿರ್ಲಿಲ್ಲ. ಸೈಲೆಂಟ್ ಮೋಡ್‌ನಲ್ಲಿದ್ದ ಫೋನೊಂದು ಅವಸ್ಥೆ ಬದಲಿಸಿ ಅಬ್ಬರಿಸುವಂತೆ, ಐದನೇ ದಿನ ಆವಾಜ್ ಹಾಕಲು ಬಂದಳು. ಅವಳ ಕೈಯಲ್ಲೊಂದು ಚಿತ್ರ. ಅದೂ ಅವಳದ್ದೇ ಸ್ಮೈಲಿಯ ಫೋಟೋ. ಮಿಲ್ಕಿಬಾರ್ ತಿಂದು, ಫೈವ್‌ಸ್ಟಾರ್ ಕುಕ್ಕೀ ಚಪ್ಪರಿಸಿ ಹುಳುಕಾದ ಹಲ್ಲುಗಳು ಆ ನಗುವಿನಲ್ಲಿ ಮಂದ ಬೆಳಕು ಬೀರಿದ್ದವು. “ಹೆಲೋ, ನನ್ನ ಸ್ಮೈಲ್ ಈಗ ವರ್ಲ್ಡ್ ಲೆವೆಲ್ಲಮ್ಮಾ… ನೋಡು ಕೆಲವೇ ದಿನದಲ್ಲಿ ನನ್ನಂಥ ಚಾಕ್ಲೆಟ್‌ಪ್ರಿಯರ ಸ್ಮೈಲೂ ಎಮೋಜಿ ಆಗುತ್ತೆ’ ಎಂದಳು. ಎಮೋಜಿಯನ್ನು ಅಧಿಕೃತಗೊಳಿಸುವ ಯೂನಿಕೋಡ್ ಸಂಸ್ಥೆಗೆ ಅವಳು ತನ್ನ ಹುಳುಕು ಹಲ್ಲುಗಳ ನಗುವಿನ ಚಿತ್ರವನ್ನು ಕಳುಹಿಸಿದ್ದಳೆಂದು ಆಮೇಲೆ ಗೊತ್ತಾಯ್ತು! ಆಕೆಯ ಅಳಲು ಆ ಯೂನಿಕೋಡ್ ಸಂಸ್ಥೆಯನ್ನು ತಲುಪಿತೋ ಇಲ್ಲವೋ, ನನಗಂತೂ ತಟ್ಟಿತು. ಅವಳು ಹೇಳಿದ್ದು ನಿಜ ಅಂತನ್ನಿಸಿತು.
ಮನುಷ್ಯನ ಮುಖಭಾವ- ಹಾವಭಾವಕ್ಕೆ ಸಂಬಂಧಿಸಿ 1266 ಎಮೋಜಿಗಳು ಫೇಸ್‌ಬುಕ್ಕು, ವಾಟ್ಸಾಪು, ಟ್ವಿಟ್ಟರಿನ ಬುಟ್ಟಿಯಲ್ಲಿ ಮಿಸುಕಾಡುತ್ತಿವೆ. ಮೆಸೇಜು ಟೈಪಿಸುವ ಶೇ.30ರಷ್ಟು ಕೆಲಸವನ್ನು ಎಮೋಜಿಗಳು ತಗ್ಗಿಸಿವೆ. ತರಗತಿಯ ಮೌನದಲ್ಲಿ ಇವೇ ಠಪಕ್ಕನೆ ಹಾರುತ್ತಾ, ಮೊಬೈಲಲ್ಲಿ ಮಾತಾಡಿಕೊಳ್ಳುತ್ತವೆ. ಚಾಪ್ಲಿನನಂತೆ ರಂಜಿಸುತ್ತವೆ. ಈಗಿರುವ ಎಮೋಜಿಗಳಲ್ಲಿ ಸುಮಾರು 102 ಸೂಚಕಗಳಿಗೆ ಐಡಿಯಾ ಕೊಟ್ಟಿದ್ದು ಅಮೆರಿಕ, ಇಂಗ್ಲೆಂಡು, ಜರ್ಮನಿಗೆ ಸೇರಿದ ಕಾಲೇಜು ವಿದ್ಯಾರ್ಥಿಗಳು. ಯುನಿಕೋಡ್ ಸಂಸ್ಥೆ ಅದನ್ನು ಒಪ್ಪಿಕೊಂಡು ಅಧಿಕೃತವಾಗಿ ಹರಿದಾಡಲು ಬಿಟ್ಟಿದೆ. ಆದರೆ, ಭಾರತೀಯ ಕಾಲೇಜು ಮಂದಿಗೆ ತೀರಾ ಅಗತ್ಯವಿದ್ದ ಸೂಚಕಗಳು ಎಮೋಜಿ ಅವತಾರದಲ್ಲಿಲ್ಲ.
