ಬೀಸು ತಂಗಾಳಿ
Team Udayavani, Aug 22, 2018, 6:00 AM IST
ಶೈಲಜಾ ನಾಗ್ ಕನ್ನಡ ಚಿತ್ರರಂಗದ ಸದಭಿರುಚಿ ಚಿತ್ರಗಳ ನಿರ್ಮಾಪಕಿ ಎಂದೇ ಹೆಸರುವಾಸಿ. ಹಲವಾರು ಉತ್ತಮ ಧಾರಾವಾಹಿಗಳನ್ನು ನಿರ್ಮಿಸಿದ ಹೆಗ್ಗಳಿಕೆಯೂ ಇವರದ್ದು. ನಟಿಯಾಗಿ ಕೂಡ ಇವರು ಪರಿಚಿತರೇ. ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ನಿರ್ದೇಶಕ, ರಂಗಕರ್ಮಿ ಬಿ.ಸುರೇಶ ಇವರ ಪತಿ. ಇಬ್ಬರ ಪ್ರಯತ್ನದಲ್ಲಿ “ನಾನು ನನ್ನ ಕನಸು’, “ದೇವರ ನಾಡಲ್ಲಿ’, “ಪುಟ್ಟಕ್ಕನ ಹೈವೇ’, “ಅರ್ಥ’, “ಗುಬ್ಬಚ್ಚಿ’ ಮೊದಲಾದ ಸದಭಿರುಚಿಯ ಚಿತ್ರಗಳು ಕನ್ನಡಕ್ಕೆ ದೊರೆತಿವೆ. ಈಗ ದರ್ಶನ್ ಅಭಿನಯಿಸುತ್ತಿರುವ “ಯಜಮಾನ’ ಚಿತ್ರದ ನಿರ್ಮಾಣದಲ್ಲಿ ಶೈಲಜಾ ಬ್ಯುಸಿ. ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಜೊತೆ ಸೇರಿ “ಡಿ ಬೀಟ್ಸ್’ ಆಡಿಯೋ ಕಂಪನಿಯ ಹೊಣೆಯನ್ನೂ ಹೊತ್ತಿದ್ದಾರೆ.
-ನೀವು ತುಂಬಾ ಬೋಲ್ಡ್ ಅಂತ ಅನ್ನಿಸುತ್ತೆ. ಇದು ಪೋಷಕರಿಂದ ಬಂದ ಬಳುವಳಿಯೇ?
ಹೌದು. ನಮ್ಮದು ಮಧ್ಯಮ ವರ್ಗದ ಕುಟುಂಬ. ಅಪ್ಪ ಅಮ್ಮನಿಗೆ ನಾನು ಒಬ್ಬಳೇ ಮಗಳು. ಪೋಷಕರು ನನ್ನನ್ನು ಹೆಣ್ಣುಮಗಳು ಎಂಬ ಪರಿಕಲ್ಪನೆಯಲ್ಲಿ ಬೆಳೆಸಲೇ ಇಲ್ಲ. ಅವರಿಂದ ನನಗೆ ನನ್ನ ಎಲ್ಲಾ ಪಠ್ಯ, ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯುತ್ತಿತ್ತು. ನಾನು ಬೋಲ್ಡ್ ಅಂತ ಅನ್ನಿಸಿದರೆ ಅದಕ್ಕೆ ಅವರೇ ಕಾರಣ. ಈಗಲೂ ನನ್ನ ತಂದೆ ತಾಯಿ ನನ್ನ ಬೆನ್ನೆಲುಬು. ಈಗಲೂ ಅದೇ ಬೆಂಬಲ, ಪ್ರೋತ್ಸಾಹ ಅವರಿಂದ ಸಿಗುತ್ತಿದೆ.
-ನಟಿಯಾಗಿ ರೂಪುಗೊಂಡಿದ್ದು ಹೇಗೆ?
