ಶೂ ಮ್ಯಾನ್!
Team Udayavani, Apr 24, 2018, 2:32 PM IST
ಶಿಲಾಯುಗದ ಕಾಲದಿಂದಲೂ ಪಾದರಕ್ಷೆಗಳು ಬಳಕೆಯಲ್ಲಿವೆ. ಕಾಲ ಉರುಳಿದಂತೆಲ್ಲ ಹಲಬಗೆಯ ರೂಪಾಂತರಗಳನ್ನು ಕಂಡ ಪಾದರಕ್ಷೆ ಈಗ ಚಪ್ಪಲಿ/ ಶೂನ ರೂಪು ಪಡೆದಿವೆ. ಈಗಂತೂ ದೈನಂದಿನ ಬಳಕೆಗೆ, ಕ್ರೀಡೆಗೆ, ಸುತ್ತಾಟಕ್ಕೆ, ಚಾರಣಕ್ಕೆ, ಆಫೀಸಿಗೆ, ಜಾಗಿಂಗ್‌ಗೆ, ಪಾರ್ಟಿಗೆ ಹೀಗೆ ಪ್ರತಿಯೊಂದು ಸಂದರ್ಭ, ಹವಾಮಾನಕ್ಕೂ ಪ್ರತ್ಯೇಕ ಪಾದರಕ್ಷೆಗಳು ಲಭ್ಯ ಇವೆ. ಈ ಹತ್ತಾರು ರೂಪು, ಬಗೆ ಬಗೆಯ ಪಾದರಕ್ಷೆಗಳನ್ನು ತಯಾರಿಸುವವರೇ ಫುಟ್‌ವೇರ್ ಡಿಸೈನರ್‌ಗಳು! ಇದೀಗ ನಾವು ಧರಿಸುವ ಪಾದರಕ್ಷೆಗಳು ಹೇಗಿರಬೇಕು ಎಂದು ನಿರ್ಧರಿಸುವ ಪ್ರೊಫೆಷನಲ್‌ಗಳಿಗೆ ಬೇಡಿಕೆ ಶುರುವಾಗಿದೆ.
ಪಾದರಕ್ಷೆಯ ಪರಿಕಲ್ಪನೆ ನಮ್ಮ ಕಾಲದ್ದಂತೂ ಅಲ್ಲ. ಶಿಲಾಯುಗದ ಕಾಲದಿಂದಲೂ ಇದರ ಬಳಕೆಯಿದೆ. ಇತಿಹಾಸಕಾರರು ರಾಜಮಹಾರಾಜರ ಕಾಲದ ಪಾದರಕ್ಷೆ ವಿವರಣೆ ನೀಡುತ್ತಾರೆ. ಒಂದು ಕಾಲವಿತ್ತು. ಆಗೆಲ್ಲಾ ಪಾದರಕ್ಷೆಗೆ ವಿನ್ಯಾಸ ನೀಡುತ್ತಿದ್ದವರು ಚಮ್ಮಾರರು. ಎಷ್ಟೋ ವರ್ಷದವರೆಗೆ ಒಂದೇ ವಿನ್ಯಾಸದ ಪಾದರಕ್ಷೆಗಳು ಮಾರುಕಟ್ಟೆಯಲ್ಲಿದ್ದವು. ಆನಂತರದಲ್ಲಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಆದಾಗ ಪಾದರಕ್ಷೆಗಳ ವಿನ್ಯಾಸದಲ್ಲೂ ಕ್ರಾಂತಿಕಾರಕ ಬದಲಾವಣೆಗಳಾದವು.
ಪಾದರಕ್ಷೆಗಳಿಗೆ ಮಾರ್ಕೆಟ್ ಹೆಚ್ಚಿದಂತೆಲ್ಲ ತಿಂಗಳಿಗೊಂದು ಹೊಸ ವಿನ್ಯಾಸದ ಪಾದರಕ್ಷೆ ಮಾರುಕಟ್ಟೆಗೆ ದಾಂಗುಡಿಯಿಟ್ಟಿತು. ಆಗ ಸೃಷ್ಟಿಯಾದ ಹೊಸ ನೌಕರಿಯೇ ಫುಟ್‌ವೇರ್ ಡಿಸೈನರ್. ಪಾದರಕ್ಷೆ ಅಥವಾ ಶೂಗಳ ಮುಂಭಾಗ, ಹಿಂಭಾಗ, ಹೇಗಿರಬೇಕು? ಅವು ಯಾವ ರೀತಿಯ ವಿನ್ಯಾಸ ಹೊಂದಿದ್ದರೆ ಗ್ರಾಹಕರ ಮನ ಗೆಲ್ಲುತ್ತದೆ ಎಂದು ಹೇಳಿಕೊಡುವ ಕೋರ್ಸ್ ಕೂಡಾ ಆರಂಭವಾಯಿತು.