ನನ್ನೊಬ್ಬ ಗೆಳೆಯನಿದ್ದಾನೆ. ವಿಪರೀತ ನೀರು ಕುಡಿವ ಆಸಾಮಿ, ಕ್ಲಾಸಿನ ಮಧ್ಯೆ “ಸ್ಸಾ…’ ಎಂದು ಕಿರುಬೆರಳನ್ನು ಮೇಲಕ್ಕೆತ್ತುವವನು. ಅದನ್ನು ಕಂಡು ಓರಗೆಯವರೆಲ್ಲ ಗೊಳ್ ಎಂದು ನಗುವರು. “ಯೂರಿನ್ ಪಾಸ್‌ಗೆ ಅನುಮತಿ ಕೋರುವ’ ಎಮೋಜಿಯೂ ಒಂದಿದ್ದರೆ
ಅವನಿಗೆ ಮುಜುಗರ ತಪ್ಪಿಸಬಹುದಿತ್ತಲ್ಲ ಅಂತನ್ನಿಸುತಿದೆ. ಇನ್ನು ನಮ್ಮ ಕ್ಯಾಂಪಸ್ಸಿಗೆ ಹೊಸ ಬೈಕು, ಸ್ಕೂಟಿಗಳು ಬಂದೇ ಬರುತ್ತವೆ.
ಪೂಜೆ ಮಾಡಿಸಿದ ಮೇಲೆ ಅವುಗಳ ಮುಂದೆ ಲಿಂಬೆಹಣ್ಣು, ನಾಲ್ಕು ಮೆಣಸಿನಕಾಯಿ ಕಟ್ಟೋದು ಮಾಮೂಲಿ. ಲಿಂಬೆಹಣ್ಣು-
ಮೆಣಸಿನಕಾಯಿ ಮಾಲೆಯನ್ನೂ ಏಕೆ ಎಮೋಜಿಗೆ ಸೇರಿಸಿಲ್ಲ ಎನ್ನುವ ಪ್ರಶ್ನೆ ನನ್ನದು.
ಕಾಲೇಜು ಹುಡುಗರು ತಮಾಷೆಗೆ ಸುಳ್ಳು ಹೇಳಿ, ಯಾಮಾರಿಸುತ್ತಲೇ ಇರ್ತಾರೆ. ಇಂಥವರಿಗಾಗಿ ಕಿವಿಮೇಲೆ ದಾಸವಾಳ ಇಟ್ಕೊಂಡ ಎಮೋಜಿ ಹುಟ್ಟಿದ್ದಿದ್ರೆ ಚೆನ್ನಾಗಿರಿ¤ತ್ತು! ಸ್ಕೂಟಿ ಇಲ್ಲದ ಹುಡುಗಿಯರು ಬಸ್ಸಿನ ಹೊರತಾಗಿ ಆಟೋದಲ್ಲೇ ಕಾಲೇಜು ಸೇರ್ತಾರೆ. ಆಟೋ ರಿಕ್ಷಾವೂ ಎಮೋಜಿಯ ಲಿಸ್ಟಲ್ಲಿ ಇಲ್ವಲ್ಲ ಸ್ವಾಮಿ. ಕಾರು, ಬೈಕು, ಬಸ್ಸು, ಲಾರಿ ಸೇರಿ 67 ವಾಹನಗಳ ಸೂಚಕ