ಅಭಿನಯ, ನಾಟಕ ನನಗೆ ಬಾಲ್ಯದಿಂದ ಜೊತೆಯಾದ ಸಂಗಾತಿಗಳು. ನಾನು ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಕೊಂಡಾಗ ಎಂಟೊಂಬತ್ತು ವರ್ಷದವಳಿದ್ದೆ. ಕಾಲೇಜಿಗೆ ಬರುತ್ತಲೇ ಸಿಜಿಕೆ, ಸುರೇಶ್ ಆಂದಳ್ಳಿ ಮುಂತಾದ ಪ್ರಮುಖರ ನಾಟಕಗಳಲ್ಲೂ ಅಭಿನಯಿಸಿದ್ದೆ. ಬೆಂಗಳೂರು ವಿ.ವಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದು 2 ತಿಂಗಳು ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡಿದೆ. ನನಗೆ ಮನರಂಜನಾ ಉದ್ಯಮದ ಮೇಲೆ ಆಸಕ್ತಿ ಆಗಲೇ ಬಂದಿದ್ದು. ಅದಕ್ಕೇ ಮನರಂಜನಾ ಉದ್ಯಮದಲ್ಲೇ ನೆಲೆಯೂರಲು ನಿರ್ಧರಿಸಿದೆ. ಈಗಲೂ ನಟನೆ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಆದರೆ ನಾಟಕಗಳಲ್ಲಿ, ಧಾರಾವಾಹಿಗಳಲ್ಲಿ ಅಭಿನಯಿಸಲು ನನಗೆ ಸಮಯವೇ ಇಲ್ಲ. ಉದ್ಯಮಿಯಾಗಿ ಅಷ್ಟು ಬ್ಯುಸಿಯಾಗಿದ್ದೇನೆ.
-ಸುರೇಶ ಅವರ ಪರಿಚಯ ಆಗಿದ್ದು ಯಾವಾಗ?
ನಾನು ಪಿಯುಸಿಯಲ್ಲಿ ಓದುತ್ತಿದ್ದಾಗ ಸುರೇಶ್ ನಿರ್ದೇಶಿಸಿದ್ದ “ಮ್ಯಾಕ್‌ಬೆತ್’ ನಾಟಕದಲ್ಲಿ ಲೇಡಿ ಮ್ಯಾಕ್‌ಬೆತ್ ಆಗಿ ನಟಿಸಿದ್ದೆ. ಆಗ ಅವರ ಪರಿಚಯವಾಯಿತು. ಅದಾದ ಬಳಿಕ 3- 4 ವರ್ಷಗಳ ಕಾಲ ನಾವು ಸ್ನೇಹಿತರಾಗಿಯೇ ಇದ್ದೆವು. ಪ್ರೀತಿ ಪ್ರೇಮ ಅಂತೆಲ್ಲಾ ಏನೂ ಇರಲಿಲ್ಲ. ಮದುವೆಯಾಗುವ ಆಲೋಚನೆಯಂತೂ ಖಂಡಿತಾ ಇರಲಿಲ್ಲ. ನಾನು ಅಂತಿಮ ವರ್ಷದ ಎಂಎ ಓದುತ್ತಿದ್ದಾಗ ಇಬ್ಬರೂ ಮದುವೆಯಾಗುವ ನಿರ್ಧಾರ ಮಾಡಿದೆವು. ನಮ್ಮಿಬ್ಬರ ಮನೆಯಲ್ಲೂ ಏನೊಂದೂ ತಕರಾರಿರಲಿಲ್ಲ. ಆಗ ನನ್ನ ಅಂತಿಮ ವರ್ಷದ ಎಂಎ ಫಲಿತಾಂಶ ಕೂಡ ಬಂದಿರಲಿಲ್ಲ.
– ಮಹಿಳಾ ಉದ್ಯಮಿಯಾಗುವುದು ಎಷ್ಟು ಅನುಕೂಲಕರ ಮತ್ತು ಎಷ್ಟು ತ್ರಾಸದಾಯಕ?