ಈಗ, ಚಪ್ಪಲಿ ಹಾಗೂ ಶೂ ತಯಾರಿಕೆ ಎಂಬುದು ಒಂದು ಬಾರೀ ಲಾಭದ ಉದ್ಯಮ. ಒಂದು ಪಾದರಕ್ಷೆಗೆ 5 ಸಾವಿರ ರು. ಬೆಲೆಯಿದ್ದರೂ ಅದನ್ನು ಮುಗಿಬಿದ್ದು ಖರೀದಿಸುವ ಜನರಿದ್ದಾರೆ. ಆ ದುಬಾರಿ ಪಾದರಕ್ಷೆಗಿಂತ ಉತ್ತಮ ವಿನ್ಯಾಸದ ಇನ್ನೊಂದು ಬಗೆಯನ್ನು ಕೆಲವೇ ದಿನಗಳಲ್ಲಿ ಸೃಷ್ಟಿಸುವ ಕುಶಲ ಕಲಾಕಾರರೂ ಇದ್ದಾರೆ. ಅವರನ್ನು ಫುಟ್‌ವೇರ್ ಡಿಸೈನರ್ ಎಂದು ಕರೆಯಲಾಗುತ್ತದೆ. ವಿಭಿನ್ನ ವಿನ್ಯಾಸದ ಫುಟ್‌ವೇರ್‌ನ ಸ್ಕೆಚ್ ತಯಾರಿಸಿ ಅದು ಶೂ ಅಥವಾ ಪಾದರಕ್ಷೆಯಾಗಿ ರೂಪಾಂತರಗೊಳ್ಳಲು ದಾರಿ ತೋರಿಸುವುದಷ್ಟೇ ಇವರ ಕೆಲಸ.
ಏನು ಓದಿರಬೇಕು?: ಪಿಯು ವಿದ್ಯಾಭ್ಯಾಸದ ಬಳಿಕ ಎನ್‌ಐಎಫ್ಟಿ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಿ ಬಿ.ಡೆಸ್, ಎಂ.ಡೆಸ್ ಎಂಬ ಲೆದರ್ ಡಿಸೈನಿಂಗ್ ಕೋರ್ಸ್ ಮಾಡಿ ಫುಟ್‌ವೇರ್ ಡಿಸೈನರ್ ಆಗಬಹುದು. ಮತ್ತೂಂದು ಮಾರ್ಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಫುಟ್‌ವೇರ್ ಡಿಸೈನಿಂಗ್ ಎಂ.ಬಿ.ಎ ಮಾಡಿ ಪಾದರಕ್ಷೆ ವಿನ್ಯಾಸಕಾರ ಆಗಬಹುದು. ಇನ್ನೂ ಒಂದು ಮಾರ್ಗದಲ್ಲಿ ಫುಟ್‌ವೇರ್ ಡಿಸೈನ್ ಡಿಪ್ಲೊಮಾ ಕೋರ್ಸ್ ಮುಗಿಸಿ ಫುಟ್‌ವೇರ್ ಟೆಕ್ನಾಲಜಿ ಸ್ನಾತಕೋತ್ತರ ಪದವಿ ಪಡೆದೂ ಫುಟ್‌ವೇರ್ ಡಿಸೈನರ್ ಆಗಬಹುದು.
ಇವು ಗೊತ್ತಿರಲಿ…
– ಗಣಕ ಸಂಬಂಧಿತ ವಿನ್ಯಾಸ ತಂತ್ರಾಂಶಗಳ ಬಳಕೆ, ಜ್ಞಾನ.
– ಮಕ್ಕಳು, ಪುರುಷರು, ಮಹಿಳೆಯರ ಪಾದಗಳ ಅಳತೆ, ಅಂಗವಿಕಲರ ಪಾದ ಸಂಬಂಧಿತ ಸಮಸ್ಯೆಯ ಅರಿವು, ಅಂಗರಚನಾಶಾಸ್ತ್ರದ ಬಗ್ಗೆ ತಿಳಿವಳಿಕೆ.