ಇದ್ದರೂ ರಿಕ್ಷಾಗೇಕೆ ಮೀಸಲಾತಿ ನೀಡಿಲ್ಲ? ಹೋಗಲಿ ಬಿಡಿ… ಎಷ್ಟೋ ಸಲ ಈ ಕಾಲೇಜಿನ ಹುಡುಗ- ಹುಡುಗಿಯರಿಗೆ ಲವ್ವಾಗಿ,
ನಿಶ್ಚಿತಾರ್ಥ, ಮದ್ವೆ ಆಗೋದಿದೆ. ಈ ಸುದ್ದಿಗೆ ಕಾರಿಡಾರಿನಲ್ಲಿ ಟಿಆರ್‌ಪಿ ಹೆಚ್ಚು. ಎಮೋಜಿಯಲ್ಲಿ “ಲಡೂx’ ಕೂಡ ಇದ್ದಿದ್ದರೆ, ಈ
ಸಿಹಿಸುದ್ದಿಯನ್ನು ಇನ್ನೂ ಚುಟುಕಾಗಿ ವಾಟ್ಸಾಪಿನಲ್ಲಿ ಪೋಸ್ಟ್ ಮಾಡºಹುದಿತ್ತು. ಆದರೆ, ಲಡ್ಡು ಕೂಡ ಎಮೋಜಿ ಪಟ್ಟಿಯಲ್ಲಿಲ್ಲ. ಪಾನಿಪುರಿ, ಗೋಲ್ಗಪ್ಪಾ ಅಂದ್ರೆ ಬಾಯ್ಬಿಡುವ ಹುಡುಗಿಯರಿಗೆ ಎಮೋಜಿಯಲ್ಲಿ ಅದರ ಆಯ್ಕೆಯೇ ಇಲ್ಲ!
ಜನಸಂಖ್ಯೆಯಂತೆ ಎಮೋಜಿಗಳ ಸಂಖ್ಯೆಯೂ ಸ್ಫೋಟ ಆಗ್ತಲೇ ಇದೆ. ಪ್ರತಿವರ್ಷ ಕನಿಷ್ಠ ನೂರು ಎಮೋಜಿಗಳಿಗೆ ಯೂನಿಕೋಡ್ ಒಕ್ಕೂಟ ಅಸ್ತು ಎನ್ನುತ್ತೆ. ಇತ್ತೀಚೆಗೆ ತೃತೀಯ ಲಿಂಗಿ ಸೂಚಕ “ಬೂದು ಬಣ್ಣದ ತಲೆಕೂದಲಿನ ವ್ಯಕ್ತಿ’ಯ ಎಮೋಜಿಯೂ ಪರಿಚಯವಾಗಿದೆ.
ನಿನ್ನೆಮೊನ್ನೆಯಷ್ಟೇ 67 ಹೊಸ ಎಮೋಜಿಗಳು ಜನ್ಮ ತಾಳಿವೆ. ಆದರೆ, ಇವುಗಳಲ್ಲೂ ದೇಸಿ ಕಾಲೇಜು ಹುಡುಗರ ಕೆಲವು ಪರಿಸ್ಥಿತಿಗಳಿಗೆ ಸ್ಪಂದಿಸುವ ಎಮೋಜಿಗಳು ಇಲ್ಲ. ಅವೂ ಬರಬೇಕು. ದೇಸಿ ಚಾಪ್ಲಿನನ ಅಣಕು ಭಾಷೆಯಾಗಿ ನಮ್ಮನ್ನು ಆವರಿಸಬೇಕು.