ಹಿಂದೆ, ನಾನು ಜಾಹೀರಾತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮನರಂಜನಾ ಕ್ಷೇತ್ರದ ಅಳ ಅಗಲ ತಿಳಿಯಿತು. ಸಾಕಷ್ಟು ಅವಕಾಶಗಳಿರುವ ಕ್ಷೇತ್ರ ಇದು. ಉದ್ಯಮಿಯಾಗಬೇಕು, ಹಲವರಿಗೆ ಉದ್ಯೋಗ ಒದಗಿಸಬೇಕು, ಈ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಬೇಕು ಎಂಬ ಯೋಚನೆಯಿಂದ ಮೀಡಿಯಾ ಹೌಸ್ ಸ್ಟುಡಿಯೊ ಸಂಸ್ಥೆ ಕಟ್ಟಿದೆವು. 10,000ಕ್ಕೂ ಹೆಚ್ಚು ಸಂಚಿಕೆಗಳ ಧಾರಾವಾಹಿಯನ್ನು ನಾವು ಮಾಡಿದ್ದೇವೆ. ಈಗಂತೂ ಈ ಕ್ಷೇತ್ರದ ವಿಸ್ತಾರ ಸಾಕಷ್ಟು ದೊಡ್ಡದಾಗಿದೆ. ಉದ್ಯಮಿಯಾಗಿ ಯಶಸ್ವಿಯಾಗಲು ಮಹಿಳೆಯರಿಗೆ ಯಾವುದೇ ತೊಡಕುಗಳಿಲ್ಲ. “ನಾನು ಮಹಿಳೆ. ನನ್ನಿಂದ ಆಗಲ್ಲ’ ಎಂದು ಮಹಿಳೆಯರು ತಮ್ಮ ತಲೆಯಲ್ಲಿ ತುಂಬಿಕೊಂಡಿರುತ್ತಾರಲ್ಲ, ಅದಷ್ಟೇ ತೊಡಕು. ಹೆಣ್ಣುಮಗಳೊಬ್ಬಳು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಮನೆ, ಸಂಸಾರ, ಮಕ್ಕಳನ್ನು ನಿರ್ಲಕ್ಷಿಸಬೇಕಾಗುತ್ತೆ ಅಂತೇನೂ ಇಲ್ಲ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಛಾತಿ ಮಹಿಳೆಯರಿಗಿರುತ್ತದೆ.
-ನಿಮ್ಮನ್ನು ನೋಡಿದರೆ ಬಹಳ ಗಂಭೀರ ಸ್ವಭಾವದವರ ಹಾಗೆ ಕಾಣುತ್ತೀರ? ಕೆಲಸದ ವಿಷಯದಲ್ಲಿ ನೀವು ತುಂಬಾ ಸ್ಕ್ರಿಕ್ಟ್ ಇದ್ದೀರಾ?