– ಪಾದರಕ್ಷೆಗಳಿಗೆ ಬಳಸುವ ಬಣ್ಣ, ಬಣ್ಣಗಳ ಮಿಶ್ರಣ, ಚರ್ಮ, ಮರ ಇತರ ಪರಿಕರಗಳ ಬಗ್ಗೆ ಅರಿವು ಮತ್ತು ಚಿತ್ರಕಲೆ ಕುರಿತ ಜ್ಞಾನ.
– ಹೊಸ ವಿನ್ಯಾಸದ ಜೊತೆಗೆ ಹೊಸ ವಸ್ತುಗಳ ಬಳಕೆ ಕುರಿತ ಸಂಶೋಧನಾ ಗುಣ
– ಟೆಕ್ಸ್‌ಟೈಲ್, ಜಾಗತಿಕ ಪಾದರಕ್ಷೆ ಟ್ರೆಂಡ್‌ಗಳ ಬಗ್ಗೆ ಅರಿವು.
– ಗ್ರಾಹಕರು, ಕಂಪನಿ, ಫ್ಯಾಷನ್ ಇವೆಂಟ್, ಸೇಲ್ಸ್ ಬಗೆಗೆ ತಿಳಿವಳಿಕೆ
ಸಂಬಳ ಎಷ್ಟು ಸಿಗುತ್ತೆ?: ಫುಟ್‌ವೇರ್ ಡಿಸೈನಿಂಗ್ ಹೊಸ ಮಾದರಿಯ ಅವಕಾಶವಾಗಿದ್ದು, ಇದರ ಪ್ರಾವೀಣ್ಯತೆಗೆ, ಕಂಪನಿಗಳಿಗೆ ಅನುಗುಣವಾಗಿ ವೇತನ ನೀಡಲಾಗುತ್ತದೆ. ಪ್ರಾರಂಭ ಹಂತದ ವಿನ್ಯಾಸಕಾರರಿಗೆ ವಾರ್ಷಿಕವಾಗಿ 3 ಲಕ್ಷ ರು. ಮತ್ತು ಅನುಭವಿಗಳಿಗೆ 7ರಿಂದ 9ಲಕ್ಷ ರು. ವೇತನ ಪಾವತಿಸುವುದುಂಟು.
ಎಲ್ಲೆಲ್ಲಿ ಚಾನ್ಸ್ ಸಿಗುತ್ತೆ?: ಶೂ ತಯಾರಿಕಾ ಘಟಕಗಳು, ಆಕ್ಸಸರೀ ವಿನ್ಯಾಸ ವಲಯ, ವಿನ್ಯಾಸ ಸಲಹಾ ಸಂಸ್ಥೆಗಳು, ವುಡ್‌ಲ್ಯಾಂಡ್ಸ್, ಬಾಟಾ ಇಂಡಿಯಾ, ಆಕ್ಷನ್ ಶೂಸ್, ಲಿಬರ್ಟಿ ಥರದ ಕಂಪನಿಗಳು.
ಕಲಿಯುವುದು ಎಲ್ಲಿ?
– ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಲೆದರ್ ಟೆಕ್ನಾಲಜಿ, ಬೆಂಗಳೂರು
– ಫುಟ್‌ವೇರ್ ಡಿಸೈನ್ ಅಂಡ್ ಡೆವಲಪ್‌ಮೆಂಟ್ ಇನ್ಸ್‌ಟಿಟ್ಯೂಟ್, ಕೋಡಿಹಳ್ಳಿ, ಬೆಂಗಳೂರು
– ದಿ ನ್ಯೂ ಏಜ್ ಸ್ಕೂಲ್ ಆಫ್ ಡಿಸೈನ್, ಬೆಂಗಳೂರು
– ಸೆಂಟ್ರಲ್ ಫುಟ್‌ವೇರ್ ಟ್ರೆçನಿಂಗ್ ಸೆಂಟರ್, ಚೆನ್ನೆç, ಆಗ್ರಾ
– ಸೆಂಟ್ರಲ್ ಲೆದರ್ ರೀಸರ್ಚ್ ಇನ್ಸ್‌ಟಿಟ್ಯೂಟ್, ಚೆನ್ನೈ
* ಎನ್. ಅನಂತನಾಗ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.