ಎಮೋಜಿ ಹುಟ್ಟಿನ ಬಗ್ಗೆಯೂ ಕಾಲೇಜಿನ ಹುಡುಗರಿಗೆ ತಕರಾರಿದೆ. ಜಪಾನಿನ ಎನ್‌ಟಿಟಿ ಡೊಕೊಮೊ ಸಂಸ್ಥೆ 1990ರಲ್ಲಿ ತಾನೇ ಮೊದಲು ಎಮೋಜಿ ಕಂಡುಹಿಡಿದಿದ್ದು ಎನ್ನುವಾಗ ಕೊಂಚ ಕೋಪ ಉಕ್ಕುತ್ತೆ. ಇದಕ್ಕೂ ಮೊದಲು ಇದರ ಸೃಷ್ಟಿಕರ್ತರು ನಮ್ಮ ಕಾಲೇಜುಗಳ ಲಾಸ್ಟ್ ಬೆಂಚ್ ಹುಡುಗರೇ! ಸುಮ್ಮನೆ ಅವರ ಡೆಸ್ಕಿನ ಮೇಲೆ ಕಣ್ಣು ಹಾಯಿಸಿ, ಅಲ್ಲಿ ಎಲ್ಲ ರೂಪದ ಮುಖ-
ಮೂತಿಗಳನ್ನು ಕೆತ್ತಿರುತ್ತಾರೆ. ಸಕಲ ಹಾವಭಾವ, ಅಣಕು, ಪ್ರತಿಮೆಗಳನ್ನು ಲಾಸ್ಟ್ ಬೆಂಚ್ ಸೃಷ್ಟಿಸಿದೆ. ಒಮ್ಮೆ ಲಾಸ್ಟ್‌ಬೆಂಚಿನ ಕೆತ್ತನೆ ನೋಡಿದ ಇತಿಹಾಸದ ಮೇಷ್ಟ್ರು, “ಮೆಸಪೊಟೇಮಿಯಾ ಕಾಲದ ಹೈರೋಗ್ಲಿಫ್ ಲಿಪಿ ಇದ್ದ ಹಾಗಿದೆಯಲ್ಲ?’ ಎಂದಿದ್ದರು. ಹಾಗಾದ್ರೆ, ಎಮೋಜಿ 5 ಸಾವಿರ ವರ್ಷದ ಹಿಂದೆಯೇ ಆವಿಷ್ಕಾರಗೊಂಡಿತ್ತಾ? ಜಪಾನ್ ಸುಳ್ಳು ಹೇಳಿತಾ? ಗೊತ್ತಿಲ್ಲ! ಎಮೋಜಿಗಳ ಮುಖ ನೋಡಿ ನೋಡಿ ಸಾಕಾಗಿ, ಪರ್ಯಾಯ ಮಾರ್ಗ ಹುಡುಕುವ ಶೂರರಿದ್ದಾರೆ. ಲಾಸ್ಟ್‌ಬೆಂಚಿನ ಗೆಳೆಯನೊಬ್ಬ ಕಳೆದವರ್ಷ
ಬಿಡುಗಡೆಯಾದ ಸನ್ನಿ ಲಿಯೋನ್ ಎಮೋಜಿಗಳನ್ನೇ ಎಲ್ಲರಿಗೂ ಕಳುಹಿಸಿ, ಮೋಜು ತೆಗೆದುಕೊಳ್ತಾನೆ. “ನಮಸ್ತೇ’ ಎನ್ನುತ್ತಾ ಬೆಳ್‌ಬೆಳಗ್ಗೆ ಆಕೆಯ ದರುಶನ ಮಾಡಿಸಿ, “ಗುಡ್‌ನೈಟ್’ ತನಕವೂ ಸನ್ನಿಯನ್ನೇ ತೋರಿಸ್ತಾನೆ! ಇನ್ನೊಬ್ಬ ಬಾಬಾ ರಾಮ್‌ದೇವ್ ಎಮೋಜಿಯನ್ನು ನಿರಂತರ ದಾಟಿಸುತ್ತಾ, ನೋಟದಲ್ಲೇ ಯೋಗ ಮಾಡಿಸ್ತಾನೆ. ಯೂನಿಕೋಡ್ ಸೃಷ್ಟಿಸಿದ ಎಮೋಜಿಗಳನ್ನು ನೋಡಿ, ಬೋರ್ ಆಗಿಯೇ ಇಂಥವು ಹುಟ್ಟಿಕೊಳ್ಳುತ್ತವೆ. ದಿಲ್ಲಿಯ ಪ್ರೊ. ಅಪರಾಜಿತ ಎಂಬಾಕೆ “ಹಿಮೋಜಿ’ ಎಂಬ ಹೆಣ್ಮಕ್ಕಳಿಗೆ ಸಂಬಂಧಿಸಿದ ಸೂಚಕಗಳನ್ನು ಪರಿಚಯಿಸಿದ್ದಾರೆ. ಹಿಂದಿ ಚಿತ್ರದ ಡೈಲಾಗ್ ಹೊಂದಿರುವ 70ಕ್ಕೂ ಅಧಿಕ “ಹಿಮೋಜಿ’ಗಳು ಈಗಾಗಲೇ ಕೆಲವು ಆ್ಯಪ್‌ಗ್ಳಲ್ಲಿ ಸಿಕ್ಕಾಪಟ್ಟೆ ಫೇಮಸ್ಸು.