ಹಣ ಒದಗಿಸುವುದರಿಂದ ಹಿಡಿದು ನಮ್ಮ ಉತ್ಪನ್ನ ಮಾರಾಟ ಮಾಡುವವರೆಗೂ ರಿಸ್ಕ್ ಇದ್ದಿದ್ದೇ. ಜನರ ನಿರ್ವಹಣೆ ಕೂಡ ಕಷ್ಟ. ಜೋರು ಮಾಡಿಯೇ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಜೋರು ಮಾಡುತ್ತೇನೆ. ಉಳಿದಂತೆ ಆರಾಮಾಗಿರುತ್ತೇನೆ. “ಅರ್ಥ’, “ಪುಟ್ಟಕ್ಕನ ಹೈವೇ’, “ಗುಬ್ಬಚ್ಚಿ’ಗಳಂಥ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಮನ್ನಣೆ ಪಡೆದ ಸಿನಿಮಾಗಳನ್ನು ಮಾಡಿದ್ದೇನೆ. “ಸಕ್ಕರೆ’, “ನಾನು ನನ್ನ ಕನಸು’ ರೀತಿಯ ಸದಭಿರುಚಿಯ ಕಮರ್ಶಿಯಲ್ ಚಿತ್ರಗಳನ್ನು ನಿರ್ಮಿಸಿದ್ದೇನೆ. ಈಗ ದರ್ಶನ್, ರಶ್ಮಿಕಾ ಮಂದಣ್ಣ ಅಭಿನಯದ “ಯಜಮಾನ’ ಚಿತ್ರ ನಾನು ಕೈಗೆತ್ತಿಕೊಂಡಿರುವ ಅತಿ ದೊಡ್ಡ ಪ್ರಾಜೆಕ್ಟ್. ನಾವು ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊಂಡಾಗಲೂ ಅದರ ಲಾಭ ಕೂಡ ನಮಗೆ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ನಿರ್ಮಾಣದ ಎಲ್ಲಾ ಹಂತದಲ್ಲೂ ಶಿಸ್ತು ಪಾಲನೆ ಅಗತ್ಯವಿರುತ್ತದೆ.
-ಮಗಳು ಏನು ಓದುತ್ತಿದ್ದಾರೆ? ಅವರಿಗೂ ಮನರಂಜನಾ ಕ್ಷೇತ್ರದಲ್ಲಿ ಆಸಕ್ತಿ ಇದೆಯಾ?
ಮಗಳಿಗೆ ಮನರಂಜನಾ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಇದೆ. ಅವಳೀಗ ಎಂಎಸ್ಸಿ ವಿಶುವಲ್ ಕಮ್ಯುನಿಕೇಷನ್ ಓದುತ್ತಿದ್ದಾಳೆ. ನಮ್ಮಿಬ್ಬರ ಜೊತೆ ಸಿನಿಮಾ, ಧಾರಾವಾಹಿಗಳ ಬಗ್ಗೆ ಹೆಚ್ಚು ಚರ್ಚಿಸುತ್ತಾಳೆ. ಅವಳ ಯೋಚನೆಗಳನ್ನು ಹಂಚಿಕೊಳ್ಳುತ್ತಾಳೆ.
– ಬಿಡುವಿನ ವೇಳೆ ಏನು ಮಾಡುತ್ತೀರ?
ಬಿಡುವು ಎಂಬುದು ಅಪರೂಪ. ಬಿಡುವು ಸಿಕ್ಕರೆ ಮೊದಲ ಆದ್ಯತೆ ಕುಟುಂಬಕ್ಕೆ. ಅವರ ಜೊತೆ ಕ್ವಾಲಿಟಿ ಟೈಮ್ ಕಳೆಯುತ್ತೇನೆ. ಅದು ಬಿಟ್ಟರೆ ತಪ್ಪದೇ ರಂಗಶಂಕರ, ಕಲಾಕ್ಷೇತ್ರಗಳಿಗೆ ಹೋಗಿ ನಾಟಕ ನೋಡುತ್ತೇನೆ. ನಾಟಕದ ಸೆಳೆತ ನನ್ನನ್ನು ಬಿಡುವುದೇ ಇಲ್ಲ. ಸಿನಿಮಾಗಳನ್ನೂ ಹೆಚ್ಚು ನೋಡುತ್ತೀನಿ. ಆದರೆ ಸಿನಿಮಾ ನೋಡುವುದು ನನಗೆ ಕಲಿಕೆಯಾಗಿರುತ್ತದೆಯೇ ಹೊರತು ಮನರಂಜನೆಯಾಗಿರುವುದಿಲ್ಲ.
-ಮಗಳು, ಅಮ್ಮನ ಮಗಳ್ಳೋ ಅಥವಾ ಅಪ್ಪನ ಮಗಳ್ಳೋ?