ಯೂನಿಕೋಡ್ ಮುಖ್ಯಸ್ಥರು ನಮ್ಮ ಭಾವನೆಗಳನ್ನು ಕರೆಕ್ಟಾಗಿ ಅರ್ಥ ಮಾಡ್ಕೊಂಡಿಲ್ಲ ಎಂದು ಟ್ರಂಪ್ ರೀತಿ ನಾವಂತೂ ಸಿಟ್ಟಾಗೋದಿಲ್ಲ. ಅಮೆರಿಕ ಚುನಾವಣೆ ವೇಳೆ ಹಿಲರಿ ಕ್ಲಿಂಟನ್ನರ ವಕ್ರಮುಖ ಚಿತ್ರಿಸಲು ಡೊನಾಲ್ಡ್ ಟ್ರಂಪ್ ಬೇಡಿಕೆ ಇಟ್ಟಿದ್ದರಂತೆ. ಟ್ವಿಟ್ಟರ್‌ನ ಸಿಇಒಗೆ 34 ಕೋಟಿ ರೂ. ಆಮಿಷ ಒಡ್ಡಿದ್ದರಂತೆ. ಟ್ರಂಪ್ ಅಧ್ಯಕ್ಷರಾಗಿ ಆರಿಸಿ ಬಂದ್ಮೇಲೆ ಟ್ವಿಟ್ಟರ್ ಸಿಇಒ
ಒಬ್ಬರನ್ನು ಬಿಟ್ಟು ಬೇರೆಲ್ಲರನ್ನೂ ಔತಣಕ್ಕೆ ಆಹ್ವಾನಿಸಿದ್ದರಂತೆ. ಆ ರೀತಿ ಆಮಿಷ ಒಡ್ಡಲು ನಮ್ಮ ಪಾಕೆಟ್ ಮನಿ ನಿಮ್ಮ ಡಾಲರ್
ಲೆಕ್ಕದಲ್ಲೂ ಇಲ್ಲ ಬಿಡಿ. ಮಚ್ಚಾ, ಮಗಾ ಎಂದು ಭಾಷೆಯನ್ನೇ ಕಾರಿಡಾರಿನ ಲೆವೆಲ್ಲಿಗೆ ಬಗ್ಗಿಸಿದವರು ನಾವು. ಇನ್ನು ಭಾವನೆಗಳನ್ನು
ಪ್ರತಿಧಿಸುವ ಎಮೋಜಿಗಳನ್ನು ಬಿಟ್ಟೇವಾ? ನಮಗೆ ಒಗ್ಗುವ ಸೂಚಕಗಳನ್ನು ಯೂನಿಕೋಡ್ “ತಥಾಸ್ತು’ ಎನ್ನದಿದ್ದರೆ, ನಮ್ಮ ನಾಡಿನಲ್ಲೇ ಚಾಪ್ಲಿನ್ ಹುಟ್ಟಿಕೊಳ್ತಾನೆ. ಅದೂ ಥರಹೇವಾರಿ ಎಮೋಜಿ ರೂಪದಲ್ಲಿ!
ಹುಡ್ಗಿರ್‌ಗೆ ಬೇಕಾದ ಎಮೋಜಿ ಉಗುರಲ್ಲಿದೆ!
ಕಾರಿಡಾರಿನಲ್ಲಿ ಎಮೋಜಿ ಅಲೆ ಕೇವಲ ಮೊಬೈಲ್‌ಗಷ್ಟೇ ಸೀಮಿತ ಆಗಿಲ್ಲ. ಹುಡುಗಿಯರ ಕೈಬೆರಳಿನ ಉಗುರಿಗೂ ಎಮೋಜಿ ಶಿಫ್ಟ್ ಆಗಿದೆ. ಎಮೋಜಿ ನೇಲ್ ಟ್ರೆಂಡ್‌ನಲ್ಲಿ ಬೇಕಾದಂತೆ ಮುಖಭಾವಗಳನ್ನು ಚಿತ್ರಿಸಿಕೊಳ್ಳುವ ಹುಡುಗಿಯರ ಫ್ಯಾಶನ್ ಟ್ರೆಂಡ್ ಇದೀಗ ಜೋರು. ಅವರವರ ಗುಣ, ಮೂಡ್‌ಗೆ ತಕ್ಕಂತೆ ಬೆರಳಿನ ಉಗುರಿನಲ್ಲಿ ಎಮೋಜಿಗಳು ಅವತಾರ ಎತ್ತಿವೆ. ಹೀಗೆ ಚಿತ್ರಿಸಿಕೊಳ್ಳಲು
ಯೂನಿಕೋಡ್ ಒಕ್ಕೂಟದ ಒಪ್ಪಿಗೆಯ ಅಗತ್ಯ ಬೇಕಿಲ್ಲದಿರೋದ್ರಿಂದ ಬ್ಯಾಂಗಲ್ಸ್ ಸ್ಟೋರ್‌ನ ಎಮೋಜಿ ಸ್ಟಿಕ್ಕರ್ ಮಾರಾಟಗಾರನಿಗೆ ಕಮಾಯಿ ಹೆಚ್ಚು.
ನೀವೂ ರೆಡಿ ಮಾಡಿ, ಎಮೋಜಿ ಕಳ್ಸಿ!
ಸೂಚಕದ ಅಗತ್ಯತೆ, ಅನುಯಾಯಿಗಳ ಕುರಿತು ಸುದೀರ್ಘವಾಗಿ ಬರೆದು ಯೂನಿಕೋಡ್ ಒಕ್ಕೂಟಕ್ಕೆ ಕಳುಹಿಸ್ಬೇಕು.
ಯೂನಿಕೋಡ್‌ನ ತಾಂತ್ರಿಕ ಅಧಿಕಾರಿಗಳು ಕೂಲಂಕಷವಾಗಿ ಅಧ್ಯಯನಿಸ್ತಾರೆ.
ಪಾಸ್ ಆದ ಸೂಚಕಗಳು ಸ್ಕ್ರೀನ್‌ನಲ್ಲಿ ಹೇಗೆ ಕಾಣುತ್ತೆಂಬ ಟೆಸ್ಟ್ ನಡೆಯುತ್ತೆ.
ಇದು ಸುಮಾರು 2 ವರ್ಷ ಸುದೀರ್ಘ ಕಾಲ ನಡೆಯುವ ಪ್ರಕ್ರಿಯೆ.
ಯೂನಿಕೋಡ್ ನಿಮ್ಮ ಸೂಚಕವನ್ನು ಪುರಸ್ಕರಿಸಿದ್ದೇ ಆಗಿದ್ದಲ್ಲಿ ಸಂಭಾವನೆ ಇರುತ್ತೆ. ಆ್ಯಪಲ್, ಗೂಗಲ್, ಮೈಕ್ರೋಸಾಫ್ಟ್ನಂಥ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಅವನ್ನು ಚಿತ್ರಿಸಿಕೊಳ್ಳುತ್ತವೆ.
ಎಲ್ಲರಿಂದ ಎಮೋಜಿಗಳು ರೆಡಿಯಾದ ಬಳಿಕ ಒಟ್ಟಿಗೆ ಸ್ಮಾರ್ಟ್‌ಫೋನುಗಳಲ್ಲಿ ಬಿಡುಗಡೆ ಮಾಡ್ತಾರೆ.
ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.