ನನ್ನ ಮತ್ತು ಮಗಳ ನಡುವೆ ಅಂಥ ಜನರೇಶನ್ ಗ್ಯಾಪ್ ಇಲ್ಲ. ಇಬ್ಬರೂ ಸ್ನೇಹಿತೆಯರಂತೆ ಇರುತ್ತೇವೆ. ಇಬ್ಬರೂ ಒಬ್ಬರಿಗೊಬ್ಬರು ರೇಗಿಸಿಕೊಳ್ಳುತ್ತೇವೆ. ಮೊದಲೆಲ್ಲಾ ಇಡೀ ದಿನ ನನ್ನ ಜೊತೆ ಆರಾಮಾಗಿ ಇದ್ದು, ಅಪ್ಪ ಬರುತ್ತಲೇ ಅಪ್ಪನ ಪಕ್ಷಕ್ಕೆ ಬದಲಾಗಿಬಿಡುತ್ತಿದ್ದಳು. ಈಗ ಇಬ್ಬರ ಪಕ್ಷದಲ್ಲೂ ಇರುತ್ತಾಳೆ.
-ಪ್ರವಾಸ ತುಂಬಾ ಮಾಡುತ್ತಿರುತ್ತೀರಾ ಅಂತ ಕೇಳಿದ್ದೇನೆ…
ನಿಜ. ಪ್ರವಾಸ ಹೋಗುತ್ತಿರುತ್ತೇವೆ. ಪ್ರವಾಸ ಸ್ಥಳ ನಿರ್ಧರಿಸುವುದು ಮಗಳು. ಪ್ರವಾಸದಲ್ಲಿ ಸೈಟ್ ಸೀಯಿಂಗ್ ಜೊತೆ ಶಾಪಿಂಗ್‌ಗೂ ಬಹಳ ಆದ್ಯತೆ ಇರಬೇಕು. ಅದಕ್ಕೆ ತಕ್ಕನಾಗಿಯೇ ಅವಳು ಟೂರ್ ಪ್ಲಾನ್ ಮಾಡುತ್ತಾಳೆ. ನಾನು, ಮಗಳು ಪ್ರವಾಸ ಎಲ್ಲಿಗೆ ಹೋಗುವುದು ಎಂದು ಜಗಳ ಮಾಡುತ್ತಿರುತ್ತೇವೆ. ಅಮ್ಮ ಮಗಳು ಏನಾದರೂ ನಿರ್ಧಾರ ಮಾಡಿಕೊಳ್ಳಲಿ, ತಾನು ಈ ಕಚ್ಚಾಟದಲ್ಲಿ ಇಲ್ಲ ಎಂಬಂತೆ ಸುರೇಶ್ ದೂರ ಇದ್ದುಬಿಡುತ್ತಾರೆ. ಕಡೆಗೇ ನಾವು ಯಾವ ಸ್ಥಳ ಎಂದು ನಿರ್ಧರಿಸಿ ಕಡೆಗೆ ಅವರಿಗೆ ಹೇಳುತ್ತೇವೆ.
-ಶಾಪಿಂಗ್ ಎಂದರೆ ಇಷ್ಟಾನಾ?
ಹೌದು. ನನಗೆ ಶಾಪಿಂಗ್ ಎಂದರೆ ತುಂಬಾ ಇಷ್ಟ. ಪತಿಗೆ ಮಾತ್ರ ಶಾಪಿಂಗ್ ಎಂದರೆ ಆಗುವುದೇ ಇಲ್ಲ. ನಾನು ಇಂಥದ್ದೇ ಬೇಕು ಎಂದು ಹುಡುಕುತ್ತಾ ಕೂರುವುದಿಲ್ಲ. ಇಷ್ಟವಾದದ್ದನ್ನು ಖುಷಿಯಿಂದ ಖರೀದಿಸುತ್ತೇನೆ. “ಸಾಧನ’ ಧಾರಾವಾಹಿಯಲ್ಲಿ ಅಭಿನಯಿಸುವಾಗ ನಾನು ಬಳಸಿದ್ದ ಶಾಲುಗಳನ್ನು ಬಾಂಬೆಯಿಂದ ತಂದಿದ್ದೆ. ತುಂಬಾ ಇಷ್ಟವಾಗಿದ್ದವು ಹಾಗಾಗಿ ಒಂದು ರಾಶಿ ಕೊಂಡು ತಂದೆ. ಧಾರಾವಾಹಿಗೆ ಬಳಕೆ ಮಾಡಿದೆ.
-ಇಷ್ಟವಾದ ಆಹಾರ ಯಾವುದು?
ನಾನು ಅಪ್ಪಟ ಸಸ್ಯಹಾರಿ. ನನಗೆ ಸ್ಪೈಸಿಯಾಗಿರುವ ಎಲ್ಲಾ ಖಾದ್ಯಗಳೂ ಇಷ್ಟ. ಆಗಾಗ ರೆಸ್ಟೊರೆಂಟ್‌ಗಳಿಗೆ ಹೋಗಿ ರುಚಿ ನೋಡಿ ಬರುತ್ತೇನೆ. ಮನೆಯಲ್ಲಿ ನಾನು ಅಡುಗೆ ತಯಾರಿಸುವುದು ಕಡಿಮೆ. ಅಡುಗೆ ಮಾಡಿದರೂ ಸಿಂಪಲ್ ಆಗಿರೋದನ್ನೇ ತಯಾರಿಸುತ್ತೇನೆ.
-ಪತಿ ಮತ್ತು ನಿಮ್ಮ ಮಧ್ಯೆ ಮನಸ್ತಾಪ ಬಂದಿದ್ದಿದೆಯಾ?
ನಾವಿಬ್ಬರೂ ಮದುವೆಯಾದಲ್ಲಿಂದ ಇಲ್ಲಿವರೆಗೆ ಯಾವ ವಿಷಯಕ್ಕೂ ಮನಸ್ತಾಪ ಮಾಡಿದ್ದಿಲ್ಲ, ಜಗಳವಾಡಿದ್ದಿಲ್ಲ. ಜಗಳವಾಡುವ ಪ್ರಮೇಯವೇ ಬಂದಿಲ್ಲ. ಮನೆಯಲ್ಲಿದ್ದಾಗ ಎಲ್ಲರೂ ಸೇರಿ ತಮಾಷೆ ಮಾಡಿಕೊಂಡು ಖುಷಿಯಾಗಿ ಕಾಲ ಕಳೆಯುತ್ತೇವೆ. ದಿನದ ಬಹುತೇಕ ಸಮಯ ಕೆಲಸವೇ ಇರುತ್ತದೆ. ನಮಗಾಗಿ ಸಿಗುವ ಅಲ್ಪಸ್ವಲ್ಪ ಸಮಯವನ್ನು ಜಗಳ ಮಾಡಿಕೊಂಡು ಕಳೆಯುವುದು ನಮ್ಮಿಂದಾಗಲ್ಲ. ನನ್ನ ಅಪ್ಪ ಅಮ್ಮ ಕೂಡ ಜಗಳವಾಡಿದ್ದನ್ನು ನಾನು ನೋಡಿಲ್ಲ. ನನ್ನ ಸಂಸಾರ ಕೂಡ ಹಾಗೆಯೇ ಇದೆ.
-ಸುರೇಶ ಅವರ ಯಾವ ಗುಣಗಳು ತುಂಬಾ ಇಷ್ಟ?
ಅವರ ನೇರ ಸ್ವಭಾವ ಮತ್ತು ಸಮರ್ಪಣಾಭಾವ ನನಗಿಷ್ಟ. ಅವರು ಕೆಲಸ ಮುಗಿಸಿ 12 ಗಂಟೆಗೆ ಬಂದರೂ ಪುಸ್ತಕ ಓದಿಯೇ ಮಲಗುತ್ತಾರೆ. ಅಷ್ಟು ಓದುವ ಆಸಕ್ತಿ ಇದೆ ಅವರಿಗೆ.
-ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.